ಭಿಕ್ಷುಕಿ ಮನೆಯಲ್ಲಿ 30 ಲಕ್ಷ ರೂಪಾಯಿ ಹಣ ಪತ್ತೆ – ದುಡ್ಡು ಹಂಚಿಕೊಂಡ ಲಜ್ಜೆಗೇಡಿ ಸಂಬಂಧಿಕರು

ಬದುಕಿದ್ದಾಗ ಯಾರೂ ಜೊತೆಯಲ್ಲಿರಲಿಲ್ಲ. ಒಂದು ಹೊತ್ತಿನ ಊಟ ಬಿಡಿ, ಒಂದು ಲೋಟ ನೀರು ಕೊಡಲು ಯಾರೂ ಮುಂದೆ ಬಂದಿರಲಿಲ್ಲ. ಸಂಬಂಧಿಕರು ಸತ್ತಾಗ ಬಂದು ದೂರದಿಂದಲೇ ನೋಡಿಹೋದರು. ಆದರೆ, ಯಾವಾಗ ಮನೆತುಂಬೆಲ್ಲಾ ದುಡ್ಡು ಇದೆ ಅಂತಾ ಗೊತ್ತಾಯಿತೋ ಆಗಲೇ ನೋಡಿ ಸಂಬಂಧಿಕರು ಮನೆಯೊಳಗೆ ಬಂದಿದ್ದು. ನಂತರ ನಾಚಿಕೆ ಬಿಟ್ಟ ಸಂಬಂಧಿಕರು ಹಣವನ್ನೂ ಹಂಚಿಕೊಂಡಿದ್ದಾರೆ. ಇದೀಗ ಸ್ಥಳೀಯರು ಆ ಅಜ್ಜಿಯ ದುರಾಸೆಯ ಸಂಬಂಧಿಕರನ್ನು ನೋಡಿ ನಗುತ್ತಿದ್ದಾರೆ.
ಇದನ್ನೂ ಓದಿ:ಬ್ರಹ್ಮಾವರದಲ್ಲಿ ಮಗನಿಂದಲೇ ತಂದೆ ತಾಯಿಯ ಕೊ*ಲೆ – ಸುತ್ತಿಗೆಯಿಂದ ಹೊಡೆದು ಹೆತ್ತವರ ಹ*ತ್ಯೆ
ಮಂಡ್ಯದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ನೂರ್ ಎಂಬ ವೃದ್ಧೆ ಬದುಕಿರುವಷ್ಟು ದಿನವೂ ಬದುಕಿಗಾಗಿ ಹೋರಟ ನಡೆಸಿದ್ದರು. ಭಿಕ್ಷೆ ಬೇಡುತ್ತಾ, ಸಿಕ್ಕ ದುಡ್ಡಲ್ಲಿ ಜೀವನ ನಡೆಸುತ್ತಿದ್ದರು. ಮಂಡ್ಯದ ಗುತ್ತಲು ಬಡಾವಣೆಯಲ್ಲಿ ವಾಸವಿದ್ದ ಈ ನೂರ್ ಎಂಬ ವೃದ್ಧೆ ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದರು. ಮನೆಯವರು ಯಾರೂ ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ನಿತ್ಯ ಭಿಕ್ಷೆ ಬೇಡುತ್ತಿದ್ದರು. ಕೊನೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ನೂರ್ ಭಾನುವಾರ ನಿಧನರಾದರು. ಬದುಕಿದ್ದಾಗ ಯಾವ ಸಂಬಂಧಿಕರು ವೃದ್ಧೆ ಬಳಿ ಬಂದಿರಲಿಲ್ಲ. ಸತ್ತಾಗ ಬಂದ ಸಂಬಂಧಿಕರ ಜೊತೆ ಸ್ಥಳೀಯರು ಸೇರಿ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ಅಂತ್ಯಸಂಸ್ಕಾರ ಮುಗಿಸಿ ವೃದ್ಧೆಯ ಮನೆಗೆ ಬಂದಾಗ ಸಂಬಂಧಿಕರಿಗೆ ಮತ್ತು ಸ್ಥಳೀಯರಿಗೆ ಶಾಕ್ ಕಾದಿತ್ತು. ಹನಿ ಹನಿ ಕೂಡಿದರೆ ಹಳ್ಳ ಅನ್ನೋ ರೀತಿ ನಾಣ್ಯಗಳ ಮೂಟೆಗಳು ಮನೆಯಲ್ಲಿದ್ದವು. ನೋಟುಗಳ ಮೂಟೆಯೂ ಮನೆಯಲ್ಲಿತ್ತು. ಮನೆಯ ಮೂಲೆ ಮೂಲೆಯಲ್ಲೂ ಮೂಟೆಗಟ್ಟಲೆ ನಾಣ್ಯಗಳು ಹಾಗೂ ಹಳೆ-ಹೊಸ ನೋಟುಗಳ ರಾಶಿ ಬಿದ್ದಿತ್ತು. ಇದನ್ನು ಕಂಡು ದಂಗಾದ ಸಂಬಂಧಿಕರು ಮತ್ತು ಸ್ಥಳೀಯರು, ಆ ಹಣವನ್ನು ಒಟ್ಟುಗೂಡಿಸಿ ಎಣಿಕೆ ಮಾಡಲು ಮುಂದಾಗಿದ್ದಾರೆ. ಲೆಕ್ಕ ಹಾಕಿದಷ್ಟು ಮತ್ತೆ ಮತ್ತೆ ಹಣ ಮನೆಯಲ್ಲಿತ್ತು. ಅಚ್ಚರಿಯೆಂಬಂತೆ 30 ಲಕ್ಷ ರೂಪಾಯಿ ಎಣಿಕೆಗೆ ಸಿಕ್ಕಿತ್ತು.
ಕೊನೆಗೆ ಸಂಬಂಧಿಕರು ಮಾತುಕತೆ ನಡೆಸಿ ಆ ಹಣವನ್ನು ಹಂಚಿಕೊಂಡರು. ವೃದ್ಧೆ ಜೀವಂತವಾಗಿದ್ದಾಗ ಯಾರೂ ಆಕೆಯ ಕಷ್ಟಕ್ಕೆ ಬಂದಿಲ್ಲ, ತಿನ್ನಲು ಅನ್ನ ನೀಡಲಿಲ್ಲ, ಆದರೆ ಈಗ ಆಕೆ ಭಿಕ್ಷಾಟನೆ ಮಾಡಿ ಕಷ್ಟಪಟ್ಟು ಸಂಪಾದಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಹಂಚಿಕೊಳ್ಳಲು ಮಾತ್ರ ಎಲ್ಲರೂ ಮುಂದೆ ಬಂದಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಡಿರಿ

