ಮೊದಲ ಪಂದ್ಯದಲ್ಲೇ ಭಾರತದ 3 ಶತಕ – ಭರ್ಜರಿ ಸೆಂಜುರಿ ಸಿಡಿಸಿ ಪಲ್ಟಿ ಹೊಡೆದ ರಿಷಭ್ ಪಂತ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್ನಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತ್ತಿರುವ ಟೀಂ ಇಂಡಿಯಾ, ಆಂಗ್ಲರನಾಡಲ್ಲಿ ಅಬ್ಬರಿಸುತ್ತಿದೆ. ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಬಾರಿಸಿದ್ದ ಭಾರತ, ಎರಡನೇ ದಿನದಾಟವನ್ನು ಸಹ ಉತ್ತಮವಾಗಿ ಆರಂಭಿಸ್ತು. ಮೊದಲ ದಿನದಾಟದಲ್ಲಿ ಅಜೇಯರಾಗಿ ಉಳಿದಿದ್ದ ನಾಯಕ ಶುಭ್ಮನ್ ಗಿಲ್ ಹಾಗೂ ರಿಷಭ್ ಪಂತ್ ಎರಡನೇ ದಿನವೂ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಅದರಲ್ಲೂ ಉಪನಾಯಕ ರಿಷಭ್ ಪಂತ್ ಎಂದಿನಂತೆ ತಮ್ಮ ಹೊಡಿಬಡಿ ಆಟದ ಮೂಲಕ ಆಂಗ್ಲರ ಹೆಡೆಮುರಿ ಕಟ್ಟಿದ್ದು, ಎರಡನೇ ದಿನದಾಟದ ಮೊದಲ ಸೆಷನ್ನಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ರಿಷಭ್ ಪಂತ್ ದಾಖಲೆಯ ಶತಕ
ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 146 ಎಸೆತಗಳನ್ನು ತೆಗೆದುಕೊಂಡ ಪಂತ್ 10 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ ಏಳನೇ ಶತಕವನ್ನು ದಾಖಲಿಸಿದ್ದಲ್ಲದೆ, ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಶತಕ ಸಿಡಿಸಿದ ದಾಖಲೆಯನ್ನು ನಿರ್ಮಿಸಿದರು. ಅಲ್ಲದೆ 2025 ರಲ್ಲಿ ರಿಷಭ್ ಬ್ಯಾಟ್ನಿಂದ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ. ಶೋಯೆಬ್ ಬಶೀರ್ ಎಸೆತದಲ್ಲಿ ಪಂತ್ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.
ಧೋನಿಯನ್ನು ಹಿಂದಿಕ್ಕಿದ ಪಂತ್
ರಿಷಭ್ ಪಂತ್ 7 ಶತಕಗಳನ್ನು ಪೂರೈಸುವುದರೊಂದಿಗೆ ಭಾರತ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಧೋನಿ ಟೆಸ್ಟ್ನಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಭಾರತೀಯ ವಿಕೆಟ್ಕೀಪರ್ ಟೆಸ್ಟ್ನಲ್ಲಿ 3 ಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಲು ಸಾಧ್ಯವಾಗಿಲ್ಲ.

ನೋಡಿರಿ

