KKRಗೆ ಕ್ಯಾಪ್ಟನ್ ಆಗ್ಬೇಕೆಂದ ರೋಹಿತ್..- MI ಬಿಡ್ತಾರಾ ಬುಮ್ರಾ, ಸೂರ್ಯ?

KKRಗೆ ಕ್ಯಾಪ್ಟನ್ ಆಗ್ಬೇಕೆಂದ ರೋಹಿತ್..- MI ಬಿಡ್ತಾರಾ ಬುಮ್ರಾ, ಸೂರ್ಯ?

ಐಪಿಎಲ್​ನಲ್ಲಿ ಹೀನಾಯ ಆರಂಭ ಪಡೆದಿದ್ದ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಮೊದಲ ಜಯ ಗಳಿಸಿದೆ. ಈ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್​ನಲ್ಲಿ 8ನೇ ಸ್ಥಾನಕ್ಕೆ ಜಿಗಿದಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಟೀಮ್​ಗೆ ಒಂದು ವಿಕ್ಟರಿ ಬೂಸ್ಟ್ ನೀಡಿದ್ರೂ ಕೂಡ ಟೀಮ್​ವೊಳಗಿನ ಕಿಡಿ ಮಾತ್ರ ಆರೋಕೆ ಸಾಧ್ಯನೇ ಇಲ್ಲ. ಅದುವೇ ರೋಹಿತ್ ಶರ್ಮಾರ ಕ್ಯಾಪ್ಟನ್ಸಿ ವಿವಾದ. ಎಂಐ ಟೀಮ್​ನ ಸಾರಥ್ಯವನ್ನ ಹಿಟ್​ಮ್ಯಾನ್​ರಿಂದ ಕಸಿದು ಹಾರ್ದಿಕ್ ಪಾಂಡ್ಯಾಗೆ ನೀಡಿದಾಗಲೇ ತಂಡದೊಳಗಿನ ಒಗ್ಗಟ್ಟು ಛಿದ್ರವಾಗಿತ್ತು. ಒಲ್ಲದ ಮನಸ್ಸಿಂದ ರೋಹಿತ್ ಶರ್ಮಾ ಟೀಮ್​ನಲ್ಲೇ ಇದ್ರೂ ಕೂಡ ಒಂದು ಕಾಲನ್ನ ಹೊರಗೆ ಇಟ್ಟಿದ್ದಾರೆ ಎಂದೇ ಹೇಳಲಾಗ್ತಿದೆ. ಇದ್ರ ನಡುವೆ ರೋಹಿತ್ ಶರ್ಮಾ ನೀಡಿದ್ದ ಹೇಳಿಕೆಯೊಂದು ಹಲ್​ಚಲ್ ಸೃಷ್ಟಿಸಿದೆ. ಅದುವೇ ಕೆಕೆಆರ್ ತಂಡಕ್ಕೆ ಕ್ಯಾಪ್ಟನ್ ಆಗಬೇಕೆಂದು ಹಿಟ್​ಮ್ಯಾನ್ ನೀಡಿದ್ದ ಹೇಳಿಕೆ.. ಹಾಗಾದ್ರೆ ರೋಹಿತ್ ಶರ್ಮಾ ಮುಂಬೈ ಬಿಡೋದು ಪಕ್ಕಾನಾ..? ಕೆಕೆಆರ್​ಗೆ ನಾಯಕನಾಗ್ತಾರಾ..? ರೋಹಿತ್ ಜೊತೆಗೆ ಮತ್ತೆ ಯಾವೆಲ್ಲಾ ಪ್ಲೇಯರ್ಸ್ ಟೀಂ ಬಿಡಬಹುದು..? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೆಕೆಆರ್​​, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ರೋಚಕ ಪಂದ್ಯ – ಸಿಎಸ್‌ಕೆಗೆ 7 ವಿಕೆಟ್‌ಗಳ ಜಯ

ಮುಂಬೈ ಇಂಡಿಯನ್ಸ್​​ನಲ್ಲಿ ಎಲ್ಲವೂ ಸರಿ ಇದ್ದಂತೆ ಕಂಡ್ರೂ ಸಮಸ್ಯೆ ಇದೆ ಅನ್ನೋದಂತೂ ಕ್ರಿಕೆಟ್ ಫ್ಯಾನ್ಸ್​​ಗೆ ಗೊತ್ತೇ ಇದೆ. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸಂಬಂಧ ಕೂಡ ಅಷ್ಟಕ್ಕಷ್ಟೇ.. ಹೀಗಾಗಿ  ರೋಹಿತ್ ಮುಂದಿನ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತೊರೆಯಬಹುದು ಎನ್ನಲಾಗುತ್ತಿದೆ. ಇದ್ರ ನಡುವೆ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಬೇರೆ ಯಾವುದೇ ತಂಡದ ನಾಯಕರಾಗಲು ಬಯಸುತ್ತಾರೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. 5 ಬಾರಿ ಐಪಿಎಲ್ ವಿಜೇತ ನಾಯಕ ತೆಗೆದುಕೊಂಡ ತಂಡದ ಹೆಸರು ಸ್ವಲ್ಪ ಆಶ್ಚರ್ಯಕರವಾಗಿದೆ. ಏಕೆಂದರೆ ರೋಹಿತ್ ಮುಂಬೈ ಹೊರತುಪಡಿಸಿ ಈ ತಂಡದ ಹೆಸರು ಸೂಚಿಸಿದ್ದಾರೆ.

ರೋಹಿತ್ ಕೆಕೆಆರ್ ಕ್ಯಾಪ್ಟನ್! 

ಹಳೆಯ ಸಂದರ್ಶನವೊಂದರಲ್ಲಿ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತೊರೆದರೆ, ಯಾವ ಫ್ರಾಂಚೈಸಿಯನ್ನು ಮುನ್ನಡೆಸುತ್ತಾರೆ ಎಂದು  ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, ಈಡನ್ ಗಾರ್ಡನ್ಸ್ ನನ್ನ ನೆಚ್ಚಿನ ಮೈದಾನ. ನನ್ನ ಕ್ರಿಕೆಟ್ ಜೀವನದ ಹಲವು ಘಟನೆಗಳು ಅಲ್ಲಿ ನಡೆದಿವೆ. ಹಾಗಾಗಿ ನಾನೇ ನಾಯಕತ್ವ ವಹಿಸಬೇಕಾದರೆ ಕೆಕೆಆರ್‌ ಅನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ. ಇದೀಗ ಐಪಿಎಲ್ 2024ರಲ್ಲಿ ಹಳೆಯ ವಿಡಿಯೋ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದೆ. ಆದರೂ ಈ ವಿಚಾರವಾಗಿ ರೋಹಿತ್ ಶರ್ಮಾ ಬಾಯಿ ಬಿಟ್ಟಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಆರಂಭವನ್ನು ಹೊಂದಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ ಉತ್ತಮವಾಗಿ ಪ್ರಾರಂಭಿಸಿದೆ. ಗೌತಮ್ ಗಂಭೀರ್ ಮೆಂಟರ್ ಆದ ನಂತರ ಅಭಿಮಾನಿಗಳು ಮತ್ತೊಂದು ಬಾರಿ ಕೆಕೆಆರ್ ಕಪ್‌ ಗೆಲ್ಲೋದನ್ನು ನೋಡುತ್ತಿರುವಂತಿದೆ.

ಐಪಿಎಲ್​ನ ಕೋಟಿ ಕೋಟಿ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಮುಂಬೈ ಟೀಮ್​ನಲ್ಲಿ ಮುಂದುವರಿದಿರೋದು ಇಷ್ಟ ಇಲ್ಲ. ನೀವು ಎಂಐ ಟೀಂ ಬಿಟ್ಟು ಬೇರೆ ತಂಡ ಸೇರಿಕೊಳ್ಳಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡುತ್ತಲೇ ಇದ್ದಾರೆ. ಹೀಗಾಗಿ ಮುಂದಿನ ವರ್ಷದ ಹರಾಜಿನಲ್ಲಿ ರೋಹಿತ್ ಶರ್ಮಾ ಬೇರೆ ಟೀಂ ಕಡೆ ಮುಖ ಮಾಡುವ ಸಾದ್ಯತೆ ಇದೆ. ಹಾಗೇ ಎಂಐ ಟೀಮ್​ನ ಬೇರೆ ಆಟಗಾರರು ಕೂಡ ತಂಡ ಬಿಡುತ್ತಾರೆ ಎನ್ನಲಾಗುತ್ತಿದೆ.

ಮುಂಬೈನಿಂದ ಮೂವರು ಔಟ್?  

ಮುಂಬೈ ತಂಡದ ಮೂವರು ಸ್ಟಾರ್ ಪ್ಲೇಯರ್ಸ್, ಮುಂದಿನ ವರ್ಷದ ಆಕ್ಷನ್‌ಗೆ ಹೋಗಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದ್ರಲ್ಲೂ ರೋಹಿತ್ ಶರ್ಮಾ ಮೊದಲಿಗರು. ಮುಂಬೈ ಇಂಡಿಯನ್ಸ್‌ಗೆ ಬರೋಬ್ಬರಿ ಐದು ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ನಾಯಕ. ಮುಂಬೈ ಗೆದ್ದಿರುವ ಐದಕ್ಕೆ ಐದು ಟ್ರೋಫಿಯೂ ರೋಹಿತ್ ನಾಯಕತ್ವದಲ್ಲೇ ಗೆದ್ದಿದೆ. ಇಂತಹ ಅದ್ಭುತ ನಾಯಕ ರೋಹಿತ್‌ಗೆ ಹೇಳದೆ ಕೇಳದೆ ನಾಯಕತ್ವದಿಂದ ತೆಗೆದುಹಾಕಿದ್ರೆ ಯಾರು ತಾನೆ ಸುಮ್ಮನಿರುತ್ತಾರೆ ಹೇಳಿ. ಕ್ಯಾಪ್ಟನ್ಸಿ ಹೋಗಿರುವ ಬಗ್ಗೆ ರೋಹಿತ್ ಎಲ್ಲೂ ಮಾತನಾಡಿಲ್ಲ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡುತ್ತಿದ್ದಾರೆ. ಆದ್ರೆ ಫೀಲ್ಡ್‌ನಲ್ಲಿ ಮನಸ್ಸು ಕೇಳಬೇಕಲ್ವಾ..? ಫೀಲ್ಡಿಂಗ್ ಸೆಟ್ ಮಾಡೋ ವಿಷ್ಯದಲ್ಲಿ, ಬೌಲಿಂಗ್ ಚೇಂಜ್ ಮಾಡೋ ವಿಷ್ಯದಲ್ಲಿ ಪಾಂಡ್ಯ ಜೊತೆ ಸಣ್ಣ ಪುಟ್ಟ ತಿಕ್ಕಾಟಗಳು ಆಗಿವೆ. ಪಾಂಡ್ಯ ಕಳಪೆ ಕ್ಯಾಪ್ಟನ್ಸಿ ನೋಡಿ ಬೇಸತ್ತಿರುವ ರೋಹಿತ್, ಫ್ರಾಂಚೈಸಿ ಮೇಲೂ ಮುನಿಸಿಕೊಂಡಿದ್ದಾರೆ. ಈಗ ಅವರ ಕಣ್ಣು ಮುಂದಿನ ಮೆಗಾ ಆಕ್ಷನ್ ಮೇಲೆ ಬಿದ್ದಿದೆ. ಈ ಸಲ ಮುಂಬೈ ಪರ ಆಡಿ ನೆಕ್ಟ್ಸ್ ಬಿಡ್‌ಗೆ ಹೋಗೋ ಪ್ಲಾನ್​ನಲ್ಲಿದ್ದಾರೆ. ಹಾಗೇ ಪಾಂಡ್ಯ ಅವರನ್ನ ಮುಂಬೈ ಕ್ಯಾಪ್ಟನ್ ಮಾಡಿದ್ದು ವೇಗಿ ಜಸ್ಪ್ರೀತ್ ಬುಮ್ರಾಗೂ ಇಷ್ಟವಿಲ್ಲ. ಟೀಂ ಇಂಡಿಯಾ ಪರವೇ ಮೊದಲ ಓವರ್ ಬೌಲಿಂಗ್ ಮಾಡೋ ಬುಮ್ರಾಗೆ, ಐಪಿಎಲ್​ನಲ್ಲಿ 4-5ನೇ ಓವರ್ ಬೌಲಿಂಗ್ ಕೊಡ್ತಿದ್ದಾರೆ ಪಾಂಡ್ಯ. ಇದಕ್ಕಿಂತ ಅವಮಾನ ಬೇಕಾ. ಇನ್ನು ಬುಮ್ರಾ ಬೌಲಿಂಗ್‌ಗೆ ಸರಿಯಾಗಿ ಫೀಲ್ಡ್ ಸಹ ಸೆಟ್ ಮಾಡ್ತಿಲ್ಲ. ಈ ಎಲ್ಲದರಿಂದ ಬೇಸತ್ತಿರುವ ಬುಮ್ರಾ ಸಹ, ಮುಂದಿನ ಸೀಸನ್ನಲ್ಲಿ ಮೆಗಾ ಹರಾಜಿಗೆ ಹೋಗಲು ಪ್ಲಾನ್ ಮಾಡಿದ್ದಾರೆ. ಹಾಗೇ ಸೂರ್ಯಕುಮಾರ್ ಯಾದವ್‌ಗೂ ಸಹ ಪಾಂಡ್ಯ ಮುಂಬೈ ಕ್ಯಾಪ್ಟನ್ ಆಗಿರೋದು ಇಷ್ಟವಿಲ್ಲ. ಪಾಂಡ್ಯ ಕ್ಯಾಪ್ಟನ್ ಎಂದು ಮುಂಬೈ ಘೋಷಿಸಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹಾರ್ಟ್ ಬ್ರೇಕ್ ಪೋಸ್ಟ್ ಹಾಕಿ ತಮ್ಮ ಅಸಮಧಾನವನ್ನ ಹೊರ ಹಾಕಿದ್ರು. ಈಗ ಈ ಸೀಸನ್ ಅನ್ನ ಮುಂಬೈ ಪರ ಆಡಿ, ಮುಂದಿನ ಸೀಸನ್ಗೆ  ಮೆಗಾ ಆಕ್ಷನ್‌ಗೆ ಹೋಗಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

ರೋಹಿತ್ ಶರ್ಮಾ, ಜಸ್​​ಪ್ರೀತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಮುಂಬೈ ಪಾಲಿನ ಹೀರೋಗಳು. ಹಾಗೇನಾದ್ರೂ ಈ ಮೂರೂ ಜನ ಟೀಮ್​ನಿಂದ ಹೊರ ಬಂದಿದ್ದೇ ಆದಲ್ಲಿ ಮುಂಬೈ ಖಾಲಿ ಮನೆಯಾಗಲಿದೆ. ಒಟ್ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಮಾಡಿದ್ಮೇಲೆ ತಂಡದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ಮುಂಬೈ ಟೀಮ್ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮೊದಲ ಮೂರು ಪಂದ್ಯದಲ್ಲಿ ಜಗಜ್ಜಾಹೀರವಾಗಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಬೇಕಿದ್ದ ಮುಂಬೈ ಇಂಡಿಯನ್ಸ್, ಹ್ಯಾಟ್ರಿಕ್ ಸೋಲು ಅನುಭವಿಸಿ ನಾಲ್ಕನೇ ಮ್ಯಾಚ್  ಗೆದ್ದಿದೆ. ಹಾಗೇನಾದ್ರೂ ಮುಂದಿನ ಐಪಿಎಲ್ ನಲ್ಲಿ ಈ ಮೂವರು ಕೈಕೊಟ್ರೆ ಅಂಬಾನಿ ಬ್ರಿಗೇಡ್ ಗತಿ ಅದೋಗತಿ ಅಷ್ಟೇ.

Shwetha M