ತಿರುಪತಿ ದೇವಸ್ಥಾನದ ಹುಂಡಿಯಿಂದ 100 ಕೋಟಿಗೂ ಅಧಿಕ ಹಣ ಕಳ್ಳತನ? – ಕೋಟಿ ಕೋಟಿ ಹಣ ಯಾರ ಪಾಲಾಯ್ತು?

ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾಗಿರುವ ತಿರುಮಲ ತಿರುಪತಿ ಕ್ಷೇತ್ರ ಬಹಳ ಪ್ರಸಿದ್ಧವಾದ ಹಿಂದೂ ದೇವಾಲಯವಾಗಿದೆ. ಭಾರತದ ಶ್ರೀಮಂತ ದೇವಸ್ಥಾನವಾಗಿರುವ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಿತ್ಯ ಲಕ್ಷಾಂತರ ಭಕ್ತರು ವಿದೇಶದಿಂದಲೂ ಬರುತ್ತಾರೆ. ದೇವರಿಗೆ ಕಾಣಿಕೆ ಸಲ್ಲಿಸೋ ಮೂಲಕ ಹರಕೆ ತೀರಿಸಿಕೊಳ್ಳುತ್ತಾರೆ. ಆದ್ರೀಗ ತಿರುಪತಿ ದೇವಸ್ಥಾನದ ಕಾಣಿಕೆ ಹುಂಡಿಯಿಂದ 100 ಕೋಟಿ ರೂ. ಗೂ ಹೆಚ್ಚು ಹಣ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿಗಳನ್ನು ಟಿಟಿಡಿ ಸದಸ್ಯ, ಬಿಜೆಪಿ ನಾಯಕ ಭಾನು ಪ್ರಕಾಶ್ ರೆಡ್ಡಿ ಬಿಡುಗಡೆ ಮಾಡಿದ್ದಾರೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ವೈಎಸ್ಆರ್ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ತಿರುಪತಿ ದೇವಸ್ಥಾನದ ಕಾಣಿಕೆ ಹುಂಡಿಯಿಂದ 100 ಕೋಟಿ ರೂ. ಗೂ ಹೆಚ್ಚು ಹಣ ಕಳ್ಳತನವಾಗಿದೆ. ತಿರುಪತಿ ದೇವಸ್ಥಾನದ ಹುಂಡಿಯಿಂದ ಹಲವಾರು ವೈಎಸ್ಆರ್ ಸಿಪಿ ನಾಯಕರು ಮತ್ತು ಅಧಿಕಾರಿಗಳು ಅಪಾರ ಹಣ ಲೂಟಿ ಮಾಡಿದ್ದಾರೆ ಎಂದು ಟಿಟಿಡಿ ಸದಸ್ಯ, ಬಿಜೆಪಿ ನಾಯಕ ಭಾನು ಪ್ರಕಾಶ್ ರೆಡ್ಡಿ ದೂರಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾನು ಪ್ರಕಾಶ್ ರೆಡ್ಡಿ, ವೈಎಸ್ಆರ್ ಜಗನ್ ಮೋಹನ್ ರೆಡ್ಡಿ ಅಧಿಕಾರದಲ್ಲಿದ್ದಾಗ ತಿರುಪತಿ ದೇವಸ್ಥಾನದ ದೇಣಿಗೆ ಪೆಟ್ಟಿಗೆಯಿಂದ 100 ಕೋಟಿ ರೂ. ಗೂ ಹೆಚ್ಚು ಕಳ್ಳತನವಾಗಿದೆ. ದೇವಸ್ಥಾನದ ಸಿಬ್ಬಂದಿ ರವಿಕುಮಾರ್ ದೇಣಿಗೆ ಪೆಟ್ಟಿಗೆಯಿಂದ ಹಣವನ್ನು ಕದ್ದಿದ್ದಾರೆ. ದೇವಸ್ಥಾನದ ಹುಂಡಿಯಿಂದ ಲೂಟಿ ಮಾಡಿದ ಹಣದಿಂದಲೇ ಕೋಟ್ಯಂತರ ರೂಪಾಯಿಗಳನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ. ಅಕ್ರಮ ಹಣವನ್ನು ಜಗನ್ ರೆಡ್ಡಿ ಅವರ ತಾಡೇಪಲ್ಲಿ ಮನೆಗೆ ಕಳುಹಿಸಲಾಗಿದೆ ಮತ್ತು ಹಗರಣದ ಅನಂತರ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ. 2019 ರಿಂದ 2024 ರವರೆಗೆ ನಡೆದ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಟಿಟಿಡಿಯ ಇತಿಹಾಸದಲ್ಲಿ 100 ಕೋಟಿ ರೂಪಾಯಿಗಳ ಕಳ್ಳತನವು ಅತ್ಯಂತ ದೊಡ್ಡ ಲೂಟಿ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಸಿಸಿಟಿವಿ ದೃಶ್ಯಗಳನ್ನು ಎನ್‌ಡಿಎಗೆ ಸೇರಿದ ಟಿಡಿಪಿ ನಾಯಕ ನಾರಾ ಲೋಕೇಶ್ ಹಂಚಿಕೊಂಡಿದ್ದು, ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಭಕ್ತರು ತಮ್ಮ ಕಾಣಿಕೆಗಳನ್ನು ದೇಣಿಗೆ ಪೆಟ್ಟಿಗೆಗೆ ಹಾಕಿದರೆ ಅದನ್ನು ಲೂಟಿ ಮಾಡಲಾಗುತ್ತದೆ. ಈ ಪ್ರಕರಣವನ್ನು ಹೈಕೋರ್ಟ್ ಸಿಐಡಿಗೆ ವರ್ಗಾಯಿಸಿದೆ. ಒಂದು ತಿಂಗಳೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನು ಹಂಚಿಕೊಂಡಿರುವ ರೆಡ್ಡಿ, ಟಿಟಿಡಿ ನಿರ್ಧಾರಗಳು ಮತ್ತು ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸಹ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. .

ನೋಡಿರಿ

