RCB ರೆಕಾರ್ಡ್ ಬ್ರೇಕ್ ಚೇಸಿಂಗ್ – ಟಗರು ಪುಟ್ಟಿ ಟೂರ್ನಿಯಿಂದಲೇ ಔಟ್?

ಒಂದ್ಕಡೆ ಐಸಿಸಿಯ ಮಹತ್ವದ ಟೂರ್ನಿ ಚಾಂಪಿಯನ್ಸ್ ಟ್ರೋಫಿಗೆ ಬಾಯ್ಸ್ ಟೀಂ ರೆಡಿಯಾಗ್ತಿದ್ರೆ ಇತ್ತ ಗರ್ಲ್ಸ್ ಎಲ್ರೂ ಡಬ್ಲ್ಯೂಪಿಎಲ್ನಲ್ಲಿ ಧೂಳೆಬ್ಬಿಸ್ತಾ ಇದ್ದಾರೆ. ಶುಕ್ರವಾರವಷ್ಟೇ ವಡೋದರಾದಲ್ಲಿ ಮೂರನೇ ಆವೃತ್ತಿಯ ಮೊದಲ ಮ್ಯಾಚ್ ನಡೆದಿದ್ದು ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೇಂಟ್ಸ್ ತಂಡಗಳು ಮುಖಾಮುಖಿಯಾಗಿದ್ವು. ಫಸ್ಟ್ ಮ್ಯಾಚ್ನಲ್ಲೇ ಗುಜರಾತ್ನ ಬಗ್ಗು ಬಡಿದ ಬೆಂಗಳೂರು ಬ್ಯೂಟೀಸ್ ದಾಖಲೆಯ ಜಯಬೇರಿ ಬಾರಿಸಿದ್ದಾರೆ.
ಇದನ್ನೂ ಓದಿ : WPL ನಲ್ಲಿ RCB ಹಾವಳಿ – ಇತಿಹಾಸ ನಿರ್ಮಿಸಿದ ಬೆಂಗಳೂರು ಹುಡುಗಿಯರು
ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಆರ್ ಸಿಬಿ ನಾಯಕಿ ಸ್ಮೃತಿ ಮಂದಾಗ ಬೌಲಿಂಗ್ನ ಆಯ್ಕೆ ಮಾಡಿಕೊಂಡಿದ್ರು. ಹೀಗಾಗಿ ಫಸ್ಟ್ ಬ್ಯಾಟಿಂಗ್ಗೆ ಬಂದ ಗುಜರಾತ್ ಆಟಗಾರ್ತಿಯರು ಭರ್ಜರಿಯಾಗೇ ಬ್ಯಾಟ್ ಮಾಡಿದ್ರು. ಬೆಂಗಳೂರು ಬೌಲರ್ಗಳ ಬೆವರಿಳಿಸಿದ್ರು. ನಾಯಕಿ ಆಶ್ಲೆಗ್ ಗಾರ್ಡನರ್ ಮತ್ತು ವಿಕೆಟ್ ಕೀಪರ್ ಬೆಥ್ ಮೂನಿ ಸ್ಪೋಟಕ ಪ್ರದರ್ಶನ ನೀಡಿದರು. ಓಪನರ್ ಆಗಿ ಬಂದ ಮೂನಿ 42 ಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 56 ರನ್ ಚಚ್ಚಿ ಅರ್ಧಶತಕ ಪೂರ್ಣಗೊಳಿಸಿದರು. ಮಿಡಲ್ ಆರ್ಡರ್ನಲ್ಲಿ ಬಂದ ಆಶ್ಲೇಗ್ ಗಾರ್ಡನರ್ 37 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ಸಿಡಿಸಿ 79 ರನ್ ಕಲೆ ಹಾಕಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ನಿಂದಾಗಿಗೆ ಗುಜರಾತ್ ಮಹಿಳಾ ತಂಡ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
202 ರನ್ಗಳ ಟಾರ್ಗೆಟ್. ಬೆಂಗಳೂರು ಪಾಲಿಗೆ ಬಿಗ್ ಟಾರ್ಗೆಟ್ಟೇ. ಈ ಬೃಹತ್ ಗುರಿ ಬೆನ್ನತ್ತಿದ ಆರ್ಸಿಬಿಗೆ ಆರಂಭದಲ್ಲೇ ವಿಘ್ನ ಎದುರಾಗಿತ್ತು. ಓಪನರ್ ಆಗಿ ಬ್ಯಾಟಿಂಗ್ ಗೆ ಬಂದ ನಾಯಕಿ ಸ್ಮೃತಿ ಮಂಧಾನ 9ರನ್, ವ್ಯಾಟ್ ಹೊಡ್ಜ್ 4ರನ್ ಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಸೋ ಇಷ್ಟು ದೊಡ್ಡ ಮೊತ್ತದ ಗುರಿ ಮುಟ್ಟೋದು ಕಷ್ಟ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಬಟ್ ಆಮೇಲೆ ಕ್ರೀಸ್ಗೆ ಬಂದ ಎಲ್ಲಿಸ್ ಪೆರಿ ಚಾರ್ಚ್ ಶುರು ಮಾಡಿದ್ರು. 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಚಚ್ಚಿದ್ರು. ಮತ್ತೊಂದೆಡೆ ರಾಘ್ವಿ ಬಿಸ್ಟ್ ಕೂಡ 25 ರನ್ ಬಾರಿಸಿದ್ರು. ಆದ್ರೆ ಪೆರ್ರಿ ಮತ್ತು ರಾಘ್ವಿ ಔಟಾದ ಬಳಿಕ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಎಂಟ್ರಿ ಕೊಟ್ರು ನೋಡಿ. ಆಮೇಲೆ ಅಸಲಿ ಆಟ ಶುರುವಾಗಿತ್ತು.
ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಗುಜರಾತ್ ಬೌಲರ್ಸ್ನ ಬೆಂಡೆತ್ತಿ ಫೀಲ್ಡರ್ಸ್ನ ಮೈದಾನದ ಮೂಲೆ ಮೂಲೆಗೂ ಅಡ್ಡಾಡುವಂತೆ ಮಾಡಿದ್ರು. ಸಿಕ್ಸ್, ಫೋರ್ಗಳ ಮಳೆಯನ್ನೇ ಸುರಿಸಿದ್ರು. ರಿಚಾ ಘೋಷ್ ಕೇವಲ 27 ಎಸೆತಗಳಲ್ಲಿ 64 ರನ್ ಚಚ್ಚಿದರು. ಇದರಲ್ಲಿ 7 ಬೌಂಡರಿ, 4 ಸಿಕ್ಸರ್ ಗಳು ಸೇರಿದವು. ಆರಂಭದಿಂದಲೆ ಭರ್ಜರಿ ಬ್ಯಾಟ್ ಬೀಸಿದ ರಿಚಾ ಕೇವಲ 23 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ವೇಗಾವಗಿ ಅರ್ಧಶತಕ ಸಿಡಿಸಿದ 5ನೇ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ರಿಚಾಗೆ ಸಾಥ್ ಕೊಟ್ಟ ಕನಿಕಾ ಕೂಡ ಜಸ್ಟ್ 13 ಬಾಲ್ಗಳಲ್ಲೇ 30 ರನ್ ಸಿಡಿಸಿದ್ರು. ಹೀಗೆ ಇವ್ರಿಬ್ರೂ ಅಜೇಯವಾಗಿ ಆಡಿ ಬೆಂಗಳೂರು ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. 18.3 ಓವರ್ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಬೆಂಗಳೂರು ತಂಡ ಗುರಿ ಮುಟ್ಟಿತು.
ಗುಜರಾತ್ ಜೈಂಟ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ರಿಚಾ ಘೋಷ್ ಕೆಲ ದಾಖಲೆಗಳನ್ನೂ ನಿರ್ಮಿಸಿದ್ರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ರು. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಆರ್ಸಿಬಿ ಪರ ಸ್ಪೋಟಕ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ರಿಚಾ ಘೋಷ್ ಪಾಲಾಯಿತು. ಅಲ್ಲದೆ WPL ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸೋಫಿಯಾ ಡಂಕ್ಲಿ. 2023 ರಲ್ಲಿ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಡಂಕ್ಲಿ ಆರ್ಸಿಬಿ ವಿರುದ್ಧ ಕೇವಲ 18 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇದೀಗ ಗುಜರಾತ್ ಜೈಂಟ್ಸ್ ವಿರುದ್ಧ ರಿಚಾ ಘೋಷ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.