ಭುವಿ ಬೌಲಿಂಗ್‌ಗೆ ರಿಂಕು ಟೀಂ ಧ್ವಂಸ ಗಂಭೀರ್ ಕೈಯಲ್ಲಿದೆ ವೈಭವ್ ಭವಿಷ್ಯ!
ಹಿಟ್‌ಮ್ಯಾನ್‌ಗಿಲ್ಲ ನಿವೃತ್ತಿ, BCCI ಕ್ಲಾರಿಟಿ

ಭುವಿ ಬೌಲಿಂಗ್‌ಗೆ ರಿಂಕು ಟೀಂ ಧ್ವಂಸ  ಗಂಭೀರ್ ಕೈಯಲ್ಲಿದೆ ವೈಭವ್ ಭವಿಷ್ಯ!ಹಿಟ್‌ಮ್ಯಾನ್‌ಗಿಲ್ಲ ನಿವೃತ್ತಿ, BCCI ಕ್ಲಾರಿಟಿ

ಡುಲೀಪ್ ಟ್ರೋಫಿ ಫೈನಲ್‌ಗೆ ದಕ್ಷಿಣ ವಲಯದ ತಂಡ ಬಲಿಷ್ಠವಾಗಿದೆ. ಕೆ.ಎಲ್. ರಾಹುಲ್, ಮೊಹಮ್ಮದ್ ಸಿರಾಜ್ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಸೆಪ್ಟೆಂಬರ್ 6ರಿಂದ ಚೆನ್ನೈನ ಚೆಪಾಕ್ ಮೈದಾನದಲ್ಲಿ ಪೂರ್ವ ವಲಯ ವಿರುದ್ಧ ಫೈನಲ್ ನಡೆಯಲಿದೆ. ಈ ಪಂದ್ಯದಲ್ಲಿ ಅನುಭವಿ ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಡುಲೀಪ್ ಟ್ರೋಫಿ ಫೈನಲ್‌ನಲ್ಲಿ ಆಡ್ತಾರಾ ಇಲ್ವಾ ಅನ್ನೋ ಡೌಟ್ ಶುರುವಾಗಿದೆ. ಇವರ ಲಭ್ಯತೆ ಕುರಿತು ಅಂತಿಮ ನಿರ್ಧಾರವನ್ನು ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ತೆಗೆದುಕೊಳ್ಳಲಿದ್ದಾರೆ. ಮೂವರೂ ಸೆಪ್ಟೆಂಬರ್ 13ರಿಂದ ಆರಂಭವಾಗುವ ಭಾರತಅಫ್ಘಾನಿಸ್ತಾನ T20I ಸರಣಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಡುಲೀಪ್ ಟ್ರೋಫಿ ಫೈನಲ್ ಆಡಿದ ಬಳಿಕ ರಾಷ್ಟ್ರೀಯ ತಂಡದ ಕ್ಯಾಂಪ್‌ಗೆ ಸೇರಲು ಸಮಯದ ಸಮಸ್ಯೆ ಎದುರಾಗಿದೆ.

ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಬೆಳವಣಿಗೆಯನ್ನು BCCI ನಿಕಟವಾಗಿ ಗಮನಿಸುತ್ತಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ದಾಖಲೆಗಳನ್ನು ನಿರ್ಮಿಸಿರುವ ವೈಭವ್, ಕೇವಲ ಒಂದು ಸೀಸನ್‌ನ ಅದ್ಭುತ ಆಟಗಾರನಾಗಿ ಉಳಿಯದೆ ದೀರ್ಘಕಾಲದ ಅಂತಾರಾಷ್ಟ್ರೀಯ ಸ್ಟಾರ್ ಆಗಬೇಕು ಎಂಬುದು BCCI ಗುರಿಯಾಗಿದೆ. ಸಚಿನ್ ತೆಂಡೂಲ್ಕರ್ ಮಾದರಿಯಲ್ಲಿ ಅವರ ಬೆಳವಣಿಗೆಗೆ ಗಮನ ನೀಡಲಾಗುತ್ತಿದೆ

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗೆ BCCI ಸ್ಪಷ್ಟನೆ ನೀಡಿದೆ. ಸೆಪ್ಟೆಂಬರ್ 3ರ ಪರಿಶೀಲನಾ ಸಭೆಯ ಬಳಿಕ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ, ರೋಹಿತ್ ಅವರ ನಿವೃತ್ತಿ ಕುರಿತು ಹರಿದಾಡುತ್ತಿರುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. 2027ರ ಏಕದಿನ ವಿಶ್ವಕಪ್ ಯೋಜನೆಯಲ್ಲೂ ರೋಹಿತ್ ಮುಂದುವರಿಯುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ.  ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಮೇಲೆ ಯಾವುದೇ ಒತ್ತಡವಿಲ್ಲದಿದ್ದರೂ ರೋಹಿತ್ ಅವರ ಸ್ಥಾನದ ಪರಿಶೀಲನೆ ನಡೆಯಲಿದೆ.

ಭಾರತ ಮಹಿಳಾ ತಂಡ ಏಷ್ಯಾ ಕಪ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಸ್ಮೃತಿ ಮಂದಾನಾ ಅವರ ದಾಖಲೆಯ ಇನ್ನಿಂಗ್ಸ್ ನೆರವಿನಿಂದ ಭಾರತ 137 ರನ್‌ಗಳ ಭಾರೀ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಭಾರತದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದ್ದು, ಪ್ರಶಸ್ತಿ ಗೆಲ್ಲುವ ತಂಡಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಕ್ರಿಕೆಟಿಗರಿಗೆ ಇತರ ಕ್ರೀಡಾಪಟುಗಳಿಗಿಂತ ವಿಭಿನ್ನವಾಗಿ ಹೋಟೆಲ್ ವಸತಿ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಸೌಲಭ್ಯಗಳ ಕುರಿತ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ವಸತಿ ಮತ್ತು ಅಗತ್ಯ ಲಾಜಿಸ್ಟಿಕ್ಸ್ ಒದಗಿಸುವುದಾಗಿ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಭರವಸೆ ನೀಡಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಭಾರತದ ಟಿ20ಐ ತಂಡದಲ್ಲಿ ಆಯ್ಕೆಯಾಗಿರುವ ಜಸ್ಪ್ರೀತ್ ಬುಮ್ರಾ, ಫಿಟ್ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟು,  ಮೌಲ್ಯಮಾಪನದ ಭಾಗವಾಗಿ ಅಭ್ಯಾಸ ಪಂದ್ಯಗಳನ್ನು ಆಡಲು ಸಜ್ಜಾಗಿದ್ದಾರೆ. ಬುಮ್ರಾ ಜತೆಗೆ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ರೆಡ್ಡಿ ಕೂಡ ಇಂದಿನಿಂದ ಸೆಪ್ಟೆಂಬರ್ 9 ರವರೆಗೆ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್  ಆಯೋಜಿಸಿರುವ ಈ ಪಂದ್ಯಗಳಲ್ಲಿ ಆಡಲಿದ್ದಾರೆ.

ಇದನ್ನೂ ಓದಿ: 18 ಶತಕ.. 10,868* ರನ್ಸ್ – ಮಹಿಳಾ ಕ್ರಿಕೆಟ್ ಮಹಾರಾಣಿ ಸ್ಮೃತಿ

ಭುವನೇಶ್ವರ್ ಕುಮಾರ್ ಯುಪಿ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ರಿಂಕು ಸಿಂಗ್ ತಂಡದ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಗುರುವಾರ ನಡೆದ ಲಕ್ನೋ ಫಾಲ್ಕನ್ಸ್ ಮತ್ತು ಮೀರತ್ ಮಾವರಿಕ್ಸ್ ನಡುವಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು.  ತಮ್ಮ ನಾಲ್ಕು ಓವರ್‌ಗಳಲ್ಲಿ ಭುವಿ ಕೇವಲ 10 ರನ್‌ಗಳನ್ನು ಬಿಟ್ಟುಕೊಟ್ಟು ಈ ನಾಲ್ಕು ವಿಕೆಟ್‌ಗಳನ್ನು ಪಡೆದರು. ಐಪಿಎಲ್ ಮತ್ತು ಲೀಗ್‌ಗಳಲ್ಲಿ ಉತ್ತಮ ಆಟವಾಡಿದ್ರೂ,ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗದೇ ಇರವುದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ರಿಂಕು ಸಿಂಗ್ ಅವರನ್ನು ಹೊರಗಿಟ್ಟ ನಿರ್ಧಾರವನ್ನು ವಾಸಿಂ ಜಾಫರ್ ಕಟುವಾಗಿ ಟೀಕಿಸಿದ್ದಾರೆ.  ರಿಂಕು ಸಿಂಗ್ ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಅವರು ಉತ್ತರ ಪ್ರದೇಶ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ರೆಡ್-ಬಾಲ್ ದುಲೀಪ್ ಟ್ರೋಫಿಯಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ದುರದೃಷ್ಟವಶಾತ್, ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರನ್ನ ಯಾವ ಕಾರಣಕ್ಕೆ ಕೈಬಿಡಲಾಗಿದೆ ಎಂಬುದು ಆಯ್ಕೆದಾರರಿಗೆ ಮಾತ್ರ ತಿಳಿದಿದೆ ಎಂದಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್, ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ವಿರುದ್ಧ ಗಂಭೀರ ಆರೋಪವೊಂದನ್ನು ಹೊರಿಸಿದ್ದಾರೆ.  ಇರ್ಫಾನ್ ಪಠಾಣ್ ಅವರ ವೃತ್ತಿಬದುಕಿನ ಆರಂಭದಲ್ಲಿ ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೆ. ಬೌಲಿಂಗ್​ನಲ್ಲಿ ಮಾಡಬೇಕಾದ ವ್ಯತ್ಯಾಸಗಳ ಮಹತ್ವದ ಬಗ್ಗೆ ನಾನು ಪಠಾಣ್​​ಗೆ ವಿವರಿಸಿದ್ದೆ. ಆದರೀಗ ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಪಠಾಣ್ ಪಾಕಿಸ್ತಾನದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಮಾಡುತ್ತಿರುತ್ತಾರೆ. ಇದು ಸರಿಯಲ್ಲ. ನಮ್ಮ ಅಭಿಮಾನಿಗಳು ತಿರುಗಿ ಬೀಳುತ್ತಾರೆ ಎಂದು ವಾಸಿಮ್ ಹೇಳಿದ್ದಾರೆ.

Kishor KV

Leave a Reply

Your email address will not be published. Required fields are marked *