ಒಂದೇ ವರ್ಷದಲ್ಲಿ ಅತೀ ಹೆಚ್ಚು ಟೆಸ್ಟ್ ಸೋಲು ಕಂಡ ಕ್ಯಾಪ್ಟನ್ – ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ
ಮೊದಲೆಲ್ಲಾ ಟೀಂ ಇಂಡಿಯಾವನ್ನ ಟೆಸ್ಟ್ ಕ್ರಿಕೆಟ್ನ ಕಿಂಗ್ ಅಂತಿದ್ರು. ಹಿಂದಿನ ಅಂಕಿ ಅಂಶಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈಗ ಬರೀ ಸೋಲೇ ಕಾಣ್ತಿದೆ. ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದ ಭಾರತ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯ ಪರ್ತ್ ಟೆಸ್ಟ್ನಲ್ಲಿ ಗೆಲುವು ಸಿಕ್ಕಿತ್ತು. ನಾಯಕ ರೋಹಿತ್ ಶರ್ಮಾ ಬಂದ ಮೇಲೆ ಅಡಿಲೇಡ್ನಲ್ಲಿ ಮತ್ತು ಮೆಲ್ಬೋರ್ನ್ನಲ್ಲಿ ಸೋಲುಗಳ ಸರಮಾಲೆ. ಹೀಗೆ ಕಳೆದ 7 ಪಂದ್ಯಗಳಲ್ಲಿ ಟೀಮ್ ಇಂಡಿಯಾ 5 ರಲ್ಲಿ ಸೋಲನುಭವಿಸಿದೆ. ಇಲ್ಲಿ ಏಳು ಪಂದ್ಯಗಳಲ್ಲಿ ಭಾರತ ಒಂದು ಜಯ ಸಾಧಿಸಿದ್ದು ಜಸ್ಪ್ರೀತ್ ಬುಮ್ರಾ ಅವರ ನಾಯಕತ್ವದಲ್ಲಿ. ಇನ್ನು ಬ್ರಿಸ್ಬೇನ್ ಟೆಸ್ಟ್ ಪಂದ್ಯವು ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡ ಕಾರಣ ಟೀಮ್ ಇಂಡಿಯಾ ಸೋಲು ತಪ್ಪಿಸಿಕೊಂಡಿತು. ಅಂದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ 14 ಪಂದ್ಯಗಳಲ್ಲಿ 6 ರಲ್ಲಿ ಸೋಲನುಭವಿಸಿದೆ.
ಇದನ್ನೂ ಓದಿ:ಭಾರತಕ್ಕೆ ಹೀನಾಯ ಸೋಲು – ಕಾಂಗರೂಗಳ ತಂತ್ರಕ್ಕೆ ಸೋತು ಶರಣಾದ ಟೀಮ್ ಇಂಡಿಯಾ
ರೋಹಿತ್ ಶರ್ಮಾ ಕಳೆದ 15 ಇನ್ನಿಂಗ್ಸ್ ಗಳಿಂದಲೂ ಅತ್ಯಂತ ಕಳಪೆಯಾಗಿ ಬ್ಯಾಟಿಂಗ್ ಮಾಡಿರೋದೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. 6, 5, 8, 23, 2, 52, 0, 8, 18, 11, 3, 3, 6, 10, 3. ಹೀಗೆ ಕಳೆದ 15 ಇನ್ನಿಂಗ್ಸ್ ಗಳಲ್ಲಿ 52 ರನ್ ಬಾರಿಸಿರೋದೇ ಹೈಯೆಸ್ಟ್ ಸ್ಕೋರ್. ಟೋಟಲ್ 158 ರನ್ಸ್ ಅಷ್ಟೇ. ಈ ಅಂಕಿ ಅಂಶಗಳೇ ಈಗ ರೋಹಿತ್ ಆಟ ಸಾಕು ಎನ್ನುವಂತಿದೆ.
ಸತತ ಸೋಲುಗಳಿಂದ ಭಾರತದ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆಯೊಂದನ್ನು ಕ್ಯಾಪ್ಟನ್ ರೋಹಿತ್ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಒಂದೇ ವರ್ಷದೊಳಗೆ ಅತೀ ಹೆಚ್ಚು ಟೆಸ್ಟ್ ಸೋಲು ತಂದುಕೊಟ್ಟ ನಾಯಕನೆಂಬ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ಹೀನಾಯ ದಾಖಲೆ ಬರೆದಿದ್ದು ಸಚಿನ್ ತೆಂಡೂಲ್ಕರ್. 1999 ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ 5 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇದರೊಂದಿಗೆ ಒಂದೇ ವರ್ಷದೊಳಗೆ ಅತೀ ಹೆಚ್ಚು ಸೋಲು ಕಂಡ ಟೀಮ್ ಇಂಡಿಯಾ ನಾಯಕನೆಂಬ ಅಪಕೀರ್ತಿ ಸಚಿನ್ ಪಾಲಾಗಿತ್ತು. ಇದೀಗ ಕಳಪೆ ನಾಯಕತ್ವದೊಂದಿಗೆ ಬರೋಬ್ಬರಿ 25 ವರ್ಷಗಳ ಬಳಿಕ ಸಚಿನ್ ತೆಂಡೂಲ್ಕರ್ ಅವರ ಅತ್ಯಂತ ಕೆಟ್ಟ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ. ಈ ವರ್ಷ ಟೀಮ್ ಇಂಡಿಯಾ 15 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ 14 ಮ್ಯಾಚ್ಗಳಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಕಾಣಿಸಿಕೊಂಡಿದ್ದರು.
ಆಸಿಸ್ ಸರಣಿ ಬಳಿಕ ಭಾರತದ ಕ್ಯಾಪ್ಟನ್ ಗಳ ವಿದಾಯ ಪರ್ವ!
ಸದ್ಯ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಸರಣಿ ಬಳಿಕ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸೋ ಎಲ್ಲಾ ಸಾಧ್ಯತೆ ಇದೆ. ನಿಜ ಹೇಳ್ಬೇಕಂದ್ರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳು ಭಾರತದ ಕ್ಯಾಪ್ಟನ್ಗಳ ಭವಿಷ್ಯವನ್ನೇ ಕಿತ್ತುಕೊಳ್ತಿವೆ. ಸಾಕಷ್ಟು ನಾಯಕರು ಆಸಿಸ್ ಸರಣಿ ಬಳಿಕ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ, ಟ್ವೆಂಟಿ20 ಹಾಗೂ ಏಕದಿನ ವಿಶ್ವಕಪ್ ತಂದುಕೊಟ್ಟ ಮಹೇಂದ್ರ ಸಿಂಗ್ ಧೋನಿ ಡಿಸೆಂಬರ್ 30, 2014 ರಂದು ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ರು. ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು. 2008ರಲ್ಲಿ ಭಾರತದಲ್ಲೇ ನಡೆದಿದ್ದ ಆಸಿಸ್ ವಿರುದ್ಧದ ಸರಣಿಯಲ್ಲಿ ನಾಗ್ಪುರದಲ್ಲಿ ಗೌರವ್ ಗಂಗೂಲಿ ವಿದಾಯ ಘೋಷಿಸಿದ್ರು. ಹಾಗೇ 2008 ರಲ್ಲಿ ದೆಹಲಿ ಟೆಸ್ಟ್ ಪಂದ್ಯದ ಬಳಿಕ ಆಸಿಸ್ ಸರಣಿಯಲ್ಲೇ ಗಾಯದ ಕಾರಣ ಅನಿಲ್ ಕುಂಬ್ಳೆ ನಿವೃತ್ತಿ ಘೋಷಿಸಿದ್ರು. ಇನ್ನು 2011/12 ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಕನ್ನಡಿಗ ರಾಹುಲ್ ದ್ರಾವಿಡ್ ಕೂಡ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರು.
ಹೀಗೆ ಆಸಿಸ್ ಸರಣಿ ಭಾರತದ ಆಟಗಾರರ ಪಾಲಿಗೆ ನಿವೃತ್ತಿಯ ಸಿರೀಸ್ ಆಗ್ತಿದೆ. ಇತ್ತೀಚೆಗೆ ಮೂರನೇ ಪಂದ್ಯದ ಬಳಿಕ ರವಿಚಂದ್ರನ್ ಅಶ್ವಿನ್ ಕೂಡ ನಿವೃತ್ತಿ ಘೋಷಿಸಿದ್ರು. ಇದೀಗ ರೋಹಿತ್ ಶರ್ಮಾ ರೇಸ್ನಲ್ಲಿದ್ದಾರೆ.