2021 ರಲ್ಲಿ 4 ಲಕ್ಷ ಅಪಘಾತ ಪ್ರಕರಣಗಳು! – ವರದಿಯಿಂದ ಬಹಿರಂಗ  

2021 ರಲ್ಲಿ 4 ಲಕ್ಷ ಅಪಘಾತ ಪ್ರಕರಣಗಳು! – ವರದಿಯಿಂದ ಬಹಿರಂಗ  

ನವದೆಹಲಿ: 2021ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟು 4,12,432 ರಸ್ತೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ 1,53,972 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಅಪಘಾತದಲ್ಲಿ 19, 478 ಅಪಘಾತಗಳು ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ. ವಾಹನ ಪ್ರಯಾಣದ ವೇಳೆ ಕಡ್ಡಾಯ ಸಂಚಾರ ನಿಯಮಗಳನ್ನು ಪಾಲಿಸುವುದರ ಅಗತ್ಯತೆಯನ್ನು ಈ ವರದಿ ಮತ್ತೊಮ್ಮೆ ಸಾರಿ ಹೇಳಿದೆ.

ಇದನ್ನೂ ಓದಿ: 2023 ರ ಡಿಸೆಂಬರ್ ನಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆ  ಪ್ರಾರಂಭ!

ಅತಿಯಾದ ವೇಗ, ವಾಹನ ಚಲಾಯಿಸುವಾಗ ಬೇರೆಡೆ ಗಮನ, ವಾಹನದ ನಿಯಂತ್ರಣ ತಪ್ಪುವುದು, ತಿರುವನ್ನು ತಪ್ಪಾಗಿ ನಿರ್ಣಯಿಸುವುದು ಮೊದಲಾದವುಗಳು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಈ ಕಾರಣಗಳಿಂದಾಗಿ 19,478 ರಸ್ತೆ ಅಪಘಾತಗಳು ಸಂಭವಿಸಿದೆ. ಈ ಅಪಘಾತಗಳಲ್ಲಿ ಒಟ್ಟು 9,150 ಜನರು ಬಲಿಯಾಗಿದ್ದು, 19,077 ಜನರು ಗಾಯಗೊಂಡಿದ್ದಾರೆ ಎಂದು ‘ಭಾರತದಲ್ಲಿ ರಸ್ತೆ ಅಪಘಾತಗಳು- 2021’ ಎಂಬ ವರದಿಯಲ್ಲಿ ಪ್ರಕಟಿಸಲಾಗಿದೆ.

ಅಪಘಾತವಾದವರಲ್ಲಿ ಶೇ. 21.2ರಷ್ಟು ಹಿಂದಿನಿಂದ ವಾಹನ ಗುದ್ದಿದ ಪ್ರಕರಣಗಳಾಗಿವೆ. ಶೇ.18.5ರಷ್ಟು ಪ್ರಕರಣಗಳಲ್ಲಿ ಮುಂಭಾಗದಿಂದ ವಾಹನಗಳು ಡಿಕ್ಕಿಯಾಗಿ ಅಪಘಾತವಾಗಿದೆ. ಸುಮಾರು ಶೇ.16.8 ಹಿಟ್ ಆ್ಯಂಡ್ ರನ್ ಪ್ರಕರಣಗಳು, ಶೇ.11.9 ರಷ್ಟು ಪಕ್ಕದಿಂದ ಬಂದು ವಾಹನ ಗುದ್ದಿದ ಪ್ರಕರಣಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಕಳೆದ ವರ್ಷ ದೇಶಾದ್ಯಂತ 4.12 ಲಕ್ಷ ರಸ್ತೆ ಅಪಘಾತ ಸಂಭವಿಸಿದೆ. ಇದರಲ್ಲಿ 1.53 ಲಕ್ಷ ಜನರು ಮೃತಪಟ್ಟಿದ್ದಾರೆ. ಈ ಪೈಕಿ ಹೆಲ್ಮೆಟ್ ಧರಿಸದೇ 46,593 ಮತ್ತು ಸೀಟ್ ಬೆಲ್ಟ್ ಧರಿಸದೆ 16,397 ಜನರು ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ತಿಳಿಸಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಕೂಡಾ ಇದೇ ರೀತಿ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣದಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದರು. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿನ ರಸ್ತೆ ಅಪಘಾತ- 2021’ ವರದಿ ಅನ್ವಯ ಕಳೆದ ವರ್ಷ ದೇಶದಲ್ಲಿ ಒಟ್ಟು 4,12,432 ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,53,972 ಜನರು ಮೃತಪಟ್ಟಿದ್ದರೆ, 3,84,448 ಜನರು ಗಾಯಗೊಂಡಿದ್ದಾರೆ.

ಕಳೆದ ವರ್ಷ 46,593 ಬೈಕ್ ಸವಾರರು ಹೆಲ್ಮೆಟ್ ಧರಿಸದ ಕಾರಣ ಗಂಭೀರವಾಗಿ ಗಾಯಗೊಂಡು ಅಪಘಾತದಲ್ಲಿ ಬಲಿಯಾಗಿದ್ದಾರೆ. ಇದರಲ್ಲಿ 32,877 ಜನರು ಬೈಕ್ ಚಾಲಕರಾಗಿದ್ದರೆ, 13,716 ಜನರು ಹಿಂಬದಿ ಸವಾರರು. ಹೆಲ್ಮೆಟ್ ಧರಿಸದ ಕಾರಣ 93,763 ಜನರು ಗಾಯಗೊಂಡಿದ್ದಾರೆ.

ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಕಳೆದ ವರ್ಷ 16,397 ಜನರು ಪ್ರಾಣ ಕಳೆದುಕೊಂಡಿದ್ದು, 39,231 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಮತ್ತು ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು ವಾಹನ ಅಪಘಾತಕ್ಕೆ ಕಾರಣವಾಗುವುದಿಲ್ಲವಾದರೂ, ಇಂಥ ಸುರಕ್ಷತಾ ಕ್ರಮಗಳ ಪಾಲನೆಯಿಂದ ಅಪಘಾತದ ವೇಳೆ ದೇಹಕ್ಕೆ ದೊಡ್ಡಮಟ್ಟದ ಹಾನಿಯಾಗುವುದು ತಪ್ಪಿ, ಜೀವ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ.

suddiyaana