ಶಬರಿಮಲೆಗೆ ಹೋಗಿ ಬರುತ್ತಿದ್ದ ವೇಳೆ ಭೀಕರ ಅಪಘಾತ – ಪಕ್ಕದಲ್ಲಿ ಮಲಗಿದ್ದ ಮಗಳು ಹೆಣವಾದಳು!

ಶಬರಿಮಲೆಗೆ ಹೋಗಿ ಬರುತ್ತಿದ್ದ ವೇಳೆ ಭೀಕರ ಅಪಘಾತ – ಪಕ್ಕದಲ್ಲಿ ಮಲಗಿದ್ದ ಮಗಳು ಹೆಣವಾದಳು!

ತುಮಕೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದ  ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅರ್ಜುನ್ ಕೈ ಹಿಡಿಯದ ಕ್ರಿಕೆಟ್ – ಮೆರೆಯೋ ಮುನ್ನವೇ ಸಚಿನ್ ಪುತ್ರ ಮರೆ?

ಶುಕ್ರವಾರ ಬೆಳಗಿನ ಜಾವ 4.45ರ ಸುಮಾರಿಗೆ ತುಮಕೂರು ತಾಲೂಕಿನ ಕೋರಾ ಬಳಿ ಅಪಘಾತ ಸಂಭವಿಸಿದೆ. ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಯಿಂದ ವಾಪಸ್ ಕೊಪ್ಪಳಕ್ಕೆ ತೆರಳುತ್ತಿದ್ದರು. ಕ್ರೂಸರ್ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, 7 ವರ್ಷದ ಬಾಲಕಿ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕ್ಕನೂರು ಹಾಗೂ ಗದ್ದಿಗೆರೆ ತಾಂಡಾದ ಒಟ್ಟು 10 ಮಾಲಾಧಾರಿಗಳು ಜನವರಿ 5 ರಂದು ಶಬರಿಮಲೆಗೆ ತೆರಳಿದ್ದರು. ಬುಧವಾರವಷ್ಟೇ ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿ, ಗುರುವಾರ ಮಧ್ಯಾಹ್ನ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಸಾಕ್ಷಿ (7 ವರ್ಷ), ಮಾರುತಪ್ಪ (45 ವರ್ಷ), ವೆಂಕಟೇಶ್ (30 ವರ್ಷ) ಮತ್ತು ಗವಿಸಿದ್ದಪ್ಪ (28 ವರ್ಷ) ಎಂಬುವವರು ಮೃತಪಟ್ಟಿದ್ದಾರೆ. ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಮೂಲದವರು ಎಂದು ತಿಳಿದುಬಂದಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಾಹನದಲ್ಲಿದ್ದ ಚಾಲಕ ಸೇರಿದಂತೆ ಶ್ರೀನಾಥ್, ಪ್ರದೀಪ್ ಕುಮಾರ್, ರಾಜಪ್ಪ, ಹುಲಿಗಪ್ಪ, ರಾಕೇಶ್, ತಿರುಪತಿ, ಶ್ರೀನಿವಾಸ್ ಮತ್ತು ಪ್ರವೀಣ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಪ್ಪ ಎಂಬುವವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇನ್ನು ಅಪಘಾತದ ಸ್ಥಳದಲ್ಲಿ ಕ್ರೂಸರ್ ಮುಂಭಾಗ ನಜ್ಜುಗುಜ್ಜಾಗಿದ್ದು, ಇದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ನಾಲ್ವರು ಮೃತರಾದ ಬೆನ್ನಲ್ಲಿಯೇ ಆಸ್ಪತ್ರೆಗಳಲ್ಲಿರುವ ಅವರ ಸಂಬಂಧಿಕರು ದೇವರ ದರ್ಶನಕ್ಕೆ ಹೋಗಿ ಕುಟುಂಬಸ್ಥರನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುತ್ತಿದ್ದಾರೆ.

ಕಣ್ಣೀರು ಹಾಕಿದ ಮೃತ ಬಾಲಕಿಯ ತಂದೆ

ಅಪಘಾತದಲ್ಲಿ ಏಳು ವರ್ಷದ ಪುತ್ರಿ ಸಾಕ್ಷಿಯನ್ನು ಕಳೆದುಕೊಂಡ ತಂದೆ ಹುಲಿಗಪ್ಪ ಅವರ ಆರ್ತನಾದ ಮುಗಿಲು ಮುಟ್ಟಿತ್ತು. ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು, ಅಪಘಾತ ಹೇಗಾಯಿತು ಎಂದು ಗೊತ್ತಾಗಲಿಲ್ಲ. ಒಂದನೇ ತರಗತಿ ಓದುತ್ತಿದ್ದ ಮಗಳಿಗೆ ಒಳ್ಳೆಯದಾಗಲಿ ಎಂದು ಎರಡನೇ ಬಾರಿ ಶಬರಿಮಲೆಗೆ ಕರೆದೊಯ್ದಿದ್ದೆ. ಆದರೆ ದೇವರು ಇಂತಹ ಶಿಕ್ಷೆ ನೀಡಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ.

Shwetha M