ಇಲಿಗಳನ್ನ ಹಿಡಿಯಲು ಬರೋಬ್ಬರಿ 69.5 ಲಕ್ಷ ರೂಪಾಯಿ ಖರ್ಚು – ರೈಲ್ವೆ ಅಧಿಕಾರಿಗಳ ಅಂಧಾದರ್ಬಾರ್

ಇಲಿಗಳನ್ನ ಹಿಡಿಯಲು ಬರೋಬ್ಬರಿ 69.5 ಲಕ್ಷ ರೂಪಾಯಿ ಖರ್ಚು – ರೈಲ್ವೆ ಅಧಿಕಾರಿಗಳ ಅಂಧಾದರ್ಬಾರ್

ಮನೆಗಳಲ್ಲಿ ಇಲಿಗಳು ಸೇರಿಕೊಂಡದೆ ದವಸಧಾನ್ಯಗಳನ್ನೆಲ್ಲಾ ಹಾಳು ಮಾಡುತ್ತವೆ. ಸಾಲದ್ದಕ್ಕೆ ಬಟ್ಟೆಗಳನ್ನ ಕಚ್ಚಿ ಹಾಕುತ್ತವೆ. ಹೀಗಾಗಿ ಇಲಿಗಳನ್ನ ಹಿಡಿಯಲು ನಾನಾ ತಂತ್ರಗಳನ್ನ ಬಳಸುತ್ತಾರೆ. ಕೆಲವರು ಕತ್ತರಿ ಇಟ್ಟರೆ ಇನ್ನೂ ಕೆಲವರು ಇಲಿ ಪಾಷಾಣ ಹಾಕಿ ಕೊಲ್ಲುತ್ತಾರೆ. ಆದರೆ ಇಲ್ಲಿ ಒಂದು ಇಲಿಯನ್ನ ಹಿಡಿಯೋಕೆ ಬರೋಬ್ಬರಿ 41 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ.

ಅಚ್ಚರಿ ಅನ್ನಿಸಿದರೂ ಇದು ಸತ್ಯ. ಉತ್ತರ ಪ್ರದೇಶದಲ್ಲಿ ಒಂದು ಇಲಿಯನ್ನು ಹಿಡಿಯಲು 41 ಸಾವಿರ ರೂ. ಖರ್ಚು ಮಾಡಲಾಗಿದೆ. ಅದೂ ಕೂಡ ಉತ್ತರ ರೈಲ್ವೇಯ ಲಖನೌ ವಿಭಾಗ 41 ಸಾವಿರ ರೂಪಾಯಿಯನ್ನು ಖರ್ಚು ಮಾಡಿದೆ. ನೀಮಚ್ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಎಂಬುವವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಲಖನೌ ವಿಭಾಗವು 2020 ಮತ್ತು 2022ರ ನಡುವೆ 168 ಇಲಿಗಳನ್ನು ಹಿಡಿಯಲು 69.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಹೇಳಿದೆ. ಅಂದ್ರೆ ಪ್ರತಿ ಇಲಿಗೆ ಸುಮಾರು 41 ಸಾವಿರ ರೂ. ಖರ್ಚಾಗಿದೆ ಎಂದು ಲಖನೌ ವಿಭಾಗ ಆರ್‌ಟಿಐಗೆ ಉತ್ತರಿಸಿದ್ದು, ಇಲಿ ಹಿಡಿಯಲು ಇಷ್ಟೊಂದು ದುಡ್ಡು ಬೇಕಾ ಅಂತಾ ಎಲ್ಲರೂ ಹುಬ್ಬೇರಿಸುವಂತೆ ಆಗಿದೆ.

ಇದನ್ನೂ ಓದಿ : ಚಿತ್ರಮಂದಿರದಲ್ಲಿ ಮಹಿಳೆಗೆ ಕಚ್ಚಿದ ಇಲಿ – ಪರಿಹಾರವಾಗಿ ಕೊಟ್ಟಿದ್ದೆಷ್ಟು ಹಣ?

ಚಂದ್ರಶೇಖರ್‌ ಗೌರ್‌ ಅವರು ದಿಲ್ಲಿ, ಅಂಬಾಲಾ, ಮೊರಾದಾಬಾದ್, ಲಖನೌ ಮತ್ತು ಫಿರೋಜ್‌ಪುರ ಸೇರಿ ಐದು ವಿಭಾಗಗಳನ್ನು ಹೊಂದಿರುವ ಇಡೀ ಉತ್ತರ ರೈಲ್ವೇಯಲ್ಲಿ ಇಲಿಗಳನ್ನು ಹಿಡಿಯಲು ಎಷ್ಟು ದುಡ್ಡು ಖರ್ಚು ಮಾಡಲಾಗಿದೆ ಎಂಬ ವಿವರ ನೀಡುವಂತೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ, ಲಖನೌ ವಿಭಾಗ ಮಾತ್ರ ಚಂದ್ರಶೇಖರ್‌ ಗೌರ್‌ ಅವರಿಗೆ ಉತ್ತರ ನೀಡಿದೆ. ಫಿರೋಜ್‌ಪುರ ಮತ್ತು ಮೊರಾದಾಬಾದ್ ವಿಭಾಗಗಳು ಇನ್ನೂ ಉತ್ತರ ನೀಡಬೇಕಿದೆ. ಅಂಬಾಲಾ ಮತ್ತು ದಿಲ್ಲಿ ವಿಭಾಗಗಳು ಹಾರಿಕೆ ಉತ್ತರ ನೀಡಿ ನುಣುಚಿಕೊಂಡಿವೆ. ಚಂದ್ರಶೇಖರ್‌ ಗೌರ್ ಅವರು ಸಲ್ಲಿಸಿದ್ದ ಆರ್‌ಟಿಐನಲ್ಲಿ ಕೇವಲ ಇಲಿಗಳನ್ನು ಹಿಡಿಯುವುದಕ್ಕೆ ಎಷ್ಟು ಖರ್ಚು ಮಾಡುತ್ತೀರಿ ಎಂದು ಮಾತ್ರ ಕೇಳಿದ್ದಿಲ್ಲ. ಇಲಿಗಳಿಂದ ಉಂಟಾದ ಹಾನಿಯ ಮೌಲ್ಯವನ್ನು ಕೂಡ ಕೇಳಿದ್ದರು. ಆದರೆ, ಲಖನೌ ವಿಭಾಗವು ಈ ಬಗ್ಗೆ ಮಾಹಿತಿಯನ್ನು ನೀಡದೇ ಇಲಿಗಳಿಂದ ಹಾನಿಗೊಳಗಾದ ಸರಕುಗಳು ಮತ್ತು ವಸ್ತುಗಳಿಗೆ ವಿವರಗಳು ಲಭ್ಯವಿಲ್ಲ. ಹಾನಿಯ ಬಗ್ಗೆ ಯಾವುದೇ ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಪ್ರತಿಕ್ರಿಯಿಸಿದೆ. ಲಖನೌ ವಿಭಾಗವು ಉತ್ತರ ನೀಡಿರುವಂತೆ ಲಖನೌ ಮೂಲದ ಎಂ/ಎಸ್‌ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್‌ ಎಂಬ ಸಂಸ್ಥೆಗೆ 2019ರಿಂದ ಇಲಿಗಳನ್ನು ಹಿಡಿಯಲು ಗುತ್ತಿಗೆ ನೀಡಲಾಗಿದೆ. ಅದೇ ಸಂಸ್ಥೆಗೆ ಇಷ್ಟೊಂದು ದುಡ್ಡು ಪಾವತಿಸಲಾಗಿದೆ.

Shantha Kumari