ಭೀಕರ ರಸ್ತೆ ಅಪಘಾತ – ಕ್ರಿಕೆಟರ್ ರಿಷಭ್ ಪಂತ್ ಗೆ ಗಂಭೀರ ಗಾಯ
ಹೊಸದಿಲ್ಲಿ: ಭಾರತದ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಮುಂಜಾನೆ ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂದಿರುಗುತ್ತಿದ್ದ ವೇಳೆ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂದಿರುಗುತ್ತಿದ್ದ ವೇಳೆ, ಡೆಹ್ರಾಡೂನ್ ಹೆದ್ದಾರಿ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಸಕ್ಷಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
‘ರಿಷಬ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ. ಸದ್ಯ ರಿಷಬ್ ಪಂತ್ ಅವರ ಸ್ಥಿತಿ ಸ್ಥಿರವಾಗಿದೆ’ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ ಸುಶೀಲ್ ನಗರ್ ತಿಳಿಸಿದ್ದಾರೆ.
‘ಅಪಘಾತದ ಸಮಯದಲ್ಲಿ ರಿಷಭ್ ಪಂತ್ ಕಾರಿನಲ್ಲಿ ಒಬ್ಬರೇ ಇದ್ದರು. ಅಪಘಾತ ಸಂಭವಿಸದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನಿಂದ ಹೊರಬರಲು ಅವರು ವಿಂಡ್‌ಸ್ಕ್ರೀನ್ ಅನ್ನು ಒಡೆದಿದ್ದಾರೆ’ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.
Cricketer Rishabh Pant met with an accident on Delhi-Dehradun highway near Roorkee border, car catches fire. Further details awaited. pic.twitter.com/qXWg2zK5oC
— ANI (@ANI) December 30, 2022
‘ರಿಷಬ್ ಅವರ ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬಹಳ ಕಷ್ಟಪಟ್ಟು ಬೆಂಕಿಯನ್ನು ಹತೋಟಿಗೆ ತರಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ರಿಷಬ್ ಪಂತ್ ಅವರನ್ನು ದೆಹಲಿ ರಸ್ತೆಯಲ್ಲಿರುವ ಸಕ್ಷಮ್ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.