ಅರ್ಚಕರ ತಟ್ಟೆಕಾಸಿಗೆ ಬ್ರೇಕ್? ಹುಂಡಿ ಹಣ ನಿಜಕ್ಕೂ ಏನಾಗುತ್ತೆ?
ದೇಗುಲದ ಹಣ ಅನ್ಯರ ಪಾಲಾಗುತ್ತಾ?
ಹಲವು ದೇವಸ್ಥಾನದಲ್ಲಿ ಮಂಗಳಾರತಿ, ತೀರ್ಥದ ತಟ್ಟೆಗೆ ಭಕ್ತರು ಕಾಣಿಕೆ ಹಾಕ್ತಾರೆ.. ದೇವರೇ ನಮಗೆ ಒಳ್ಳೆಯದು ಮಾಡಪ್ಪ ಅಂತ ಬೇಡಿಕೊಂಡು ಕಾಣಿಕೆ ಹಾಕ್ತಾರೆ.. ಒಂದಷ್ಟು ಜನ ಭಕ್ತರು ಕಾಣಿಕೆ ಡಬ್ಬವಿದ್ದರು, ಅರ್ಚಕರ ತಟ್ಟೆಗೆ ಮಾತ್ರ ಕಾಸು ಹಾಕ್ತಾರೆ.. ಅರ್ಚಕರೂ ಕೂಡ ಇಂತಹ ಭಕ್ತರ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸೋದನ್ನು ನಾವೆಲ್ಲರೂ ಗಮನಿಸ್ತಾ ಇರ್ತೇವೆ.. ಭಕ್ತರಿಗೂ ದೇವಸ್ಥಾನದಲ್ಲಿ ತಟ್ಟೆಗೆ ದುಡ್ಡು ಹಾಕಿದಾಗ ಏನೋ ಸಮಾಧಾನ ಇರುತ್ತೆ. ಆದ್ರೆ ಇದರಿಂದ ದೇವಸ್ಥಾನದ ಹುಂಡಿ ತುಂಬದೇ ಅರ್ಚಕರ ತಟ್ಟೆ ಮಾತ್ರ ತುಂಬುತ್ತೆ.. ಇತ್ತೀಚೆಗೆ ರಾಜ್ಯದ ದೇವಸ್ಥಾನಗಳ ಸಾವಿರಾರು ಎಕರೆ ಜಮೀನುಗಳನ್ನು ವಾಪಸ್ ಆಯಾ ದೇವಸ್ಥಾನದ ಹೆಸರಿಗೆ ಮಾಡಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.. ಅದರ ಬಗೆಗಿನ ಡೀಟೇಲ್ಸ್ ಇರುವ ವೀಡಿಯೋವನ್ನು ಈ ಹಿಂದೆ ಮಾಡಿದ್ದೇನೆ.. ಆಸಕ್ತರು ಆ ವೀಡಿಯೋವನ್ನೂ ನೋಡಬಹುದು.. ಅದರ ಲಿಂಕ್ ಮೇಲಿನ ಐಕಾನ್‌ನಲ್ಲಿ ಹಾಗೂ ಡಿಸ್‌ಕ್ರಿಪ್ಷನ್‌ನಲ್ಲಿ ನೀಡಿದ್ದೇನೆ.. ಈಗ ಮತ್ತೆ ತಟ್ಟೆ ಕಾಸಿನ ವಿಚಾರಕ್ಕೆ ಬರೋಣ.. ಹುಂಡಿ ತುಂಬದೆ ಕೇವಲ ತಟ್ಟೆ ಕಾಸಿಗೆ ಹೆಚ್ಚಿನ ದುಡ್ಡು ಹೋಗ್ತಿರೋದ್ರಿಂದ ಅಲರ್ಟ್ ಆದ ಸರ್ಕಾರ ಅರ್ಚಕರ ತಟ್ಟೆಹಾಸಿನ ಮೇಲೆ ಕಣ್ಣು ಹಾಕಿದೆ. ಹೀಗಾಗಿ A ಗ್ರೇಡ್ ದೇವಸ್ಥಾನಗಳಿಗೆ ಹೆಚ್ಚುವರಿ ಹುಂಡಿ ಇಡೋಕೆ ಮುಜರಾಯಿ ಇಲಾಖೆ ಮುಂದಾಗಿದೆ. ಹೆಚ್ಚುವರಿ ಹುಂಡಿ ಇಟ್ಟರೇ ನಮ್ಮ ತಟ್ಟೆಗೆ ಕಾಸು ಬೀಳಲ್ಲ ಅಂತ ಅರ್ಚಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಯಾಕೆ ಹೆಚ್ಚುವರಿ ಹುಂಡಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಈ ಆದೇಶ ಸರಿಯಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾದೇವಿ ದೇವಸ್ಥಾನ, ಹಾಗೇ ಲಿಂಗಸಗೂರು ತಾಲೂಕಿನ ಅಮರೇಶ್ವರ ದೇವಸ್ಥಾನದಲ್ಲಿ ಹುಂಡಿ ಇಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.. ಹೀಗೆ ಹೆಚ್ಚುವರಿ ಹುಂಡಿ ಇಟ್ಟರೆ ಸೇವಾಶುಲ್ಕ ನೀಡಿ ಅಂತಿದ್ದಾರೆ ಅರ್ಚಕರು. ಆದ್ರೆ ದೇವಸ್ಥಾನದ ಅಭಿವೃದ್ದಿ ವಿಚಾರವಾಗಿ ಹುಂಡಿ ಇಡುತ್ತಿದ್ದೇವೆ, ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಹುಂಡಿ ಇಟ್ಟಿದ್ದೇವೆ. ಇದಕ್ಕೆ ಅರ್ಚಕರು ಸಹಕಾರ ಕೊಡಬೇಕು ಅಂತ ಮುಜರಾಯಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕಾಡಿಬೇಡಿ ಗಂಡನ ಕಿಡ್ನಿ ಮಾರಿಸಿದ್ಲು! ಪತಿಗೆ ಕೈ ಕೊಟ್ಟು ಲವರ್ ಜೊತೆ ಜೂಟ್!
ಈ ರೀತಿಯಲ್ಲಿ ಹೆಚ್ಚುವರಿ ಹುಂಡಿ ಇಡೋದ್ರಿಂದ ಅರ್ಚಕರಿಗೆ ಅನ್ಯಾಯ ಆಗುತ್ತೆ ಅನ್ನೋ ವಾದವೂ ಇದೆ.. ಆದ್ರೆ ವಾಸ್ತವವಾಗಿ, ದೇವಸ್ಥಾನಕ್ಕೆ ಹೋಗುವ ಭಕ್ತರಲ್ಲಿ ತಟ್ಟೆಗೆ ಯಾರು ಜಾಸ್ತಿ ಕಾಣಿಕೆ ಅರ್ಪಿಸುತ್ತಾರೋ ಅವರು ಸಡನ್ನಾಗಿ ಅಲ್ಲಿನ ವಿಐಪಿಗಳಾಗಿ ಬಿಡೋದು ಆಗಾಗ್ಗೆ ಕಾಣುತ್ತಿರುತ್ತೆ.. ಯಾರು ಹೆಚ್ಚು ಹಣ ಹಾಕ್ತಾರೋ ಅವರಿಗೆ ಹೆಚ್ಚು ಒತ್ತು ಕೊಡುವಂತದ್ದನ್ನೂ ನೋಡ್ತಿರುತ್ತೇವೆ.. ತಟ್ಟೆಗೆ ಐದೋ ಹತ್ತೋ ರುಪಾಯಿ ಹಾಕುವವರಿಗೂ ಅಂತಹ ವಿಐಪಿ ಟ್ರೀಟ್‌ಮೆಂಟ್ ಸಿಗೋದಿಲ್ಲ.. ಇನ್ನು ತಟ್ಟೆಗೆ ಹಣ ಹಾಕದೆ ಕೇವಲ ಕಾಣಿಕೆ ಡಬ್ಬಕ್ಕೆ ಮಾತ್ರ ಕಾಣಿಕೆ ಹಾಕುವವರನ್ನೂ ಗಣನೆಗೆ ತೆಗೆದುಕೊಳ್ಳೋದಿಲ್ಲ ಎಂಬ ಆಕ್ಷೇಪ ಭಕ್ತರಿಂದಲೂ ಆಗಾಗ್ಗೆ ಕೇಳಿಬರುತ್ತಿರುತ್ತದೆ.. ಹೀಗಾಗಿ ತಟ್ಟೆಕಾಸಿಗೆ ಬ್ರೇಕ್ ಹಾಕಿದ್ರೆ ಅರ್ಚಕರು ಎಲ್ಲಾ ಭಕ್ತರನ್ನ ಒಂದೇ ತರ ನೋಡ್ತಾರೆ ಅನ್ನೋದು ಕೆಲವರ ಮಾತು..
ವಿಶೇಷ ದಿನಗಳಲ್ಲಿ ಅರ್ಚಕರಿಗೆ ಹಣದ ಸುರಿಮಳೆ?
ಇನ್ನೂ ವಿಶೇಷ ಪೂಜೆ ದಿನಗಳಲ್ಲಿ ಅರ್ಚಕರಿಗೆ ಲಕ್ಷಾಂತರ ರೂಪಾಯಿ ಹಣ ಹರಿದು ಬರುತ್ತೆ ಎಂದು ಕೆಲವರು ಅಂದಾಜಿಸಿದ್ದಾರೆ.. ಅದರಲ್ಲೂ ದೊಡ್ಡ ದೇಗುಲಕ್ಕೆ ವಿಶೇಷ ದಿನದಲ್ಲಿ 10 ಸಾವಿರ ಭಕ್ತರು 10 ರೂಪಾಯಿಯಂತೆ ಹಣ ಹಾಕಿದ್ರು 1 ಲಕ್ಷ ಆಗುತ್ತೆ.. ಒಂದೇ ದಿನಕ್ಕೆ ಅರ್ಚಕರಿಗೆ ಅಷ್ಟು ಹಣ ಹೋಗುತ್ತೆ ಅನ್ನೋದು ಕೆಲವರ ವಾದ. ಆದ್ರೆ ಅದೇ ದುಡ್ಡು ಹುಂಡಿಗೆ ಬಿದ್ರೆ ದೇವಸ್ಥಾನದ ಅಭಿವೃದ್ಧಿಯಾಗುತ್ತೆ ಅಂತ ಕೆಲವರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಹೆಚ್ಚುವರಿ ಹುಂಡಿ ಇಟ್ಟರೇ ಒಳ್ಳೆಯದು ಎನ್ನುತ್ತಿದ್ದಾರೆ.
ಹುಂಡಿಕಾಸಿನ ಬಗ್ಗೆ ಭಕ್ತರಲ್ಲಿದೆಯೇ ತಪ್ಪು ಕಲ್ಪನೆ?
ನಿಮ್ಗೆ ಗೊತ್ತಿರಲಿ, ಭಕ್ತರದಲ್ಲಿ ಒಂದು ತಪ್ಪು ಕಲ್ಪನೆಯಿದೆ.. ದೇವಾಲಯದಲ್ಲಿ ತಟ್ಟೆಗೆ ಕಾಸು ಹಾಕಿದರೆ ಅದು ಅರ್ಚಕರಿಗೆ ಹೋಗುತ್ತದೆ, ಹುಂಡಿಗೆ ಹಾಕಿದರೆ ಅದು ಸರ್ಕಾರಕ್ಕೆ ಹೋಗುತ್ತದೆ. ಸರ್ಕಾರ ಆ ಹಣವನ್ನು ಹಿಂದೂ ಧರ್ಮದ ಕೆಲಸಕ್ಕೆ ಬಳಸಿಕೊಳ್ಳದೇ, ಬೇರೆ ಧರ್ಮದ ಅಭಿವೃದ್ದಿಗೂ ಬಳಸುತ್ತದೆ ಎನ್ನುವ ಆರೋಪ ಸರ್ಕಾರದ ಮೇಲಿದೆ. ಸಾಕಷ್ಟು ಬಾರಿ ಈ ವಿಚಾರದ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟರು, ಇಂತಹ ಟೈಂನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಡುತ್ತವೆ. ಅರ್ಚಕರೊಬ್ಬರ ಪ್ರಕಾರ, ರಾಜ್ಯದಲ್ಲಿ ಎ ಗ್ರೇಡಿನ 205, ಬಿ ಗ್ರೇಡಿನ 193 ಮತ್ತು ಸಿ ಗ್ರೇಡಿನ 34,166 ದೇವಾಲಯಗಳಿವೆ. ಸಿ-ಗ್ರೇಡಿನ ದೇವಾಲಯಗಳು ಗ್ರಾಮಾಂತರ ಭಾಗದಲ್ಲಿದೆ. ಇದರಲ್ಲಿ ಎ ಮತ್ತು ಬಿ ಗ್ರೇಡಿನ ದೇವಾಲಯಗಳಿಗೆ ಮಾತ್ರ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಆಯಾಯ, ದೇವಾಲಯದ ಹಣ ಸಂಬಂಧ ಪಟ್ಟ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಬ್ಯಾಂಕ್ ಖಾತೆ ಇಲ್ಲದೇ ಇರುವ ದೇವಾಲಯಗಳ ಹಣವು ಅನ್ಯಧರ್ಮೀಯರಿಗೆ ಹೋಗುತ್ತಿದೆ ಎನ್ನುವ ಅಪಪ್ರಚಾರ ನಡೆಯುತ್ತಿದೆ. ಆದ್ರೆ ಮುಜರಾಯಿ ಇಲಾಖೆಯ ಕಾನೂನಿನ ಪ್ರಕಾರ.. ದೇವಸ್ಥಾನದ ಹುಂಡಿಗೆ ಬಿದ್ದ ಒಂದೇ ಒಂದು ರೂಪಾಯಿ ಬೇರೆ ಕಡೆಗೆ ಹೋಗೋದಿಲ್ಲ… ಬ್ಯಾಂಕ್ ಖಾತೆಯಿಲ್ಲದ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಹುಂಡಿಯ ಹಣವನ್ನು ತೆಗೆದು ಜಿಲ್ಲಾ ಖಜಾನೆಗೆ ಕಳುಹಿಸಲಾಗುತ್ತದೆ. ಇನ್ನೂ ದೇಗುಲಗಳಿಂದ ಸಂಗ್ರಹಿಸಿದ ಹಣದ ಬಗ್ಗೆ ವರ್ಷಕ್ಕೆ ಎರಡು ಬಾರಿ ಆಡಿಟ್ ನಡೆಯುತ್ತದೆ. ಉದಾಹರಣೆಗೆ, ದೇವಾಲಯದ ಹುಂಡಿಯಿಂದ ಹತ್ತು ಸಾವಿರ ರೂಪಾಯಿಯನ್ನು ದೇವಸ್ಥಾನದ ಹೊರತಾದ ಇನ್ಯಾವುದೇ ಕೆಲಸಕ್ಕೆ ಬಳಸಿದರೆ ಅದಕ್ಕೆ ಆಡಿಟರ್ ಗಳು ಆಕ್ಷೇಪಣೆಯನ್ನು ಎತ್ತುತ್ತಾರೆ. ಅಷ್ಟೇ ಅಲ್ಲದೆ, ದೇಗುಲದ ಹಣವನ್ನು ಅನ್ಯಧರ್ಮೀಯರ ಕೆಲಸಕ್ಕೆ ಬಳಸುವುದಕ್ಕೆ ಈಗ ಅವಕಾಶವೇ ಇಲ್ಲ. ಆದ್ರೆ ಹಲವು ವಾಟ್ಸಾಪ್‌ಗಳಲ್ಲಿ ಮಾತ್ರ ದೇವಾಲಯದಲ್ಲಿ ಹುಂಡಿಗೆ ಹಾಕಿದ ದುಡ್ಡು ಅನ್ಯಧರ್ಮೀಯರ ಪಾಲಾಗುತ್ತದೆ ಎಂಬ ಹಸಿಹಸಿ ಸುಳ್ಳಿನ ಸುದ್ದಿಗಳನ್ನು ಕೆಲವರು ಪ್ರಚಾರ ಮಾಡ್ತಿರುತ್ತಾರೆ.. ಜನ ಕೂಡ ಕಾನೂನು ತಿಳಿದುಕೊಳ್ಳದೆ, ಸೋಷಿಯಲ್ ಮೀಡಿಯಾದಲ್ಲಿ ಬಂದಿದ್ದೇ ಕರೆಕ್ಟ್ ಇರಬೇಕು ಎಂದು ನಂಬ್ಕೊಂಡು ಕೂತಿರುತ್ತಾರೆ.. ಇದೇ ಕಾರಣಕ್ಕೆ ಕೆಲ ಭಕ್ತರು ಕೂಡ ಹುಂಡಿಗೆ ದುಡ್ಡು ಹಾಕುತ್ತಿಲ್ಲ. ಬೇರೆ ಧರ್ಮದವರಿಗೆ ನಮ್ಮ ಹಣ ಹೋಗುವುದು ಬೇಡ.. ಆ ಹಣ ಬೇಕಿದ್ರೆ ಅರ್ಚಕರೇ ತೆಗೆದುಕೊಳ್ಳಲಿ ಅಂತ ತಟ್ಟೆಗೆ ಹಣ ಹಾಕುತ್ತಿದ್ದಾರೆ. ಆದ್ರೆ ಹುಂಡಿಯ ದುಡ್ಡು, ಆ ದೇವಾಲಯದ ಅಭಿವೃದ್ದಿ ಮಾತ್ರವಲ್ಲದೆ, ನಮ್ಮ ಗ್ರಾಮೀಣ ಪ್ರದೇಶಗಳಲ್ಲಿರುವ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆಯಾಗುತ್ತಿದೆ.. ಅಷ್ಟೇ ಅಲ್ಲದೆ ಸಿ ಕೆಟಗರಿಯ ದೇಗುಲಗಳ ಅರ್ಚಕರಿಗೆ ವಸತಿ ಕಟ್ಟಲು, ಅವರ ಮಕ್ಕಳ ಶಿಕ್ಷಣಕ್ಕೆ ಹೊಸ ಸ್ಕಾಲರ್‌ಶಿಪ್ ರೂಪಿಸೋದಿಕ್ಕೂ ಈಗ ರಾಜ್ಯ ಸರ್ಕಾರ ಇದೇ ಹುಂಡಿ ಹಣವನ್ನು ಬಳಸಿಕೊಳ್ಳಲೂ ಪ್ಲ್ಯಾನ್ ಮಾಡ್ಕೊಂಡಿದೆ.. ಅಂದರೆ ಭಕ್ತರು ಹುಂಡಿಗೆ ಹಾಕುವ ಹಣ ರಾಜ್ಯದ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ಹಾಗೂ ಸಣ್ಣ ದೇಗುಲಗಳ ಅರ್ಚಕರ ಒಳಿತಿಗೆ ಬಳಕೆಯಾಗಬೇಕು ಎನ್ನುವುದು ಇದರ ಹಿಂದೆ ಅಡಗಿರುವ ಆಶಯ… ಇದನ್ನು ಭಕ್ತರ ಗಮನಕ್ಕೆ ತರೋಕೆ ಮುಜರಾಯಿ ಇಲಾಖೆ ಕೂಡ ಸರ್ಕಸ್ ಮಾಡುತ್ತಿದೆ. ಹಲವು ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಹುಂಡಿಗೆ ಹಾಕುವ ಹಣ, ಅನ್ಯ ಧರ್ಮದ ಉದ್ದೇಶಕ್ಕೆ ಬಳಸುವುದಿಲ್ಲ” ಎಂದು ಭಕ್ತರಿಗೆ ಎದ್ದು ಕಾಣುವಂತೆ ಬೋರ್ಡ್ ಹಾಕಲಾಗಿದೆ. ಆದ್ರೂ ಭಕ್ತರು ಈ ಬಗ್ಗೆ ಸಾಕಷ್ಟು ಗೊಂದಲದಲ್ಲೇ ಇದ್ದಾರೆ. ಇದ್ರಿಂದಾಗಿ ಭಕ್ತರ ಹಣ ಹುಂಡಿಗೆ ಬೀಳುವ ಬದಲು ಅರ್ಚಕರ ತಟ್ಟಗೆ ಬೀಳುತ್ತಿದೆ. ಹೀಗಾಗಿ ಸರ್ಕಾರ ಹೆಚ್ಚು ಹೆಚ್ಚು ಹುಂಡಿ ಇಟ್ಟರೇ, ಭಕ್ತರು ದೇವರಿಗೆ ಕೈ ಮುಗಿಯುತ್ತೆ ಹುಂಡಿಗೆ ಹಣ ಹಾಕ್ತಾರೆ ಅನ್ನೋದು ಮುಜರಾಯಿ ಇಲಾಖೆಯ ಪ್ಲ್ಯಾನ್.