ಟಾಸ್ ಸೋತು ಮ್ಯಾಚ್ ನೂ ಕೈಚೆಲ್ಲಿದ ಲಕ್ನೋ – ಡೆಲ್ಲಿ ಟೀಂ ಗೆಲ್ಲಿಸಿದ್ದೇ ರಿಷಭ್ ಪಂತ್

ವಾಟ್ ಎ ಮ್ಯಾಚ್. ಕ್ರಿಕೆಟ್ನಲ್ಲಿ ಯಾವುದೂ ಅಸಾಧ್ಯವಲ್ಲ. ಅದ್ರಲ್ಲೂ ಐಪಿಎಲ್ನಲ್ಲಿ ಲಾಸ್ಟ್ ಬಾಲ್ನಲ್ಲಿ 8 ರನ್ ಬೇಕಿದ್ದಾಗ್ಲೂ ಗೆದ್ದವ್ರನ್ನ ನೋಡಿದ್ದೇವೆ. ಹೀರೋ ಇದ್ದವ್ರು ವಿಲನ್ ಆಗ್ತಾರೆ. ವಿಲನ್ ಗಳಾಗಿದ್ದವ್ರು ಹೀರೋಗಳಾಗಿ ಬಿಡ್ತಾರೆ. ಯಾವ ಮೂಮೆಂಟ್ನಲ್ಲಿ ಬೇಕಿದ್ರೂ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಬರುತ್ತೆ. ಲಕ್ನೋ ಸೂಪರ್ ಜೇಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫಸ್ಟ್ ಮ್ಯಾಚ್ನಲ್ಲಿ ಆಗಿದ್ದೂ ಅದೇ. 18ನೇ ಸೀಸನ್ ಐಪಿಎಲ್ನ ತಮ್ಮ ಫಸ್ಟ್ ಮ್ಯಾಚ್ನ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ಶುಭಾರಂಭ ಮಾಡಿದೆ. ಬಟ್ ಆ ವಿನ್ನಿಂಗ್ ಮೂಮೆಂಟ್ ಅಷ್ಟು ಸುಲಭ ಇರ್ಲಿಲ್ಲ.
ಇದನ್ನೂ ಓದಿ : ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್! – ಇನ್ನುಮುಂದೆ ಪಿವಿಆರ್ ನಲ್ಲೂ ಕ್ರಿಕೆಟ್ ಪ್ರದರ್ಶನ?
ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ್ರು. ಓಪನರ್ ಆಗಿ ಬಂದ ಌಡನ್ ಮಾರ್ಕ್ರಂ 15 ರನ್ಗೆ ವಿಕೆಟ್ ಒಪ್ಪಿಸಿದ್ರು. ಬಟ್ 2ನೇ ವಿಕೆಟ್ಗೆ ಜೊತೆಯಾದ ಲಕ್ನೋ ಪರ ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಮಿಚೆಲ್ ಮಾರ್ಷ್ 36 ಎಸೆತಗಳಲ್ಲಿ 72 ರನ್ ಸಿಡಿಸಿದ್ರೆ ಒನ್ ಡೌನ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ 30 ಎಸೆತಗಳಲ್ಲಿ 75 ರನ್ ಬಾರಿಸಿದ್ರು. ಡೇವಿಡ್ ಮಿಲ್ಲರ್ 27 ರನ್ ಸಿಡಿಸಿದ್ರು. ಇವ್ರನ್ನ ಬಿಟ್ರೆ ಉಳಿದವ್ರೆಲ್ಲಾ ಬ್ಯಾಟ್ ಬೀಸಲೇ ಇಲ್ಲ. ಅಂತಿಮವಾಗಿ ಲಕ್ನೋ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 209 ರನ್ ಕಲೆ ಹಾಕಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ತಂಡ ಸೇರಿದ್ದ ಕ್ಯಾಪ್ಟನ್ ರಿಷಭ್ ಪಂತ್ ಪಸ್ಟ್ ಮ್ಯಾಚ್ನಲ್ಲೇ ನಿರಾಸೆ ಮೂಡಿಸಿದ್ರು. ಐಪಿಎಲ್ ಇತಿಹಾಸದಲ್ಲೇ ಕಾಸ್ಟ್ಲಿ ಕ್ಯಾಪ್ಟನ್ ಎನಿಸಿಕೊಂಡಿರೋ ಪಂತ್ 6 ಬಾಲ್ಗಳನ್ನ ಫೇಸ್ ಮಾಡಿ ಖಾತೆ ತೆರೆಯದೇ ಔಟ್ ಆದ್ರು.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಪರ್ಸನಲ್ ರೀಸನ್ಗಳಿಂದ ಕೆಎಲ್ ರಾಹುಲ್ ಕಣಕ್ಕಿಳಿದಿರಲಿಲ್ಲ. 210 ರನ್ ಗಳ ಟಾರ್ಗೆಟ್ ಬೆನ್ನತ್ತಿದ್ದ ಡಿಸಿ ಫಸ್ಟ್ ಓವರ್ನಲ್ಲೇ ಜೇಕ್ ಫ್ರೇಸರ್ ಮೆಕ್ಗುರ್ಕ್ ಹಾಗೇ ಅಭಿಷೇಕ್ ಪೋರೆಲ್ ವಿಕೆಟ್ ಕಳ್ಕೊಳ್ತು. ಸೆಕೆಂಡ್ ಓವರ್ನಲ್ಲಿ ಸಮೀರ್ ರಿಜ್ವಿ ಕೂಡ ಪೆವಿಲಿಯನ್ ಸೇರಿದ್ರು. 7 ರನ್ ಗಳಿಸಿದ್ದಾಗ್ಲೇ ಡೆಲ್ಲಿ ಟೀಂ ಪ್ರಮುಖ 3 ವಿಕೆಟ್ಸ್ ಉರುಳಿದ್ವು. ಇನ್ನೇನು ಟಾಪ್ ಆರ್ಡರ್ ಬ್ಯಾಟರ್ಸ್ ಇಲ್ಲದ ಡೆಲ್ಲಿ ಸೋಲೋದು ಪಕ್ಕಾ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಬಟ್ ಸೋಲೋ ಮ್ಯಾಚಲ್ಲಿ ಮಿಕಾರಲ್ ಮಾಡಿದ್ದು ಬಾಲಂಗೋಚಿಗಳು. ಟ್ರಿಸ್ಟನ್ ಸ್ಟಬ್ಸ್ ಅಗ್ರೆಸ್ಸಿವ್ ಬ್ಯಾಟಿಂಗ್ ಶುರು ಮಾಡಿ 34 ರನ್ ಗಳಿಸಿ ಬೌಲ್ಡ್ ಆದ್ರು. ಬಟ್ ವಿಪ್ರಾಜ್ ನಿಗಮ್ ಮತ್ತು ಅಶುತೋಶ್ ಶರ್ಮಾ ತಾವೇ ಮ್ಯಾಚ್ ಗೆಲ್ಲಿಸ್ತೀವಿ ಅಂತಾ ಬ್ಯಾಟ್ ಬೀಸೋಕೆ ಶುರು ಮಾಡಿದ್ರು. ವಿಪ್ರಾಜ್ 15 ಎಸೆತಗಳಲ್ಲೇ 39 ರನ್ ಸಿಡಿಸಿ ಕ್ಯಾಚ್ ಔಟ್ ಆದ್ರು. ಇನ್ನೇನು ಡಿಸಿ ಗೆಲುವು ಅಸಾಧ್ಯ ಅನ್ನುವಾಗ ಅಶುತೋಶ್ ಅಸಲಿ ಆಟ ಶುರು ಮಾಡಿದ್ರು. ಬ್ಯಾಕ್ ಟು ಬ್ಯಾಕ್ ಫೋರ್, ಸಿಕ್ಸ್ ಅಂತಾ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. 5 ಸಿಕ್ಸ್, 5 ಫೋರ್ಗಳೊಂದಿಗೆ 31 ಎಸೆತಗಳಲ್ಲಿ 66 ರನ್ ಸಿಡಿಸಿ ತಂಡವನ್ನ ಗೆಲುವಿನ ದಡ ಮುಟ್ಟಿಸಿ ಅಜೇಯರಾಗಿ ಉಳಿದ್ರು. ಇನ್ನೂ ಮೂರು ಬಾಲ್ಗಳಿರುವಂತೆ 9 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆದ್ರು.
ಅಷ್ಟಕ್ಕೂ ಲಾಸ್ಟ್ ಓವರ್ವರೆಗೂ ಇಡೀ ಪಂದ್ಯ ಲಕ್ನೋ ಕಡೆಯೇ ಇತ್ತು. ಡೆಲ್ಲಿ ಟೀಂ 19 ಓವರ್ಗಳ ಮುಕ್ತಾಯದ ವೇಳೆಗೆ 9 ವಿಕೆಟ್ ಕಳ್ಕೊಂಡು 204 ರನ್ ಗಳಿಸಿತ್ತು. ಕೊನೇ ಓವರ್ನಲ್ಲಿ ಡೆಲ್ಲಿ ಪಡೆಗೆ 6 ರನ್ಗಳ ಅವಶ್ಯಕತೆಯಿತ್ತು. 20ನೇ ಓವರ್ ಎಸೆದ ಶಹಬಾಝ್ ಅಹ್ಮದ್ ಮೊದಲ ಎಸೆತದಲ್ಲಿ ಮೋಹಿತ್ ಶರ್ಮಾ ಮುನ್ನುಗ್ಗಿ ಬಂದು ರನ್ಗಳಿಸಲು ಯತ್ನಿಸಿದ್ದರು. ಆದರೆ ಚೆಂಡು ಪ್ಯಾಡ್ಗೆ ತಗುಲಿ ವಿಕೆಟ್ ಕೀಪರ್ನತ್ತ ಹೋಯ್ತು. ಈ ಟೈಮಲ್ಲಿ ಪಂತ್ ಚೆಂಡನ್ನ ಮಿಸ್ ಮಾಡಿದ್ರು. ಅಕಸ್ಮಾತ್ ಈ ಬಾಲ್ ಏನಾದ್ರೂ ಪಂತ್ ಕೈಗೆ ಸಿಕ್ಕಿದ್ರೆ ಕ್ರೀಸ್ನಿಂದ ದೂರ ಹೋಗಿದ್ದ ಮೋಹಿತ್ ಶರ್ಮಾ ಅವರನ್ನು ಸುಲಭವಾಗಿ ಸ್ಟಂಪ್ ಔಟ್ ಮಾಡುವ ಅವಕಾಶ ರಿಷಭ್ ಪಂತ್ ಗಿತ್ತು. ಅಲ್ಲಿಗೆ ಡಿಸಿ ಎಲ್ಲಾ ವಿಕೆಟ್ ಕಳ್ಕೊಳ್ತಿತ್ತು. 5 ರನ್ಗಳಿಂದ ಲಕ್ನೋ ಗೆಲ್ಲುತ್ತಿತ್ತು. ಬಟ್ ಈ ಅವಕಾಶವನ್ನ ಕಳ್ಕೊಂಡ್ರು. ಬಟ್ 2ನೇ ಎಸೆತದಲ್ಲಿ ಮೋಹಿತ್ ಶರ್ಮಾ ಸಿಂಗಲ್ ತಗೊಂಡು ಅಶುತೋಶ್ಗೆ ಸ್ಟ್ರೈಕ್ ಬಿಟ್ಟುಕೊಟ್ರು. ಅಶುತೋಶ್ ಸಿಕ್ಸರ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡಿದ್ರು.