ಸೋಲನ್ನೇ ಕಾಣದ RRಗೆ ಸವಾಲ್ ಹಾಕಲು RCBಯಲ್ಲಿ ಯಾವ ಆಟಗಾರರು ಔಟ್?

ಸೋಲನ್ನೇ ಕಾಣದ RRಗೆ ಸವಾಲ್ ಹಾಕಲು RCBಯಲ್ಲಿ ಯಾವ ಆಟಗಾರರು ಔಟ್?

ಬೌಲಿಂಗ್ ಚೆನ್ನಾಗಿದ್ರೆ ಬ್ಯಾಟಿಂಗ್ ಮಾಡಲ್ಲ. ಬ್ಯಾಟಿಂಗ್ ಚೆನ್ನಾಗಿದ್ರೆ ಬೌಲಿಂಗ್ ಬರಲ್ಲ. ಒಟ್ನಲ್ಲಿ ಆರ್​ಸಿಬಿ ಟೀಂ ಫೀಲ್ಡಿಗಿಳಿಯೋದೇ ಸೋಲೋಕೆ ಅನ್ನುವಂತಾಗಿದೆ. ಬೆಂಗಳೂರು ಫ್ಯಾನ್ಸ್ ಅಂತೂ ಇವತ್ತಾದ್ರೂ ಗೆಲ್ತಾರೇ ಅಂತಾ ಮಧ್ಯಾಹ್ನದಿಂದ್ಲೇ ಟಿವಿ, ಮೊಬೈಲ್ ಮುಂದೆ ಕೂತ್ಕೊಂಡು ಕೊನೆಗೆ RCB ಹಣೆಬರಹನೇ ಇಷ್ಟು ಅಂತಾ ಹೃದಯನ ಕಲ್ಲು ಮಾಡಿಕೊಳ್ತಿದ್ದಾರೆ. ಈಗಾಗ್ಲೇ ಆಡಿರೋ ನಾಲ್ಕು ಮ್ಯಾಚ್​ಗಳಲ್ಲಿ ಮೂರರಲ್ಲಿ ಸೋತಿರೋ ಆರ್​ಸಿಬಿ ಮೂರಕ್ಕೆ ಮೂರೂ ಮ್ಯಾಚ್​ಗಳನ್ನ ಗೆದ್ದಿರೋ ರಾಜಸ್ತಾನ್ ರಾಯಲ್ಸ್ ವಿರುದ್ಧ ಸೆಣಸಾಡಲಿದೆ. ಶನಿವಾರ ನಡೆಯಲಿರುವ ಈ ಮ್ಯಾಚ್ ಆರ್​ಸಿಬಿ ಪಾಲಿಗೆ ಬಹು ಮಹತ್ವದ ಪಂದ್ಯ ಆಗಿದೆ. ಸಾಲು ಸಾಲು ಪಂದ್ಯಗಳಲ್ಲಿ ಸೋತಿರೋ ಆರ್​ಸಿಬಿಯಲ್ಲಿ ಕೆಲ ಬದಲಾವಣೆಗಳನ್ನೂ ಮಾಡಲಾಗಿದೆ. ಅಷ್ಟಕ್ಕೂ ಏನು ಆ ಬದಲಾವಣೆಗಳು.. ಆರ್​ಸಿಬಿ Vs RRನಲ್ಲಿ ಯಾರು ಬೆಸ್ಟ್? ಎರಡು ತಂಡಗಳ ಬಲಾಬಲ ಏನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: RCB ಸೋಲಿಗೆ ಅಶ್ವಿನಿ ವಿರುದ್ಧ ಪೋಸ್ಟ್.. – ದಚ್ಚು..ಕಿಚ್ಚ.. ಯಾರ ಅಭಿಮಾನಿ ಕೃತ್ಯ ಇದು?

ಐಪಿಎಲ್ ಉದ್ಘಾಟನಾ ಪಂದ್ಯದಲ್ಲೇ ಮುಗ್ಗರಿಸಿದ್ದ ಆರ್​ಸಿಬಿ 2ನೇ ಪಂದ್ಯದಲ್ಲಿ ಗೆದ್ದು ಲಯಕ್ಕೆ ಮರಳಿತ್ತಾದರೂ ಮತ್ತೆ ಸತತ ಸೋಲುಗಳಿಂದ ಕಂಗೆಟ್ಟಿದೆ. ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿಗೆ ಶರಣಾಗಿರುವ ಆರ್​ಸಿಬಿ ಇದೀಗ ರಾಜಸ್ಥಾನ್ ರಾಯಲ್ಸ್  ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದೆ. ಉಭಯ ತಂಡಗಳು ಏಪ್ರಿಲ್ 6ರಂದು ಜೈಪುರದ ಸವಾಯಿ ಮಾನ್ಸಿಂಗ್​ ಸ್ಟೇಡಿಯಂನಲ್ಲಿ ಎದುರು ಬದುರಾಗಲಿವೆ. ಈ ಮ್ಯಾಚ್​ನ ವಿಶೇಷ ಅಂದ್ರೆ ಒಂದೆಡೆ ಆರ್​ಸಿಬಿ ಸತತ ಸೋಲುಗಳಿಂದ ಕಳಪೆ ಪ್ರದರ್ಶನ ನೀಡ್ತಿದ್ರೆ ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಆರ್​ ಭರ್ಜರಿ ಗೆಲುವು ಸಾಧಿಸಿದೆ. ಇನ್ನೂ ಸೋಲು ಕಾಣದ ಆರ್​ಆರ್​, ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅದ್ರಲ್ಲೂ ತನ್ನ ತವರಿನ ಲಾಭ ಪಡೆದು ಆರ್​ಸಿಬಿಗೆ ಸೋಲುಣಿಸಲು ಲೆಕ್ಕಾಚಾರ ಹಾಕಿಕೊಂಡಿದೆ ರಾಜಸ್ಥಾನ್. ಆದ್ರೆ ಆರ್​ಸಿಬಿ ತನ್ನ ಪ್ಲೇ ಆಫ್​ ಹಾದಿಯನ್ನು ಸುಲಭವಾಗಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅದಕ್ಕಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ಆಕ್ರಮಣಕಾರಿ ಆಟಗಾರರು ಅವಕಾಶ ಪಡೆಯುವ ನಿರೀಕ್ಷೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲ್ನೋಟಕ್ಕೆ ಅದ್ಭುತ ಬ್ಯಾಟಿಂಗ್​ ಲೈನಪ್ ಹೊಂದಿದೆ. ಆದರೆ ವಿಪರ್ಯಾಸ ಅಂದ್ರೆ ಆರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ಕೊನೆಯಲ್ಲಿ ದಿನೇಶ್ ಕಾರ್ತಿಕ್ ಬಿಟ್ರೆ ಮಿಕ್ಕವ್ರಿಗೆಲ್ಲಾ ಬ್ಯಾಟಿಂಗ್ ಮರೆತೇ ಹೋದಂತಿದೆ. ನಾಯಕ ಫಾಫ್ ಡು ಪ್ಲೆಸಿಸ್, 17.5 ಕೋಟಿ ಒಡೆಯ ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್ ನಾಲ್ಕು ಪಂದ್ಯಗಳಿಂದಲೂ ಇದ್ದೂ ಇಲ್ಲದಂತೆ ಆಡ್ತಿದ್ದಾರೆ. ಹೀಗಾಗಿ ಶನಿವಾರದ ಪಂದ್ಯದಲ್ಲಿ ಈ ನಾಲ್ವರ ಪೈಕಿ ಇಬ್ಬರನ್ನು ಕೈಬಿಡುವ ಸಾಧ್ಯತೆ ಇದೆ.

ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರ ಪೈಕಿ ರಜತ್ ಪಾಟೀದಾರ್ ಮತ್ತು ಕ್ಯಾಮರೂನ್​ ಗ್ರೀನ್ ಅವರನ್ನು ಪ್ಲೇಯಿಂಗ್​ ಇಲೆವೆನ್​ನಿಂದ ಹೊರಗಿಡಲು ಮ್ಯಾನೇಜ್​ಮೆಂಟ್ ಚಿಂತನೆ ನಡೆಸಿದೆ. ಗ್ರೀನ್ ಬದಲಿಗೆ ಹಾರ್ಡ್ ಹಿಟ್ಟರ್​ ವಿಲ್​ಜ್ಯಾಕ್ಸ್​ ಮತ್ತು ಪಾಟೀದಾರ್ ಸ್ಥಾನಕ್ಕೆ ಸುಯೇಶ್ ಪ್ರಭುದೇಸಾಯಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಮ್ಯಾಕ್ಸ್​ವೆಲ್ ಕೂಡ ಬ್ಯಾಟಿಂಗ್​ನಲ್ಲಿ ಅಟ್ಟರ್​ಫ್ಲಾಪ್ ಆಗಿದ್ದರೂ ಸಹ ತಂಡದಲ್ಲಿ ಉಳಿಸಿಕೊಳ್ಳಲು ಕಾರಣ ಅವರ ಬೌಲಿಂಗ್​ ಚೆನ್ನಾಗಿದೆ. ಇನ್ನು ಡು ಪ್ಲೆಸಿಸ್ ಕ್ಯಾಪ್ಟನ್ ಆಗಿರೋದ್ರಿಂದ ಅವ್ರನ್ನ ಡ್ರಾಪ್ ಮಾಡೋಕೆ ಚಾನ್ಸ್  ಇಲ್ಲ. ಇದಿಷ್ಟೇ ಅಲ್ದೇ ಅನುಜ್ ರಾವತ್​ ಬದಲಿಗೆ ಮಹಿಪಾಲ್ ಲೊಮ್ರೋರ್ ತಂಡದಲ್ಲಿ ಆಡಬೇಕು. ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಬೇಕಿದೆ. ಅನುಜ್ ರಾವತ್ ಕಳೆದ ಮೂರು ಪಂದ್ಯಗಳಿಂದಲೂ ಹೇಳಿಕೊಳ್ಳುವಂತೆ ಫರ್ಪಾಮೆನ್ಸ್ ನೀಡಿಲ್ಲ. ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಸಲು ಬೌಲಿಂಗ್​ ವಿಭಾಗದಲ್ಲೂ ಕೆಲ ಬದಲಾವಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ.  ವಿಜಯ್ ಕುಮಾರ್ ವೈಶಾಕ್ ಮತ್ತು ಲಾಕಿ ಫರ್ಗ್ಯುಸನ್​ ಅವಕಾಶ ಪಡೆಯುವ ಚಾನ್ಸ್ ಇದೆ. ಯಶ್ ದಯಾಳ್​ ಮತ್ತು ರೀಸ್ ಟೋಪ್ಲಿ ಕೂಡ ಹೇಳಿಕೊಳ್ಳುವಂತ ಫಾರ್ಮ್​ನಲ್ಲಿಲ್ಲ. ದಯಾಳ್​ರನ್ನು ಕೈಬಿಟ್ಟರೂ ಅವರನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಸಬಹುದು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಮುಖಾಮುಖಿಯಾಗಿರುವ ಅಂಕಿ ಅಂಶಗಳನ್ನ ನೋಡೋದಾದ್ರೆ, ಇಲ್ಲಿಯವರೆಗೆ ಎರಡು ತಂಡಗಳ ನಡುವೆ ಟಫ್ ಫೈಟ್ ನಡೆದಿದೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 30 ಬಾರಿ ಮುಖಾಮುಖಿಯಾಗಿವೆ. ಈ 30 ಮುಖಾಮುಖಿಯಲ್ಲಿ ಆರ್​ಸಿಬಿ 15 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳನ್ನು ಗೆದ್ದಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ರಾಜಸ್ಥಾನ ಮತ್ತು ಆರ್‌ಸಿಬಿ ನಡುವಿನ ಹಣಾಹಣಿಯಲ್ಲಿ, ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡುವಾಗ 5 ಮತ್ತು ಗುರಿಯನ್ನು ಬೆನ್ನಟ್ಟಿದ 7 ಪಂದ್ಯಗಳನ್ನು ಗೆದ್ದಿದೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡುವಾಗ 5 ಪಂದ್ಯಗಳನ್ನು ಮತ್ತು ಗುರಿಯನ್ನು ಬೆನ್ನಟ್ಟುವಾಗ 10 ಪಂದ್ಯಗಳನ್ನು ಗೆದ್ದಿದೆ. ಇನ್ನು ಜೈಪುರ ಮೈದಾನದಲ್ಲಿ ಉಭಯ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ಮುಖಾಮುಖಿಯಲ್ಲಿ ಎರಡೂ ತಂಡಗಳು ತಲಾ 4 ಪಂದ್ಯಗಳನ್ನು ಗೆದ್ದಿವೆ. ರಾಜಸ್ಥಾನ ತನ್ನ ತವರು ಮೈದಾನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ 54 ಪಂದ್ಯಗಳನ್ನು ಆಡಿದ್ದು, 35 ಪಂದ್ಯಗಳನ್ನು ಗೆದ್ದಿದ್ದರೆ, 19ಪಂದ್ಯಗಳಲ್ಲಿ ಸೋಲು ಕಂಡಿದೆ. ಇದನ್ನ ಗಮನಿಸಿದರೆ ಆರ್​ಸಿಬಿ ಮೇಲುಗೈ ಸಾಧಿಸಿದೆ ಅನ್ನಿಸಿದ್ರೂ ಈ ಬಾರಿ ಪರಿಸ್ಥಿತಿ ಹೀಗಿಲ್ಲ. ಯಾಕಂದ್ರೆ ಆರ್​ಸಿಬಿ ಲಯ ಕಳೆದುಕೊಂಡಿದ್ರೆ ರಾಜಸ್ತಾನ್ ರಾಯಲ್ಸ್ ಸೋಲೇ ಕಾಣದೆ ಮುನ್ನುಗ್ಗುತ್ತಿದೆ.

ಆರ್​ಸಿಬಿಯಲ್ಲಿ ಮಾತ್ರ ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ಪರಿಸ್ಥಿತಿ ಬದಲಾಗಿಲ್ಲ. ಯಾಕಂದ್ರೆ ಆರ್‌ಸಿಬಿಯನ್ನು ಕೊಹ್ಲಿ  ಒಬ್ಬರೇ ಮುನ್ನಡೆಸುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಕ್ಯಾಪ್ಟನ್ ಅಲ್ಲದಿದ್ದರೂ ಅಭಿಮಾನಿಗಳು ಕಿಂಗ್ ಮೇಲೆಯೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊಹ್ಲಿ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಅವರು ನಾಲ್ಕು ಪಂದ್ಯಗಳಲ್ಲಿ 67.66 ಸರಾಸರಿಯಲ್ಲಿ 203 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳೂ ಸೇರಿವೆ. ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿರುವ ಕೊಹ್ಲಿ, 2024 ರ ಋತುವಿನಲ್ಲಿ ಇದುವರೆಗೆ ಅತಿ ಹೆಚ್ಚು ಬೌಂಡರಿ ಅಂದ್ರೆ 17 ಮತ್ತು 8 ಸಿಕ್ಸರ್ ಬಾರಿಸಿದ್ದಾರೆ. ಅತ್ತ ರಾಜಸ್ಥಾನ್ ರಾಯಲ್ಸ್‌ ಬ್ಯಾಟರ್‌ ರಿಯಾನ್ ಪರಾಗ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 3 ಪಂದ್ಯಗಳಲ್ಲಿ 181 ರನ್ ಗಳಿಸಿದ್ದಾರೆ. ಹೀಗಾಗಿ ಶನಿವಾರದ ಮ್ಯಾಚ್​ನಲ್ಲಿ ಆರೆಂಜ್ ಕ್ಯಾಪ್ ಉಳಿಸಿಕೊಳ್ಳುವ ಅವಕಾಶ ಕೊಹ್ಲಿಗಿದ್ರೆ ಆರೆಂಜ್ ಕ್ಯಾಪ್ ಕಸಿದುಕೊಳ್ಳುವ ಚಾನ್ಸ್​ ಪರಾಗ್​ಗೆ ಇದೆ.

ಆದರೆ ತಂಡದ ಎಲ್ಲ ಆಟಗಾರರು ಉತ್ತಮವಾಗಿ ಆಡಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗುತ್ತಿದ್ದು, ಕೊಹ್ಲಿ ಮಾತ್ರ ಏಕಾಂಗಿಯಾಗಿ ಆಡಬೇಕಾಗಿದೆ. ಆರ್​ಸಿಬಿ ಬಿಗ್ ಚಾಲೆಂಜ್ ಅಂದ್ರೆ ಬೌಲಿಂಗ್. ಟೀಮ್​ನ ಮೇನ್ ಬೌಲರ್ ಆಗಿರುವ ಯಶ್ ದಯಾಲ್ ಮೂರು ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ 11 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಪಡೆದಿದ್ದಾರೆ. ಅಲ್ಜಾರಿ ಜೋಸೆಫ್ ಮೂರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಕಿತ್ತಿದ್ದಾರೆ. ಸ್ಪಿನ್ ಬೌಲಿಂಗ್ ವಿಭಾಗವೂ ವೀಕ್ ಆಗಿದೆ. ಆಪತ್ಕಾಲದಲ್ಲಿ ನೆರವಾಗಲು ತಂಡದಲ್ಲಿ ಒಬ್ಬನೇ ಒಬ್ಬ ಉತ್ತಮ ಬೌಲರ್ ಇಲ್ಲ. ಕರಣ್​ ಶರ್ಮಾ ಸಹ ಫಿಟ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.

ಕಳಪೆ ಪ್ರದರ್ಶನ ನೀಡ್ತಿರೊ ಆರ್​ಸಿಬಿ ಈ ಆವೃತ್ತಿಯಲ್ಲಿ ಆಲೌಟ್ ಆದ ಮೊದಲ ತಂಡ ಎನ್ನುವ ದಾಖಲೆ ಮಾಡಿದೆ. ಸದ್ಯ ಆರ್‌ಸಿಬಿ ಆಟ ನೋಡಿದ ಅಭಿಮಾನಿಗಳು ಹೊಸ ಅಧ್ಯಾಯ ಅಲ್ಲ ಇದು ಹಳೇ ಸಂಪ್ರದಾಯ ಅಂತಿದ್ದಾರೆ. ಸತತ ಮೂರು ಸೋಲುಗಳನ್ನು ಕಂಡಿರುವ ಆರ್​​ಸಿಬಿ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ರಾಯಲ್ಸ್ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ರಾಯಲ್ಸ್ ಗೆದ್ದರೆ ಅದು ಮೊದಲ ಸ್ಥಾನಕ್ಕೇರುವ ಅವಕಾಶ ಪಡೆಯಲಿದೆ. ಹಾಗೇನಾದ್ರೂ ಆರ್​ಸಿಬಿ ಗೆದ್ರೆ ಪಾಟಿಂಟ್ ಟೇಬಲ್​ನಲ್ಲಿ ಮೇಲಕ್ಕೆ ಏರುವ ಸಾಧ್ಯತೆ ಇದೆ.   ಈ ಪಂದ್ಯ ಉಭಯ ತಂಡಗಳಿಗೂ ಬಹಳ ಮುಖ್ಯವಾಗಿದೆ. ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲ್ಲಬೇಕೆಂದರೆ ಆರ್‌ಸಿಬಿ ತಂಡದಲ್ಲಿ ಬದಲಾವಣೆ ಮಾಡಲೇಬೇಕಿದೆ. ಇಲ್ಲದಿದ್ದರೆ ಮತ್ತೊಂದು ಸೋಲು ಶತಸಿದ್ಧ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಆರ್​ಸಿಬಿಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಆರ್‌ಸಿಬಿಗೆ ಕಪ್ ಗೆಲ್ಲುವುದು ಇರಲಿ ಪ್ಲೇಆಫ್​ಗೆ ಹೋಗೋದೇ ಕಷ್ಟವಾಗಲಿದೆ.

Shwetha M