ತವರಿನಲ್ಲೇ ಥಂಡಾ ಹೊಡೆದ RCB – ಬೆಂಗಳೂರು ಸೋಲಿಗೆ ಇಲ್ಲಿವೆ ಕಾರಣ!

ತವರಿನಲ್ಲೇ ಥಂಡಾ ಹೊಡೆದ RCB – ಬೆಂಗಳೂರು ಸೋಲಿಗೆ ಇಲ್ಲಿವೆ ಕಾರಣ!

ಚಿನ್ನಸ್ವಾಮಿ ಕ್ರೀಡಾಂಗಣ ಆರ್​ಸಿಬಿ ತಂಡಕ್ಕೆ ಹೋಂ ಗ್ರೌಂಡ್ ಆಗಿದ್ರೂ ಕೂಡ ಕಂಪ್ಲೀಟ್ ಡಾಮಿನೇಟ್ ಮಾಡಿದ್ದು ಗುಜರಾತ್ ಟೈಟಾನ್ಸ್ ತಂಡ. ಈ ಸೀಸನ್​ನಲ್ಲಿ ಬಹುತೇಕ ತಂಡಗಳು ತಮ್ಮ ತವರಿನಲ್ಲೇ ಪಂದ್ಯಗಳನ್ನ ಕಳ್ಕೊಂಡಿದ್ದಾರೆ. ಹೋಂ ಟೀಮ್​ಗೆ ಸಪೋರ್ಟ್ ಮಾಡ್ಬೇಕು ಅಂತಾ ಬರೋ ಫ್ಯಾನ್ಸ್ ನ ಎದುರಾಳಿ ಟೀಂ ಆಟಗಾರರು ಸೈಲೆಂಟ್ ಮಾಡಿಸ್ತಿದ್ದಾರೆ. ಬುಧವಾರದ ಪಂದ್ಯದಲ್ಲೂ ಟಾಸ್ ನಿಂದ ಹಿಡ್ದು ಬೌಲಿಂಗ್, ಬ್ಯಾಟಿಂಗ್ ಎಲ್ಲದ್ರಲ್ಲೂ ಗುಜರಾತ್ ತಂಡವೇ ಮೇಲುಗೈ ಸಾಧಿಸಿತು.

ಇದನ್ನೂ ಓದಿ : ತವರು ಮೈದಾನದಲ್ಲೇ ಸೋತ ಬೆಂಗಳೂರು- RCB ಹ್ಯಾಟ್ರಿಕ್ ಗೆಲುವಿನ ಕನಸಿಗೆ ಕೊಳ್ಳಿ

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬೆಂಗಳೂರು ಬಾಯ್ಸ್ ಟಾಸ್​ ಸೋತು ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾಗಿ ಬಂತು. ವಿಪರ್ಯಾಸ ಅಂದ್ರೆ ಕಳೆದ ಎರಡು ಪಂದ್ಯಗಳಲ್ಲಿ ಪವರ್​ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಗುಜರಾತ್ ವಿರುದ್ಧ ತರಗೆಲೆಗಳಂತೆ ವಿಕೆಟ್ ಒಪ್ಪಿಸಿದ್ರು. ಪವರ್ ಪ್ಲೇ ಮುಗಿಯೋ ಅಷ್ಟ್ರಲ್ಲೇ ಪ್ರಮುಖ 3 ವಿಕೆಟ್​ಗಳು ಉರುಳಿದ್ವು. ವಿರಾಟ್​ ಕೊಹ್ಲಿ (7) ಸಿಂಗಲ್​ ಡಿಜಿಟ್​ಗೆ ಔಟಾಗಿ ನಿರಾಸೆ ಮೂಡಿಸಿದರೆ, ಪಡಿಕ್ಕಲ್​ 4ರನ್​ ಮತ್ತು ಫಿಲ್​ ಸಾಲ್ಟ್​ 14 ರನ್​ಗೆ ಇನ್ನಿಂಗ್ಸ್​ ಮುಗಿಸಿದರು. ಬಳಿಕ ಬಂದ ನಾಯಕ ರಜತ್​ ಪಾಟೀದರ್ (12) ಕೂಡ ಘರ್ಜಿಸದೆ ಪೆವಿಲಿಯನ್​ ಸೇರಿದರು. ಟಾಪ್​ ಆರ್ಡರ್​ ಕೈಕೊಟ್ರೂ ಮಿಡಲ್ ಆರ್ಡರ್ ನಲ್ಲಿ ಲಿವಿಂಗ್​ಸ್ಟೋನ್ (54)​ ಅರ್ಧಶತಕ ಸಿಡಿಸಿದರೆ, ಜಿತೇಶ್​ ಶರ್ಮಾ (33), ಟಿಮ್ ಡೇವಿಡ್​ (32) ರನ್ ಸಿಡಿಸಿ 20 ಓವರ್​ಗಳಲ್ಲಿ 169 ರನ್ ಕಲೆ ಹಾಕಿದ್ರು.

170 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಪರ ಜೋಸ್​ ಬಟ್ಲರ್ ಮತ್ತು ಸಾಯಿ ಸುದರ್ಶನ್ ​ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದ ಶುಭಮನ್​ ಗಿಲ್​ ಮತ್ತು ಸಾಯಿ ಸುದರ್ಶನ್​ ತಂಡಕ್ಕೆ ಉತ್ತಮ ಆರಂಭ ನೀಡಿದರು. ತಂಡದ ಸ್ಕೋರ್​ 32ಕ್ಕೆ ತಲುಪಿದ್ದ ವೇಳೆ ಗಿಲ್​ (14) ದೊಡ್ಡ ಹೊಡೆತಕ್ಕೆ ಕೈ ಹಾಕಿ ಪೆವಿಲಿಯನ್​ ಸೇರಿದರು. ಗಿಲ್​ ಬೆನ್ನಲ್ಲೆ ಬ್ಯಾಟಿಂಗ್​ಗೆ ಬಂದ ಬಟ್ಲರ್​ ಕೊನೆಯವರೆಗೂ ನಿಂತ ಪಂದ್ಯವನ್ನು ಗೆಲ್ಲಿಸುವಲ್ಲಿ ಯಶಸ್ವಿ ಆದರು. ಸುದರ್ಶನ್​ ಮತ್ತು ಬಟ್ಲರ್ 75 ರನ್​ಗಳ ಜೊತೆಯಾಟವಾಡಿದರು. ಆದರೆ, ಸುದರ್ಶನ್​ ಅರ್ಧಶತಕದ ಹೊಸ್ತಿಲಲ್ಲಿರುವಾಗಲೇ 49 ರನ್ ಗಳಿಸಿ ಪೆವಿಲಿಯನ್​ ಸೇರಿದರು. ಒಂದು ರನ್​ನಿಂದ ಅರ್ಧಶತಕ ವಂಚಿತರಾದರೂ. ಬಳಿಕ ರುದರ್​ಫೋರ್ಡ್​ (30) ಮತ್ತು ಬಟ್ಲರ್​ 63 ರನ್​ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.. ಆರ್​ಸಿಬಿ ಬೌಲರ್ಗಳನ್ನು ಮನ ಬಂದಂತೆ ದಂಡಿಸಿದ ಬಟ್ಲರ್​ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್​ ಸಹಾಯದಿಂದ ಅಜೇಯವಾಗಿ 73 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಷ್ಟಕ್ಕೂ ಈ ಪಂದ್ಯದಲ್ಲಿ ಆರ್ ಸಿಬಿ ಆಟಗಾರರು ಮಾಡಿದ ತಪ್ಪಿನಿಂದಲೇ ಸೋಲು ಕಂಡಿದ್ದಾರೆ.

ಕೆಕೆಆರ್ ಮತ್ತು ಸಿಎಸ್ ಕೆ ವಿರುದ್ಧ ಆಡಿದ್ದ ಪಂದ್ಯದಲ್ಲಿ ಬೆಂಗಳೂರು ತಂಡ ಕಂಪ್ಲೀಟ್ ಬ್ಯಾಲೆನ್ಸಡ್ ಟೀಂ ಆಗಿ ಕಂಡಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಎದುರಾಳಿಗಳನ್ನ ಕಾಡಿದ್ದರು. ಆದ್ರೆ ಬೆಂಗಳೂರಲ್ಲಿ ಅದೇನು ಓವರ್ ಕಾನ್ಫಿಡೆನ್ಸೋ ಅಥವಾ ಪಿಚ್ ಜಡ್ಜ್ ಮಾಡೋಕೆ ಕಷ್ಟವಾಯ್ತೋ ಗೊತ್ತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ವೈಫಲ್ಯ ಅನುಭವಿಸಿದ್ರು. ಆರ್‌ಸಿಬಿಯ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಮೊದಲ ಎರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಆದರೆ. ಈ ಪಂದ್ಯದಲ್ಲಿ ಅವರಿಗೆ ಮೊದಲ ಓವರ್‌ನಲ್ಲಿಯೇ ಜೀವದಾನ ಸಿಕ್ಕಿತು. ಜೋಸ್ ಬಟ್ಲರ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಬಳಿಕ ರನ್ ಔಟ್ ಆಗುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾದರು. ಎರಡು ಜೀವದಾನ ಪಡೆದ ನಂತರವೂ, ಸಾಲ್ಟ್ 13 ಎಸೆತಗಳಲ್ಲಿ ಕೇವಲ 14 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಇನ್ನು ಬೆಂಗಳೂರು ತಂಡದ ಸೋಲಿನಲ್ಲಿ ವಿರಾಟ್ ಕೊಹ್ಲಿಯ ಪಾತ್ರ ಕೂಡ ಇದೆ. ಅನ್‌ಕ್ಯಾಪ್ಡ್ ಬೌಲರ್ ಅರ್ಷದ್ ಖಾನ್ ಎರಡನೇ ಓವರ್‌ನಲ್ಲಿ 7 ರನ್ ಗಳಿಸಿ ಹೀನಾಯವಾಗಿ ಔಟ್ ಆದರು. ದೇವದತ್ ಪಡಿಕಲ್ ಭಾರತ ತಂಡಕ್ಕಾಗಿ ಆಡಿದ ಅನುಭವ ಹೊಂದಿದ್ದಾರೆ. ವಿರಾಟ್ ಬೇಗನೆ ಔಟಾದ ನಂತರ, ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಅವರ ಮೇಲಿತ್ತು. ಆದರೆ ಅವರು ತಮ್ಮ ವಿಕೆಟ್ ಅನ್ನು ಸುಲಭವಾಗಿ ಕೈಚೆಲ್ಲಿದರು. ಕೇವಲ 4 ರನ್​ಗೆ ನಿರ್ಗಮಿಸಿದರು. ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಕೃನಾಲ್ ಪಾಂಡ್ಯ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಜಿಟಿ ವಿರುದ್ಧ ಅವರು ಬ್ಯಾಟ್ ಮತ್ತು ಚೆಂಡಿನ ಎರಡೂ ವಿಭಾಗಗಳಲ್ಲಿ ವಿಫಲರಾದರು.  ಭುವಿ ಮತ್ತು ಜೋಶ್ ಹ್ಯಾಜಲ್​​ವುಡ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ವು. ಬಟ್ ಆರಂಭಿಕ ಓವರ್​ಗಳಲ್ಲಿ ವಿಕೆಟ್ ತೆಗೆಯೋಕೆ ಸಾಧ್ಯವಾಗ್ಲಿಲ್ಲ. ಹೀಗೆ ಪವರ್​ ಪ್ಲೇನಲ್ಲೆ ಫಿಲ್​ ಸಾಲ್ಟ್​, ವಿರಾಟ್​ ಕೊಹ್ಲಿ, ಪಡಿಕ್ಕಲ್​ ವಿಕೆಟ್​ ಕಳೆದುಕೊಂಡಿತು. ಒಟ್ಟಾರೆ 42 ರನ್​ಗಳಿಗೆ 4 ವಿಕೆಟ್​ ಕೈಚೆಲ್ಲಿದ್ದು ಆರ್​ಸಿಬಿ ಸ್ಕೋರ್​ ಕಾರ್ಡ್​ ಮೇಲೆ ಪ್ರಭಾವ ಬೀರಿತು.

ಸತತ ಏಳು ವರ್ಷಗಳ ಕಾಲ ಮೊಹಮ್ಮದ್ ಸಿರಾಜ್ ಆರ್ ಸಿಬಿ ತಂಡದಲ್ಲಿದ್ರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ತುಂಬಾನೇ ಎಕ್ಸ್​ಪೆನ್ಸಿವ್ ಆಗ್ತಿದ್ರು. ಹೀಗಾಗಿ ಮೆಗಾ ಹರಾಜಿನಲ್ಲಿ ಫ್ರಾಂಚೈಸಿ ಬಿಟ್ಟುಕೊಟ್ಟಿತ್ತು. ಬಟ್ ಜಿಟಿ ಸೇರಿರೋ ಸಿರಾಜ್ ಆರ್ ಸಿಬಿ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ರು. ಫಿಲ್ ಸಾಲ್ಟ್ ಅವರು 13 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಮೂಲಕ 14 ರನ್ ಗಳಿಸಿ ಬಿಗ್ ಇನ್ನಿಂಗ್ಸ್ ಆಡುವತ್ತ ಸಾಗಿದರು. ಈ ಹಂತದಲ್ಲಿ ದಾಳಿ ನಡೆಸಿದ ಸಿರಾಜ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಕಳಿಸಿದ್ರು. ಮಾತ್ರವಲ್ಲ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಅವರು ಮೊದಲ ಬಾಲ್‌ನಲ್ಲೇ ಬೌಂಡರಿ ಬಾರಿಸಿ ಬಿಗ್ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ ಅವರನ್ನೂ ಕೂಡ ಕ್ಲೀನ್ ಬೌಲ್ಡ್ ಮಾಡಿದರು. ಇನ್ನು ಡೆತ್ ಓವರ್​ನಲ್ಲಿ ಅಬ್ಬರಿಸ್ತಿದ್ದ ಲಿವಿಂಗ್ ಸ್ಟೋನ್​ರನ್ನೂ ಔಟ್ ಮಾಡಿದ್ರು. ಹೀಗೆ 4 ಓವರ್​ಗಳಲ್ಲಿ ಮೊಹಮ್ಮದ್ ಸಿರಾಜ್ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿದ್ರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಹಮ್ಮದ್ ಸಿರಾಜ್ ಅವರ ಬೆಸ್ಟ್ ಬೌಲಿಂಗ್ ಫಿಗರ್ ಇದೇ ಆಗಿದೆ. ಕಳೆದ 7 ವರ್ಷಗಳ ಕಾಲ ಆರ್​ಸಿಬಿ ಪರ ಆಡಿದ್ದ ಸಿರಾಜ್ ಬೆಂಗಳೂರಿನಲ್ಲಿ ಒಮ್ಮೆಯೂ ಇಂತಹದೊಂದು ಪ್ರದರ್ಶನ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್​ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿದ್ದಾರೆ. ಅಲ್ಲದೆ ಪವರ್​ಪ್ಲೇನಲ್ಲಿ ಇಬ್ಬರನ್ನು ಇದೇ ಮೊದಲ ಬಾರಿಗೆ ಬೌಲ್ಡ್ ಮಾಡಿದ್ದಾರೆ.

ಆರ್ ಸಿಬಿ ಆಟಗಾರರು ತಮ್ಮದೇ ತಪ್ಪಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲು ಕಂಡಿದ್ದಾರೆ. ಚಿನ್ನಸ್ವಾಮಿ ಬ್ಯಾಟರ್ಸ್‌ ಸ್ವರ್ಗ ಇಲ್ಲಿ, ಕನಿಷ್ಠ 200 ರನ್ ಸಿಡಿಸಿದ್ರೆ ಮಾತ್ರ ವಿರೋಧಿ ತಂಡದ ಮೇಲೆ ಒತ್ತಡ ಹೇರಬಹುದು ಅನ್ನೋದು ಗೊತ್ತಿದ್ರೂ ಬೃಹತ್ ಸ್ಕೋರ್ ಕಲೆ ಹಾಕುವಲ್ಲಿ ಆರ್‌ಸಿಬಿ ವಿಫಲವಾದ್ರು. ಈ ಸೋಲಿನಿಂದಾಗಿ ಟೇಬಲ್ ಟಾಪರ್ಸ್ ಆಗಿದ್ದವ್ರು 3ನೇ ಸ್ಥಾನಕ್ಕೆ ಜಾರಿದ್ದಾರೆ. ಏಪ್ರಿಲ್ 7ರಂದು ಅಂದ್ರೆ ಸೋಮವಾರ ಮುಂಬೈ ವಿರುದ್ಧ ವಾಂಖೆಡೆಯಲ್ಲಿ ತಮ್ಮ ನಾಲ್ಕನೇ ಪಂದ್ಯ ಆಡಲಿದ್ದಾರೆ.

Shantha Kumari