ಮೈದಾನವೇ ದೇವರು.. ಮಣ್ಣೇ ಪ್ರಸಾದ – ಗಲ್ಲಿ ಹುಡುಗ ಕ್ರಿಕೆಟ್ ಲೆಜೆಂಡ್ ಆಗಿದ್ದೇಗೆ?
ವಿಶ್ವಶ್ರೇಷ್ಠ ನಾಯಕನ ಜರ್ನಿ ಹೇಗಿತ್ತು?

ಮೈದಾನವೇ ದೇವರು.. ಮಣ್ಣೇ ಪ್ರಸಾದ – ಗಲ್ಲಿ ಹುಡುಗ ಕ್ರಿಕೆಟ್ ಲೆಜೆಂಡ್ ಆಗಿದ್ದೇಗೆ?ವಿಶ್ವಶ್ರೇಷ್ಠ ನಾಯಕನ ಜರ್ನಿ ಹೇಗಿತ್ತು?

ಒಂದ್ಕಡೆ ಕಣ್ಣೀರು. ಮತ್ತೊಂದ್ಕಡೆ ಖುಷಿ. ಎರಡೂ ಒಟ್ಟೊಟ್ಟಿಗೆ ಬಂದ್ರೆ ಹೇಗಿರುತ್ತೆ ಅನ್ನೋದನ್ನ ಶನಿವಾರ ತಡರಾತ್ರಿ ಕೋಟಿ ಕೋಟಿ ಭಾರತೀಯರು ಅನುಭವಿಸಿದ್ದಾರೆ. ವಿಶ್ವಗೆದ್ದ ಟೀಂ ಇಂಡಿಯಾ ಆಟಗಾರರ ಕಣ್ಣೀರಿನ ಜೊತೆ ತಾವೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕ್ರಿಕೆಟ್ ಲೆಜೆಂಡ್ ಕೊಹ್ಲಿ, ಹಿಟ್​ಮ್ಯಾನ್ ರೋಹಿತ್ ಶರ್ಮಾ, ದ್ರೋಣಾಚಾರ್ಯ ರಾಹುಲ್ ದ್ರಾವಿಡ್, ಹಾರ್ದಿಕ್ ಪಾಂಡ್ಯ ಹೀಗೆ ತಂಡದ ಆಟಗಾರರು ಕಣ್ಣೀರಿನ ನಡುವೆಯೇ ಕುಣಿದು ಕುಪ್ಪಳಿಸಿದ್ರು. ಭಾರತವನ್ನ ವಿಶ್ವಚಾಂಪಿಯನ್ ಪಟ್ಟಕ್ಕೇರಿಸಿ 140 ಕೋಟಿ ಭಾರತೀಯರನ್ನ ಭಾವುಕರನ್ನಾಗಿಸಿದ ಕೀರ್ತಿ ರೋಹಿತ್ ಶರ್ಮಾಗೆ ಸಲ್ಲಬೇಕು. ಅಂದು ಗಲ್ಲಿ ಕ್ರಿಕೆಟ್ ಆಡ್ತಿದ್ದ ರೋಹಿತ್ ಇಂದು ವಿಶ್ವವನ್ನೇ ಗೆದ್ದಿದ್ದೇಗೆ? ಹಾಲು ಮಾರಿದ ಆಟಗಾರನ ಬದುಕು ಅಮೃತವಾಗಿದ್ದೇಗೆ? ರೋಹಿತ್ ಬರೆದ ದಾಖಲೆಗಳೆಷ್ಟು? ಅವ್ರ ಬದುಕಿನ ಕಲ್ಲುಮುಳ್ಳಿನ ದಾರಿಯ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮೈದಾನವೇ ದೇವರು.. ಮಣ್ಣೇ ಪ್ರಸಾದ – ಗಲ್ಲಿ ಹುಡುಗ ಕ್ರಿಕೆಟ್ ಲೆಜೆಂಡ್ ಆಗಿದ್ದೇಗೆ?

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಹಾಗೇ ರೋಹಿತ್ ಶರ್ಮಾ ಕೈಯಿಂದ ಐಸಿಸಿ ವಿಶ್ವಕಪ್​ಗಳು ಜಾರಿ ಹೋಗಿದ್ವು. ಫಿನಾಲೆವರೆಗೂ ಬಂದ್ರೂ ಗೆಲುವು ಮಾತ್ರ ಧಕ್ಕಿರಲಿಲ್ಲ. ಆದ್ರೆ ದಶಕದ ಟ್ರೋಫಿ ಕನಸನ್ನ ನನಸು ಮಾಡಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದೀಗ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಬಾರ್ಬೆಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಎದುರು 7 ರನ್‌ಗಳ ರಣರೋಚಕ ಗೆಲುವಿನ ಬಳಿಕ ಈ ವಿದಾಯ ಘೋಷಿಸಿದ್ದಾರೆ. 2013ರ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಬಳಿಕ ಈವರೆಗೆ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಆಯೋಜಿತ ಯಾವುದೇ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿರಲಿಲ್ಲ. ಆದ್ರೆ ಈ ಬಾರಿ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯವಾಗಿ ಫೈನಲ್‌ ತಲುಪಿ ಟ್ರೋಫಿ ಎತ್ತಿ ಹಿಡಿದಿದೆ. ಭಾರತ ತಂಡ ಟ್ರೋಫಿ ಗೆದ್ದ ಬೆನ್ನಲ್ಲೇ ವಿರಾಟ್‌ ಕೊಹ್ಲಿ ತಮ್ಮ ಟಿ20-ಐ ಕ್ರಿಕೆಟ್‌ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಫೈನಲ್‌ನಲ್ಲಿ 59 ಎಸೆತಗಳಲ್ಲಿ 76 ರನ್‌ ಸಿಡಿಸಿ ಪಂದ್ಯ ಶ್ರೇಷ್ಠ ಗೌರವ ಪಡೆದ ವಿರಾಟ್‌ ಕೊಹ್ಲಿ, ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ ವೇಳೆ ಇದು ಭಾರತ ತಂಡದ ಪರ ತಾವು ಆಡಿದ ಕಟ್ಟ ಕಡೇಯ ಟಿ20 ಪಂದ್ಯ ಎನ್ನುವ ಮೂಲಕ ನಿವೃತ್ತಿ ಘೋಷಿಸಿದರು. ಇದಾದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ರೋಹಿತ್‌ ಶರ್ಮಾ ಕೂಡ ತಮ್ಮ ಟಿ20-ಐ ವೃತ್ತಿಬದುಕು ಟ್ರೋಫಿ ಗೆಲುವಿನೊಂದಿಗೆ ಅಂತ್ಯಗೊಂಡಿದೆ ಎಂದಿದ್ದಾರೆ.

ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 7 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಗೆಲುವಿನ ಮೂಲಕ ರೋಹಿತ್ ಶರ್ಮಾ ಭಾರತದ ಪರ 50ನೇ ಟಿ20ಐ ಪಂದ್ಯ ಗೆದ್ದ ಸಾಧನೆ ಮಾಡಿದರು. ಆ ಮೂಲಕ ತಂಡವೊಂದರ ಪರ 50 ಪಂದ್ಯ ಗೆದ್ದ ಜಗತ್ತಿನ ಮೊದಲ ನಾಯಕ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾದರು. 2021ರಲ್ಲಿ ಟೀಂ ಇಂಡಿಯಾದ ಟಿ20 ತಂಡದ ನಾಯಕರಾಗಿ ನೇಮಕಗೊಂಡ ರೋಹಿತ್ ಶರ್ಮಾ ಅಂದಿನಿಂದ 61 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಬರೊಬ್ಬರಿ 50 ಪಂದ್ಯಗಳಲ್ಲಿ ಭಾರತ ಜಯಕಂಡಿದೆ. ಅವರ ನಾಯಕತ್ವದ ಗೆಲುವಿನ ಸರಾಸರಿ ಶೇ.78ರಷ್ಟಿದ್ದು, ಇದು ಜಗತ್ತಿನ ಯಾವುದೇ ತಂಡದ ನಾಯಕನ ಗೆಲುವಿನ ಸರಾಸರಿಗಿಂತ ಹೆಚ್ಚಾಗಿದೆ. ಹಾಗೇ ಭಾರತಕ್ಕೆ 2ನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿದ್ದು, ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 2007ರಲ್ಲಿ ಭಾರತ ತಂಡ ಮೊದಲ ಟಿ20 ವಿಶ್ವಕಪ್ ಗೆದ್ದಿತ್ತು. ಆಗಲೂ ರೋಹಿತ್ ಶರ್ಮಾ ಟೀಂ ಇಂಡಿಯಾದ ಭಾಗವಾಗಿದ್ದರು. 2007 ರಲ್ಲಿ, ರೋಹಿತ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 16 ಎಸೆತಗಳಲ್ಲಿ 30 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಇನ್ನು ಇನ್ನು ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶೇಕಡಾ 100ರಷ್ಟು ಗೆಲುವು ಹೊಂದಿದ ಜಗತ್ತಿನ ಮೊದಲ ನಾಯಕ ಎಂಬ ಕೀರ್ತಿಗೂ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಆ ಮೂಲಕ ಭಾರತದ ಅತ್ಯಂತ ಯಶಸ್ವಿ ನಾಯಕ ಎಂದು ಹೇಳಲಾಗುವ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಅವರಿಂದಲೂ ಸಾಧ್ಯವಾಗದ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ 2007 ರಲ್ಲಿ ಭಾರತ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಗೆದ್ದಾಗ, ಗ್ರೂಪ್ ಸ್ಟೇಜ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 10 ರನ್‌ ಸೋತಿತ್ತು. ಆದಾಗ್ಯೂ ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ರೋಹಿತ್ ಶರ್ಮಾ ಯಾವುದೇ ಪಂದ್ಯದ ವಿರುದ್ಧವೂ ಸೋಲದೇ ಅಜೇಯರಾಗಿ ಪ್ರಶಸ್ತಿಗೆ ಗೆದ್ದಿದ್ದಾರೆ.

ವಿಶ್ವಕಪ್ ಜೊತೆಗೇ ವಿದಾಯ ಹೇಳಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನ ಬರೆದು ಹೋಗಿದ್ದಾರೆ. ಸಾರ್ವಕಾಲಿಕ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಆಗಿ ರೋಹಿತ್‌ ಶರ್ಮಾ ನಿವೃತ್ತಿ ತೆಗೆದುಕೊಂಡಿದ್ದಾರೆ. ಈವರೆಗೆ ಆಡಿದ 159 ಪಂದ್ಯಗಳಲ್ಲಿ 31.34ರ ಸರಾಸರಿಯಲ್ಲಿ 4231 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 32 ಅರ್ಧಶತಕಗಳಿದ್ದು, ಬರೋಬ್ಬರಿ 5 ಶತಗಳಿವೆ. ಇದಲ್ಲದೆ 383 ಫೋರ್‌ಗಳನ್ನು ಬಾರಿಸಿದ್ದು, ವಿಶ್ವ ದಾಖಲೆಯ 205 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಟಿ20-ಐ ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ಸಿಕ್ಸರ್‌ ಸಿಡಿಸಿದ ಏಕಮಾತ್ರ ಬ್ಯಾಟರ್‌ ಆಗಿದ್ದಾರೆ. 140.89ರ ಸರಾಸರಿ ಸ್ಟ್ರೈಕ್‌ರೇಟ್‌ ಕೂಡ ಅವರದ್ದಾಗಿದೆ. 2024ರ ಟಿ-20 ಸಮರದಲ್ಲೂ ಕೂಡ ಮುಂಚೂಣಿಯಲ್ಲಿ ನಿಂತು ಭಾರತ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಆಡಿದ 8 ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಸಿಡಿಸಿದ ರೋಹಿತ್‌ ಶರ್ಮಾ, 156.70ರ ಸರಾಸರಿ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 257 ರನ್‌ಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೂಪರ್‌ 8 ಪಂದ್ಯ ಮತ್ತು ಸೆಮಿಫೈನಲ್‌ನಲ್ಲಿ ಮಹತ್ವದ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವಿಶ್ವಕಪ್​ ಗೆದ್ದ ರೋಹಿತ್​ಗೆ ಈಗ ಇಡೀ ವಿಶ್ವವೇ ಶಹಬ್ಬಾಸ್ ಎನ್ನುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಘಟಾನುಘಟಿ ನಾಯಕರೇ ಕೊಂಡಾಡುತ್ತಿದ್ದಾರೆ. ಆದ್ರೆ ಜಗತ್ತನ್ನೇ ಗೆದ್ದಿರೋ ರೋಹಿತ್ ಇಷ್ಟು ಎತ್ತರಕ್ಕೆ ಬೆಳೆಯೋದು ಸುಲಭವಾಗಿರಲಿಲ್ಲ. ಅವರ ಒಂದೊಂದು ಹೆಜ್ಜೆಯೂ ಕಲ್ಲು ಮುಳ್ಳಿನ ದಾರಿಯಾಗಿತ್ತು. ರೋಹಿತ್ ಶರ್ಮಾ ಹುಟ್ಟುತ್ತಲೇ ಏನು ಬಾಯಿಗೆ ಚಿನ್ನದ ಸ್ಪೂನ್ ಇಟ್ಟುಕೊಂಡು ಬಂದವರಲ್ಲ. ಬಡ ಕುಟುಂಬದಲ್ಲಿ ಹುಟ್ಟಿದವರು. ತಮ್ಮ ಬಾಲ್ಯದ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನ ಕಂಡಿದ್ದಾರೆ. ಸ್ಕೂಲ್ ಫೀಸ್ ಕಟ್ಟೋಕು ಕೂಡ ಅವ್ರ ಬಳಿ ಹಣ ಇರುತ್ತಿರಲಿಲ್ಲ. ಬಡತನದ ಕುಟುಂಬದಲ್ಲೇ ಬೆಳೆಯುತ್ತಿದ್ದ ರೋಹಿತ್​ಗೆ ತಾನು ಮುಂದೆ ದೊಡ್ಡ ಕ್ರಿಕೆಟರ್ ಆಗ್ಬೇಕು ಎಂಬ ಕನಸು ಮಾತ್ರ ಬೆನ್ನತ್ತಿತ್ತು. ರೋಹಿತ್ ತಂದೆ ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡಿದ್ರೆ ತಾಯಿ ಗೃಹಿಣಿಯಾಗಿದ್ದರು. ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದಿದ್ರಿಂದ ರೋಹಿತ್​ರನ್ನ ಅಜ್ಜನ ಮನೆಗೆ ಕಳಿಸಲಾಗಿತ್ತು. ಅಜ್ಜನ ಮನೆಯಲ್ಲಿ ಬೆಳೆಯುತ್ತಿದ್ದ ರೋಹಿತ್​ಗೆ ಗಲ್ಲಿ ಕ್ರಿಕೆಟ್ ಕೈ ಬೀಸಿ ಕರೆದಿತ್ತು. ಸ್ಥಳೀಯ ಮಕ್ಕಳ ಜೊತೆ ಕ್ರಿಕೆಟ್​ ಆಡ್ತಿದ್ರು. ಹುಡುಗನ ಆಸಕ್ತಿ ನೋಡಿದ ಚಿಕ್ಕಪ್ಪ ಹಾಗೋ ಹೀಗೋ ಮಾಡಿ ಕ್ರಿಕೆಟ್ ಕಿಟ್ ಕೊಡಿಸಿದ್ದರು. ಬಳಿಕ ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಅಂದ್ರೆ ಆರನೇ ಕ್ಲಾಸಿನಲ್ಲಿರುವಾಗ ರೋಹಿತ್ ಬೇಸಿಗೆ ಶಿಬಿರದಲ್ಲಿ ಬೊರಿವಲಿಯಲ್ಲಿರುವ ಸ್ಥಳೀಯ ಕ್ರಿಕೆಟ್ ಕ್ಲಬ್ ಸೇರಿದ್ದರು. ಅಚ್ಚರಿ ವಿಚಾರ ಅಂದ್ರೆ ಆರಂಭದಲ್ಲಿ ರೋಹಿತ್ ಬ್ಯಾಟ್ಸ್ ಮೆನ್ ಆಗಿ ಅಭ್ಯಾಸ ಶುರು ಮಾಡಿರಲಿಲ್ಲ. ಆಫ್​ಸ್ಪಿನ್ ಬೌಲರ್ ಆಗಿ ಆಟ ಶುರು ಮಾಡಿದ್ರು.

ಹೀಗೆ ಕ್ರಿಕೆಟ್​​ನಲ್ಲಿ ಅಂಬೆಗಾಲು ಇಡುತ್ತಿದ್ದ ರೋಹಿತ್ ಶರ್ಮಾರ ಅದೃಷ್ಟ ಬದಲಿಸಿದ್ದು ಅವರ ಕೋಚ್ ದಿನೇಶ್ ಲಾಡ್. ಶಾಲೆಯ ಕೋಚ್ ದಿನೇಶ್ ಲಾಡ್, ರೋಹಿತ್ ಶರ್ಮಾ ಟೀಂ ಹಾಗೂ ಅವರ ಟೀಂ ಪಂದ್ಯವನ್ನು ನೊಡ್ತಿದ್ರು. ಈ ವೇಳೆ ರೋಹಿತ್ ಶರ್ಮಾ ಆಟ ಅವರ ಗಮನ ಸೆಳೆದಿತ್ತು. ಬಳಿಕ ರೋಹಿತ್​ರನ್ನ ತಮ್ಮ ಸ್ಕೂಲಿಗೆ ಸೇರಿಸುವಂತೆ ಅಜ್ಜನ ಬಳಿ ಕೇಳಿದ್ದರು. ಆದ್ರೆ ಅವರ ಬಳಿ ಹಣವಿರಲಿಲ್ಲ. ಆಗ ದಿನೇಶ್ ಲಾಡ್, ಮ್ಯಾನೇಜ್ಮೆಂಟ್ ಜೊತೆ ಮಾತನಾಡಿ ರೋಹಿತ್ ಶರ್ಮಾ, ಸ್ಕೂಲ್ ಪ್ರವೇಶ ಮಾಡುವಂತೆ ಮಾಡಿದ್ದರು. ಬಹುಶಃ ಅಂದು ದಿನೇಶ್ ಲಾಡ್ ರೋಹಿತ್​ರನ್ನ ಸ್ಕೂಲಿಗೆ ಸೇರಿಸದೆ ಹೋಗಿದ್ರೆ ಭಾರತಕ್ಕೆ ಇಂಥ ಅಧ್ಬುತ ಆಟಗಾರ ಸಿಗ್ತಾ ಇರ್ಲಿಲ್ವೋ ಏನೋ. ಸ್ಕೂಲ್ ಗೆ ದಾಖಲಾದ ರೋಹಿತ್ ಶರ್ಮಾ ಬಳಿ ಕ್ರಿಕೆಟ್ ಕಿಟ್ ತೆಗೆದುಕೊಳ್ಳೋಕೂ ಹಣವಿರಲಿಲ್ಲ. ಆದ್ರೆ ತಾನೊಬ್ಬ ಕ್ರಿಕೆಟರ್ ಆಗ್ಬೇಕು ಅನ್ನೋ ಛಲದಿಂದ ಹಾಲು ಮಾರಾಟ ಮಾಡಿದ್ದರು. ಹಾಲು ಮಾರಾಟ ಮಾಡಿ ಬಂದ ಹಣವನ್ನು ಕ್ರಿಕೆಟ್ ಕಿಟ್ ಖರೀದಿಗೆ ಬಳಸಿದ್ದರು. ಆರಂಭದಲ್ಲಿ 8 -9ನೇ ಕ್ರಮಾಂಕದಲ್ಲಿ ಆಡ್ತಿದ್ದ ರೋಹಿತ್ ಸಾಮರ್ಥ್ಯ ನೋಡಿದ ಕೋಚ್, ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವಂತೆ ಹೇಳಿದ್ದರು. ಇಂಟರ್-ಸ್ಕೂಲ್  ಗೈಲ್ಸ್ ಶೀಲ್ಡ್ ಪಂದ್ಯಾವಳಿಯಲ್ಲಿ ಮೊದಲ ಬಾರಿ ರೋಹಿತ್, ಬ್ಯಾಟಿಂಗ್​ನಲ್ಲೇ ಅಬ್ಬರಿಸಿದ್ದರು. ಮೊದಲ ಪಂದ್ಯದಲ್ಲೇ 120 ರನ್ ಕಲೆ ಹಾಕಿದ್ದರು. ಇಲ್ಲಿಂದಲೇ ಅವರ ಕ್ರಿಕೆಟ್ ಜೀವನ ಕಂಪ್ಲೀಟ್ ಚೇಂಜ್ ಆಗಿತ್ತು. ಅಂದು ಕ್ರಿಕೆಟ್​ಗಾಗಿ ಹಾಲು ಮಾರಾಟ ಮಾಡಿದ್ದ ರೋಹಿತ್​ ಇಂದು ಅದೇ ಕ್ರಿಕೆಟ್​​ನಿಂದ ನಿವ್ವಳ ಆದಾಯ 200 ಕೋಟಿಗೂ ಹೆಚ್ಚಿದೆ.

ರೋಹಿತ್ ಬಗ್ಗೆ ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ಸಮಯಕ್ಕಿಂತ ದೊಡ್ಡ ಪಾಠ ಇನ್ನೊಂದಿಲ್ಲ ಎಂಬುದಕ್ಕೆ ರೋಹಿತ್​ರೇ ಒಂದು ಜೀವಂತ ಉದಾಹರಣೆ. ಜಸ್ಟ್ ಆರೇ ಆರು ತಿಂಗಳ ಹಿಂದಷ್ಟೇ. ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದ ನಾಯಕನನ್ನು ನಿರ್ದಾಕ್ಷಿಣ್ಯವಾಗಿ ನಾಯಕನ ಪಟ್ಟದಿಂದ ಕಿತ್ತು ಹಾಕಲಾಗಿತ್ತು. ಬಹುಶಃ ರೋಹಿತ್ ಬಳಿ ಡೈರೆಕ್ಟ್ ಆಗಿ, ನೀವು ಇನ್ನು ಮುಂದೆ ತಂಡದ ನಾಯಕನಾಗಿರುವುದಿಲ್ಲ, ನಿಮ್ಮ ಸೇವೆ ಸಾಕು, ಬೇರೆಯವರಿಗೆ ಪಟ್ಟಾಭಿಷೇಕಕ್ಕೆ ನಾವು ನಿರ್ಧರಿಸಿದ್ದೇವೆ ಅಂತಾ ಒಂದೇ ಒಂದು ಮಾತು ಹೇಳಿದ್ರೂ ಸಾಕಿತ್ತು. ರೋಹಿತ್ ಶರ್ಮಾ ತಾನೇ ತಾನಾಗಿ ನಾಯಕತ್ವದಿಂದ ಕೆಳಗೆ ಇಳಿದು ಬಿಡ್ತಿದ್ರು. ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದು ನಾಯಕರ ನಾಯಕ ಎನಿಸಿಕೊಂಡ ಮಹೇಂದ್ರ ಸಿಂಗ್ ಧೋನಿಗೆ ಸರಿಸಮನಾಗಿ ನಿಂತಿದ್ದವರಿಗೆ ಇನ್ನೂ ಸಾಧಿಸುವುದು ಏನೂ ಇರಲಿಲ್ಲ. ಆದ್ರೆ ಎಲ್ಲವನ್ನೂ ದುಡ್ಡಲ್ಲೇ ಅಳೆಯುವ ಮಂದಿಗೆ ಒಬ್ಬ ವಿಶ್ವಶ್ರೇಷ್ಠ ಆಟಗಾರನನ್ನ ಹೇಗೆ ನಡೆಸಿಕೊಳ್ಳಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಾಗಿತ್ತು. ಅಷ್ಟೇ ಅಲ್ಲದೆ ಐಪಿಎಲ್ ಟೂರ್ನಿಯುದ್ದಕ್ಕೂ ರೋಹಿತ್ ಶರ್ಮಾರಿಗೆ ಮುಜುಗರ, ಅವಮಾನವಾಗುವಂಥಾ ಸಾಕಷ್ಟು ಘಟನೆಗಳು ನಡೆದ್ವು. ಮೈದಾನದ ಮೂಲೆ ಮೂಲೆಗೂ ಓಡುವಂತಾಗಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ರೋಹಿತ್ ಬ್ಯಾಟ್​ನಿಂದ ರನ್ನೂ ಬರಲಿಲ್ಲಿ. ಆದ್ರೆ ರೋಹಿತ್ ಶರ್ಮಾ ಎಲ್ಲವನ್ನೂ ಶಾಂತಚಿತ್ತದಲ್ಲೇ ಎದುರಿಸಿದ್ದರು. ಮನಸ್ಸಲ್ಲಿ ಬೆಟ್ಟದಷ್ಟು ನೋವಿದ್ರೂ ಹೊರಜಗತ್ತಿಗೆ ತೋರಿಸಲೇ ಇಲ್ಲ. ನನಗಾಗಿ ಸಮಯ ಬಂದೇ ಬರುತ್ತೆ ಎಂದು ಕಾದಿದ್ದ ರೋಹಿತ್​ಗೆ ಕೊನೆಗೂ ತನ್ನ ದಿನ ಬಂದಿದೆ. ಅಂದು ಒಂದು ಫ್ರಾಂಚೈಸಿಯಲ್ಲಿ ಆಗಿದ್ದ ನೋವು, ಅವಮಾನಗಳಿಗೆಲ್ಲಾ ವಿಶ್ವಕಪ್​ನೇ ಗೆದ್ದು ಇಡೀ ವಿಶ್ವದಲ್ಲೇ ಶ್ರೇಷ್ಠ ನಾಯಕ ಎನಿಸಿಕೊಂಡಿದ್ದಾರೆ. 17 ವರ್ಷಗಳ ನಂತರ ಭಾರತಕ್ಕೆ ಮಿನಿ ವಿಶ್ವಕಪ್ ಗೆಲ್ಲಿಸಿ ಕೊಟ್ಟಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ರೋಗಹಿತ್ ಆಟಕ್ಕೆ ಸರಿ ಸಾಟಿಯೇ ಇಲ್ಲ. ರನ್ ಮಷಿನ್ ವಿರಾಟ್ ಕೊಹ್ಲಿ ಪದೇ ಪದೇ ಮುಗ್ಗರಿಸುತ್ತಿದ್ರು. ಫೈನಲ್​ವರೆಗೂ ಗ್ರಹಣ ಹಿಡಿದ ಸೂರ್ಯನಂತೆ ಕೊಹ್ಲಿ ಆಟಕ್ಕೆ ಗ್ರಹಣ ಹಿಡಿದಿತ್ತು. ಅಂಥಾ ಟೈಮಲ್ಲೂ ರೋಹಿತ್ ತನ್ನ ಗೆಳೆಯನನ್ನ ಬಿಟ್ಟು ಕೊಡ್ಲಿಲ್ಲ. ತಾವೇ ಮುಂದೆ ನಿಂತು ತಂಡವನ್ನ ಗೆಲುವಿನ ದಡ ಮುಟ್ಟಿಸುತ್ತಿದ್ರು. ಇತ್ತ ವಿರಾಟ್ ಕೂಡ ತನ್ನ ಗೆಳೆಯ ಇಟ್ಟ ನಂಬಿಕೆಯನ್ನ ಫೈನಲ್ ಮ್ಯಾಚ್​ನಲ್ಲಿ ಉಳಿಸಿಕೊಂಡಿದ್ರು. ಇನ್ನು ರೋಹಿತ್ ಶರ್ಮಾಗೆ ಈ ವಿಶ್ವಕಪ್ ಎಷ್ಟು ಮುಖ್ಯವಾಗಿತ್ತು ಅನ್ನೋದಕ್ಕೆ ಮತ್ತೊಂದು ಘಟನೆಯನ್ನ ನಾವಿಲ್ಲಿ ಹೇಳಲೇಬೇಕು. ಭಾರತದ ಅಭೂತಪೂರ್ವ ಗೆಲುವಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತುಂಬಾ ಭಾವುಕರಾಗಿ ಕಣ್ಣೀರಿಟ್ಟರು. ಮೈದಾನದಲ್ಲಿ ಮಲಗಿ ಸಾರ್ಥಕತೆಯಲ್ಲಿ ಸಂಭ್ರಮಿಸಿದ್ರು. ತುಂಬಾ ಹೊತ್ತು ಬಾರ್ಬಡೋಸ್ ಪಿಚ್‌ ಅನ್ನೇ  ನೋಡಿದ ರೋಹಿತ್ ಕೊನೆಗೆ ಅದೇ ಮಣ್ಣನ್ನ ಎತ್ತಿಕೊಂಡು ಸವಿದಿದ್ದಾರೆ. ಚಾಂಪಿಯನ್ ಪಟ್ಟಕ್ಕೇರಿಸಿದ ಮಣ್ಣನ್ನ ತಿನ್ನುವ ಮೂಲಕ ಧನ್ಯತಾಭಾವದಲ್ಲಿ ಭೂಮಿತಾಯಿಗೆ ನಮಿಸಿದ್ದಾರೆ. ಇದೇ ಅಲ್ವಾ ಸಾಧನೆ ಅಂದ್ರೆ.

Shwetha M

Leave a Reply

Your email address will not be published. Required fields are marked *