60 ವರ್ಷಗಳ ಹಿಂದಿನ ರೊಲೆಕ್ಸ್ ವಾಚ್ ಬರೋಬ್ಬರಿ 41 ಲಕ್ಷ ರೂಪಾಯಿಗೆ ಮಾರಾಟ! ಏನಿದರ ವಿಶೇಷತೆ?
ನಮ್ಮ ದೈನಂದಿನ ಜೀವನದಲ್ಲಿ ಸಾಕಷ್ಟು ಸಾಮಾನ್ಯವಾಗಿರುವ ಬಹಳಷ್ಟು ವಸ್ತುಗಳು ಅಮೂಲ್ಯವಾದ ರತ್ನಗಳ ಬೆಲೆಗೆ ಮಾರಾಟವಾಗುತ್ತಿರುವುದನ್ನು ನಾವು ಇಂಟರ್ನೆಟ್ನಲ್ಲಿ ಆಗಾಗ ನೋಡುತ್ತಿರುತ್ತೇವೆ. ಹಳೆ ಚಪ್ಪಲಿ, ಹಳೆಯ ಹರಿದು ಹೋದ ಬಟ್ಟೆ ಮುಂತಾದವುಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿರುವುದನ್ನು ಕೇಳಿರುತ್ತೇವೆ. ಇದೀಗ ಇಲ್ಲೊಂದು 60 ವರ್ಷಗಳ ಹಿಂದಿನ ವಾಚ್ ದುಬಾರಿ ಬೆಲೆಗೆ ಮಾರಾಟವಾಗಿದೆ.
ಸುಮಾರು 60 ವರ್ಷಗಳ ಹಿಂದೆ 7 ಸಾವಿರ ರೂಪಾಯಿಗೆ ಖರೀದಿಸಿದ್ದ ರೊಲೆಕ್ಸ್ ವಾಚ್, ಇತ್ತೀಚೆಗೆ ನಡೆದ ಹರಾಜಿನಲ್ಲಿ ಲಕ್ಷಾಂತರ ಬೆಲೆಗೆ ಮಾರಾಟವಾಗಿದ್ದು, ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.
ಇದನ್ನೂ ಓದಿ: ₹1.5 ಲಕ್ಷದ ಚಪ್ಪಲಿ.. ₹80 ಸಾವಿರದ ಜೀನ್ಸ್ ಪ್ಯಾಂಟ್ – ಜೈಲಿನಲ್ಲೇ ಸುಕೇಶ್ ನ ದಿಲ್ದಾರ್ ಲೈಫ್..!
1964 ರಲ್ಲಿ ರೊಲೆಕ್ಸ್ ವಾಚ್ ಅನ್ನು ಸುಮಾರು 7,000 ರೂಪಾಯಿಗೆ ಖರೀದಿಸಲಾಗಿತ್ತು. ಇದೀಗ ಈ ವಾಚ್ ಯುನೈಟೆಡ್ ಕಿಂಗ್ ಡಮ್ ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 41,11,692 ರೂಪಾಯಿಗೆ ಮಾರಾಟವಾಗಿದೆ.
ರೊಲೆಕ್ಸ್ ವಾಚ್, ರೊಲೆಕ್ಸ್ ಸಬ್ಮರಿನರ್ ಮಾಡೆಲ್ ವಾಚ್ ಆಗಿದೆ. ಇದನ್ನು ʼದಿ ಡೈವರ್ಸ್ ವಾಚ್ʼ ಎಂದೂ ಕರೆಯುತ್ತಾರೆ. ಇದನ್ನು 1953ರಲ್ಲಿ ಮೊದಲ ಬಾರಿಗೆ ಲಾಂಚ್ ಮಾಡಲಾಗಿದೆ. ಇದು ಮೊಟ್ಟ ಮೊದಲ ಸ್ಕೂಬಾ ಡೈವರ್ಸ್ ಕೈ ಗಡಿಯಾರವಾಗಿದೆ. ಇದು 100 ಮೀಟರ್ (330 ಅಡಿ) ಆಳದ ವಾಟರ್ಪ್ರೂಫ್ ವಾಚ್ ಆಗಿತ್ತು. ಪ್ರಸ್ತುತ 300 ಮೀಟರ್ (1,000 ಅಡಿ) ಆಳದವರೆಗೂ ವಾಟರ್ಪ್ರೂಫ್ ಸಾಮರ್ಥ್ಯ ಹೊಂದಿದೆ.
ಮಾಧ್ಯಮಗಳ ವರದಿ ಪ್ರಕಾರ, ಸಿಮನ್ ಬಾರ್ನೆಟ್ ಎಂಬುವರು ಈ ವಾಚ್ ಅನ್ನು ಮೊದಲು ಖರೀದಿ ಮಾಡಿದ್ದರು. ಡೈವರ್ ಆಗಿದ್ದ ಸಿಮನ್, ರಾಯಲ್ ನೌಕಾಪಡೆಯಲ್ಲಿ ಹೆಲಿಕಾಪ್ಟರ್ ರಕ್ಷಣಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಸಿಮನ್ ಮೃತಪಟ್ಟರು. ಬಳಿಕ ಈ ವಾಚ್ ಅವರ ಮಗ ಪೀಟೆ ಬರ್ನೆಟ್ ಬಳಿಯಿತ್ತು.
ರೊಲೆಕ್ಸ್ ವಾಚ್ ಅನ್ನು ಯುನೈಟೆಡ್ ಕಿಂಗ್ಡಮ್ನ ನಾರ್ಫೋಲ್ಕ್ ಕೌಂಟಿಯ ಡಿಸ್ ಪಟ್ಟಣದಲ್ಲಿ ಹರಾಜು ಹಾಕಲಾಗಿದೆ. ಅಂತಿಮವಾಗಿ ವಾಚ್ 41 ಲಕ್ಷ ರೂ.ಗೆ ಮಾರಾಟವಾಗಿದೆ. ನೌಕಾಪಡೆಯಲ್ಲಿ ಸೇವೆ ಸಲ್ಲಿಸುವಾಗ ರಕ್ಷಣಾ ಕಾರ್ಯನಿಮಿತ್ತ ನೀರಿಗೆ ಧುಮುಕಲು ಈ ವಾಚ್ ಅನ್ನು ನನ್ನ ತಂದೆ ಬಳಸುತ್ತಿದ್ದರು. ತಾನು ಎಷ್ಟು ಸಮಯದವರೆಗೆ ನೀರಿನ ಅಡಿಯಲ್ಲಿ ಇದ್ದೇನೆ ಎಂದು ತಿಳಿದುಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ ಈ ವಾಚ್ ಏಕೈಕ ಸಾಧನವಾಗಿತ್ತು. ಆ ದಿನಗಳಲ್ಲಿ ರೊಲೆಕ್ಸ್ ಒಂದು ಜಲಾಂತರ್ಗಾಮಿ ಸಾಧನವಾಗಿತ್ತು. ಆದರೆ ಈಗ ಅದೊಂದು ಫ್ಯಾಷನ್ ಪರಿಕರವಾಗಿದೆ ಎಂದು ಪೀಟೆ ಬರ್ನೆಟ್ ತಿಳಿಸಿದ್ದಾರೆ.