ಸೂರ್ಯನಂತೆ ಪ್ರಜ್ವಲಿಸಲಿದೆ ಆಯೋಧ್ಯೆಯ ಬೀದಿಗಳು! – ಧರ್ಮಪಥದಲ್ಲಿ 40 ಸೂರ್ಯಸ್ತಂಭ ನಿರ್ಮಾಣ

ಸೂರ್ಯನಂತೆ ಪ್ರಜ್ವಲಿಸಲಿದೆ ಆಯೋಧ್ಯೆಯ ಬೀದಿಗಳು! – ಧರ್ಮಪಥದಲ್ಲಿ 40 ಸೂರ್ಯಸ್ತಂಭ ನಿರ್ಮಾಣ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಎಲ್ಲೆಲ್ಲೂ ಶ್ರೀರಾಮ ಜಪ ಆರಂಭವಾಗಿದೆ. ಜನವರಿ 22 ರಂದು ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇಡೀ ಅಯೋಧ್ಯೆ ನಗರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ದೇಶ, ವಿದೇಶಗಳಿಂದ ರಾಮಲಲ್ಲಾಗೆ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸಲು ರಾಮ ಮಂದಿರ ಆಡಳಿತ ಮಂಡಳಿ ನಾನಾ ತಯಾರಿ ಮಾಡಿಕೊಳ್ಳುತ್ತಿದೆ. ಇದೀಗ ಅಯೋಧ್ಯೆಯ ಧರ್ಮಪಥದ ಉಭಯ ಬದಿಗಳಲ್ಲಿ ತಲಾ 10 ಬೀದಿದೀಪಗಳ ಸ್ತಂಭಗಳು ನಿರ್ಮಾಣವಾಗುತ್ತಿದ್ದು, ಅವುಗಳಲ್ಲಿ ಜ್ಯೋತಿ ಬೆಳಗಿಸಿದಾಗ ಸೂರ್ಯನ ಆಕಾರದಲ್ಲಿ ಕಂಗೊಳಿಸುವಂತೆ ವಿನ್ಯಾಸ ಮಾಡಲಾಗಿದೆ.

ಇದನ್ನೂ ಓದಿ: ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬ್ಯಾನ್‌ ಮಾಡಿದ ಯೋಗಿ ಸರ್ಕಾರ!

ಈ ಕುರಿತು ಮಾಹಿತಿ ನೀಡಿದ ಅಯೋಧ್ಯೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಎ.ಪಿ. ಸಿಂಗ್‌, ‘30 ಅಡಿ ಎತ್ತರದ ತಲಾ 10 ಸ್ತಂಭಗಳನ್ನು ಲತಾ ಮಂಗೇಷ್ಕರ್‌ ವೃತ್ತದಿಂದ ಅಯೋಧ್ಯೆ ಬೈಪಾಸ್‌ವರೆಗೆ ಉಭಯ ಬದಿಗಳಲ್ಲಿ ಸ್ಥಾಪಿಸಲಾಗುತ್ತಿದೆ. ಉಳಿದ 20 ಸೂರ್ಯಸ್ತಂಭಗಳನ್ನು ಧರ್ಮ ಪಥದ ಸತ್ರಂಗಿ ಪೂಲ್‌ ಬಳಿ ಸ್ಥಾಪಿಸಲಾಗುತ್ತಿದೆ. ಇದರ ಕಾಮಗಾರಿ ಡಿ.29ರೊಳಗೆ ಮುಗಿಯಲಿದ್ದು, ಡಿ.30ರಂದು ನರೇಂದ್ರ ಮೋದಿಯವರನ್ನು ಈ ಸೂರ್ಯಸ್ತಂಭಗಳು ಅಯೋಧ್ಯೆಗೆ ಸ್ವಾಗತಿಸಲಿವೆ’ ಎಂದು ತಿಳಿಸಿದ್ದಾರೆ.

ಸೂರ್ಯಸ್ತಂಭಗಳನ್ನು ಮುಂಬೈ ಮೂಲದ ಸನ್‌ಸಿಟಿ ಇನೋವೇಷನ್ಸ್‌ ಸಂಸ್ಥೆಯವರು ನಾಸಿಕ್‌ನಲ್ಲಿ ತಯಾರಿಸಿದ್ದು, 30 ಅಡಿ ಎತ್ತರದ ಈ ಸ್ತಂಭಗಳನ್ನು ಕಾಂಕ್ರೀಟ್‌ ಪಿಲ್ಲರ್‌ನಿಂದ ನಿರ್ಮಾಣ ಮಾಡಲಾಗಿದೆ. ಅಲ್ಲದೆ ದೀಪಗಳ ಹೊದಿಕೆಯನ್ನು ಕಾಪರ್‌ ಪ್ಲೇಟ್‌ನಿಂದ ತಯಾರಿಸಲಾಗಿದ್ದು, ಸ್ತಂಭಕ್ಕೆ ಗಾಜಿನ ಫೈಬರ್‌ ಹೊದಿಕೆ ಹಾಕಲಾಗಿದೆ ಎಂದು ಸಂಸ್ಥೆಯ ಮ್ಯಾನೇಜರ್‌ ಸಚಿನ್‌ ನಿಕುಂಭ್‌ ಮಾಹಿತಿ ನೀಡಿದ್ದಾರೆ.

Shwetha M