ರೋಹಿತ್ ಔಟ್.. ಗಿಲ್ ಕ್ಯಾಪ್ಟನ್ – ಚಾಂಪಿಯನ್ಸ್ ಟ್ರೋಫಿಯಲ್ಲಿ ಬಿಗ್ ಟ್ವಿಸ್ಟ್

ಚಾಂಪಿಯನ್ಸ್ ಟ್ರೋಫಿ ಫೀವರ್ನಲ್ಲಿರೋ ಟೀಂ ಇಂಡಿಯಾದಲ್ಲಿ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ. ಅದುವೇ ಸ್ಕಿಪ್ಪರ್ ರೋಹಿತ್ ಶರ್ಮಾ ಇಂಜುರಿ. ಐಸಿಸಿ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲೂ ಗೆಲುವು ಕಂಡಿರೋ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಓಪನರ್ ಆಗಿ ಬಿಗ್ ಹಿಟ್ ಕೊಡದೇ ಇದ್ರೂ ಒಂದೊಳ್ಳೆ ಬೇಸ್ಮೆಂಟ್ ಹಾಕಿ ಕೊಟ್ಟಿದ್ರು. ಬಟ್ ಈಗ ಮೂರನೇ ಪಂದ್ಯದಿಂದ ಹೊರಬೀಳೋದು ಬಹುತೇಕ ಕನ್ಫರ್ಮ್ ಆಗಿದೆ. ಈಗ ಇರೋ ಪ್ರಶ್ನೆ ಅಂದ್ರೆ ರೋಹಿತ್ ಶರ್ಮಾ ಜಾಗಕ್ಕೆ ಯಾರು ಓಪನರ್ ಆಗ್ತಾರೆ ಅನ್ನೋದು. ಇದಕ್ಕೆ ಅಚ್ಚರಿಯ ಹೆಸರೂ ಕೇಳಿ ಬರ್ತಿದೆ.
ಇದನ್ನೂ ಓದಿ : IND Vs NZ.. ಸೇಡು ತೀರುತ್ತಾ? – ಕಿವೀಸ್ ವಿರುದ್ಧ ಆಡಲ್ವಾ ರೋಹಿತ್?
ದುಬೈನಲ್ಲಿ ಕಳೆದ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಮಂಡಿರಜ್ಜು ನೋವು ಕಾಣಿಸಿಕೊಂಡಿತ್ತು. ಇನ್ನೂ ಕೂಡ ಕಂಪ್ಲೀಟ್ ಆಗಿ ರಿಕವರ್ ಆಗಿಲ್ಲ. ಬ್ಯಾಟಿಂಗ್ ಮಾಡುವಾಗಲೂ 100% ಫಿಟ್ ಆಗಿ ಕಾಣುತ್ತಿರಲಿಲ್ಲ. ಬಳಿಕ ದುಬೈನಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ರಿಪೋರ್ಟ್ ಹೊರ ಬಿದ್ದಿದೆ. ರೋಹಿತ್ ಗಾಯ ಗಂಭೀರವಾಗಿಲ್ಲ ಅಂದ್ರೂ ಕೂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವೈಸ್ ಕ್ಯಾಪ್ಟನ್ ಆಗಿರುವ ಶುಭ್ ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಟೀಂ ಇಂಡಿಯಾದ ಯಂಗ್ ಌಂಡ್ ಎನರ್ಜಿಟಿಕ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಈಗಾಗಲೇ ಏಕದಿನ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಅವರನ್ನು ಭವಿಷ್ಯದ ನಾಯಕ ಎಂದೂ ಬಿಸಿಸಿಐ ಬಿಂಬಿಸ್ತಾ ಇದೆ. ಈಗ ಅನಿರೀಕ್ಷಿತ ಬೆಳವಣಿಗೆಯಲ್ಲಿ ಗಿಲ್‌ಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಯಕತ್ವ ವಹಿಸುವ ಅವಕಾಶ ಸಿಗೋ ಸಾಧ್ಯತೆ ಇದೆ.
ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿರುವ ಶುಭ್ಮನ್ ಗಿಲ್ ಈ ಹಿಂದೆ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಜಿಂಬಾಬ್ವೆ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಸರಣಿಯನ್ನು ಭಾರತ 4-1 ಅಂತರದಿಂದ ಗೆದ್ದಿತ್ತು. ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಗಿಲ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಒಡಿಐ ಬ್ಯಾಟರ್ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿರುವ ಗಿಲ್ ರೋಹಿತ್ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಆಗೋ ಮಾತುಗಳೂ ಕೇಳಿ ಬರ್ತಿವೆ.
ಅದೆಲ್ಲಕ್ಕಿಂತ ಹೆಚ್ಚಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಸೋಲು, ಗೆಲುವು ದೊಡ್ಡ ಮಟ್ಟದ ಬದಲಾವಣೆಯನ್ನೇನೂ ಮಾಡೋದಿಲ್ಲ. ಎರಡೂ ತಂಡಗಳು ಸೆಮಿಫೈನಲ್ ಪ್ರವೇಶಿಸಿ ಆಗಿರೋದ್ರಿಂದ ರೋಹಿತ್ ವಿಚಾರದಲ್ಲಿ ಮ್ಯಾನೇಜ್ಮೆಂಟ್ ರಿಸ್ಕ್ ತಗೊಳ್ಳೋಕೆ ರೆಡಿ ಇಲ್ಲ. ಹೀಗಾಗಿ ಹಿಟ್ಮ್ಯಾನ್ ರೆಸ್ಟ್ ಬಳಿಕ ಸೆಮೀಸ್ ಪಂದ್ಯಕ್ಕೆ ಕಂಪ್ಲೀಟ್ ಫಿಟ್ ಆಗಿ ಬರ್ಲಿ ಅನ್ನೋದು ಮ್ಯಾನೇಜ್ಮೆಂಟ್ ಪ್ಲ್ಯಾನ್. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ತಂಡ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಪಡೆಯುತ್ತೆ ಅಷ್ಟೇ. ಅಲ್ಲದೆ ಭಾರತ ತಂಡ ಮಂಗಳವಾರ ಅಂದ್ರೆ ಮಾರ್ಚ್ 4ರಂದು ಸೆಮಿಫೈನಲ್ ಪಂದ್ಯವನ್ನಾಡಲಿದೆ. ಹೀಗಾಗಿ ಕೇವಲ ಒಂದು ದಿನದ ಅಂತರ ಇರುವುದರಿಂದ ರೋಹಿತ್‌ಗೆ ವಿಶ್ರಾಂತಿ ನೀಡುವುದೇ ಸೂಕ್ತ ಎಂದು ತಂಡದ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ರೋಹಿತ್ ಗೆ ವಿಶ್ರಾಂತಿ ಏನೋ ಓಕೆ. ಬಟ್ ಅವ್ರ ಬದ್ಲಿಗೆ ಇನ್ನಿಂಗ್ಸ್ ಆರಂಭ ಮಾಡೋದು ಯಾರು ಅನ್ನೊದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ. ರೋಹಿತ್ ಶರ್ಮಾ ಆಡಲು ಸಾಧ್ಯವಾಗದಿದ್ದರೆ ಅಥವಾ ಮುಂದಿನ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ನೀಡಿದ್ರೂ ಕೂಡ ರಿಷಭ್ ಪಂತ್ ಅಥವಾ ವಾಷಿಂಗ್ಟನ್ ಸುಂದರ್ ಗೆ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ ಬ್ಯಾಕಪ್ ಓಪನರ್ ಇಲ್ಲದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ಟೀಂ ಇಂಡಿಯಾ ಮೊದಲು ಘೋಷಣೆ ಮಾಡಿದ್ದ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಹೆಸರಿತ್ತು. ಆದ್ರೆ ಫೈನಲ್ ಟೀಮ್ನಲ್ಲಿ ಜೈಸ್ವಾಲ್ರನ್ನ ಮೀಸಲು ಆಟಗಾರನಾಗಿ ಕೈಬಿಟ್ಟು ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಲಾಯ್ತು. ಅಲ್ದೇ ರಿಸರ್ವ್ ಪ್ಲೇಯರ್ಸ್ ದುಬೈಗೂ ಪ್ರಯಾಣಿಸಿಲ್ಲ. ತುಂಬಾ ಅನಿವಾರ್ಯ ಇದ್ದಾಗಷ್ಟೇ ಬ್ಯಾಕಪ್ ಪ್ಲೇಯರ್ಸ್ನ ಕರೆಸಿಕೊಳ್ಳೋಕೆ ಬಿಸಿಸಿಐ ಮುಂದಾಗಿತ್ತು. ಸೋ ಜೈಸ್ವಾಲ್ ಕೂಡ ದುಬೈಗೆ ಹೋಗಿಲ್ಲ. ಹೀಗಾಗಿ ರೋಹಿತ್ ಬದ್ಲಿಗೆ ಯಾರು ಬ್ಯಾಟ್ ಬೀಸ್ತಾರೆ ಅನ್ನೋ ಪ್ರಶ್ನೆಗೆ ಕೇಳಿ ಬರ್ತಿರೋ ಹೆಸ್ರೇ ಕೆಎಲ್ ರಾಹುಲ್.
ಟೀಂ ಇಂಡಿಯಾದಲ್ಲಿ ಯಾವ್ದಾದ್ರೂ ಸ್ಲಾಟ್ ಖಾಲಿಯಾಯ್ತು ಅಂದ್ರೆ ಮ್ಯಾನೇಜ್ಮೆಂಟ್ ಫಸ್ಟ್ ನೆನಪಾಗೋ ಹೆಸ್ರೇ ಕೆಎಲ್ ರಾಹುಲ್. ರೋಹಿತ್ ಆಬ್ಸೆನ್ಸ್ನಲ್ಲಿ ಗಿಲ್ ಆರಂಭಿಕರಾಗಿ ಇಳಿದ್ರೆ ಗಿಲ್‌ಗೆ ಕೆಎಲ್ ರಾಹುಲ್ ಓಪನಿಂಗ್ ಸ್ಲಾಟ್ಗೆ ಕಳಿಸೋ ಚರ್ಚೆ ನಡೀತಿದೆ ಎನ್ನಲಾಗಿದೆ. ಬ್ಯಾಕ್‌ಅಪ್ ಓಪನರ್ ಇಲ್ಲದೇ ಇರುವುದರಿಂದ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಇತ್ತಿಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಕೆಎಲ್ ರಾಹುಲ್ ಅವ್ರೇ ಇನ್ನಿಂಗ್ಸ್ ಆರಂಭಿಸಿದ್ರು. ರೋಹಿತ್ ಬಂದ ಮೇಲೂ ಎರಡನೇ ಪಂದ್ಯದಲ್ಲಿ ಆರಂಭಿಕರಾಗೇ ಆಡಿದ್ರು. ಆ ನಂತ್ರ ಮತ್ತೆ ಸ್ಲಾಟ್ ಚೇಂಜ್ ಆಗಿತ್ತು. ನಾರ್ಮಲಿ ಕೆಎಲ್ ರಾಹುಲ್ ರದ್ದು 5ನೇ ಕ್ರಮಾಂಕ ಫಿಕ್ಸ್ ಇದೆ. ಬಟ್ ಇತ್ತೀಚಿನ ದಿನಗಳಲ್ಲಿ ಕೆಎಲ್ರನ್ನ 6ನೇ ಕ್ರಮಾಂಕದಲ್ಲೇ ಕಣಕ್ಕಿಳಿಸಲಾಗ್ತಿದೆ. ಅಕ್ಷರ್ ಪಟೇಲ್ ಗೆ ಮುಂಬಡ್ತಿ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಇದೇ ಆಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ಕಳಪೆ ಪ್ರದರ್ಶನ ನೀಡಿದ್ರು. ಈ ವೇಳೆ ಅಭಿಮಾನಿಗಳಿಂದ ಸ್ಲಾಟ್ ವಿಚಾರವಾಗಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮತ್ತೆ 3ನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ರು. ಇನ್ನು ಚಾಂಪಿಯನ್ಸ್ ಟ್ರೋಫಿಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಇದೇ ಆಗಿತ್ತು. 6ನೇ ಕ್ರಮಾಂಕದಲ್ಲೇ ಕಣಕ್ಕಿಳಿಸಲಾಗಿತ್ತು. ಆದ್ರೂ ಕೆಎಲ್ 41 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ರು. ಬಟ್ ಪಾಕ್ ವಿರುದ್ಧದ ಪಂದ್ಯಕ್ಕೆ ಅಚ್ಚರಿ ಎನ್ನುವಂತೆ 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, 6ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಇಳಿದಿದ್ರು. ಸೋ ಈಗ ನ್ಯೂಜಿಲೆಂಡ್ ವಿರುದ್ಧ ಕೆಎಲ್ ಯಾವ ಕ್ರಮಾಂಕದಲ್ಲಿ ಆಡ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.
ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡ ಇಲ್ಲದೇ ಇದ್ರೂ ಗೆಲುವಂತೂ ಬೇಕೇ ಬೇಕಿದೆ. ಯಾಕಂದ್ರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಈವರೆಗೂ ಭಾಗಿಯಾಗಿರುವ ಎಲ್ಲಾ ತಂಡಗಳ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆದರೆ, ಒಂದು ತಂಡದ ವಿರುದ್ಧ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಅದುವೇ ನ್ಯೂಜಿಲೆಂಡ್. ಹೌದು. 2000ದ ಇಸವಿಯಲ್ಲಿ ಉಭಯ ತಂಡಗಳು ಈ ಟೂರ್ನಿಯಲ್ಲಿ ಮುಖಾಮುಖಿ ಆಗಿದ್ದವು. ಆದರೆ, ಈ ಪಂದ್ಯದಲ್ಲಿ ಕಿವೀಸ್ ಪಡೆ ಭಾರತವನ್ನು ಮಣಿಸಿತ್ತು. ಅಂದು ಚಾಂಪಿಯನ್ಸ್ ಟ್ರೋಫಿಯನ್ನು ನಾಕೌಟ್ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಈ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶ ಪಡೆದಿದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯದ ನಂತರ ಈ ತಂಡಗಳು ಒಮ್ಮೆಯೂ ಮುಖಾಮುಖಿ ಆಗಿರಲಿಲ್ಲ. ಇದೀಗ 25 ವರ್ಷಗಳ ಬಳಿಕ ಎದುರಾಗುತ್ತಿವೆ. ಇದರಲ್ಲಿ ಭಾರತ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಇನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಈ ವರೆಗೂ 118 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡು ಪ್ರಾಬಲ್ಯ ಸಾಧಿಸಿದೆ. ಭಾರತ ಈ ವರೆಗೆ 60 ಪಂದ್ಯಗಳನ್ನು ಗೆದ್ದುಕೊಂಡಿದೆ. ನ್ಯೂಜಿಲೆಂಡ್ ತಂಡ 50 ಪಂದ್ಯಗಳಲ್ಲಿ ಜಯಗಳಿಸಿದೆ. 7 ಪಂದ್ಯಗಳು ಫಲಿತಾಂಶ ಕಾಣದೆ ರದ್ಧಾಗಿವೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.