ಟೆಸ್ಟ್ ಫಾರ್ಮ್ ಕಳ್ಕೊಂಡ್ರಾ ರೋಹಿತ್? – IND Vs AUS ಸರಣಿ ಬಳಿಕ ನಿವೃತ್ತಿ?
ಕೋಚ್ & ಕ್ಯಾಪ್ಟನ್ ಗೆ BBCI ವಾರ್ನಿಂಗ್
12 ವರ್ಷಗಳಿಂದ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲೇ ಕಾಣದ ಭಾರತ ನ್ಯೂಜಿಲೆಂಡ್ ವಿರುದ್ಧ ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತಿತ್ತು. 92 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ತವರಿನಲ್ಲಿ ಟೆಸ್ಟ್ ಸರಣಿಯ ಪ್ರತಿ ಪಂದ್ಯದಲ್ಲೂ ಮಕಾಡೆ ಮಲಗಿತ್ತು. ಟೆಸ್ಟ್ ಕ್ರಿಕೆಟ್ನ ಸುಲ್ತಾನ್ ಆಗಿ ಮೆರೆದು ಏಕದಿನ ವಿಶ್ವಕಪ್ನ ರನ್ನರ್, ಟಿ-20 ವಿಶ್ವಕಪ್ನ ಚಾಂಪಿಯನ್ ತಂಡ ಸದ್ಯ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಕಿವೀಸ್ ವಿರುದ್ಧದ ಈ ಐತಿಹಾಸಿಕ ಸೋಲು ಟೀಂ ಇಂಡಿಯಾ ಕೋಚ್ ಮತ್ತು ಕ್ಯಾಪ್ಟನ್ಸಿಯನ್ನೇ ಪ್ರಶ್ನಿಸುತ್ತಿದೆ. ಸೋಲಿನ ಬಳಿಕ ಎಚ್ಚೆತ್ತಿರೋ ಬಿಸಿಸಿಐ ತಲೆದಂಡಕ್ಕೆ ಸಿದ್ಧತೆ ನಡೆಸ್ತಿದೆ. ಅಷ್ಟಕ್ಕೂ ಟೀಂ ಇಂಡಿಯಾದಲ್ಲಿ ಯಾರ ತಲೆದಂಡ ಆಗುತ್ತೆ? ಕೋಚ್ ಬದಲಾಗ್ತಾರಾ ಅಥವಾ ಕ್ಯಾಪ್ಟನ್ನೇ ಕೆಳಗಿಳಿಸ್ತಾರಾ? ಹಿರಿಯರೇ ತುಂಬಿರೋ ತಂಡದಲ್ಲಿ ನಿಜಕ್ಕೂ ಆಗ್ತಿರೋದೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹರಿಣಗಳ ಬೆಂಡೆತ್ತಿದ ಭಾರತ – 10 ಸಿಕ್ಸ್.. 7 ಫೋರ್.. ಸಂಜು ಹೀರೋ
ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಸೋತಿರೋ ಭಾರತ ತಂಡ ಇದೀಗ ಸೋಲಿನ ಆತ್ಮಾವಲೋಕನದಲ್ಲಿ ತೊಡಗಿದೆ. ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆ ಸಭೆ ನಡೆಸಿರೋ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಸೋಲಿನ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಾರೆ. ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಈ ಪರಿಶೀಲನಾ ಸಭೆಯು 6 ಗಂಟೆಗಳ ಕಾಲ ನಡೆದಿದ್ದು, ಕೋಚ್ ಗಂಭೀರ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗಿಯಾಗಿದ್ರು. ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಟ್ರಾಟಜಿ ವಿರುದ್ಧವೂ ಅಪಸ್ವರ ಕೇಳಿ ಬಂದಿದೆ. ಹಾಗೇ ಕ್ಯಾಪ್ಟನ್ ರೋಹಿತ್ ಶರ್ಮಾ ಬಳಿಯೂ ಒಂದಷ್ಟು ಕ್ಲಾರಿಟಿ ಕೇಳಿದ್ದಾರೆ. ಮುಂಬರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ಮೂಡಿಬರಬೇಕೆಂದು ಖಡಕ್ ಸೂಚನೆ ನೀಡಿದೆ. ಹೀಗಾಗಿಯೇ ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಗಂಭೀರ್ ಮತ್ತು ರೋಹಿತ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಟೀಮ್ ಇಂಡಿಯಾ ವಿಫಲವಾದರೆ ಇಬ್ರಲ್ಲಿ ಒಬ್ಬರ ತಲೆದಂಡವಾಗುವುದು ಫಿಕ್ಸ್ ಎನ್ನಲಾಗುತ್ತಿದೆ. ಇದೇ ವೇಳೆ ರೋಹಿತ್ ಪ್ರದರ್ಶನದ ಬಗ್ಗೆಯೂ ಚರ್ಚೆಯಾಗ್ತಿದೆ.
ಟೆಸ್ಟ್ ಸರಣಿಯಲ್ಲಿ ಫಾರ್ಮ್ ಕಳ್ಕೊಂಡ್ರಾ ರೋಹಿತ್ ಶರ್ಮಾ?
ಭಾರತದ ಸ್ಟಾರ್ ಬ್ಯಾಟರ್ ಮತ್ತು ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ನಾಯಕನಾಗಿ ಮಾತ್ರವಲ್ಲದೆ ಬ್ಯಾಟರ್ ಆಗಿಯೂ ದೀರ್ಘಕಾಲ ಉಳಿಯುವುದು ತುಂಬಾ ಕಷ್ಟ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವುದು ರೋಹಿತ್ ಶರ್ಮಾಗೆ ಈ ವರ್ಷದ ಬಹುದೊಡ್ಡ ಸವಾಲಾಗಿದೆ. ಆದರೆ ಈ ಕನಸು ಈಗ ನನಸಾಗುವ ಹಾದಿ ಸುಲಭವಾಗಿಲ್ಲ. ಯಾಕಂದ್ರೆ ರೋಹಿತ್ ಶರ್ಮಾ ಅವರ ಫಾರ್ಮ್ ಕೂಡ ಕೈಕೊಟ್ಟಿದೆ.
10 ಇನ್ನಿಂಗ್ಸ್ ಗಳಲ್ಲಿ 150 ರನ್ ಕೂಡ ಕಲೆಹಾಕದ ರೋಹಿತ್!
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ವೈಟ್ ವಾಶ್ ಆಗಿದೆ. ಅಲ್ದೇ ರೋಹಿತ್ ಶರ್ಮಾ ಬ್ಯಾಟರ್ ಆಗಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಆಡಿದ ಟೆಸ್ಟ್ ಸರಣಿಯ 6 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ 2, 52, 0, 8, 18 ಮತ್ತು 11 ರನ್‌ಗಳನ್ನು ಗಳಿಸಿದ್ದರು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಹಿಟ್‌ಮ್ಯಾನ್ ರನ್ ಗಳಿಸಲ ಪರದಾಡಿದ್ದರು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ 4 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ 6, 5, 23 ಮತ್ತು 8 ರನ್ ಕಲೆ ಹಾಕಿದ್ದರು. ಈ ಮೂಲಕ ಕಳೆದ 10 ಇನ್ನಿಂಗ್ಸ್ ಗಳಲ್ಲಿ 150 ರನ್ ಕೂಡ ಗಳಿಸಲು ಸಾಧ್ಯವಾಗಿಲ್ಲ.
8 ತಿಂಗಳಲ್ಲಿ ರೋಹಿತ್ ಸಿಡಿಸಿದ್ದು ಒಂದೇ ಶತಕ!
ರೋಹಿತ್ ಶರ್ಮಾ ಕಳೆದ 8 ತಿಂಗಳಲ್ಲಿ ಕೇವಲ 1 ಟೆಸ್ಟ್ ಶತಕ ಗಳಿಸಿದ್ದಾರೆ. ರೋಹಿತ್ ಶರ್ಮಾ 2024ರ ಮಾರ್ಚ್ 7 ರಂದು ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಮತ್ತೊಂದೆಡೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿಯೂ ರೋಹಿತ್ ಶರ್ಮಾ ಒಂದು ವರ್ಷದಿಂದ ಶತಕ ಬಾರಿಸಲಿಲ್ಲ. ರೋಹಿತ್ ಶರ್ಮಾ ತಮ್ಮ ಕೊನೆಯ 5 ಏಕದಿನ ಪಂದ್ಯಗಳಲ್ಲಿ 47, 47, 58, 64 ಮತ್ತು 35 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ರೋಹಿತ್ ಶರ್ಮಾ ತನ್ನ ಕೊನೆಯ ಏಕದಿನ ಶತಕವನ್ನು 2023ರ ವಿಶ್ವಕಪ್ ಟೂರ್ನಿಯಲ್ಲಿ ಬಾರಿಸಿದ್ದರು.
ರೋಹಿತ್ ಗೆ ಆಸ್ಟ್ರೇಲಿಯಾ ಪ್ರವಾಸ ಮಾಡು ಇಲ್ಲವೇ ಮಡಿ ಸರಣಿ!
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಉಭಯ ತಂಡಗಳು 5 ಪಂದ್ಯಗಳನ್ನಾಡಲಿದ್ದು, ಇದರಲ್ಲಿ ಟೀಮ್ ಇಂಡಿಯಾ 4-0 ಅಂತರದಿಂದ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಬಹುದು. ಒಂದು ವೇಳೆ ಭಾರತ ತಂಡವು ಫೈನಲ್ಗೇರಲು ವಿಫಲರಾದರೆ, ರೋಹಿತ್ ಕ್ಯಾಪ್ಟನ್ಸಿ ಬಗ್ಗೆ ಮತ್ತೆ ಟೀಕೆಗಳು ಶುರುವಾಗಲಿವೆ. ಭಾರತ ಡಬ್ಲ್ಯೂಟಿಸಿ ಫೈನಲ್ ತಲುವಲು ಸಾಧ್ಯವಾಗದೆ ಇದ್ದರೆ, ರೋಹಿತ್ ಶರ್ಮಾ ಅವರ ಭವಿಷ್ಯವೂ ನಿರ್ಧಾರವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ 37 ವರ್ಷ ವಯಸ್ಸಿನ ರೋಹಿತ್ ಶರ್ಮಾ ನಿವೃತ್ತಿ ಮಾತುಗಳು ಕೇಳಿಬರುತ್ತಿವೆ. ಅಲ್ದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮೊದಲಿನಂತೆ ಅಬ್ಬರಿಸುತ್ತಿಲ್ಲ. ಹೀಗಾಗಿ ಫಿಟ್‌ನೆಸ್ ಕಾರಣದಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ.
ಆಸಿಸ್ ಸರಣಿಯ ಸೋಲು ಗೆಲುವಿನ ಮೇಲೆಯೇ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಭವಿಷ್ಯ ನಿಂತಿದೆ. ಅಲ್ದೇ ಟೀಂ ಇಂಡಿಯಾದಲ್ಲಿ ರೋಹಿತ್ ಬಳಿಕ ಯಾರು ಕ್ಯಾಪ್ಟನ್ ಆಗಬಹುದು ಎಂಬ ಚರ್ಚೆಯೂ ಜೋರಾಗಿದೆ.