ಅಭಿಮಾನಿಗೆ 4 ಕೋಟಿ ಮೌಲ್ಯದ ಕಾರ್ ಗಿಫ್ಟ್ ಕೊಟ್ಟ ಹಿಟ್‌ಮ್ಯಾನ್!

ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಜಾಹಿರಾತಿನಲ್ಲಿ ಆಗಾಗ ಕಾಣಿಸಿಕೊಳ್ತಾರೆ. ಐಪಿಎಲ್ ಆರಂಭಕ್ಕೂ ಮುನ್ನ ಒಂದು ಜಾಹಿರಾತಿನಲ್ಲಿ ಅಭಿಮಾನಿಯೊಬ್ಬರಿಗೆ ತಮ್ಮ ಅಚ್ಚುಮೆಚ್ಚಿನ ಕಾರ್ ಗಿಫ್ಟ್ ಕೊಡೋದಾಗಿ ಹೇಳಿದ್ರು.. ಇದೀಗ ಹಿಟ್‌ಮ್ಯಾನ್ ನುಡಿದಂತೆ ನಡೆದಿದ್ದಾರೆ. ಫ್ಯಾಂಟಸಿ ಕ್ರಿಕೆಟ್ ಸ್ಪರ್ಧೆಯಲ್ಲಿ ವಿಜೇತನಾದ ಅಭಿಮಾನಿಗೆ ರೋಹಿತ್ ಶರ್ಮಾ ತನ್ನ ಫೇವರೆಟ್ ಕಾರ್ ಐಕಾನಿಕ್ ನೀಲಿ ಲ್ಯಾಂಬೊರ್ಗಿನಿ ಉರುಸ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಇದನ್ನೂ ಓದಿ: ಮೂರು ಸಲ ಫೈನಲ್.. 10ನೇ ಸಲ ಪ್ಲೇಆಫ್ – ಈ ಸಲ ಕಪ್ ಗೆಲ್ಲುತ್ತಾ ಬೆಂಗಳೂರು ಟೀಂ?
ಐಪಿಎಲ್ 2025 ಕ್ಕೂ ಮೊದಲು, ರೋಹಿತ್ ಸೇರಿದಂತೆ ಅನೇಕ ಕ್ರಿಕೆಟಿಗರು Dream11 ಅಪ್ಲಿಕೇಶನ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನಲ್ಲಿ, ರೋಹಿತ್ ತನ್ನ ಲ್ಯಾಂಬೋರ್ಗಿನಿ ಉರುಸ್ ಅನ್ನು ಅದೃಷ್ಟಶಾಲಿ ವಿಜೇತರಲ್ಲಿ ಒಬ್ಬರಿಗೆ ನೀಡುವುದಾಗಿ ಹೇಳಿದ್ದರು. ಈಗ ರೋಹಿತ್ ಅಭಿಮಾನಿಗೆ ಕಾರಿನ ಕೀಲಿಯನ್ನು ಹಸ್ತಾಂತರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ವೈರಲ್ ಆಗಿದೆ. ಈ ಕಾರಿನ ಭಾರತದಲ್ಲಿ ಸುಮಾರು 4 ಕೋಟಿ ರೂ. ಇದೆ.
ಈ ಸ್ಟೈಲಿಶ್ ಐಷಾರಾಮಿ ಕಾರಿನೊಂದಿಗೆ ಬಹಳ ಹಿಂದಿನಿಂದಲೂ ರೋಹಿತ್ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇದು ಅವರ ಏಕದಿನ ಪಂದ್ಯಗಳಲ್ಲಿ ವಿಶ್ವ ದಾಖಲೆಯ 264 ರನ್ ಇನ್ನಿಂಗ್ಸ್‌ಗೆ ಗೌರವವಾಗಿ ಒಲಿದುಬಂದ ಕಾರು. 38 ವರ್ಷದ ಬ್ಯಾಟ್ಸ್‌ಮನ್ ತಮ್ಮ ನೀಲಿ ಲ್ಯಾಂಬೊದಲ್ಲಿ ನಗರದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಸುತ್ತಾಡುತ್ತಿದ್ದರು.
67 ಪಂದ್ಯಗಳಲ್ಲಿ 12 ಶತಕಗಳು ಮತ್ತು 18 ಅರ್ಧ ಶತಕಗಳು ಸೇರಿದಂತೆ 4,301 ರನ್ ಗಳಿಸಿದ ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜೊತೆಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮುಂಬರುವ ಐದು ಟೆಸ್ಟ್ ಸರಣಿಗೆ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.
ಐಪಿಎಲ್ 2025ರ ಆವೃತ್ತಿಯಲ್ಲಿ ಮುಂಬೈ ತಂಡ ಪ್ಲೇ-ಆಫ್ ಹಂತದಲ್ಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಪ್ಲೇ-ಆಫ್ ಸ್ಥಾನಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತೀವ್ರ ಪೈಪೋಟಿ ನಡೆಸಬೇಕಾಗಿದೆ. ಪ್ರಸ್ತುತ ಮುಂಬೈ ತಂಡ 12 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಏಳರಲ್ಲಿ ಗೆದ್ದಿದ್ದು, ಒಟ್ಟು 14 ಅಂಕಗಳನ್ನು ಗಳಿಸಿದೆ.
ಡಿಸಿ ತಂಡವು 12 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಗಳಿಸಿದೆ. ಎರಡೂ ತಂಡಗಳು ಬುಧವಾರ ಮುಖಾಮುಖಿಯಾಗಲಿದ್ದು, ಎಂಐ ತಂಡವು ಡಿಸಿ ತಂಡವನ್ನು ಸೋಲಿಸಿದರೆ, ಅವರು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಾರೆ.