ಸೇಡು ತೀರಿಸಿಕೊಳ್ಳುತ್ತಾ RR? – SRHಗೆ ಚೆನ್ನೈ ಬೆಂಬಲ ಸಿಗುತ್ತಾ?
ಐಪಿಎಲ್ ನಾಮಕಾವಸ್ತೆಗೆ ಅಷ್ಟೇನಾ?

ಐಪಿಎಲ್‌ನಲ್ಲಿ ಈಗ ಫೈನಲ್ ಕುತೂಹಲ ಜೋರಾಗಿದೆ.. ಯಾರು ಕೆಕೆಆರ್ ಎದುರಾಳಿ ಎನ್ನುವುದು ಇಂದು ರಾತ್ರಿ ನಿರ್ಧಾರವಾಗಲಿದೆ.. ಚೆನ್ನೈನ ಪಿ.ಚಿದಂಬರಂ ಸ್ಟೇಡಿಯಂನಲ್ಲಿ ಆರ್‌ಆರ್ ವರ್ಸಸ್ ಎಸ್‌ಆರ್‌ಹೆಚ್ ಫೈಟ್ ನಡೆಯಲಿದೆ.. ಹೈದ್ರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ತವರೂರಿನಲ್ಲಿ ಪಂದ್ಯ ನಡೆಯೋದ್ರಿಂದ ಲೋಕಲ್ ಸಪೋರ್ಟ್ ಹೆಚ್ಚಾಗಿ ಎಸ್‌ಆರ್‌ಹೆಚ್ ಪರವಾಗಿರಲಿದೆ.. ಐಪಿಎಲ್‌ನ ಈ ಸೀಸನ್‌ನಲ್ಲಿ ಕಡೆಯ ಹಂತದವರೆಗೆ ಟೇಬಲ್ ಟಾಪರ್ ಆಗಿದ್ದು, ಕೊನೆಯಲ್ಲಿ ಆ ಸ್ಥಾನವನ್ನು ಕೆಕೆಆರ್‌ಗೆ ಬಿಟ್ಟುಕೊಟ್ಟು ಮೂರನೇ ಸ್ಥಾನಕ್ಕೆ ಕುಸಿದ ಆರ್‌ಆರ್ ಈಗ ಮತ್ತೆ ಪುಟಿದೆದ್ದು ಫೈನಲ್ ತಲುಪುವ ವಿಶ್ವಾಸದಲ್ಲಿದೆ.. ಇಷ್ಟಕ್ಕೂ ಈ ಎರಡು ತಂಡಗಳಲ್ಲಿ ಗೆಲ್ಲುವ ಫೇವರೇಟ್ ತಂಡ ಯಾವುದು? ಮೊದಲ ಐಪಿಎಲ್ ಸೀಸನ್‌ನಲ್ಲಿ ಟೈಟಲ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತೊಮ್ಮೆ ಚಾಂಪಿಯನ್ ಆಗುತ್ತಾ? ಸಂಜು ಸ್ಯಾಮ್ಸನ್ ಟೀಂನ ಭವಿಷ್ಯವೇನು? ಪ್ಯಾಟ್ ಕಮಿನ್ಸ್ ಫೈನಲ್‌ಗೆ ತಂಡವನ್ನು ಮುನ್ನೆಡಸಬಹುದಾ ಅನ್ನೋದ್ರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಪ್ಪನ ಸಾವು, ಅಣ್ಣನಿಗೆ ಕೊಟ್ಟ ಮಾತು- ಕ್ರಿಕೆಟ್ ಲೋಕದಲ್ಲಿ ಈಗ ವಿರಾಟ್ ಕೊಹ್ಲಿ ಕಿಂಗ್
ಆರ್‌ಸಿಬಿಯನ್ನು ಎಲಿಮಿನೇಟರ್‌ನಲ್ಲಿ ಕೆಡವಿದ ಆರ್‌ಆರ್‌ಗೆ ಈಗ ಹೈದ್ರಾಬಾದ್ ಸವಾಲು ಎದುರಾಗಿದೆ.. ಫೈನಲ್ ತಲುಪುವ ಹಾದಿಯಲ್ಲಿ ಎಡವಿದ ಎಸ್‌ಆರ್‌ಹೆಚ್, ಎರಡನೇ ಪಂದ್ಯದಲ್ಲಿ ಗೆದ್ದು ಮತ್ತೆ ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದೆ.. ಕೆಕೆಆರ್ ವಿರುದ್ಧ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ವಿಫಲರಾಗಿದ್ದರು.. ಆರಂಭಿಕ ಆಘಾತದಿಂದಾಗಿ ಎಸ್‌ಆರ್‌ಹೆಚ್ ಬಿಗ್‌ಸ್ಕೋರ್ ಕಲೆಹಾಕುವಲ್ಲಿ ವಿಫಲವಾಗಿತ್ತು.. ಯಾಕಂದ್ರೆ ಹೈದ್ರಾಬಾದ್ ತಂಡದ ಬಲವೇ ಬ್ಯಾಟಿಂಗ್.. ಈ ಸೀಸನ್‌ನಲ್ಲಿ ರನ್‌ಗಳ ಬೆಟ್ಟವನ್ನು ಕಟ್ಟಿದ್ದು ಇದೇ ಹೈದ್ರಾಬಾದ್ ತಂಡ. ಹೀಗಾಗಿ ಎರಡನೇ ಕ್ವಾಲಿಫೈಯರ್‌ನಲ್ಲಿ ರನ್‌ಗಳ ಹೊಳೆಯೇನಾದರೂ ಹರಿದರೆ ಆಗ ಆರ್‌ಆರ್ ತಂಡಕ್ಕೆ ಗೆಲುವಿನ ಕನಸು ಕಾಣೋದು ಕಷ್ಟವಿದೆ.. ಯಾಕಂದ್ರೆ ಜೋಸ್ ಬಟ್ಲರ್ ತಂಡದಲ್ಲಿ ಇಲ್ಲದೇ ಇರೋದ್ರಿಂದ ಆರ್‌ಆರ್ ಬ್ಯಾಟಿಂಗ್ ಸ್ವಲ್ಪ ವೀಕ್ ಆಗಿದೆ.. ಚೇಸ್ ಮಾಡೋದು ಅಷ್ಟು ಸುಲಭವೇನಲ್ಲ..
ಚೆನ್ನೈನಲ್ಲಿ ಮ್ಯಾಚ್ ನಡೆಯೋದ್ರಿಂದ ಟಾಸ್ ಕೂಡ ಇಂಪಾರ್ಟೆಂಟ್.. ಸಾಮಾನ್ಯವಾಗಿ ಚೇಸಿಂಗ್‌ಗೆ ಚೆಪಾಕ್ ಪಿಚ್ ಹೆಚ್ಚು ಸಹಕಾರಿಯಾಗಿಯೇ ಇರುತ್ತೆ.. ಸ್ಲೋ ಬೌಲಿಂಗ್ ಜೊತೆಗೆ ಟರ್ನಿಂಗ್‌ಗೆ ಅವಕಾಶ ಸಿಕ್ಕರೆ ಹೈದ್ರಾಬಾದ್ ಮೇಲೆ ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ಮೇಲುಗೈ ಸಾಧಿಸುವುದು ನಿಶ್ಚಿತ.. ಯಾಕಂದ್ರೆ.. ಆರ್.ಅಶ್ವಿನ್ ಪಾಲಿಗೆ ಚೆನ್ನೈ ಹೋಂ ಗ್ರೌಂಡ್.. ಅಲ್ಲಿನ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದು ಎಲ್ಲಾ ಆಟಗಾರರಿಗಿಂತ ಚೆನ್ನಾಗಿ ಅಶ್ವಿನ್‌ಗೆ ಗೊತ್ತಿರುತ್ತೆ.. ಅಶ್ವಿನ್ ಜೊತೆಗೆ ಚಹಲ್ ಕೂಡ ಸೇರಿಕೊಳ್ಳುವುದರಿಂದ ಸ್ಪಿನ್ ಬತ್ತಳಿಕೆ ಬಲಿಷ್ಠವಾಗಿದೆ.. ಆದ್ರೆ ಹಿಂದಿನ ಪಂದ್ಯದಲ್ಲಿ ಹೈದ್ರಾಬಾದ್ ಬ್ಯಾಟ್ಸ್‌ಮನ್‌ಗಳು ಚಹಲ್‌ಗೆ ಚಳಿಜ್ವರ ಬರುವಂತೆ ಹೊಡೆದಿದ್ದರು.. 4 ಓವರ್‌ಗಳಲ್ಲಿ 62 ರನ್ ಹೊಡೆದು ಚಹಲ್ ಸ್ಪಿನ್ ಖ್ಯಾತಿಗೆ ಕಪ್ಪುಚುಕ್ಕೆಯಿಟ್ಟಿದ್ದರು. ಈಗ ಅದಕ್ಕೆ ರಿವೇಂಜ್ ತೆಗೆದುಕೊಳ್ಳುವ ಅವಕಾಶ ಚಹಲ್‌ಗೆ ಸಿಕ್ಕಿದೆ.. ಯುಜವೇಂದ್ರ ಚಹಲ್ ಒಂದು ವೇಳೆ ಸ್ಪಿನ್ ಮೂಲಕ ಮೋಡಿ ಮಾಡಿದರೆ ಆಗ ಹೈದ್ರಾಬಾದ್ ವಿಲವಿಲ ಒದ್ದಾಡುವುದರಲ್ಲಿ ಅನುಮಾನೇ ಇಲ್ಲ.. ಇಲ್ಲಿ ರಾಜಸ್ಥಾನ್ ರಾಯಲ್ಸ್ ಇನ್ನೊಂದು ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.. ಈ ಸೀಸನ್‌ನಲ್ಲಿ ಆರಂಭದಿಂದಲೂ ಉತ್ತಮವಾಗಿಯೇ ಆಡುತ್ತಾ ಬಂದಿದ್ದ ಆರ್‌ಆರ್ ತಂಡಕ್ಕೆ ಮೇ 2ರಂದು ಹೈದ್ರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 1 ರನ್‌ಗಳ ಸೋಲಾಗಿತ್ತು.. ಅಲ್ಲಿಂದ ನಂತರ ಮೇ ತಿಂಗಳಲ್ಲಿ ಆರ್‌ಆರ್ ಗೆದ್ದಿದ್ದು ಮೊನ್ನೆ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ ಮಾತ್ರ.. ಈಗ ಒಂದು ರನ್‌ಗಳ ಸೋಲಿನ ಸೇಡು ತೀರಿಸಿಕೊಳ್ಳಲು ಆರ್‌ಆರ್ ಕಾಯುತ್ತಿದೆ..
ಬೌಲಿಂಗ್ ವಿಭಾಗಕ್ಕೆ ಬಂದಾಗ ಹೈದ್ರಾಬಾದ್‌ಗಿಂತ ಆರ್‌ಆರ್ ಹೆಚ್ಚು ಬ್ಯಾಲೆನ್ಸ್ ಮತ್ತು ವೆರೈಟಿಯನ್ನು ಹೊಂದಿದೆ.. ಟ್ರೆಂಟ್ ಬೌಲ್ಟ್ ಜೊತೆಗೆ ಸಂದೀಪ್ ಶರ್ಮಾ ಮತ್ತು ಆವೇಶ್ ಖಾನ್ ಉತ್ತಮ ಬೌಲಿಂಗ್ ಮೂಲಕ ಎದುರಾಳಿಯನ್ನು ಕಟ್ಟಿಹಾಕಬಲ್ಲರು.. ಜೊತೆಗೆ ಸ್ಪಿನ್ ಮೋಡಿ ಮಾಡಲು ಅಶ್ವಿನ್ ಮತ್ತು ಚಹಲ್ ಇದ್ದಾರೆ.. ಆದ್ರೆ ಹೈದ್ರಾಬಾದ್‌ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಭುವನೇಶ್ವರ್ ಕುಮಾರ್ ಮಾತ್ರ ಸ್ಟಾರ್ ಬೌಲರ್‌ಗಳು..ಅವರಿಬ್ಬರನ್ನು ಬಿಟ್ಟರೆ ಹೈದ್ರಾಬಾದ್‌ನ ಉಳಿದ ಬೌಲರ್‌ಗಳು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ.. ಆದ್ರೆ ಬ್ಯಾಟಿಂಗ್ ವಿಭಾಗದಲ್ಲಿ ಆರ್‌ಆರ್‌ಗಿಂತ ಹೈದ್ರಾಬಾದ್ ಹೆಚ್ಚು ಬಲಿಷ್ಠವಾಗಿದೆ.. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ತಂಡಕ್ಕೆ 12ಕ್ಕಿಂತ ಹೆಚ್ಚು ರನ್‌ರೇಟ್ ಯಾವ ಕ್ಷಣದಲ್ಲಿ ಬೇಕಿದ್ದರೂ ತಂದುಕೊಡಬಲ್ಲರು.. ಇವರನ್ನು ಕಟ್ಟಿಹಾಕಿದಲ್ಲಿ ಮಾತ್ರ ಆರ್‌ಆರ್‌ಗೆ ಉಳಿಗಾಲವಿದೆ.. ಜೋಸ್ ಬಟ್ಲರ್ ಇಲ್ಲದೆ ವೀಕ್ ಆಗಿರುವ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಈಗ ಟಿ20 ವರ್ಲ್‌ಕಪ್‌ಗೆ ಸೆಲೆಕ್ಟ್ ಆಗಿರುವ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಜವಾಬ್ದಾರಿಯುತವಾಗಿ ಆಡಬೇಕಿದೆ.. ಇವರಿಬ್ಬರು ಕ್ರೀಸ್‌ನಲ್ಲಿ ನೆಲೆ ನಿಂತರೆ ಮಾತ್ರ ಆರ್‌ಆರ್ ಕಪ್ ಕನಸನ್ನು ಇಟ್ಟುಕೊಳ್ಳಬಹುದು.. ಉಳಿದಂತೆ ರಿಯಾನ್ ಪರಾಗ್, ಹೆಟ್ಮೆಯರ್ ತಂಡದ ಬ್ಯಾಟಿಂಗ್ ಶಕ್ತಿ..
ಏನೇಆದ್ರೂ ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಯಾರು ಗೆಲ್ತಾರೆ ಎಂಬ ಕುತೂಹಲ ಇದ್ದೇ ಇದೆ.. ಆರ್‌ಸಿಬಿ, ಸಿಎಸ್‌ಕೆ, ಮುಂಬೈ ಇಂಡಿಯನ್ಸ್‌ನಂತಹ ಸ್ಟಾರ್ ಆಟಗಾರರು ಇರುವ ತಂಡಗಳು ಅಂತಿಮ ಮೂರರಲ್ಲಿ ಇಲ್ಲದೇ ಇರೋದ್ರಿಂದ ಐಪಿಎಲ್ ಕಳೆಗುಂದಿದೆ.. ಕ್ರಿಕೆಟ್ ಅಭಿಮಾನಿಗಳು ಕೂಡ ಇನ್ನೇನಿದ್ದರೂ ನಾಮಕಾವಸ್ತೆ ಪಂದ್ಯಗಳು ಮಾತ್ರ ಬಾಕಿಉಳಿದಿವೆ ಎಂದು ನಿರಾಶರಾಗಿದ್ದಾರೆ..