ಗಣಪತಿ ವಿಸರ್ಜನೆಯಲ್ಲಿ ಪೊಲೀಸರು ಬ್ಯುಸಿ – 6 ಜನರನ್ನ ಕಟ್ಟಿ ಹಾಕಿ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ಗಣಪತಿ ವಿಸರ್ಜನೆಯಲ್ಲಿ ಪೊಲೀಸರು ಬ್ಯುಸಿ – 6 ಜನರನ್ನ ಕಟ್ಟಿ ಹಾಕಿ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನ ಅದ್ಧೂರಿಯಾಗಿ ಆಚರಿಸಲಾಗಿದೆ. ಹಲವೆಡೆ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತಿದೆ. ಮೆರವಣಿಗೆ ಮತ್ತು ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ನೀಡುತ್ತಿದ್ದಾರೆ. ಪೊಲೀಸರ ಈ ಪರಿಸ್ಥಿತಿಯನ್ನೇ ಲಾಭ ಮಾಡಿಕೊಂಡ ದರೋಡೆಕೋರರು ಸಿನಿಮಾ ಶೈಲಿಯಲ್ಲಿ ರಾಬರಿ ಮಾಡಿದ್ದಾರೆ.

ಇದನ್ನೂ ಓದಿ : ಬರೋಬ್ಬರಿ 26 ಬೆರಳುಗಳಿರುವ ಶಿಶು ಜನನ! – ʼದೇವರ ಮಗುʼ ಎಂದ ಜನ!

ಹುಬ್ಬಳ್ಳಿಯ ಈದ್ಗಾ ಮೈದಾನ ಮೊದನಿಂದಲೂ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆಯೇ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗಿತ್ತು. ಅದರಂತೆಯೇ ಈದ್ಗಾ ಮೈದಾನದ ಗಣಪತಿ ವಿಸರ್ಜನೆಯಲ್ಲಿ ಪೊಲೀಸರು ನಿರತರಾಗಿರುವುದನ್ನು ಅರಿತ ಖದೀಮರು ಸಿನಿಮಾ ಶೈಲಿಯಲ್ಲೇ ದರೋಡೆ ಮಾಡಿದ್ದಾರೆ, ಮನೆಯಲ್ಲಿದ್ದ ಆರು ಜನರ ಕೈಕಾಲು ಕಟ್ಟಿ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ ಪ್ರಕರಣ ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ. ಬುಕ್ ಡಿಪೋ ಮಾಲೀಕ ಉಲ್ಲಾಸ್ ದೊಡ್ಡಮನಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ದರೋಡೆಕೋರರು ಕಿಟಕಿಯ ಸರಳುಗಳನ್ನು ಕತ್ತರಿಸಿ ಮನೆ ಒಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಕಳ್ಳತನ ಮಾಡಿದ್ದಾರೆ. ಸುಮಾರು 8 ಜನ ದರೋಡೆಕೋರರ ಗ್ಯಾಂಗ್ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಯಾದ ಗಣಪತಿ ವಿಸರ್ಜನೆ ವೇಳೆ 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದರಿಂದ ಹುಬ್ಬಳ್ಳಿ (Hubballi) ಧಾರವಾಡ (Dharwad) ಪೊಲೀಸರು ಗಸ್ತು ತಿರುಗುತ್ತಿಲ್ಲ ಎಂಬುದನ್ನು ಕಳ್ಳರು ಅರಿತಿದ್ದರು. ಇದೇ ಸಮಯವನ್ನು ಬಳಸಿಕೊಂಡು ದರೋಡೆಗಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರು (Police) ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Shantha Kumari