ದೇವಸ್ಥಾನದ ಹುಂಡಿಯಲ್ಲಿತ್ತು 100 ಕೋಟಿ ರೂ. ಚೆಕ್! – ಬ್ಯಾಂಕ್‌ಗೆ ತೆರಳಿದ ಸಿಬ್ಬಂದಿಗೆ ಕಾದಿತ್ತು ಶಾಕ್‌!

ದೇವಸ್ಥಾನದ ಹುಂಡಿಯಲ್ಲಿತ್ತು 100 ಕೋಟಿ ರೂ. ಚೆಕ್! – ಬ್ಯಾಂಕ್‌ಗೆ ತೆರಳಿದ ಸಿಬ್ಬಂದಿಗೆ ಕಾದಿತ್ತು ಶಾಕ್‌!

ದೇವಸ್ಥಾನಗಳಲ್ಲಿ 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಹುಂಡಿ ಎಣಿಕೆ ಮಾಡುತ್ತಾರೆ. ಈ ವೇಳೆ ಒಂದಷ್ಟು ಹಣದ ರೂಪದಲ್ಲಿ ಕಾಣಿಕೆ ಸಿಗುತ್ತದೆ. ಇನ್ನು ಕೆಲವೊಮ್ಮೆ ಚಿನ್ನಾಭರಣ, ಕೆಲವು ಪತ್ರಗಳು ಸಿಗುತ್ತವೆ. ಈ ದೇವಾಲಯದಲ್ಲೂ ಕೂಡ ವಾಡಿಕೆಯಂತೆ ಅಧಿಕಾರಿಗಳು ಹುಂಡಿ ಎಣಿಕೆ ಮಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಚೀಟಿಯೊಂದು ಅವರಿಗೆ ಕಾಣಿಸಿದೆ. ಅದನ್ನು ತೆಗೆದು ನೋಡಿದ ಅಧಿಕಾರಿಗಳಿಗೆ ಒಂದು ಕ್ಷಣ ಶಾಕ್‌ ಆಗಿದ್ದಾರೆ.

ವಿಶಾಖಪಟ್ಟಣದ ಸಿಂಹಾಚಲಂ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಎಂದಿನಂತೆ ಅಧಿಕಾರಿಗಳು ಹುಂಡಿ ಎಣಿಕೆಯಲ್ಲಿ ನಿರತರಾಗಿದ್ದರು. ಈ ವೇಳೆ ಸಿಕ್ಕಿದ ಚೀಟಿಯೊಂದನ್ನು ನೋಡಿದ್ದಾರೆ. ಅದು ಸಾಮಾನ್ಯ ಚೀಟಿಯಾಗಿರಲಿಲ್ಲ. ಅದು ಒಂದಲ್ಲ, ಎರಡಲ್ಲ, ಬರೋಬ್ಬರಿ 100 ಕೋಟಿ ರೂಪಾಯಿ ಮೌಲ್ಯದ ಚೆಕ್. ಇದನ್ನು ಕಂಡ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಾರೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೂರಾರು ವರ್ಷಗಳ ದೇವಸ್ಥಾನದ ಇತಿಹಾಸದಲ್ಲಿಯೇ ನಡೆಯದ ಈ ವಿಶೇಷ ಘಟನೆಯನ್ನು ಉನ್ನತ ಅಧಿಕಾರಿಗಳು ಅನುಮಾನಿಸದಿದ್ದರೂ, ಬಳಿಕ 100 ಕೋಟಿ ರೂಪಾಯಿ ಮೌಲ್ಯದ ಚೆಕ್ ಮೂಲ ವಿವರಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ – ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಹರ್ಷಿಕಾ, ಭುವನ್‌

ಚೆಕ್​​ ಮೇಲಿನ ವಿವರಗಳ ಆಧಾರದ ಮೇಲೆ ಬ್ಯಾಂಕ್‌ ನಲ್ಲಿ ಭಕ್ತನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಹುಂಡಿಯಲ್ಲಿ ಸಿಕ್ಕ ಚೆಕ್‌ ಬೊಡ್ಡೆಪಲ್ಲಿ ರಾಧಾಕೃಷ್ಣ ಅವರ ಉಳಿತಾಯ ಖಾತೆಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಚೆಕ್ ಸಂಖ್ಯೆ MVP ಡಬಲ್ ರೋಡ್ ಶಾಖೆಯ ಹೆಸರಿನಲ್ಲಿತ್ತು. ಏನೇ ಆದರೂ ಉಳಿತಾಯ ಖಾತೆಯಿಂದ 100 ಕೋಟಿ ದೇಣಿಗೆ ನೀಡಿರುವ ಬಗ್ಗೆ ದೇವಸ್ಥಾನದ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಅದರಲ್ಲಿಯೂ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದ ಹೆಸರಿನಲ್ಲಿ ಬರೆದಿದ್ದ ಚೆಕ್‌ನಲ್ಲಿ ಮೊದಲು 10 ರೂಪಾಯಿ ಎಂದು ಬರೆದು, ಮತ್ತೆ 100 ಕೋಟಿ ಎಂದು ಬರೆದಿರುವುದು ಕಂಡು ಬಂದಿದೆ. ಎಲ್ಲರಿಗೂ ಕುತೂಹಲದ ಜತೆಗೆ ಅನುಮಾನವೂ ಮೂಡಿತ್ತು.

ಹುಂಡಿಯಲ್ಲಿ 100 ಕೋಟಿ ರೂ ಮೊತ್ತದ ಚೆಕ್ ವಿಚಾರ ಮಾಧ್ಯಮಗಳ ಗಮನಕ್ಕೂ ಬಂದಿದೆ. ಕೆಲ ಮಾಧ್ಯಮ ಪ್ರತಿನಿಧಿಗಳೂ ತಕ್ಷಣವೇ ಬ್ಯಾಂಕ್​ಗೆ ಹೋಗಿ ಖಾತೆಯನ್ನು ಪರಿಶೀಲಿಸಿದರು. ಈ ಬಾರಿ ಅವರೂ ಶಾಕ್ ಆಗಿದ್ದಾರೆ. ಯಾಕೆಂದರೆ ಆ ಖಾತೆಯಲ್ಲಿ  ಇದ್ದಿದ್ದು, ಕೇವಲ 17 ರೂಪಾಯಿ! ಈ ಘಟನೆಯಿಂದಾಗಿ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ. ಅಧಿಕೃತವಾಗಿ ಚೆಕ್ ಹೊಂದಿರುವವರ ವಿವರಗಳನ್ನು ಕಂಡುಹಿಡಿಯಲು ದೇವಾಲಯದ ಅಧಿಕಾರಿಗಳು ಅಧಿಕೃತವಾಗಿ ಚೆಕ್ ಅನ್ನು ಬ್ಯಾಂಕ್‌ಗೆ ಕಳುಹಿಸಿ ಸಂಪೂರ್ಣ ವಿವರಗಳನ್ನು ಪಡೆಯಲು ನಿರ್ಧರಿಸಿದ್ದಾರೆ. ಅದರ ಆಧಾರದ ಮೇಲೆ ದೇವಸ್ಥಾನದ ಅಧಿಕಾರಿಗಳು ವ್ಯಕ್ತಿಯ ವಿವರಗಳನ್ನು ಪತ್ತೆ ಹಚ್ಚಿ ಅವರನ್ನು ಸಂಪರ್ಕಿಸಿ, ಇಂತಹ ದುರ್ವರ್ತನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

suddiyaana