120 ಕಿ.ಮೀ ಈಜಿ ಬಂದ ‘ರಾಯಲ್ ಬೆಂಗಾಲ್ ಟೈಗರ್‌’ – ವಿಡಿಯೋ ವೈರಲ್

120 ಕಿ.ಮೀ ಈಜಿ ಬಂದ ‘ರಾಯಲ್ ಬೆಂಗಾಲ್ ಟೈಗರ್‌’ – ವಿಡಿಯೋ ವೈರಲ್

ಗುವಾಹಟಿ: ನದಿ, ಸಮುದ್ರಗಳಲ್ಲಿ ಪ್ರಾಣಿಗಳು, ಕೆಲ ಪಕ್ಷಿಗಳು ನೀರಲ್ಲಿ ಈಜಾಡುತ್ತವೆ. ಇದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ಹುಲಿ ಸುಮಾರು 120 ಕಿ.ಮೀ. ಈಜಾಡಿ ದಡ ಸೇರಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬ್ರಹ್ಮಪುತ್ರ ನದಿಯಲ್ಲಿ ‘ರಾಯಲ್ ಬೆಂಗಾಲ್ ಟೈಗರ್‌’ ಬರೋಬ್ಬರಿ 120 ಕಿ.ಮೀ. ಈಜಿ ಮತ್ತೊಂದು ದಡ ಸೇರಿದೆ. ಈಜಿ ದಡ ಸೇರಲು ಹುಲಿ ಅಂದಾಜು 10 ಗಂಟೆ ಸಮಯ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರಿನಲ್ಲಿ ಕಿಡ್ನಿ ರವಾನಿಸಿದ ಪೊಲೀಸರು  

ಹೀಗೆ ಈಜುತ್ತಾ ಬಂದ ಹುಲಿಯು ಅಸ್ಸಾಂ ರಾಜಧಾನಿ ಗುವಾಹಟಿ ಸಮೀಪವಿರುವ ಅತ್ಯಂತ ಸಣ್ಣ ದ್ವೀಪ ಪಿಕಾಕ್‌ ಐಲ್ಯಾಂಡ್‌ ಬಂದು ತಲುಪಿದೆ. ದ್ವೀಪದಲ್ಲಿರುವ ಪ್ರಾಚೀನ ಉಮಾನಂದ ದೇವಸ್ಥಾನದ ಬಳಿ ಇರುವ ಗುಹೆಯಲ್ಲಿ ಬಂಗಾಳ ಹುಲಿ ಆಶ್ರಯ ಪಡೆದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಬಹುಶಃ ಹುಲಿಯು ನೀರು ಕುಡಿಯಲು ಬ್ರಹ್ಮಪುತ್ರ ನದಿ ತಟಕ್ಕೆ ಬಂದು ಬೃಹತ್‌ ಅಲೆಗೆ ಸಿಲುಕಿ ಕೊನೆಗೆ ಈಜಿ ದಡ ಸೇರಿರಬಹುದು. ದ್ವೀಪದಿಂದ 120 ಕಿ.ಮೀ. ದೂರ ಇರುವ ಓರಂಗಾ ರಾಷ್ಟ್ರೀಯ ಉದ್ಯಾನದಿಂದ ಬಂದು ಈಜಿ ದಡ ಸೇರಿರಬಹುದು,” ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಹುಲಿಯು ಈಜುತ್ತಾ ದೇವಸ್ಥಾನದ ಬಳಿಯ ಗುಹೆ ಪ್ರವೇಶಿಸುತ್ತಿದ್ದುದನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೊದಲು ಭಕ್ತರು ಹಾಗೂ ಅರ್ಚಕರನ್ನು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಹುಲಿಯು ಎರಡು ದೊಡ್ಡದಾದ ಕಲ್ಲು ಬಂಡೆಗಳ ಮಧ್ಯೆ ಅವಿತುಕೊಂಡಿತ್ತು. ಸ್ವಲ್ಪವೇ ಎಡವಟ್ಟಾಗಿದ್ದರೂ ಮತ್ತೆ ನೀರಿಗೆ ಸಿಲುಕಿ ಕೊಚ್ಚಿಹೋಗುವ ಅಪಾಯವಿತ್ತು. ಅದು ಜನರ ಮೇಲೆ ದಾಳಿ ನಡೆಸುವ ಸಾಧ್ಯತೆಯೂ ಇತ್ತು. ಹೀಗಾಗಿ ಸಿಬ್ಬಂದಿ, ಎಲ್ಲ ಲೆಕ್ಕಾಚಾರ ಮಾಡಿದ ಅಧಿಕಾರಿಗಳು, ಗಂಟೆಗಟ್ಟಲೆ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆಹಿಡಿದರು. ಬಳಿಕ ಅದನ್ನು ಅಸ್ಸಾಂ ರಾಜ್ಯದ ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಯಿತು.

suddiyaana