HITಮ್ಯಾನ್ ಸೆಂಚುರಿ RETURNS – ಕೊಹ್ಲಿ & ಕೆಎಲ್ ಸಿಡಿಯೋದು ಯಾವಾಗ?

HITಮ್ಯಾನ್ ಸೆಂಚುರಿ RETURNS – ಕೊಹ್ಲಿ & ಕೆಎಲ್ ಸಿಡಿಯೋದು ಯಾವಾಗ?

ಭಾನುವಾರ ನಡೆದ ಭಾರತ ವರ್ಸಸ್ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ  ಗೆದ್ದು ಬೀಗಿದೆ. ಟಿ-20 ಟೀಮ್​ನಂತೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನೂ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಸತತ 7 ಏಕದಿನ ಸರಣಿಗಳನ್ನು ಗೆದ್ದ ದಾಖಲೆ ನಿರ್ಮಿಸಿದೆ. ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಒಳ್ಳೆ ಬ್ಯಾಟಿಂಗ್ ಮಾಡಿತ್ತು. ಬೆನ್ ಡಕೆಟ್ ಮತ್ತು ಜೋ ರೂಟ್ ಅವರ ಆಫ್ ಸೆಂಚುರಿಯಿಂದಾಗಿ 49.5 ಓವರ್‌ಗಳಲ್ಲಿ 10 ವಿಕೆಟ್‌ಗೆ 304 ರನ್ ಗಳಿಸಿತು. ಈ ಸ್ಕೋರ್ ಬೆನ್ನಟ್ಟಿದ ಭಾರತ ತಂಡ ರೋಹಿತ್ ಶರ್ಮಾ ಅವರ ಪವರ್ ಫುಲ್ ಪರ್ಫಾಮೆನ್ಸ್​ನಿಂದ 44.3 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ  : ಚಾಂಪಿಯನ್ಸ್ ಟ್ರೋಫಿಗಿಲ್ಲ ಸ್ಟಾರ್ಸ್ – ಬುಮ್ರಾ, ಕಮಿನ್ಸ್, ಸೈಮ್.. ಯಾರೆಲ್ಲಾ ಔಟ್?  

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಬೆನ್ ಡಕೆಟ್ 65 ರನ್ ಕಲೆಹಾಕಿದರೆ, ಜೋ ರೂಟ್ 69 ರನ್‌ಗಳ ಇನ್ನಿಂಗ್ಸ್ ಆಡಿದರು. ರೂಟ್ ಮತ್ತು ಡಕೆಟ್ ಹೊರತುಪಡಿಸಿ, ಲಿಯಾಮ್ ಲಿವಿಂಗ್‌ಸ್ಟೋನ್ 32 ಎಸೆತಗಳಲ್ಲಿ 41 ರನ್ ಗಳಿಸಿದರು. ಆರಂಭದಲ್ಲಿ ಇಂಗ್ಲೆಂಡ್ ಬ್ಯಾಟರ್ಸ್ ಅಬ್ಬರಿಸಿದ್ರೂ ಕೂಡ ಆ ನಂತರರದಲ್ಲಿ ಭಾರತೀಯ ಬೌಲರ್​ಗಳ ಮುಂದೆ ರನ್ ಗಳಿಸೋಕೆ ಒದ್ದಾಡಿದ್ರು. ಆದ್ರೂ 304 ರನ್​ಗಳನ್ನ ಕಲೆ ಹಾಕಿದ್ರು. 304 ರನ್​​ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಓಪನರ್ಸ್ ಆಗಿ ಕಣಕ್ಕಿಳಿದು 136 ರನ್‌ಗಳ ಜೊತೆಯಾಟವಾಡಿದ್ರು. ಆದ್ರೆ ಗಿಲ್ 52 ಎಸೆತಗಳಲ್ಲಿ 60 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಕೊಹ್ಲಿ ಮತ್ತೊಮ್ಮೆ ಆಫ್ ಸ್ಟಂಪ್ ಹೊರಗೆ ಹೋಗುವ ಚೆಂಡನ್ನು ಆಡಲು ಯತ್ನಿಸಿ ವಿಕೆಟ್​ ಕೀಪರ್​ಗೆ ಕ್ಯಾಚ್ ಕೊಟ್ರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ರು. ಮೂರನೇ ವಿಕೆಟ್‌ಗೆ ಹಿಟ್‌ಮ್ಯಾನ್ ಜೊತೆ 70 ರನ್​ಗಳ ಜೊತೆಯಾಟ ನೀಡಿದ್ರು. ಅದ್ರಲ್ಲೂ ರೋಹಿತ್ ಶರ್ಮಾ 76 ಎಸೆತಗಳಲ್ಲಿ ತಮ್ಮ 32 ನೇ ಶತಕವನ್ನು ಪೂರ್ಣಗೊಳಿಸಿದ್ರು. ಅಂತಿಮವಾಗಿ ರೋಹಿತ್ 90 ಎಸೆತಗಳಲ್ಲಿ 12 ಬೌಂಡರಿ ಮತ್ತು ಏಳು ಸಿಕ್ಸರ್‌ಗಳ ಸಹಾಯದಿಂದ 119 ರನ್‌ ಕೆಲಹಾಕಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು.

ಹಿಟ್​ಮ್ಯಾನ್ ಎಂದೇ ಕರೆಸಿಕೊಳ್ಳೋ ರೋಹಿತ್ ಶರ್ಮಾ ಅವರ ಬ್ಯಾಟ್ ಇತ್ತೀಚಿನ ದಿನಗಳಲ್ಲಿ ಸೌಂಡೇ ಮಾಡ್ತಿರಲಿಲ್ಲ. ಹೀಗಾಗಿ ಭಾರತ ಕ್ರಿಕೆಟ್​ನಲ್ಲಿ ರೋಹಿತ್ ಯುಗಾಂತ್ಯವಾಯಿತೆಂದೇ ಹೇಳಲಾಗ್ತಿತ್ತು. ಆದ್ರೆ ಆಂಗ್ಲರ ವಿರುದ್ಧ ಉಗ್ರರೂಪ ತಾಳಿರುವ ರೋಹಿತ್ ಕೇವಲ 76 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 32 ನೇ ಶತಕವನ್ನು ಬಾರಿಸಿದ್ರು. ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಹಿಟ್​ಮ್ಯಾನ್, 76​ ಎಸೆತಗಳಲ್ಲಿ 7 ಸಿಕ್ಸರ್​ ಮತ್ತು 10 ಬೌಂಡರಿ ಸಮೇತ ಶತಕ ಪೂರ್ಣಗೊಳಿಸಿದ್ರು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 338 ದಿನಗಳ ನಂತರ ಮತ್ತು ಏಕದಿನ ಪಂದ್ಯದಲ್ಲಿ 475 ದಿನಗಳ ನಂತರ ತಮ್ಮ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. ಹೀಗೆ ಭರ್ಜರಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಹಲವು ದಾಖಲೆಗಳನ್ನ ಬರೆದಿದ್ದಾರೆ.

ಭಾನುವಾರ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸುವ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮೂರು ಪಂದ್ಯಗಳಲ್ಲಿ 31 ರನ್ ಗಳಿಸಿದ್ದ  ರೋಹಿತ್ ಹಲವು ಟೀಕೆಗಳಿಗೆ ಗುರಿಯಾಗಿದ್ರು. ಅಲ್ದೇ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರನ್ ಗಳಿಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ರು. ಮೊದಲ ಪಂದ್ಯದಲ್ಲಿ 2 ರನ್ ಗಳಿಸಿ ನಿರಾಸೆ ಮೂಡಿಸಿದ್ದ ರೋಹಿತ್ 2ನೇ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಅವ್ರ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ. ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ದ್ರಾವಿಡ್​ರನ್ನ ಹಿಂದಿಕ್ಕಿದ್ದಾರೆ. ಎಲ್ಲಾ ಮೂರು ಸ್ವರೂಪಗಳಿಂದ ರೋಹಿತ್ ಶರ್ಮಾ 49 ನೇ ಶತಕ ಸಿಡಿಸಿದ್ದಾರೆ. ಇನ್ನು ದ್ರಾವಿಡ್ 48 ಸೆಂಚುರಿ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ ರೋಹಿತ್. ಸಚಿನ್ ತೆಂಡೂಲ್ಕರ್ 664 ಪಂದ್ಯಗಳಿಂದ 100 ಶತಕಗಳನ್ನ ಬಾರಿಸಿದ್ದಾರೆ. 2ನೇ ಸ್ಥಾನದಲ್ಲಿರೋ ವಿರಾಟ್ ಕೊಹ್ಲಿ 543 ಪಂದ್ಯಗಳಿಂದ  81 ಸೆಂಚುರಿಸಿ ಸಿಡಿಸಿದ್ದಾರೆ.

ರನ್ ಮಷಿನ್, ಕಿಂಗ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಕೂಡ ಬಿಗ್ ಸ್ಕೋರ್ ಕಲೆ ಹಾಕದೆ ತುಂಬಾ ದಿನಗಳೇ ಕಳೆದಿವೆ. ಇದೀಗ ರೋಹಿತ್ ಶರ್ಮಾ ಪವರ್​ಫುಲ್ ಕಮ್ ಬ್ಯಾಕ್ ಬಳಿಕ ಈ ಇಬ್ಬರು ಪ್ಲೇಯರ್ಸ್ ಯಾವಾಗ ಬ್ಯಾಟ್ ಬೀಸ್ತಾರೆ ಅಂತಾ ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಆಡಿರಲಿಲ್ಲ. ಎರಡನೇ ಪಂದ್ಯದಲ್ಲೇ 3ನೇ ಸ್ಲಾಟ್​ನಲ್ಲಿ ಕಣಕ್ಕಿಳಿದ್ರೂ ಜಸ್ಟ್ 5 ರನ್​ಗೆ ಔಟಾದ್ರು. ಇತ್ತ ಕೆಎಲ್ ರಾಹುಲ್ ಫಸ್ಟ್ ಪಂದ್ಯದಲ್ಲಿ 2 ರನ್​ಗೆ ಔಟಾಗಿದ್ದರು. ಇದೀಗ ಎರಡನೇ ಪಂದ್ಯದಲ್ಲೂ 10 ರನ್ ಅಷ್ಟೇ ಗಳಿಸಿದ್ರು. ಹೀಗಾಗಿ ಈ ಇಬ್ಬರೂ ಪ್ಲೇಯರ್ಸ್ ಯಾವಾಗ ಬಿಗ್ ಸ್ಕೋರ್ ಕಲೆ ಹಾಕ್ತಾರೆ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *