ರಾಜ್ಯ ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ರಸ್ತೆ ಅಪಘಾತ – ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ 53ರಷ್ಟು ಹೆಚ್ಚಳ!

ರಾಜ್ಯ ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ರಸ್ತೆ ಅಪಘಾತ – ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ 53ರಷ್ಟು ಹೆಚ್ಚಳ!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಇದರೊಂದಿಗೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಅಪಘಾತಗಳಲ್ಲಿ ಪಾದಾಚಾರಿಗಳೇ ಸಾವನ್ನಪ್ಪುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2022 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 247 ಮಂದಿ ಪಾದಚಾರಿಗಳು ಸಾವನ್ನಪ್ಪಿದ್ದಾರೆ ಎಂಬ ಆತಂಕಕಾರಿ ವಿಚಾರ ನಗರ ಸಂಚಾರ ಪೊಲೀಸರ ವಿಸ್ತೃತ ವಿಶ್ಲೇಷಣಾ ವರದಿಯಿಂದ ತಿಳಿದುಬಂದಿದೆ.

ಸಂಚಾರ ಪೊಲೀಸರು ಅಪಘಾತದ ಕುರಿತು 48 ಪುಟಗಳ ವಿಸ್ತೃತ ವಿಶ್ಲೇಷಣಾ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಈ ವರದಿಯ ಪ್ರಕಾರ, ಪಾದಚಾರಿಗಳ ಸಾವಿಗೆ ಕಾರಣವಾದ ಅಪಘಾತಗಳು  2020, 2021 ಮತ್ತು 2022 ರಲ್ಲಿ ಅತಿ ಹೆಚ್ಚು ಸಂಭವಿಸಿವೆ. ಬೆಂಗಳೂರು ನಗರದಲ್ಲಿ 2020 ಕ್ಕೆ ಹೋಲಿಸಿದರೆ 2022 ರಲ್ಲಿ ಅಪಘಾತಗಳ ಸಂಖ್ಯೆ 120 ಮತ್ತು ಮೃತಪಟ್ಟವರ ಸಂಖ್ಯೆ 115ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಬಸ್‌ನಲ್ಲಿ ಫುಲ್‌ ರಶ್‌ – ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಪ್ರಯಾಣಿಕ ಸಾವು

ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಹೊರತಾಗಿಯೂ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ರಸ್ತೆ ಅಪಘಾತಗಳಿಂದಾಗಿ ಪಾದಚಾರಿಗಳ ಸಾವಿನ ಪ್ರಮಾಣ 2022 ರಲ್ಲಿ ಶೇಕಡಾ 53.41 ರಷ್ಟು ಹೆಚ್ಚಾಗಿದೆ. 2021 ಮತ್ತು 2020 ರಲ್ಲಿ ಕ್ರಮವಾಗಿ 161 ಮತ್ತು 164 ಪಾದಚಾರಿಗಳು ಸಾವನ್ನಪ್ಪಿದ್ದರು. 2022 ರಲ್ಲಿ, ಬೆಂಗಳೂರು ಟ್ರಾಫಿಕ್ ಪೊಲೀಸರು 1,04,49,571 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದು 2021 ರಲ್ಲಿ ದಾಖಲಿಸಿದ್ದ ಪ್ರಕರಣಗಳಿಗಿಂತ ಶೇ 12.29 ರಷ್ಟು ಹೆಚ್ಚಾಗಿದೆ.

ಇನ್ನು ಪಾದಚಾರಿಗಳ ಸಾವಿಗೆ ಕಾರಣವಾಗಿರುವ ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳು ಅಗ್ರಸ್ಥಾನದಲ್ಲಿವೆ. 2022ರಲ್ಲಿ ದ್ವಿಚಕ್ರ ವಾಹನಗಳ ಅಪಘಾತದಲ್ಲಿ 64 ಪಾದಚಾರಿಗಳು ಸಾವನ್ನಪ್ಪಿದ್ದರು. ಇದು 2021 ರಲ್ಲಿ 47 ಮತ್ತು 2020 ರಲ್ಲಿ 52 ಆಗಿತ್ತು. 2020 ರಿಂದ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳ ಅಪಘಾತಗಳೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ. 2022 ರಲ್ಲಿ 200 ದ್ವಿಚಕ್ರ ವಾಹನ ಸವಾರರು ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, ಈ ಪೈಕಿ 141 ಮಂದಿ ಸ್ವಯಂ ಅಪಘಾತಗಳಿಂದ ಸಾವನ್ನಪ್ಪಿದ್ದರು. ಅದೇ ವರ್ಷ, 85 ಮಂದಿ ಹಿಂಬದಿ ಸವಾರರು ಅಪಘಾತಗಳಲ್ಲಿ ಸಾವನ್ನಪ್ಪಿದ್ದರು. 2022 ರಲ್ಲಿ ಸಂಭವಿಸಿದ್ದ 252 ಅಪಘಾತಗಳಲ್ಲಿ ಮೃತಪಟ್ಟಿದ್ದ ದ್ವಿಚಕ್ರ ವಾಹನ ಸವಾರರಲ್ಲಿ ಹೆಚ್ಚಿನವರು ಹೆಲ್ಮೆಟ್ ಧರಿಸಿದ್ದರು. ಇದರಿಂದ ಹೆಚ್ಚಿನ ದ್ವಿಚಕ್ರವಾಹನ ಸವಾರರು ಬಳಸುತ್ತಿರುವ ಹೆಲ್ಮೆಟ್ ಕಳಪೆ ಗುಣಮಟ್ಟದ್ದು ಮತ್ತು ಅನೇಕರು ಸರಿಯಾಗಿ ಹೆಲ್ಮೆಟ್ ಧರಿಸದೇ ಇರುವುದು ತಿಳಿದುಬಂದಿದೆ. 2022 ರಲ್ಲಿ 23 ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ಗಳನ್ನು ಧರಿಸಿರಲಿಲ್ಲ ಮತ್ತು 67 ಪ್ರಕರಣಗಳಲ್ಲಿ ಧರಿಸಿದ್ದರು ಎಂದು ವರದಿ ತಿಳಿಸಿದೆ.

ಇನ್ನು ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಏರಿಕೆ ಭಾರಿ ಏರಿಕೆಯಾಗಿದೆ. 2022 ರಲ್ಲಿ ಬೆಂಗಳೂರಿನಲ್ಲಿ 232 ಹಿಟ್ ಅಂಡ್ ರನ್ ಪ್ರಕರಣಗಳು ವರದಿಯಾಗಿವೆ. 2021 ಕ್ಕೆ ಹೋಲಿಸಿದರೆ ಇದು ಶೇಕಡಾ 22.75 ರಷ್ಟು ಏರಿಕೆ ಕಂಡಿದೆ. 2021 ಮತ್ತು 2020 ರಲ್ಲಿ ಕ್ರಮವಾಗಿ 189 ಮತ್ತು 194 ಹಿಟ್ ಅಂಡ್ ರನ್ ಪ್ರಕರಣಗಳು ವರದಿಯಾಗಿದ್ದವು ಎಂದು ವರದಿ ಉಲ್ಲೇಖಿಸಿದೆ.

suddiyaana