ಚುನಾವಣೆಗೆ ಸಜ್ಜಾದ ಪಿಎಸ್ಐ ಅಕ್ರಮದ ಕಿಂಗ್ ಪಿನ್ – ಜನಾರ್ಧನ ರೆಡ್ಡಿ ಪಕ್ಷದಿಂದ ರುದ್ರರೌಡ ಪಾಟೀಲ್ ಸ್ಪರ್ಧೆ?

ಚುನಾವಣೆಗೆ ಸಜ್ಜಾದ ಪಿಎಸ್ಐ ಅಕ್ರಮದ ಕಿಂಗ್ ಪಿನ್ – ಜನಾರ್ಧನ ರೆಡ್ಡಿ ಪಕ್ಷದಿಂದ ರುದ್ರರೌಡ ಪಾಟೀಲ್ ಸ್ಪರ್ಧೆ?

ದೇಶಾದ್ಯಂತ ಸಂಚಲನ ಮೂಡಿಸಿದ್ದ ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಲೇ ಇದೆ. ಈಗಾಗಲೇ ಪ್ರಕರಣದಲ್ಲಿ ಸಾಕಷ್ಟು ಜನ ಅರೆಸ್ಟ್ ಆಗಿ ಜೈಲಿನಲ್ಲಿದ್ದಾರೆ. ಆದರೆ ಅಕ್ರಮದ ಪ್ರಮುಖ ಕಿಂಗ್ ಪಿನ್​ಗಳಲ್ಲಿ ಒಬ್ಬನಾದ ರುದ್ರಗೌಡ್ ಪಾಟೀಲ್ (Rudragouda Patil), ಇದೀಗ ವಿಧಾನಸಭೆ ಚುನಾವಣೆ ಮೇಲೆ ಕಣ್ಣು ಹಾಕಿದ್ದಾನೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Assembly Election) ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿದ್ದು, ಟಿಕೆಟ್​ ನೀಡುವಂತೆ ಈ ಹಿಂದೆ ಕಾಂಗ್ರೆಸ್​ಗೆ (Congress) ಮನವಿ ಮಾಡಿದ್ದನು. ಇದೀಗ ರುದ್ರಗೌಡ ಪಾಟೀಲ್​ಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಕೆಆರ್​​ಪಿಪಿ (KRPP) ಪಕ್ಷದಿಂದ ಜಿಲ್ಲೆಯ ಅಫಜಲಪುರ ಕ್ಷೇತ್ರದ ಟಿಕೆಟ್​ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ನೇಮಕಾತಿ ಅಕ್ರಮದಲ್ಲಿ ಜೈಲಿನಲ್ಲಿರೋ ರುದ್ರಗೌಡ ಪಾಟೀಲ್, ಜಾಮೀನು ಸಿಗದೆ ಇದ್ದರೇ ಜೈಲಿನಲ್ಲಿದ್ದುಕೊಂಡೆ ಸ್ಪರ್ಧೆ ಮಾಡಲು ಮುಂದಾಗಿದ್ದಾನೆ. ಜನಾರ್ಧನ ರೆಡ್ಡಿ ಏಪ್ರಿಲ್ 10 ರಂದು ಅಫಜಲಪುರಕ್ಕೆ ಹೋಗಲಿದ್ದು, ಅಂದು ರುದ್ರಗೌಡ ಪಾಟೀಲ್ ಸಹೋದರ ಮತ್ತು ಬೆಂಬಲಿಗರು ಕೆಆರ್​ಪಿಪಿ ಪಕ್ಷ ಸೇರಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಕೆಲ ತಿಂಗಳ ಹಿಂದೆ ರುದ್ರಗೌಡ ಪಾಟೀಲ್​ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ.

ಇದನ್ನೂ ಓದಿ : 2 ಕ್ಷೇತ್ರಗಳ ಟಿಕೆಟ್ ಗೆ ಪರಮೇಶ್ವರ್ ಪಟ್ಟು – ಸಿದ್ದುಗೆ ಕೋಲಾರ ಟಿಕೆಟ್ ನೀಡದಂತೆ ಹೈಕಮಾಂಡ್ ಗೆ ಪತ್ರ!

ಜೈಲು ಸೇರಿರುವ ರುದ್ರಗೌಡ ಪಾಟೀಲ್​ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಿ ಈ ಹಿಂದೆ ಕೆಲಸ ಮಾಡಿದ್ದನು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದನು. ಅಲ್ಲದೆ ಕ್ಷೇತ್ರದ ತುಂಬೆಲ್ಲಾ ಓಡಾಡಿಕೊಂಡು ತಮ್ಮ ಸಮುದಾಯ ಸೇರಿದಂತೆ ಕ್ಷೇತ್ರದಲ್ಲಿ ಯುವ ಪಡೆ ಕಟ್ಟಿಕೊಂಡು ಚುನಾವಣೆಗೆ ಅಖಾಡ ಸಿದ್ದಮಾಡಿಕೊಂಡಿದ್ದನು. ಈ ಸಮಯದಲ್ಲಿಯೇ ಪಿಎಸ್ಐ ಕೇಸ್ ಉರುಳು ರುದ್ರಗೌಡ್ ಪಾಟೀಲ್​​ಗೆ ಸುತ್ತುಕೊಂಡಿತು. ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಹೆಸರು ಕೇಳಿಬಂದಿದ್ದದರಿಂದ, ಸಿಐಡಿ ಅಧಿಕಾರಿಗಳು ರುದ್ರಗೌಡನನ್ನು ಬಂಧಿಸಿದ್ದರು.

suddiyaana