HITಮ್ಯಾನ್ ಗಿಲ್ಲ ODI ಕ್ಯಾಪ್ಟನ್ಸಿ – ಆಸೀಸ್ ಸರಣಿಗೆ ಗಿಲ್ ನಾಯಕ?
PRINCE ಅಡಿ ಆಡ್ತಾರಾ RO-KO?

ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿರೋ ಭಾರತ ಮೊದಲ ಪಂದ್ಯವನ್ನ ಸೋತು ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಸೋ ಸರಣಿ ಸಮಬಲ ಆಗಿದ್ದು ಇದೀಗ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆಯುತ್ತಿರೋ ಮೂರನೇ ಪಂದ್ಯದಲ್ಲಿ ಯಾರು ಗೆಲ್ತಾರೋ ಅವ್ರು ಮುನ್ನಡೆ ಸಾಧಿಸ್ತಾರೆ. ಇದಾದ ಬಳಿಕ ಎರಡು ಪಂದ್ಯಗಳಲ್ಲಿದ್ದು ಈ ಸರಣಿಯನ್ನ ಗೆದ್ರೆ ಭಾರತ ಇತಿಹಾಸ ನಿರ್ಮಿಸಲಿದೆ. ಹಾಗೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರೇಸ್ನಲ್ಲೂ ಶುಭಾರಂಭ ಮಾಡಿದಂತಾಗುತ್ತೆ. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ಏಕದಿನ ಸರಣಿ ಕ್ಯಾಪ್ಟನ್ಸಿ ಬಗ್ಗೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಆಡೋದ್ರಿಂದ ಮುಂದಿನ ಒಡಿಐ ಸರಣಿ ಯಾವಾಗ ಅಂತಾ ಫ್ಯಾನ್ಸ್ ತಲೆಕೆಡಿಸಿಕೊಂಡು ಇರುವಾಗ್ಲೇ ಬಿಸಿಸಿಐ ಹೊಸ ನಾಯಕತ್ವದ ಸೂತ್ರ ಹೆಣೆದಿದೆ. ರೋಹಿತ್ ಶರ್ಮಾರನ್ನ ಕೆಳಗಿಳಿಸಿ ಟೀಂ ಇಂಡಿಯಾ ಪ್ರಿನ್ಸ್ ಶುಭ್ಮನ್ ಗಿಲ್ಗೇ ನಾಯಕತ್ವ ನೀಡೋ ಲೆಕ್ಕಾಚಾರದಲ್ಲಿದೆ.
ಇದನ್ನೂ ಓದಿ : ನೀರಸ ಕ್ರಿಕೆಟ್ ಎಂದ ಶುಭ್ಮನ್ ಗಿಲ್ ಗೆ ಆಂಗ್ಲರ ಟಕ್ಕರ್ – ಕ್ರಿಕೆಟ್ ಚಾನ್ಸ್ ಕೊಟ್ರೂ ಕರುಣ್ ನಾಯರ್ ಮಿಸ್ ಮಾಡೆದ್ದೆಲ್ಲಿ?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಬಳಿಕ ಶ್ರೀಲಂಕಾ ಅಥವಾ ಆಸ್ಟ್ರೇಲಿಯಾ ವಿರುದ್ಧ ಭಾರತ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಗೂ ಮುನ್ನ ಭಾರತ ಏಕದಿನ ತಂಡದ ನಾಯಕನ ಬದಲಾವಣೆ ಸಾಧ್ಯತೆ ಇದೆ. ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ. 38 ವರ್ಷದ ರೋಹಿತ್ ಶರ್ಮಾ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ. ಇನ್ನುಳಿದಿರುವುದು ಏಕದಿನ ಕ್ರಿಕೆಟ್ನಲ್ಲಿ ಮಾತ್ರ. ಇಲ್ಲಿ ಇನ್ನೊಂದು ಟ್ವಿಸ್ಟ್ ಏನಂದ್ರೆ ಕಳೆದ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಏಕದಿನ ಮಾದರಿಗೂ ನಿವೃತ್ತಿ ಘೋಷಿಸಲು ಹಿಟ್ಮ್ಯಾನ್ಗೆ ಬಿಸಿಸಿಐ ಸೂಚನೆ ನೀಡಿತ್ತು ಎನ್ನಲಾಗಿದೆ. ಹೀಗಿದ್ರೂ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ ಕಂಟಿನ್ಯೂ ಆಗಿದ್ದಾರೆ. ಜೊತೆಗೆ 2027ರ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯೋ ಆಸೆಯಲ್ಲಿದ್ದಾರೆ. ಆದ್ರೆ ಈ ವೇಳೆಗೆ ರೋಹಿತ್ ಶರ್ಮಾ ಅವರ ವಯಸ್ಸು 40 ವರ್ಷ ದಾಟಲಿದೆ. ಅಷ್ಟೇ ಅಲ್ಲದೆ ರೋಹಿತ್ ರ ಫಿಟ್ನೆಸ್ ಮತ್ತು ಫಾರ್ಮ್ ಬಗ್ಗೆಯೂ ಪ್ರಶ್ನೆಗಳಿವೆ. 2025ರ ಐಪಿಎಲ್ನಲ್ಲೂ ಫೀಲ್ಡಿಂಗ್ನಿಂದ ರೋಹಿತ್ ಹೊರಗುಳಿದಿದ್ರು. ಹೀಗಾಗಿ ಭಾರತ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಏಕದಿನ ಸರಣಿಯು ಅಕ್ಟೋಬರ್ 19 ರಂದು ಪರ್ತ್‌ನಿಂದ ಪ್ರಾರಂಭವಾಗಿ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಕೊನೆಗೊಳ್ಳಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡಲಿದ್ದು ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಕ್ರೇಜ್ನಲ್ಲಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಈಗಾಗ್ಲೇ ಏಕದಿನ ಸರಣಿಯ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಬಿಸಿಸಿಐ ಅಂದುಕೊಂಡಂತೆ ಎಲ್ಲವೂ ನಡೆದ್ರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಯುವ ನಾಯಕ ಮುನ್ನಡೆಸುವುದು ಗ್ಯಾರಂಟಿ.
ಟೀಂ ಇಂಡಿಯಾದ ನಾಯಕನಾಗಿ ರೋಹಿತ್ ಶರ್ಮಾ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವ್ರ ಹೆಸರಲ್ಲಿರೋ ದಾಖಲೆಗಳೇ ಇದಕ್ಕೆ ಸಾಕ್ಷಿ. ಸೋ 2027ರ ವಿಶ್ವಕಪ್ ವರೆಗೆ ಭಾರತ ಏಕದಿನ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮುಂದುವರಿಯಲಿ ಅನ್ನೋದು ಅಭಿಮಾನಿಗಳ ಆಸೆ. ಆದ್ರೆ ಅದು ಕಷ್ಟಸಾಧ್ಯ ಎನ್ನುವಂತೆಯೇ ಇದೆ. ಭಾರತ ಏಕದಿನ ತಂಡದ ನಾಯಕನಾಗಿ ರೋಹಿತ್ ಶರ್ಮಾರ ಸ್ಥಾನವನ್ನು ಶುಭ್ಮನ್ ಗಿಲ್ ತುಂಬಲಿದ್ದಾರೆ ಎನ್ನಲಾಗ್ತಿದೆ. ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿ ಇಟ್ಟುಕೊಂಡು ಗಿಲ್ಗೆ ಕ್ಯಾಪ್ಟನ್ ಪಟ್ಟ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ. ಅದರಂತೆ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಎನ್ನಬಹುದು.

ನೋಡಿರಿ

