ಲಂಕಾ ಗೆಲ್ಲೋದು RO-KOಗೆ ಕಷ್ಟನಾ? -ಸರಣಿಗೂ ಮುನ್ನವೇ KL ವಾರ್ನಿಂಗ್
ಸ್ಟಾರ್ ಪ್ಲೇಯರ್ಸ್​ಗೆ ಏನಿದು ಶಾಕ್? 

ಲಂಕಾ ಗೆಲ್ಲೋದು RO-KOಗೆ ಕಷ್ಟನಾ? -ಸರಣಿಗೂ ಮುನ್ನವೇ KL ವಾರ್ನಿಂಗ್ಸ್ಟಾರ್ ಪ್ಲೇಯರ್ಸ್​ಗೆ ಏನಿದು ಶಾಕ್? 

ಟಿ-20 ವಿಶ್ವಕಪ್ ನಲ್ಲಿ ಜಗತ್ತನ್ನೇ ಗೆದ್ದಿದ್ದ ಟೀಂ ಇಂಡಿಯಾ ಆಟಗಾರರು ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಜಿಂಬಾಬ್ವೆ ಸರಣಿ ವಿಕ್ಟರಿ ಬಳಿಕ ಲಂಕೆಗೆ ಹಾರಿದ್ದ ಮೆನ್ ಇನ್ ಬ್ಲ್ಯೂ ಜೆರ್ಸಿ ಬಾಯ್ಸ್ ಆಲ್ರೆಡಿ ಟಿ-20 ಐ ಸರಣಿಯನ್ನ ಕೈ ವಶ ಮಾಡಿಕೊಂಡಿದ್ದಾರೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ಗೆದ್ದು ಬೀಗಿದೆ. ಇದೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ರಂಥ ಸ್ಟಾರ್ ಆಟಗಾರರೇ ಇರೋ ಏಕದಿನ ತಂಡಕ್ಕೆ ಅಸಲಿ ಸವಾಲು ಶುರುವಾಗಿದೆ. ಜೂನಿಯರ್ಸ್ ಮುಂದೆ ಸೀನಿಯರ್ಸ್ ತಮ್ಮ ತಾಕತ್ತು ತೋರಿಸೋ ಟೈಂ ಬಂದಿದೆ. ಇದಕ್ಕಾಗಿ ಆಟಗಾರರು ಫೀಲ್ಡಿಗಿಳಿದು ಕಸರತ್ತು ಆರಂಭಿಸಿದ್ದಾರೆ. ಅಷ್ಟಕ್ಕೂ ದಿಗ್ಗಜ ಆಟಗಾರರೇ ಇರೋ ಏಕದಿನ ತಂಡಕ್ಕೆ ಇರೋ ಸವಾಲುಗಳೇನು? ರೋಹಿತ್ ಮತ್ತು ವಿರಾಟ್ ಮತ್ತೊಮ್ಮೆ ಸಿಡಿದೇಳ್ತಾರಾ? ಪಂದ್ಯ ಆರಂಭಕ್ಕೂ ಮುನ್ನವೇ ಕನ್ನಡಿಗ ಕೆ.ಎಲ್ ರಾಹುಲ್ ಕೊಟ್ಟಿರೊ ಮೆಸೇಜ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೋಹನ್ ಬೋಪಣ್ಣ ಟೆನ್ನಿಸ್‌ಗೆ ವಿದಾಯ – ಕೊಡಗಿನ ಕಲಿಯ 22 ವರ್ಷಗಳ ಜರ್ನಿ ಹೇಗಿತ್ತು?

ಶ್ರೀಲಂಕಾ ವಿರುದ್ಧ ಟಿ-20 ಸಿರೀಸ್ ಗೆದ್ದಿರೋ ಟೀಂ ಇಂಡಿಯಾ ಚಿತ್ತ ಇದೀಗ ಏಕದಿನ ಸರಣಿಯತ್ತ ನೆಟ್ಟಿದೆ. ಅದ್ರಲ್ಲೂ ಏಕದಿನ ಸರಣಿಯಲ್ಲಿ ಸ್ಟಾರ್ ಆಟಗಾರರೇ ಇರೋದ್ರಿಂದ ಕೋಟ್ಯಂತರ ಅಭಿಮಾನಿಗಳು ಪಂದ್ಯ ನೋಡೋಕೆ ಕಾಯ್ತಿದ್ದಾರೆ. ಈಗಾಗ್ಲೇ ನಾಯಕ ರೋಹಿತ್ ಶರ್ಮಾ, ರನ್ ಮಷಿನ್ ವಿರಾಟ್ ಕೊಹ್ಲಿ, ಸ್ಟಾರ್ ಪ್ಲೇಯರ್ ಕೆ.ಎಲ್ ರಾಹುಲ್ ಸೇರಿದಂತೆ ಭಾರತೀಯ ಆಟಗಾರರು ಕೊಲಂಬೊ ತಲುಪಿದ್ದಾರೆ. 50 ಓವರ್​ಗಳ ಸರಣಿ ಪ್ರಾರಂಭಕ್ಕೂ ಮುನ್ನವೇ ಫಿಲ್ಡಿಗಿಳಿದು ಕಸರತ್ತು ಆರಂಭಿಸಿದ್ದಾರೆ. ಟಿ-20 ವಿಶ್ವಕಪ್ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಸ್ಟಾರ್ ಬ್ಯಾಟರ್​ಗಳಾದ ವಿರಾಟ್ ಮತ್ತು ರೋಹಿತ್ ಮೊದಲ ಬಾರಿ ಫೀಲ್ಡಿಗಿಳಿದಿದ್ದಾರೆ. ಮೊದಲ ಏಕದಿನ ಪಂದ್ಯ ಆಗಸ್ಟ್ 2 ರಂದು ಸ್ಟಾರ್ಟ್ ಆಗಲಿದೆ. ಹಾಗೇ ಎರಡನೇ ಏಕದಿನ ಪಂದ್ಯ ಆಗಸ್ಟ್ 4, ಮೂರನೇ ಏಕದಿನ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. ಮೂರು ಪಂದ್ಯಗಳೂ ಕೂಡ ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಪಂದ್ಯಗಳು ಆರಂಭವಾಗಲಿವೆ. ಸದ್ಯ ಕೋಟಿ ಕೋಟಿ ಭಾರತೀಯರ ಚಿತ್ತ ಇದೇ ಏಕದಿನ ಸರಣಿಯತ್ತ ನೆಟ್ಟಿದೆ. ಇದೀಗ ವಿಶ್ವಕಪ್ ಗೆದ್ದ ರೋ-ಕೋ ಜೋಡಿಗೆ ಭಾರತದ ಗೆಲುವಿನ ಯಾನ ಮುಂದುವರಿಸೋದ್ರ ಜೊತೆಗೆ ಯಂಗ್​ಸ್ಟರ್ಸ್​ಗೆ ಮಾದರಿಯಾಗಬೇಕಾದ ಸವಾಲೂ ಎದುರಾಗಿದೆ. ಏನದು ಚಾಲೆಂಜ್ ಅನ್ನೋದನ್ನೇ ಹೇಳ್ತೇನೆ ನೋಡಿ.

ರೋ-ಕೊ & ರಾಹುಲ್ ಗೆ ಸವಾಲ್!

ಟಿ-20 ವಿಶ್ವಕಪ್ ಬಳಿಕ ರೆಸ್ಟ್ ಮೂಡ್​ನಲ್ಲಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸದ್ಯ ಲಂಕಾ ಪ್ರವಾಸಕ್ಕೆ ಅಣಿಯಾಗ್ತಿದ್ದಾರೆ. ಈಗಾಗಲೇ ನೆಟ್​ನಲ್ಲಿ ಪ್ರಾಕ್ಟೀಸ್​ ಕೂಡ ಶುರು ಮಾಡಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ​ ನೆಟ್​ನಲ್ಲಿ ಪ್ರಾಕ್ಟೀಸ್​ ಮಾಡುತ್ತಿರೋ ವಿಡಿಯೋಗಳು ಹೊರ ಬಿದ್ದಿದ್ದು, ಮೈದಾನದಲ್ಲಿ ಮದಗಜಗಳ ಅಬ್ಬರ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಆದ್ರೆ ಸರಣಿ ಆರಂಭಕ್ಕೂ ಮುನ್ನವೇ ರೋಹಿತ್ ಮತ್ತು ಕೊಹ್ಲಿಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಏಕದಿನ ಸರಣಿಯಲ್ಲೂ ಟೀಂ ಇಂಡಿಯಾವನ್ನ ಗೆಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಟಿ-20 ವಿಶ್ವಕಪ್ ಗೆಲುವಿನ ಬಳಿಕ ಬ್ಲ್ಯೂ ಬಾಯ್ಸ್ ಸೋತಿದ್ದೇ ಇಲ್ಲ. ಶುಭ್​ಮನ್ ಗಿಲ್ ನೇತೃತ್ವದಲ್ಲಿ ಜಿಂಬಾಬ್ವೆಗೆ ಹಾರಿದ್ದ ಟೀಂ ಇಂಡಿಯಾದ ಯಂಗ್​ಸ್ಟರ್ಸ್ ಸರಣಿ ಗೆದ್ದು ಬಂದಿದ್ರು. 5 ಪಂದ್ಯಗಳ ಟಿ-20 ಸರಣಿಯನ್ನ 4-1 ಅಂತರದಲ್ಲಿ ಕೈ ವಶ ಮಾಡಿಕೊಂಡಿದ್ರು. ಅದ್ರಲ್ಲೂ ತಂಡದಲ್ಲಿ ಇದ್ದದ್ದು ಬಹುತೇಕ ಎಲ್ಲರೂ ಹೊಸಬರೇ ಆಗಿದ್ರು. ಅದಾದ ಬಳಿಕ ಲಂಕಾ ಪ್ರವಾಸದಲ್ಲಿ ಟಿ-20 ಸರಣಿಗೆ ಸೂರ್ಯಕುಮಾರ್ ಯಾದವ್​ಗೆ ಕ್ಯಾಪ್ಟನ್ಸಿ ನೀಡಿದ್ರೂ ಕೂಡ ಅಲ್ಲೂ ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕಲಾಗಿತ್ತು. ಹೀಗಿದ್ರೂ ಕೂಡ ಸೂರ್ಯ ಬಾಯ್ಸ್ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನ ಗೆದ್ದುಕೊಂಡಿದ್ರು. ಸೋ ಇದೇ ಫಾರ್ಮ್ ಕಂಟಿನ್ಯೂ ಮಾಡಬೇಕಾದ ಅನಿವಾರ್ಯತೆ ಏಕದಿನ ತಂಡದ ಆಟಗಾರರ ಮೇಲಿದೆ. ಅದ್ರಲ್ಲೂ ಲೆಜೆಂಡರಿ ಕ್ರಿಕೆಟರ್ಸ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಮತ್ತು ರೋಹಿತ್ ಮೇಲೆ ಸ್ವಲ್ಪ ಜಾಸ್ತಿನೇ ಹೊರೆ ಇರಲಿದೆ. ಮತ್ತೊಂದೆಡೆ ಆಫ್ಟರ್ ಎ ಲಾಂಗ್ ಟೈಂ ಬಳಿಕ ತಂಡಕ್ಕೆ ಮರಳಿರೋ ಕನ್ನಡಿಗ ಕೆ.ಎಲ್ ರಾಹುಲ್​ಗೂ ತಮ್ಮ ಸಾಮರ್ಥ್ಯ ತೋರಿಸಬೇಕಾದ ಅನಿವಾರ್ಯತೆ ಇದೆ. ಈಗಾಗ್ಲೇ ನೆಟ್ಸ್​ನಲ್ಲಿ ಪ್ರಾಕ್ಟೀಸ್ ಮಾಡ್ತಿರೋ ರಾಹುಲ್ ಕೂಡ ಬಿಸಿಸಿಐಗೆ ಖಡಕ್ ಸಂದೇಶ ಕೂಡ ರವಾನಿಸಿದ್ದಾರೆ. ಶ್ರೀಲಂಕಾ ತಂಡದ ವಿರುದ್ಧ ಆಡಲು ಸಜ್ಜಾಗಿದ್ದೇನೆ. ನನಗೆ ಕೋಚ್​​ ಮತ್ತು ಕ್ಯಾಪ್ಟನ್​​ ನೀಡಿರೋ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧನಾಗಿದ್ದೇನೆ. ನನ್ನ ತಲೆಯಲ್ಲಿ ಏನು ಮಾಡಬೇಕು ಎಂಬ ಪ್ಲಾನ್​ ಇದೆ. ಬ್ಯಾಟಿಂಗ್​ ಮತ್ತು ಕೀಪಿಂಗ್​ನಲ್ಲಿ ಸಾಧ್ಯವಾದಷ್ಟು ಉತ್ತಮವಾಗಿ ಆಡಲು ಪ್ರಯತ್ನ ಮಾಡುತ್ತೇನೆ. ನನಗೂ ಇದು ಸ್ಟ್ರಾಂಗ್​ ಕಮ್​ಬ್ಯಾಕ್​ ಆಗಲಿದೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದೇನೆ ಎನ್ನುವ ಮೂಲಕ ಟೀಮ್​ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಒಂದ್ಕಡೆ ಸಾಲು ಸಾಲು ನಿರಾಸೆಗಳ ಬಳಿಕ ತಂಡಕ್ಕೆ ಮರಳಿರೋ ಕೆ.ಎಲ್ ರಾಹುಲ್ ಭರ್ಜರಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಅತ್ತ ರೋಹಿತ್ ಮತ್ತು ವಿರಾಟ್ ಕೂಡ ಏಕದಿನ ಸರಣಿ ಕೈವಶ ಮಾಡಿಕೊಳ್ಳೋಕೆ ಕಸರತ್ತು ಸ್ಟಾರ್ಟ್ ಮಾಡಿದ್ದಾರೆ. ತಂಡದಲ್ಲಿ ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ. ಸೋ ಅಂತಿಮವಾಗಿ ಯಾರನ್ನ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಸಬೇಕು ಅನ್ನೋ ಸವಾಲೂ ಕೂಡ ಇದೆ. ಅಲ್ದೇ ನೂತನ ಕೋಚ್ ಗೌತಮ್ ಗಂಭೀರ್ ಅಡಿಯಲ್ಲಿ ರೋಹಿತ್, ಕೊಹ್ಲಿ ಮತ್ತು ರಾಹುಲ್ ಇದೇ ಮೊದಲ ಸಲ ಕಣಕ್ಕಿಳಿಯುತ್ತಿರೋದ್ರಿಂದ ಸಾಕಷ್ಟು ಕುತೂಹಲ ಕೂಡ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *