IND Vs NZ.. ಸೇಡು ತೀರುತ್ತಾ? – ಕಿವೀಸ್ ವಿರುದ್ಧ ಆಡಲ್ವಾ ರೋಹಿತ್?
ಪ್ಲೇಯಿಂಗ್ 11 ರೆಡಿ.. ಯಾರು ಸ್ಟ್ರಾಂಗ್?

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ಗಳಿಂದ ಗೆಲುವು ಸಾಧಿಸಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲೂ ಗೆಲುವು ಸಾಧಿಸಿತ್ತು. ಇದೀಗ ಲೀಗ್ ಹಂತದ ಕೊನೆಯ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಮತ್ತೊಂದೆಡೆ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಪಾಕಿಸ್ತಾನವನ್ನ ಸೋಲಿಸಿದ್ದ ನ್ಯೂಜಿಲೆಂಡ್ ಎರಡನೇ ಮ್ಯಾಚ್ನಲ್ಲಿ ಬಾಂಗ್ಲಾವನ್ನ ಸೋಲಿಸಿದೆ. ಇದೀಗ ಮೂರನೇ ಪಂದ್ಯವನ್ನ ಭಾರತದ ವಿರುದ್ಧ ಆಡಲಿದೆ. ಸೋ ಈ ಮ್ಯಾಚ್ ಇಬ್ಬರಿಗೂ ಪ್ರತಿಷ್ಠೆಯಾಗಿದೆ. ಅದ್ರಲ್ಲೂ ಭಾರತಕ್ಕೆ ಎರಡು ಸೋಲುಗಳ ಲೆಕ್ಕಾ ಚುಕ್ತಾ ಮಾಡೋ ಅವಕಾಶವೂ ಸಿಕ್ಕಿದೆ.
ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ
ಶುಭ್ ಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಅಕ್ಷರ್ ಪಟೇಲ್
ಕೆಎಲ್ ರಾಹುಲ್
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ
ಕುಲ್ದೀಪ್ ಯಾದವ್
ಹರ್ಷಿತ್ ರಾಣಾ
ಅರ್ಶದೀಪ್ ಸಿಂಗ್
ಮಾರ್ಚ್ 2 ರಂದು ದುಬೈನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಪ್ಲೇಯರ್ಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಆದ್ರೆ ಈ ಅಭ್ಯಾಸಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾಗಿಯಾಗಿಲ್ಲ. ಹಿಟ್ಮ್ಯಾನ್ ಹಾಮ್ಸ್ಟ್ರಿಂಗ್ ಇಂಜುರಿ ಅಂದ್ರೆ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಕಾಣಿಸಿಕೊಂಡಿಲ್ಲ. ಹೀಗಾಗಿ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಹಿಟ್ಮ್ಯಾನ್ ಆಡ್ತಾರೋ ಇಲ್ವೋ ಅನ್ನೋ ಚರ್ಚೆಗಳೂ ನಡೀತಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಂತೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಈ ಪಂದ್ಯ ಭಾನುವಾರ ಮಾರ್ಚ್ 2 ರಂದು ನಡೆಯಲಿದೆ. ಭಾರತ ಇನ್ನು ಸೆಮಿಫೈನಲ್‌ನಲ್ಲೂ ಕಾದಾಟ ನಡೆಸಲಿದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳೋಕೆ ರೆಡಿ ಇಲ್ಲ ಎನ್ನಲಾಗಿದೆ. ಇನ್ನು ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿದ್ದೇ ಆದಲ್ಲಿ ಶುಭಮನ್ ಗಿಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮಾರ್ಚ್ 4ರಂದು ಟೀಂ ಇಂಡಿಯಾದ ಸೆಮೀಸ್ ಮ್ಯಾಚ್ ಇರೋದ್ರಿಂದ ಅಷ್ಟ್ರಲ್ಲಿ ಹಿಟ್ಮ್ಯಾನ್ ಕಂಪ್ಲೀಟ್ ಫಿಟ್ ಆಗಿ ಕಮ್ ಬ್ಯಾಕ್ ಮಾಡಬಹುದು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪ್ಲೇಯಿಂಗ್-11 ರಲ್ಲಿ ದೊಡ್ಡ ಬದಲಾವಣೆಯಾಗೋ ಚಾನ್ಸಸ್ ಇದೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ, ಅರ್ಷದೀಪ್ ಸಿಂಗ್ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಳ್ಳಬಹುದು. ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತು. ಈ ವೇಳೆ ಸ್ವಲ್ಪ ಹೊತ್ತು ಮೈದಾನದ ಹೊರಗಿದ್ರು. ಚಿಕಿತ್ಸೆ ಬಳಿಕ ಡ್ರೆಸ್ಸಿಂಗ್ ರೂಮ್‌ನಿಂದ ಹಿಂತಿರುಗಿ ಬೌಲಿಂಗ್ ಕೂಡ ಮಾಡಿದರು.
ಌಕ್ಚುಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು 9ನೇ ಆವೃತ್ತಿ. ಬಟ್ ಇಷ್ಟೂ ವರ್ಷಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಮುಖಿಯಾಗಿರೋದು ಒಂದೇ ಸಲ. 2000ನೇ ಇಸವಿಯಲ್ಲಿ ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಸೋಲು ಕಂಡಿತ್ತು. ಅಂದಿನಿಂದ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಯಾವುದೇ ಪಂದ್ಯ ನಡೆದಿಲ್ಲ. ಈಗ ಭಾರತಕ್ಕೆ 25 ವರ್ಷಗಳ ಸೋಲಿನ ಲೆಕ್ಕಾ ಚುಕ್ತಾ ಮಾಡಲು ಬೆಸ್ಟ್ ಚಾನ್ಸ್ ಸಿಕ್ಕಿದೆ. ಟೀಮ್ ಇಂಡಿಯಾ “ಎ” ಗುಂಪಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಸ್ಟಾರ್ ಪ್ಳೇಯರ್ಸ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತನ್ನ ಅಜೇಯ ಓಟವನ್ನು ಮುಂದುವರೆಸಿ, ಅಜೇಯವಾಗಿ ಸೆಮಿಫೈನಲ್ ಹಂತವನ್ನು ಪ್ರವೇಶಿಸುವ ಅವಕಾಶವಿದೆ.
ಟೀಂ ಇಂಡಿಯಾಗೆ ಕಿವೀಸ್ ಪಡೆ ವಿರುದ್ಧ ಟೆಸ್ಟ್ ಮ್ಯಾಚ್ ಕ್ಲೀನ್ ಸ್ವೀಪ್ ಸೇಡನ್ನೂ ತೀರಿಸಿಕೊಳ್ಳೋ ಅವಕಾಶ ಸಿಕ್ಕಿದೆ. 2024ರ ಅಕ್ಬೋಬರ್ ಮತ್ತು ನವೆಂಬರ್ನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ದಿತ್ತು. ಅದೂ ಕೂಡ ಭಾರತದ ನೆಲದಲ್ಲಿ ಸರಣಿ ಜಯಿಸಬೇಕು ಎನ್ನುವ ಕಿವೀಸ್ ಪಡೆಯ ಕನಸು ಏಳು ದಶಕಗಳ ಬಳಿಕ ನನಸಾಗಿತ್ತು. 1955-56ರಿಂದ ಇಲ್ಲಿಯವರೆಗೆ ನ್ಯೂಜಿಲೆಂಡ್ ತಂಡವು 12 ಬಾರಿ ಭಾರತದಲ್ಲಿ ಟೆಸ್ಟ್ ಸರಣಿಗಳನ್ನು ಅಡಿದೆ. ಪ್ರತಿ ಬಾರಿಯೂ ಸೋಲಿನ ಕಹಿಯೊಂದಿಗೇ ವಾಪಸ್ ಹೋಗ್ತಿತ್ತು. ಆದರೆ ಕಳೆದ ವರ್ಷ ಐತಿಹಾಸಿಕ ಗೆಲುವು ದಾಖಲಿಸಿತ್ತು. ಮತ್ತೊಂದೆಡೆ 12 ವರ್ಷಗಳಿಂದ ತವರಿನ ನೆಲದಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದಿದ್ದ ಟೀಂ ಇಂಡಿಯಾದ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿತ್ತು. ಸೋ ಟೆಸ್ಟ್ ಸರಣಿಯ ಕ್ಲೀನ್ ಸ್ವೀಪ್ ಮುಖಭಂಗಕ್ಕೂ ತಕ್ಕ ಉತ್ತರ ಕೊಡೋ ಟೈಂ ಇದು. ಹಾಗೆ ನೋಡಿದ್ರೆ ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತವೇ ಮೇಲುಗೈ ಸಾಧಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 118 ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ 118 ಪಂದ್ಯಗಳಲ್ಲಿ ಭಾರತ 60 ಪಂದ್ಯಗಳಲ್ಲಿ ಗೆದ್ದಿದ್ದರೆ, ನ್ಯೂಜಿಲೆಂಡ್ 50 ಬಾರಿ ಜಯಗಳಿಸಿದೆ. 7 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. 1 ಪಂದ್ಯ ಟೈನಲ್ಲಿ ಕೊನೆಗೊಂಡಿದೆ.