‘ಸ್ವಿಮ್ಮಿಂಗ್ ಪೂಲ್’ ರಹಸ್ಯ.. ಸಾರಾ ಜೊತೆ ಸಂಧಾನ – ತನಿಖೆಯಲ್ಲಿ ಹೊರಬಿತ್ತು ಸಿಂಧೂರಿ ಸೀಕ್ರೆಟ್!

‘ಸ್ವಿಮ್ಮಿಂಗ್ ಪೂಲ್’ ರಹಸ್ಯ.. ಸಾರಾ ಜೊತೆ ಸಂಧಾನ – ತನಿಖೆಯಲ್ಲಿ ಹೊರಬಿತ್ತು ಸಿಂಧೂರಿ ಸೀಕ್ರೆಟ್!

ವಿವಾದಗಳಿಂದಲೇ ಭಾರಿ ಸುದ್ದಿಯಲ್ಲಿರುವ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್​ ಜೊತೆ ರಾಜಿ ಮಾಡಿಕೊಂಡಿದ್ದು ಈಗಾಗ್ಲೇ ದೊಡ್ಡ ಸಂಚಲನ ಸೃಷ್ಟಿಸಿದೆ. ಇಬ್ಬರ ನಡುವಿನ ಸಂಧಾನದ ಬಗ್ಗೆ ಎಲ್ಲೆಡೆ ಬಿಸಿಬಿಸಿ ಚರ್ಚೆಯಾಗ್ತಿದೆ. ಸಾರಾ ಮಹೇಶ್ ಜೊತೆಗೆ ಸಿಂಧೂರಿ ಮಾತುಕತೆ ನಡೆಸುವ ಫೋಟೋ ವೈರಲ್ ಆಗಿದ್ದು, ಇಬ್ಬರೂ ಇದ್ದಕ್ಕಿದ್ದಂತೆ ರಾಜಿಯಾಗಿದ್ದು ಹೇಗೆ ಅನ್ನೋ ಪ್ರಶ್ನೆ ಎದ್ದಿದೆ.

ಬೆಳಗಾವಿ ಅಧಿವೇಶನದ ಸಮಯದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಮೂಲಕ ಸಾ.ರಾ. ಮಹೇಶ್ ಜೊತೆಗೆ ಸಿಂಧೂರಿ ಸಂಧಾನ ಯತ್ನ ಮಾಡಿಕೊಂಡಿದ್ರು. ಅಲ್ಲದೆ ಸಾರಾ ಮಹೇಶ್‌ ಹೇಳುವ ಪ್ರಕಾರ, ಅವರ ಮುಂದೆ ತಾನು ಮಾಡಿರುವುದು ತಪ್ಪಾಗಿದೆ ಎಂದೂ ಸಿಂಧೂರಿ ವಿಷಾದ ವ್ಯಕ್ತಪಡಿಸಿದ್ದರಂತೆ. ಆದ್ರೀಗ ಸಿಂಧೂರಿ ರಾಜಿ ಸಂಧಾನದ ಅಸಲಿ ಕಹಾನಿ ಬಯಲಾಗಿದೆ.

ಇದನ್ನೂ ಓದಿ : ಭ್ರಷ್ಟಾಚಾರದ ಆರೋಪದ ಬೆನ್ನಲ್ಲೇ ಎನ್.ಶಶಿಕುಮಾರ್ ಎತ್ತಂಗಡಿ – 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ!

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ನಿಯಮ ಉಲ್ಲಂಘನೆ ಮಾಡಿ ಡಿಸಿ ನಿವಾಸ ‘ಜಲಸನ್ನಿಧಿ’ಯಲ್ಲಿ ಸ್ವಿಮ್ಮಿಂಗ್​ಪೂಲ್ ಕಟ್ಟಿಸಿದ್ದರು. ಪುರಾತತ್ವ ಕಟ್ಟಡವನ್ನು ಹಾಳು ಮಾಡಿದ್ದಾರೆಂದು ಸಾರಾ ಮಹೇಶ್ ಆರೋಪ ಮಾಡಿದ್ದರು. ಸಾರಾ ಆರೋಪದ ನಂತರ ಪುರಾತತ್ವ ಸಂಗ್ರಹಾಲಯ & ಪರಂಪರೆ ಇಲಾಖೆ ತನಿಖೆ ನಡೆಸಿ ವರದಿ ವರದಿ ಸಿದ್ಧಪಡಿಸಿತ್ತು. ಈ ವೇಳೆ ಪೂಲ್ ಮಾತ್ರವಲ್ಲ ಇಡೀ ಮನೆಯ ಫ್ಲೋರಿಂಗ್ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ನಿವಾಸಕ್ಕೆ ಹೊಸದಾಗಿ ಪೈಂಟಿಂಗ್ ಮಾಡಿಸಿ ಪರಂಪರೆ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಸಾಬೀತಾಗಿತ್ತು. ಪಾರಂಪರಿಕ ಕಟ್ಟಡದಲ್ಲಿ ನವೀಕರಣ ಮಾಡಿಸಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆಯಲೇಬೇಕು. ಸಮಿತಿ ನೀಡಿದ ಅನುಮೋದಿತ ವಿನ್ಯಾಸದೊಂದಿಗೆ ಮಾತ್ರ ಕಾಮಗಾರಿ ನಡೆಸಬೇಕು. ಆದ್ರೆ ರೋಹಿಣಿ ಸಿಂಧೂರಿ ಯಾವ ನಿಯಮಗಳನ್ನು ಕೂಡ ಪಾಲಿಸಿರಲಿಲ್ಲ. ಹೀಗೆಂದು ಮೂವರು ಅಧಿಕಾರಿಗಳ ತಂಡದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿತ್ತು.

ತನಿಖೆ ನಡೆಸಿದ್ದ ಅಧಿಕಾರಿಗಳ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರಿಂದ ಸಾರಾ ಮಹೇಶ್‌ ಮಾಡಿದ್ದ ಆರೋಪ ಭಾಗಶಃ ಸಾಬೀತಾಗಿತ್ತು. ಇದೇ ಕಾರಣದಿಂದ ಶಾಸಕ ಸಾರಾ ಮಹೇಶ್‌ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಮತ್ತೆ ಒತ್ತಾಯ ಮುಂದುವರೆಸಿದ್ದರು. ತಾನು ತಪ್ಪು ಮಾಡಿ ಸಿಕ್ಕಿಬಿದ್ದ ಮೇಲೆ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ರೋಹಿಣಿ ಸಿಂಧೂರಿ ದೂರುದಾರ ಸಾರಾ ಮಹೇಶ್ ಜೊತೆಗೆ ಸಂಧಾನಕ್ಕೆ ಯತ್ನಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಸರ್ಕಾರದ ನಿಯಮಗಳನ್ನ ಜಾರಿಗೊಳಿಸಬೇಕಿರುವ ಐಎಎಸ್‌ ಅಧಿಕಾರಿಯೇ ನಿಯಮ ಉಲ್ಲಂಘನೆ ಮಾಡಿದ್ದು ಸಾಬೀತಾಗಿದೆ. ಹೀಗಿರುವಾಗ ರೋಹಿಣಿ ವಿರುದ್ಧ ಕ್ರಮ ಕೈಗೊಳ್ಳಬೇಕಾದ್ದದ್ದು ಸರ್ಕಾರದ ಜವಾಬ್ದಾರಿ. ಆದ್ರೆ ಅದನ್ನು ಸರ್ಕಾರ ಮರೆಯಲು ಬಯಸಿದಂತಿದೆ. ಇದರ ನಡುವೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಹೋಗಿರುವುದನ್ನು ನೋಡಿದರೆ ನಾಜೂಕಾಗಿ ತಮ್ಮ ಮೇಲಿನ ಆರೋಪದಿಂದ ಮುಕ್ತರಾಗುವ ಪ್ರಯತ್ನ ನಡೆದಿರುವುದು ಗೋಚರಿಸುತ್ತಿದೆ.

 

suddiyaana