ಪಂತ್ RCBಗೋ.. CSKಗೋ? – ರಿಷಭ್ ಬಂದ್ರೆ 1 ಕಲ್ಲಲ್ಲಿ 3 ಹಕ್ಕಿ
ಡೆಲ್ಲಿ ಡ್ಯಾಷರ್ ನಡೆ ಯಾರ ಕಡೆ?
ಟೀಂ ಇಂಡಿಯಾದಲ್ಲಿ ಸದ್ಯ ಟ್ರೆಂಡಿಂಗ್ನಲ್ಲಿ ಇರೋ ಆಟಗಾರ ಅಂದ್ರೆ ರಿಷಭ್ ಪಂತ್. ವಿಕೆಟ್ ಕೀಪರ್ ಸ್ಟಾರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಸದ್ಯ ಭಾರತ ತಂಡದಲ್ಲಿ ಸತತ ಅವಕಾಶಗಳನ್ನ ಗಿಟ್ಟಿಸಿಕೊಳ್ತಿದ್ದಾರೆ. ಹಾಗೇ ಸ್ಥಿರ ಪ್ರದರ್ಶನ ಕೂಡ ನೀಡ್ತಿದ್ದಾರೆ. ಌಕ್ಸಿಡೆಂಟ್ ಬಳಿಕ ಗ್ರೇಟ್ ಕಮ್ ಬ್ಯಾಕ್ ಮಾಡಿರೋ ಪಂತ್ ಕ್ರಿಕೆಟ್ ಲೋಕವೇ ಬೆರಗಾಗುವಂತೆ ಪ್ರದರ್ಶನ ನೀಡ್ತಿದ್ದಾರೆ. ಇದೇ ಪರ್ಫಾಮೆನ್ಸ್ ಈಗ ಐಪಿಎಲ್ನಲ್ಲೂ ರಿಷಭ್ ಪಂತ್ಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಪಂತ್ರನ್ನ ತಂಡಕ್ಕೆ ಕರೆಸಿಕೊಳ್ಳೋಕೆ ದೊಡ್ಡ ದೊಡ್ಡ ಆಫರ್ಗಳನ್ನೇ ಕೊಡ್ತಿದ್ದಾರೆ. ಅದ್ರಲ್ಲೂ ಈ ಲಿಸ್ಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಂಚೂಣಿಯಲ್ಲಿವೆ. ಅಷ್ಟಕ್ಕೂ ಪಂತ್ಗೆ ಈ ಪರಿ ಬೇಡಿಕೆ ಸೃಷ್ಟಿಯಾಗಿದ್ದೇಗೆ? ಏನೆಲ್ಲಾ ಆಫರ್ ಮಾಡ್ತಿದ್ದಾರೆ? ಅಷ್ಟಕ್ಕೂ ಪಂತ್ ದೆಹಲಿ ತಂಡ ಬಿಡೋಕೆ ರೆಡಿಯಾಗಿರೋದ್ಯಾಕೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಾಹುಕಾಟಕ್ಕೆ ಬೆಲೆ ತೆತ್ತ ಕನ್ನಡಿಗ – NZ ಫೈಟ್.. KL ಗೆ ಗೇಟ್ ಪಾಸ್
2025 ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಮೆಗಾ ಆಕ್ಷನ್ ನಡೆಯಲಿದೆ. ಈಗಾಗ್ಲೇ ಬಿಸಿಸಿಐ ನಿಯಮಗಳನ್ನ ರಿಲೀಸ್ ಮಾಡಿ ಆಟಗಾರರ ರೀಟೆನ್ಷನ್ ಮತ್ತು ಆರ್ಟಿಎಂ ಕಾರ್ಡ್ ಬಳಕೆ ಬಗ್ಗೆ ಗೈಡ್ಲೈನ್ಸ್ ನೀಡಿದೆ. ಅಕ್ಟೋಬರ್ 31ರೊಳಗೆ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳೋ ಆಟಗಾರರು ಯಾರು ಮತ್ತು ಹರಾಜಿಗೆ ಬಿಡುವ ಆಟಗಾರರು ಯಾರು ಅನ್ನೋದನ್ನ ಲಿಸ್ಟ್ ರಿಲೀಸ್ ಮಾಡ್ಬೇಕು. ಸೋ ಇಡೀ ಕ್ರಿಕೆಟ್ ಲೋಕದ ಚಿತ್ತ ಈಗ ಇದೇ ಆಕ್ಷನ್ನತ್ತ ನೆಟ್ಟಿದೆ. ಯಾಕಂದ್ರೆ ಐಪಿಎಲ್ ಹೇಳಿ ಕೇಳಿ ವಿಶ್ವದ ಶ್ರೀಮಂತ ಲೀಗ್. ಇಲ್ಲಿ ಆಟಗಾರರಿಗೆ ಕೋಟಿಗಳ ಲೆಕ್ಕದಲ್ಲಿ ಬಿಡ್ಡಿಂಗ್ ನಡೆದ್ರೆ ಫ್ರಾಂಚೈಸಿಗಳ ವ್ಯವಹಾರ ನೂರಾರು ಕೋಟಿಗಳ ಲೆಕ್ಕದಲ್ಲಿರುತ್ತೆ. ಹಾಗೇ ಬಿಸಿಸಿಐ ಆದಾಯ ಮಿಲಿಯನ್ಗಟ್ಟಲೆ. ಇದೇ ಕಾರಣಕ್ಕೆ 18ನೇ ಸೀಸನ್ ಐಪಿಎಲ್ ಭಾರೀ ಕುತೂಹಲ ಮೂಡಿಸಿದೆ. ಇದೀಗ ಟೀಂ ಇಂಡಿಯಾದ ಪ್ರತಿಭಾನ್ವಿತ ಆಟಗಾರ ರಿಷಭ್ ಪಂತ್ ಬಗ್ಗೆ ಎಕ್ಸ್ಕ್ಲ್ಯೂಸಿವ್ ಸುದ್ದಿಯೊಂದು ಹೊರಬಿದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಗೆ ಗುಡ್ ಬೈ ಹೇಳ್ತಾರಾ ಪಂತ್?
ಮೂಲಗಳ ಪ್ರಕಾರ ಡೆಲ್ಲಿ ಡ್ಯಾಷರ್ ರಿಷಭ್ ಪಂತ್ 2025ರ ಐಪಿಎಲ್ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರಲಿದ್ದಾರೆ. ಹಾಗೇ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಪಂತ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಪಂತ್ ಡೆಲ್ಲಿ ತಂಡದಲ್ಲಿ ಕ್ಯಾಪ್ಟನ್ ಆಗಿದ್ದಾರೆ ಮತ್ಯಾಕೆ ಟೀಂ ಬಿಡ್ಬೇಕು ಅಂತಾ ನಿಮಗೆ ಅನ್ನಿಸ್ಬೋದು. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಕೆಲ ಫ್ರಾಂಚೈಸಿಗಳಿಂದ ಪಂತ್ ಗೆ ಬಂದಿರುವ ಬಿಗ್ ಆಫರ್ಸ್. ಎಡಗೈ ದಾಂಡಿಗನ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿಗಳ ಪೈಕಿ ಅಗ್ರಸ್ಥಾನದಲ್ಲಿರುವುದು ಚೆನ್ನೈ ಸೂಪರ್ ಕಿಂಗ್ಸ್. ಐಪಿಎಲ್ ಮೆಗಾ ಹರಾಜಿನ ಸುದ್ದಿಯ ಬೆನ್ನಲ್ಲೇ ರಿಷಭ್ ಪಂತ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಮಾತುಕತೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡ್ತಿವೆ. ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ಅವರನ್ನು ನೇಮಿಸಿಕೊಳ್ಳಲು ಸಿಎಸ್ಕೆ ಆಸಕ್ತಿವಹಿಸಿದ್ದು, ಹೀಗಾಗಿ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
RCB ಟಾರ್ಗೆಟ್ ಲಿಸ್ಟ್ ನಲ್ಲಿದ್ದಾರೆ ರಿಷಭ್ ಪಂತ್!
ರಿಷಭ್ ಪಂತ್ ಡೆಲ್ಲಿ ತಂಡದಿಂದ ಹೊರಬರ್ತಾರೆ ಅನ್ನೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂತ್ರನ್ನ ಟಾರ್ಗೆಟ್ ಮಾಡಿದೆ. ಯಾಕಂದ್ರೆ ಪಂತ್ ಹೇಳಿ ಕೇಳಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೇ ಡಿಸಿ ಕ್ಯಾಪ್ಟನ್.. ಹಾಗೇನಾದ್ರೂ ಪಂತ್ ಬೆಂಗಳೂರು ತಂಡಕ್ಕೆ ಬಂದಿದ್ದೇ ಆದಲ್ಲಿ ಒಂದೇ ಕಲ್ಲಲ್ಲಿ ಮುರು ಹಕ್ಕಿಗಳನ್ನ ಹೊಡಿಯಬಹುದು. ವಿಕೆಟ್ ಕೀಪರ್, ಕ್ಯಾಪ್ಟನ್ ಹಾಗೇ ಮಿಡಲ್ ಆರ್ಡರ್ನಲ್ಲಿ ಬೆಸ್ಟ್ ಬ್ಯಾಟ್ಸ್ಮನ್ ಆಗಲಿದ್ದಾರೆ. ಹೀಗಾಗಿ ಆರ್ಸಿಬಿ ತಂಡ ಪಂತ್ ಮೇಲೆ ಕಣ್ಣಿಟ್ಟಿದೆ.
ಪಂಜಾಬ್, ಲಕ್ನೋ ತಂಡಗಳಲ್ಲೂ ನಾಯಕನ ಹುಡುಕಾಟ!
ಸಿಎಸ್ಕೆ, ಆರ್ಸಿಬಿ ನಡುವೆ ಪಂಜಾಬ್ ಕಿಂಗ್ಸ್ ಕೂಡ ಹೊಸ ನಾಯಕನ ಹುಡುಕಾಟಕ್ಕೆ ಇಳಿದಿದೆ. ಪಂಜಾಬ್ ತಂಡದ ನೂತನ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕವಾಗಿದ್ದಾರೆ. ಈ ಹಿಂದೆ ಪಾಂಟಿಂಗ್ ಕೋಚಿಂಗ್ನಲ್ಲೇ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಅಲ್ದೇ ಪಂಜಾಬ್ ತಂಡದ ಕ್ಯಾಪ್ಟನ್ ಆಗಿದ್ದ ಶಿಖರ್ ಧವನ್ ಈಗಾಗ್ಲೇ ಕ್ರಿಕೆಟ್ಗೆ ವಿದಾಯ ಹೇಳಿ ಹೊರಬಿದ್ದಿದ್ದಾರೆ. ಹೀಗಾಗಿ ತಂಡಕ್ಕೆ ನಾಯಕನ ಅವಶ್ಯಕತೆ ಇದೆ. ಮತ್ತೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗೆ ಮುನ್ನ ನಾಯಕ ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈಬಿಡಲು ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದೆ. ಒಂದು ವೇಳೆ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿದರೆ, ಆತನನ್ನು ರಾಹುಲ್ ಸ್ಥಾನಕ್ಕೆ ಖರೀದಿಸಲು ಯೋಜನೆ ಹಾಕಿಕೊಂಡಿದೆ.
ಸದ್ಯ ಪಂತ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ದೇ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 99 ರನ್ ಸಿಡಿಸಿದ್ದ ರಿಷಭ್, ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನ ಮೇಲೆರಿದ್ದಾರೆ. ವಿರಾಟ್ ಕೊಹ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಟ್ನಲ್ಲಿ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಕಾಣಿಸಿಕೊಂಡರೆ ಫ್ರಾಂಚೈಸಿಗಳ ನಡುವೆ ಪೈಪೋಟಿ ನಡೆಯೋದಂತೂ ಫಿಕ್ಸ್. ವಿಕೆಟ್ ಕೀಪರ್, ಕ್ಯಾಪ್ಟನ್, ಬ್ಯಾಟ್ಸ್ಮನ್ ಸ್ಥಾನ ತುಂಬುವ ಸಮರ್ಥ ಆಟಗಾರ. ಹೀಗಾಗಿ ದಾಖಲೆಯ ಮೊತ್ತಕ್ಕೆ ಮಾರಾಟವಾದ್ರೂ ಅಚ್ಚರಿ ಇಲ್ಲ.