275 ರೂಪಾಯಿಗೂ ಕಷ್ಟ ಪಟ್ಟಿದ್ದ Hitman.. ಈಗ 214 ಕೋಟಿ ಒಡೆಯ – ರೋಹಿತ್ ಕರುಣಾಜನಕ ಕತೆ!

 275 ರೂಪಾಯಿಗೂ ಕಷ್ಟ ಪಟ್ಟಿದ್ದ Hitman.. ಈಗ 214 ಕೋಟಿ ಒಡೆಯ – ರೋಹಿತ್ ಕರುಣಾಜನಕ ಕತೆ!

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅಂದ್ರೆ ಅಭಿಮಾನಿಗಳ‌ ಪಾಲಿಗೆ ಪ್ರೀತಿಯ ಹಿಟ್‌ಮ್ಯಾನ್. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ರೋಹಿತ್. ಐಪಿಎಲ್ ನಲ್ಲಿ ಕ್ಯಾಪ್ಟನ್ಸಿ ಕಳೆದುಕೊಂಡಿದ್ದರೂ ರೋಹಿತ್ ಶರ್ಮಾ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಇದೀಗ ಹಿಟ್ ಮ್ಯಾನ್ ಬದುಕಿನ ಕೆಲ ವಿಚಾರಗಳು ರಿವೀಲ್ ಆಗಿದೆ. ರೋಹಿತ್ ಬದುಕಿನಲ್ಲೂ ಕರುಣಾಜನಕ ಕತೆಯಿದೆ.. ಕಡು ಬಡತನದ ಕುಟುಂಬದಲ್ಲಿ ಬೆಳೆದ ಹಿಟ್ ಮ್ಯಾನ್ ಗೆ ಆಸರೆಯಾಗಿದ್ದು ಯಾರು? ಅವರಿಗೆ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು ಯಾವಾಗ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ವೋಟ್​ ಮಾಡಿ ಡೈಮಂಡ್‌ ರಿಂಗ್‌ ಗೆದ್ರು.. – ಮನೆಗೆ ಹೋದ ಮರುಕ್ಷಣವೇ ಕಾದಿತ್ತು ಬಿಗ್​ ಶಾಕ್​!

ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ  ಐಪಿಎಲ್ ಟೂರ್ನಿಯಲ್ಲಿ ಫುಲ್ ಸೌಂಡ್ ಮಾಡ್ತಿದ್ದಾರೆ. ಸ್ಟೇಡಿಯಂನಲ್ಲಿ ಪವರ್ ಫುಲ್ ಆಗಿರೋ ಹಿಟ್‌ಮ್ಯಾನ್ ಬದುಕಿನಲ್ಲೂ ಕರುಣಾಜನಕ ಕತೆಯಿದೆ. ರೋಹಿತ್ ಶರ್ಮಾ ಕಡು ಬಡತನದಲ್ಲೇ ಬೆಳೆದವರು. 30 ಏಪ್ರಿಲ್ 1987ರಲ್ಲಿ ಜನಿಸಿದ ರೋಹಿತ್ ಅವರ ಪೂರ್ಣ ಹೆಸರು ರೋಹಿತ್ ಗುರುನಾಥ್ ಶರ್ಮಾ. ರೋಹಿತ್ ಶರ್ಮಾ ಬಾಲ್ಯದ ಜೀವನ ಸಾಕಷ್ಟು ಕಡುಬಡತನದಿಂದ ಕೂಡಿತ್ತು ಎನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ರೋಹಿತ್ ಶರ್ಮಾ ಚಿಕ್ಕವರಿದ್ದಾಗ ಮನೆಯಲ್ಲಿ ಮಲಗುವುದಕ್ಕೂ ಜಾಗವಿರಲಿಲ್ಲವಂತೆ. ಹೀಗಾಗಿ ಅವರು ಅಜ್ಜಿ ಮನೆಯಲ್ಲಿ ಬೆಳೆದಿದ್ದು.

ಬಡತನದಲ್ಲಿ ಬೆಳೆದ ರೋಹಿತ್ ಶರ್ಮಾ ಒಮ್ಮೆ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದರಂತೆ. ಈ ಶಿಬಿರದಲ್ಲಿ ರೋಹಿತ್ ಶರ್ಮಾ ಪ್ರತಿಭೆಯನ್ನು ಗುರುತಿಸಿದ ಕೋಚ್ ದಿನೇಶ್ ಲಾಡ್, ಹಿಟ್‌ಮ್ಯಾನ್ ಅವರನ್ನು ಬೇರೆ ಶಾಲೆಗೆ ದಾಖಲು ಮಾಡಲು ಅವರ ಪೋಷಕರಿಗೆ ಸೂಚಿಸಿದರು. ಆ ಶಾಲೆಯಲ್ಲೇನೋ ಕ್ರೀಡೆಗೆ ಒಳ್ಳೆಯ ವಾತಾವರಣವಿತ್ತು. ಆದ್ರೆ ದಿನೇಶ್ ಲಾಡ್ ಅವರು ಸೂಚಿಸಿದ್ದ ಶಾಲೆಯ ಶುಲ್ಕ  275 ರುಪಾಯಿಗಳಾಗಿತ್ತು. ಬಡತನದಲ್ಲಿದ್ದ ಹೆತ್ತವರಿಗೆ ಆ 275 ರುಪಾಯಿ ಶಾಲಾ ಶುಲ್ಕ ಕೂಡ ದೊಡ್ಡ ಹೊರೆಯಾಗಿತ್ತು. ಆದರೆ ರೋಹಿತ್ ಶರ್ಮಾ ಪ್ರತಿಭೆಯನ್ನು ಗಮನಿಸಿದ್ದ ದಿನೇಶ್ ಲಾಡ್, ಆ ಶಾಲೆಯ ಪ್ರಿನ್ಸಿಪಾಲ್ ಜತೆ ರೋಹಿತ್ ಶರ್ಮಾ ಬಗ್ಗೆ ವಿಶೇಷವಾಗಿ ಮಾತನಾಡಿ ಶಾಲಾ ಫೀ ನಲ್ಲಿ ಕೊಂಚ ರಿಯಾಯಿತಿ ನೀಡುವಂತೆ ಮನವಿ ಮಾಡಿಕೊಂಡರು.

ನಂತರ ಆ ಶಾಲೆ ಸೇರಿದ ರೋಹಿತ್ ಶರ್ಮಾ, ದಿನೇಶ್ ಲಾಡ್ ಮಾರ್ಗದರ್ಶನದಲ್ಲಿಯೇ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಇಲ್ಲಿಂದಲೇ ಹಿಟ್ ಮ್ಯಾನ್ ಲೈಫ್ ನಲ್ಲಿ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು.. ಇದ್ರ ಪರಿಣಾಮ ರೋಹಿತ್ ಶರ್ಮಾ ಇಂದು ಭಾರತದ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈಗ ರೋಹಿತ್ ಶರ್ಮಾ ಅವರ ಒಟ್ಟಾರೆ ಸಂಪತ್ತು ಸರಿಸುಮಾರು 214 ಕೋಟಿ ರುಪಾಯಿ ಎನ್ನಲಾಗಿದೆ. ಈ ಮೂಲಕ ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡದ ಶ್ರೀಮಂತ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕ್ರಿಕೆಟ್ ನಲ್ಲಿ ಯುವ ಪ್ರತಿಭೆಗಳಿಗೆ ಸಿಕ್ಕಾಪಟ್ಟೆ ಪ್ರೋತ್ಸಾಹ ನೀಡುವ ರೋಹಿತ್ ಗೆ ಈ‌ಗ ಎಲ್ಲವೂ ಸಿಕ್ಕಿದೆ. ಆದ್ರೆ ಐಸಿಸಿ ವಿಶ್ವಕಪ್‌ ಪ್ರಶಸ್ತಿ ಒಂದು ಮಾತ್ರ ಇನ್ನೂ ದಕ್ಕಿಲ್ಲ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಚಾಂಪಿಯನ್ ಆಗಿ ಹೊರಹೊಮ್ಮಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆ..

Shwetha M