ಕುಕ್ಕೆಯಲ್ಲಿ ರಸ್ತೆ ಸಂಪರ್ಕ ಸ್ಥಗಿತ – ಬೆಳಗಾವಿಯಲ್ಲಿ ಮನೆಗಳಿಗೆ ನುಗ್ಗಿದ ನೀರು – ರಾಜ್ಯಾದ್ಯಂತ ಮಳೆಯ ಆರ್ಭಟಕ್ಕೆ ಜನ ತಲ್ಲಣ

ಕುಕ್ಕೆಯಲ್ಲಿ ರಸ್ತೆ ಸಂಪರ್ಕ ಸ್ಥಗಿತ – ಬೆಳಗಾವಿಯಲ್ಲಿ ಮನೆಗಳಿಗೆ ನುಗ್ಗಿದ ನೀರು – ರಾಜ್ಯಾದ್ಯಂತ ಮಳೆಯ ಆರ್ಭಟಕ್ಕೆ ಜನ ತಲ್ಲಣ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕ್ಷೇತ್ರಕ್ಕೆ ಹೋಗುವ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು, ಗ್ರಾಮಸ್ಥರು ಕುಕ್ಕೆಗೆ ಸಂಪರ್ಕ ಇಲ್ಲದೆ ಪರದಾಡುವಂತಾಗಿದೆ. ರಸ್ತೆಯಲ್ಲಿ ಎದೆ ಮಟ್ಟಕ್ಕೆ ಕುಮಾರಧಾರ ಮತ್ತು ದರ್ಪಣ ತೀರ್ಥ ನದಿಯ ನೀರು ಹರಿಯುತ್ತಿದೆ. ಸುಬ್ರಹ್ಮಣ್ಯ ಸಂಪರ್ಕ ಸಾಧ್ಯವಾಗದೇ ದ್ವೀಪದಂಥ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹೆದ್ದಾರಿಯ ನಾಲ್ಕೈದು ಕಡೆ ಮುಳುಗಡೆ ಆಗ್ತಿದೆ. ಇನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯಲ್ಲಿ ಬಸ್, ಕಾರು ಸೇರಿ ಯಾವುದೇ ವಾಹನಗಳು ಹೋಗಲು ಆಗಲ್ಲ. ಪಕ್ಕದ ಗುಡ್ಡ ಹತ್ತಿ ಹೋದರೂ ದರ್ಪಣ ತೀರ್ಥ ಬಳಿ ಮತ್ತೆ ನೀರು ನಿಲ್ಲುತ್ತಿದೆ. ನಿತ್ಯದ ವಸ್ತುಗಳನ್ನು ತರಲು ಕೂಡ ಹೋಗಲು ಆಗ್ತಿಲ್ಲ. ಸುತ್ತಿಬಳಸಿ 18 ಕಿ.ಮೀ ಸುತ್ತಿ ಸುಬ್ರಹ್ಮಣ್ಯ ಹೋಗಬೇಕು. ಆದರೆ, ಮತ್ತೊಂದು ಭಾಗದಲ್ಲಿ ನೀರು ಹೆಚ್ಚಾದರೆ ಆ ರಸ್ತೆ ಕೂಡ ಬಂದ್ ಆಗುತ್ತದೆ. ನೀರು ಹೆಚ್ಚಾಗುತ್ತಿರುವುದರಿಂದ ರಸ್ತೆ ಭಾಗ ಕುಸಿಯೋ ಭೀತಿ ಕೂಡ ಎದುರಾಗಿದೆ.

ಇದನ್ನೂ ಓದಿ:ಕರಾವಳಿಯಲ್ಲಿ ಧಾರಾಕಾರ ಮಳೆ – ‘ರೆಡ್ ಅಲರ್ಟ್’ ಘೋಷಿಸಿದ ಹವಾಮಾನ ಇಲಾಖೆ

ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ- ಪುತ್ತೂರು- ಮಂಜೇಶ್ವರ ರಸ್ತೆ ಸಂಪೂರ್ಣ ಬಂದ್ ಆಗಿದೆ. ರಸ್ತೆ ಮೇಲೆ 7-8 ಅಡಿಯಷ್ಟು ನೀರು ಹರಿಯುತ್ತಿದೆ. ಇನ್ನು ಪೊಲೀಸರು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದಾರೆ. ಸ್ಥಳೀಯ ಸಿಬ್ಬಂದಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಡಿದುಕೊಂಡಿದ್ದಾರೆ.

ಮತ್ತೊಂದೆಡೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಳೆದ 12 ಗಂಟೆಗಳ ಅವಧಿಯಲ್ಲಿ ಕೆಆರ್‌ಎಸ್ ಡ್ಯಾಂ 3 ಅಡಿ ಭರ್ತಿಯಾಗಿದ್ದು, ನೀರಿನ ಮಟ್ಟ 95 ಅಡಿಗೆ ಏರಿಕೆಯಾಗಿದೆ. ಅಲ್ಲದೇ ಕಳೆದ 12 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ನೀರು ಹರಿದು ಬಂದಿದ್ದು, 19.139 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ.

ಬೆಳಗಾವಿಯಲ್ಲಿ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಬೆಳಗಾವಿ ನಗರದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಬಳ್ಳಾರಿ ನಾಲಾ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ವಡಗಾಂವ ಬಳಿಯ ಯಳ್ಳೂರ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನ ಜಲಾವೃತಗೊಂಡಿದೆ. ರಸ್ತೆ ಮೇಲೆ ಬಳ್ಳಾರಿ ನಾಲಾ ನೀರು ಬರಲು ಅರ್ಧ ಅಡಿಯಷ್ಟು ಮಾತ್ರ ಬಾಕಿ ಇದ್ದು ವಡಗಾಂವ ಬಳಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಜಲಾವೃತಗೊಳ್ಳಲಿದೆ. ಮತ್ತೊಂದೆಡೆ ಬೆಳಗಾವಿಯ ಗಣೇಶ್ ಕಾಲೋನಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೇಕಾರರ ಮನೆಗಳಿಗೂ ನೀರು ನುಗ್ಗಿದ್ದು, ಮಗ್ಗಗಳೆಲ್ಲವೂ ನೀರು ಪಾಲಾಗಿವೆ. ಊಟ ನಿದ್ದೆ ಇಲ್ಲದೇ ಜನ ನೀರು ಹೊರ ಹಾಕುತ್ತಿದ್ದಾರೆ.

suddiyaana