ಆಯುಷ್‌ ಮ್ಹಾತ್ರೆ ಆರ್ಭಟಕ್ಕೆ ರೋಹಿತ್‌ ಶರ್ಮಾ ದಾಖಲೆ ಪುಡಿಪುಡಿ

ಆಯುಷ್‌ ಮ್ಹಾತ್ರೆ ಆರ್ಭಟಕ್ಕೆ ರೋಹಿತ್‌ ಶರ್ಮಾ ದಾಖಲೆ ಪುಡಿಪುಡಿ

ಆಯುಷ್‌ ಮ್ಹಾತ್ರೆ ಆರ್ಭಟಕ್ಕೆ ರೋಹಿತ್‌ ಶರ್ಮಾ ದಾಖಲೆ ಪುಡಿಪಡಿಯಾಗಿದೆ.  ವಿದರ್ಭ ವಿರುದ್ಧ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 49 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. ಲಖನೌ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಅಂಡರ್‌-19 ತಂಡದ ನಾಯಕ ಆಯುಷ್‌ ಮ್ಹಾತ್ರೆ, ತಾವು ಆಡಿದ 53 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಹಲವು ಸಿಕ್ಸರ್‌ಗಳ ಮೂಲಕ 110 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಮುಂಬೈ ತಂಡದ 7 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದರು. ಇವರ ಶತಕದ ಮೂಲಕ ಮುಂಬೈ 193 ರನ್‌ಗಳನ್ನು ಸುಲಭವಾಗಿ ಚೇಸ್‌ ಮಾಡಿತ್ತು.

ಇದನ್ನೂ ಓದಿ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಮೇಕೆ ಕದಿಯಲು ಹೋಗಿ ಬೋನಿನಲ್ಲಿ ಬಂಧಿಯಾದ ವ್ಯಕ್ತಿ!

18 ವರ್ಷ, 135 ದಿನಗಳ ವಯಸ್ಸಿನ ಆಯುಷ್‌ ಮ್ಹಾತ್ರೆ ಅವರು ಪ್ರಥಮ ದರ್ಜೆ ಕ್ರಿಕೆಟ್‌, ಲಿಸ್ಟ್‌ ಎ ಹಾಗೂ ಟಿ20 ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು 19 ವರ್ಷ, 339 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ತಮ್ಮ 20ನೇ ವಯಸ್ಸಿನಲ್ಲಿ ಉನ್ಮುಕ್ತ್ ಚಾಂದ್‌ ಈ ದಾಖಲೆ ಬರೆದಿದ್ದರು. ಆಯುಷ್‌ ಅವರ ಪಾಲಿಗೆ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಇದಾಗಿದೆ. ವೈಭವ್‌ ಸೂರ್ಯವಂಶಿ ಹಾಗೂ ವಿಜಯ್‌ ಝೋಲ್‌ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೂರನೇ ಅತ್ಯಂತ ಕಿರಿಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ಭಾರತ ಅಂಡರ್‌-19 ತಂಡಕ್ಕೆ ಆಯುಷ್‌ ಮ್ಹಾತ್ರೆ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದರು ಹಾಗೂ ಆಡಿದ್ದ 7 ಪಂದ್ಯಗಳಿಂದ 145ರ ಸ್ಟ್ರೈಕ್‌ ರೇಟ್‌ನಲ್ಲಿ 240 ರನ್‌ಗಳನ್ನು ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈ ಫ್ರಾಂಚೈಸಿ ಮುಂದಿನ ಟೂರ್ನಿಯ ನಿಮಿತ್ತ ಉಳಿಸಿಕೊಂಡಿದೆ.

Kishor KV