ಗೋಗರೆದ್ರೂ ಕ್ಯಾಪ್ಟನ್ಸಿ ಒಪ್ಪದ ರೋಹಿತ್ –  ಮುಂಬೈ ಇಂಡಿಯನ್ಸ್ ಬಿಡ್ತಾರಾ?

ಗೋಗರೆದ್ರೂ ಕ್ಯಾಪ್ಟನ್ಸಿ ಒಪ್ಪದ ರೋಹಿತ್ –  ಮುಂಬೈ ಇಂಡಿಯನ್ಸ್ ಬಿಡ್ತಾರಾ?

ಐಪಿಎಲ್ ಸೀಸನ್ 17 ಆರಂಭಕ್ಕೂ ಮೊದ್ಲಿಂದಲೂ ತುಂಬಾ ಟ್ರೆಂಡಿಂಗ್​ನಲ್ಲಿ ಇರೋ ವಿಷ್ಯ ಅಂದ್ರೆ ಅದು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ. 10 ವರ್ಷಗಳ ಕಾಲ ಮುಂಬೈ ತಂಡವನ್ನ ಲೀಡ್ ಮಾಡಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಇಳಿಸಿ ಹಾರ್ದಿಕ್ ಪಾಂಡ್ಯಾಗೆ ಪಟ್ಟ ಕಟ್ಟಲಾಗಿತ್ತು. ಅದೂ ಕೂಡ ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಆಗಿದ್ದ ಪಾಂಡ್ಯರನ್ನ 15 ಕೋಟಿ ರೂಪಾಯಿಗೆ ನೀತಾ ಅಂಬಾನಿ ಒಡೆತನದ MI ಫ್ರಾಂಚೈಸಿ ಖರೀದಿಸಿತ್ತು. ಪಾಂಡ್ಯಾ ಮುಂಬೈಗೆ ಕಾಲಿಡ್ತಿದ್ದಂತೆ ರೋಹಿತ್ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿತ್ತು. ಆರಂಭದಲ್ಲೇ ಗೋ ಬ್ಯಾಕ್ ಹಾರ್ದಿಕ್ ಎಂದು ಕಿಡಿ ಕಾರಿದ್ರು. ಹಾಗೇ ಹಾರ್ಪಿಕ್ ಪಾಂಡ್ಯ ಅಂತೆಲ್ಲಾ ಟ್ರೋಲ್ ಮಾಡಿದ್ರು. ಒಂದ್ಕಡೆ ಫ್ಯಾನ್ಸ್ ಸಿಟ್ಟಾಗಿದ್ರೆ ಅತ್ತ ಮುಂಬೈ ಇಂಡಿಯನ್ಸ್​ ತಂಡ ಐಪಿಲ್​ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡ್ತಿದೆ. ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದೆ. ಆಡಿರೋ ಮೂರೂ ಮ್ಯಾಚ್​ಗಳಲ್ಲೂ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಇಷ್ಟೆಲ್ಲಾ ಆದ ಮೇಲೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಬುದ್ಧಿ ಬಂದಂತಿದೆ. ಮತ್ತೆ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಆಗುವಂತೆ ಕೇಳಿದ್ದಾರೆ. ಆದ್ರೆ ಸ್ವಾಭಿಮಾನಿಯಾದ ಶರ್ಮಾ ನಾಯಕತ್ವವನ್ನು ನಿರಾಕರಿಸಿ ಮುಂಬೈ ಫ್ರಾಂಚೈಸಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಅಷ್ಟೇ ರೋಹಿತ್ ನಿರ್ಧಾರ ಅಭಿಮಾನಿಗಳ ಕುತೂಹಲಕ್ಕೂ ಕಾರಣವಾಗಿದೆ. ಅಷ್ಟಕ್ಕೂ ರೋಹಿತ್ ತೆಗೆದುಕೊಂಡಿರೋ ತೀರ್ಮಾನ ಏನು..? ಫ್ಯಾನ್ಸ್ ಕೂಡ ಖುಷಿಯಾಗಿರೋದೇಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತಪ್ಪಾಗಿ ಖರೀದಿಸಿದ್ದ ಆಟಗಾರನೇ ಪಂಜಾಬ್ ಗೆಲ್ಲಿಸಿದ ಹೀರೋ! – ಇನ್ನಾದ್ರೂ ಪಾಠ ಕಲಿಯುತ್ತಾ RCB?

ಐಪಿಎಲ್​ನ ಬೆಸ್ಟ್ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಟಾಪ್​ನಲ್ಲಿದ್ದಾರೆ. 36 ವರ್ಷದ ಅನುಭವಿ ಆರಂಭಿಕ ಬ್ಯಾಟರ್‌ ರೋಹಿತ್ ಶರ್ಮಾ 2011ರಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಸೇರಿದ್ರು. 2013ರಿಂದ 2023ರವರೆಗೆ ತಂಡದ ನಾಯಕತ್ವ ನಿಭಾಯಿಸಿ 5 ಬಾರಿ ಟ್ರೋಫಿ ಗೆದ್ದು ಕೊಟ್ಟರು. ಆದರೂ ಐಪಿಎಲ್‌ 2024 ಟೂರ್ನಿಗೂ ಮುನ್ನವೇ ಮುಂಬೈ ಫ್ರಾಂಚೈಸಿ ರೋಹಿತ್‌ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಕಸಿದು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ನೀಡಿತ್ತು.  ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಅಷ್ಟೆಲ್ಲಾ ಸಾಧನೆ ಮಾಡಿದ್ರೂ ಕ್ಯಾಪ್ಟನ್ಸಿ ಕಿತ್ತುಕೊಂಡಿದ್ದು ರೋಹಿತ್​ಗೆ ತೀವ್ರ ಬೇಸರ ಉಂಟು ಮಾಡಿದೆ. ದಶಕಕ್ಕೂ ಹೆಚ್ಚು ಕಾಲ ಮುಂಬೈ ಪರವೇ ಆಡಿದ್ದ ರೋಹಿತ್ ಇದೀಗ ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಐಪಿಎಲ್‌ 2025ರ ಟೂರ್ನಿಯಲ್ಲಿ ಬೇರೆ ತಂಡದ ಪರ ಆಡುವ ಸಾಧ್ಯತೆ ಹೆಚ್ಚಿದೆ. ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ ಹೊಂದಿರುವ ರೋಹಿತ್‌ ಶರ್ಮಾ ತಂಡವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ರೋಹಿತ್ ಶರ್ಮಾ ಸ್ಟಾರ್ ಬ್ಯಾಟ್ಸ್​ಮನ್. ಪ್ಲೇಯರ್ ಆಗಿ ಕ್ಯಾಪ್ಟನ್ ಆಗಿ ಟೀಮ್​ಗೆ ಏನು ಬೇಕೋ ಅದನ್ನೇ ಕೊಡೋ ಆಟಗಾರ. ಅದು ಟೀಂ ಇಂಡಿಯಾವೇ ಆಗಲಿ, ಅಥವಾ ಮುಂಬೈ ಇಂಡಿಯನ್ಸ್ ಪರವೇ ಇರಲಿ. ಈವರೆಗೆ ಮುಂಬೈ ಪರ ಆಡಿರುವ ಹಿಟ್​ಮ್ಯಾನ್ 201 ಪಂದ್ಯಗಳಲ್ಲಿ 5 ಸಾವಿರಕ್ಕೂ ಹೆಚ್ಚು ರನ್​ಗಳನ್ನು ಬಾರಿಸಿದ್ದಾರೆ. ಎಂಐ ತಂಡವನ್ನು 10 ವರ್ಷಗಳ ಕಾಲ ನಾಯಕನಾಗಿ ಮುಂದುವರಿಸಿದ್ದ ಹಿಟ್‌ಮ್ಯಾನ್, ತಮ್ಮ ಚೊಚ್ಚಲ ಕ್ಯಾಪ್ಟನ್ಸಿಯಲ್ಲೇ ಮುಂಬೈ ಫ್ರಾಂಚೈಸಿಗೆ ಟ್ರೋಫಿ ಗೆದ್ದುಕೊಟ್ಟಿದ್ದರು. ಬಳಿಕ 2015, 2017, 2019 ಹಾಗೂ 2020ರಲ್ಲೂ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟು, ಅತಿ ಹೆಚ್ಚು ಟ್ರೋಫಿ ಗೆದ್ದ ನಾಯಕ ಎಂಬ ದಾಖಲೆ ನಿರ್ಮಿಸಿದ್ದರು. ಇಷ್ಟೆಲ್ಲಾ ಮಾಡಿದ್ರೂ ಕೃತಜ್ಞತೆಯೇ ಇಲ್ಲ ಫ್ರಾಂಚೈಸಿ ಕ್ಯಾಪ್ಟನ್ಸಿ ಕಿತ್ತುಕೊಂಡಿದೆ. ಪಾಂಡ್ಯಾಗೆ ಪಟ್ಟ ಕಟ್ಟಿರೋದು ಬರೀ ಫ್ಯಾನ್ಸ್​ಗಷ್ಟೇ ಅಲ್ಲ. ರೋಹಿತ್ ಶರ್ಮಾ ಸೇರಿದಂತೆ ತಂಡದ ಹಲವು ಆಟಗಾರರಿಗೂ ಇಷ್ಟ ಇಲ್ಲ. ಇದೇ ಕಾರಣಕ್ಕೆ ಡ್ರೆಸಿಂಗ್‌ ರೂಮ್‌ನಲ್ಲೂ ಎಲ್ಲವೂ ಸರಿ ಇಲ್ಲ ಎಂದು ತಂಡದ ಆಟಗಾರರೊಬ್ಬರು ಹೇಳಿಕೊಂಡಿದ್ದಾರೆ. ಭವಿಷ್ಯದ ಕ್ಯಾಪ್ಟನ್‌ ಆಯ್ಕೆ ಮಾಡುವ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ದೊಡ್ಡ ಎಡವಟ್ಟನ್ನೇ ಮಾಡಿಕೊಂಡಿದೆ. ನ್ಯಾಯಯುತ ರೀತಿಯಲ್ಲಿ ರೋಹಿತ್‌ ಶರ್ಮಾ ಕ್ಯಾಪ್ಟನ್ಸಿಗೆ ತೆರೆ ಎಳೆದಿದ್ದರೆ ತಂಡದ ಡ್ರೆಸಿಂಗ್‌ ರೂಮ್‌ ಶಾಂತಿ ಕದಡುತ್ತಿರಲಿಲ್ಲ. ಹಾರ್ದಿಕ್‌ ಪಾಂಡ್ಯ ಅವರನ್ನು ಹಠಾತ್‌ ಕ್ಯಾಪ್ಟನ್‌ ಎಂದು ಘೋಷಣೆ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಭಿಮಾನಿಗಳು ಕೂಡ ಮುಂಬೈ ಫ್ರಾಂಚೈಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೊದ್ಲೇ ಪಾಂಡ್ಯ ಕ್ಯಾಪ್ಟನ್ ಆಗಿದ್ದು ಮುಂಬೈ ಟೀಮ್​ನಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಅಂಥಾದ್ರಲ್ಲಿ ಪಾಂಡ್ಯ ಟೀಮ್​ನಲ್ಲಿ ಸರ್ವಾಧಿಕಾರಿಯಂತೆ ತೀರ್ಮಾನಗಳನ್ನ ಕೈಗೊಳ್ತಿದ್ದಾರೆ. ಹೀಗಾಗಿ ಪಾಂಡ್ಯ ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಆಟಗಾರರಲ್ಲಿ ಅಸಮಾಧಾನವಿದೆ. ಡ್ರೆಸಿಂಗ್‌ ರೂಮ್‌ನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಇದೂ ಕೂಡ ಕಾರಣವಾಗುತ್ತಿದೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿ ಏನೆಂದರೆ ಮುಂಬೈ ಇಂಡಿಯನ್ಸ್ ತಂಡ ಎರಡು ಗುಂಪುಗಳಾಗಿ ಒಡೆದಿದೆ. ತಂಡವು ಮಾಜಿ ನಾಯಕ ರೋಹಿತ್ ಶರ್ಮಾ ಅವರ ಬೆಂಬಲಿಗರು ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರ ತಂಡವಾಗಿ ಬದಲಾಗಿದೆ. ಮನೆಯೊಂದು 2 ಬಾಗಿಲು ಆದಾಗ ತಂಡ ಗೆಲುವು ಸಾಧಿಸೋಕೆ ಹೇಗಾದ್ರೂ ಸಾಧ್ಯವಾಗುತ್ತೆ ಹೇಳಿ.

ಅಸಲಿಗೆ ಹಾರ್ದಿಕ್‌ ಪಾಂಡ್ಯ ಜಿಟಿ ತಂಡ ಬಿಟ್ಟು ಮುಂಬೈ ಸೇರೋದ್ರಿಂದ ಯಾರಿಗೂ ಸಮಸ್ಯೆ ಇರಲಿಲ್ಲ. ಆದರೆ ಯಾವಾಗ ಮುಂಬೈ ಇಂಡಿಯನ್ಸ್‌ ನಾಯಕರಾಗ್ತಾರೆ ಅನ್ನೋದು ಗೊತ್ತಾಯ್ತೋ ಅಲ್ಲಿಂದಲೇ ಸಮಸ್ಯೆ ಶುರುವಾಗಿದ್ದು. ಯಾಕಂದ್ರೆ ರೋಹಿತ್ ಶರ್ಮಾರಿಂದ ಪಾಂಡ್ಯ ಕ್ಯಾಪ್ಟನ್ಸಿಯನ್ನ ಕಿತ್ತುಕೊಂಡಂತೆಯೇ ಇತ್ತು.. ಆದ್ರೆ ಮುಂಬೈ ಇಂಡಿಯನ್ಸ್ ತಂಡ ಪಾಂಡ್ಯಾರನ್ನೇ ಉತ್ತರಾಧಿಕಾರಿ ಮಾಡಲು ಕಾರಣವೂ ಇದೆ. ಹಾರ್ದಿಕ್ ಪಾಂಡ್ಯ ಅವರಿಗೆ ಈಗಾಗಲೇ ಮುಂಬೈ ಇಂಡಿಯನ್ಸ್‌ ನಲ್ಲಿ ಆಡಿದ್ದರಿಂದ ತಂಡ ಚಿರ ಪರಿಚಿತ. ಅಲ್ದೇ ತಾವು ಕ್ಯಾಪ್ಟನ್‌ ಆಗಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 2022ರ ಸಾಲಿನಲ್ಲಿ ಟ್ರೋಫಿ ಗೆದ್ದುಕೊಟ್ಟು 2023ರ ಸಾಲಿನಲ್ಲಿ ರನ್ನರ್ಸ್‌ಅಪ್‌ ಸ್ಥಾನ ಗೆದ್ದುಕೊಟ್ಟಿದ್ದರು ಹಾರ್ದಿಕ್ ಪಾಂಡ್ಯ. ಹೀಗಾಗಿ ಖುಷಿ ಖುಷಿಯಲ್ಲೇ ಪಾಂಡ್ಯ ಮುಂಬೈ ತಂಡಕ್ಕೆ ವಾಪಸ್ ಆಗಿದ್ರು. ಆದ್ರೆ ಪಾಂಡ್ಯಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅಭಿಮಾನಿಗಳಿಂದ ವಿರೋಧದ ಸ್ವಾಗತ ಸಿಕ್ಕಿಲ್ಲ. ಆನ್‌ಫೀಲ್ಡ್‌ನಲ್ಲಿ ಹಾರ್ದಿಕ್‌ ಅವರನ್ನು ಅಭಿಮಾನಿಗಳು ಹೀಯಾಳಿಸಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲೂ ಫ್ಯಾನ್ಸ್‌ ಹಾರ್ದಿಕ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಇನ್ನು ಜಸ್‌ಪ್ರೀತ್‌ ಬುಮ್ರಾ ಅವರಿಗೆ ಪವರ್‌ ಪ್ಲೇ ಓವರ್‌ಗಳಲ್ಲಿ ಬೌಲಿಂಗ್‌ ನೀಡದೇ ಇರುವುದು. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಅಗತ್ಯದ ಸಂದರ್ಭದಲ್ಲಿ ಖುದ್ದಾಗಿ ಕಣಕ್ಕಿಳಿಯದೆ ಟಿಮ್ ಡೇವಿಡ್‌ ಅವರನ್ನು ಆಡಿಸಿದ್ದು. ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಫೀಲ್ಡಿಂಗ್‌ ವೇಳೆ ಅಗೌರವದಿಂದ ನಡೆಸಿಕೊಂಡಿರುವುದು ಹೀಗೆ ಹಲವು ತಪ್ಪುಗಳನ್ನು ಹಾರ್ದಿಕ್‌ ಎಸೆಗಿದ್ದು, ಮುಂಬೈ ಇಂಡಿಯನ್ಸ್‌ ಅಭಿಮಾನಿ ಬಳಗದ ಆಕ್ರೋಶಕ್ಕೆ ಕಾರಣವಾಗಿದೆ.

ಹೇಳಿ ಕೇಳಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್​ ಟೂರ್ನಿಯ ಮೋಸ್ಟ್ ಫೇವರೆಟ್ ಟೀಮ್​ಗಳಲ್ಲಿ ಒಂದು. ಅದ್ರಲ್ಲೂ ರೋಹಿತ್ ಕ್ಯಾಪ್ಟನ್ಸಿಗೆ ಫ್ಯಾಂಚೈಸಿಗಳನ್ನ ಮೀರಿ ಫ್ಯಾನ್ಸ್ ಇದ್ದಾರೆ. ಇಲ್ಲಿ ಒಂದಂತೂ ಸ್ಪಷ್ಟವಾಗಿ ಅರ್ಥ ಆಗುತ್ತೆ. ಮುಂಬೈ ಇಂಡಿಯನ್ಸ್ ಸೋತ್ರೂ ಮುಂಬೈನ ಕೆಲ ಅಭಿಮಾನಿಗಳು ಖುಷಿ ಪಡ್ತಿದ್ದಾರೆ. ಅದೂ ಕೂಡ ಪಾಂಡ್ಯ ಕ್ಯಾಪ್ಟನ್ ಅಲ್ವಾ ಸೋಲಲಿ ಬಿಡು ಅಂತಾ. ಬೇರೆ ಬೇರೆ ಪ್ರಾಂಚೈಸಿಗಳ ಫ್ಯಾನ್ಸ್ ಕೂಡ ಮುಂಬೈ ಸೋಲನ್ನ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಎಂಐ ಟೀಂ ಮಾತ್ರ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದೆ. ಗುಜರಾತ್‌ ಟೈಟನ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಎದುರು ಮುಂಬೈ ಇಂಡಿಯನ್ಸ್‌ ಹೀನಾಯ ಸೋಲುಂಡು ಅಂಕಪಟ್ಟಿಯ ಪಾತಾಳದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಏಪ್ರಿಲ್‌ 7ರಂದು ತನ್ನ 4ನೇ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ವಾಂಖೆಡೆ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ. ಹೀಗಾಗಿ ಇದೀಗ ಒಂದು ಭರ್ಜರಿ ಗೆಲುವಿಗೆ ಕಾಯುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಫ್ರಾಂಚೈಸಿ ಹಾಗೂ ನೀತಾ ಅಂಬಾನಿ ಮತ್ತೆ ರೋಹಿತ್ ಶರ್ಮಾ ಅವ್ರಿಗೇ ಕ್ಯಾಪ್ಟನ್ಸಿ ಪಟ್ಟ ಕಟ್ಟಲು ಪ್ರಯತ್ನಿಸಿದ್ದಾರೆ. ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧದ ಸೋಲಿನ ಬಳಿಕ ಈ ಮಾತುಕತೆ ನಡೆದಿದೆ. ಆದ್ರೆ ಈ ಆಫರ್​​ ಅನ್ನು ಹಿಟ್​ಮ್ಯಾನ್ ಒಪ್ಪಿಕೊಂಡಿಲ್ಲ. ಅಲ್ದೇ ಮುಂದಿನ ಸೀಸನ್​ನಲ್ಲಿ ಟೀಂ ತೊರೆಯೋದಾಗಿ ತಾವೇ ಫ್ರಾಂಚೈಸಿಗೆ ಶಾಕ್ ನೀಡಿದ್ದಾರೆ ಎನ್ನಲಾಗಿದೆ. ಅಸಲಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ಸೀಸನ್​ನಲ್ಲಿ ನಾಯಕತ್ವ ಕಿತ್ತುಕೊಂಡು ರೋಹಿತ್​ರನ್ನ ಅವಮಾನಿಸಿದೆ.

Shwetha M