₹27 ಕೋಟಿ.. 4 ಪಂದ್ಯ.. 19 ರನ್ – ಪಂತ್ ಗೆ ದುಬಾರಿ ಹಣವೇ ಮುಳುವಾಯ್ತಾ?
ರಿಷಭ್ ಆಟ ಮುಗಿಸಿದ್ರಾ ಗೋಯೆಂಕಾ?

ರಿಷಭ್ ಪಂತ್. ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಮಿಡಲ್ ಆರ್ಡರ್ನಲ್ಲಿ ಒನ್ ಆಫ್ ದಿ ಬೆಸ್ಟ್ ಪ್ಲೇಯರ್. ಅದ್ರಲ್ಲೂ ಌಕ್ಸಿಡೆಂಟ್ ಬಳಿಕ ಗ್ರೌಂಡ್ಗೆ ಮರಳಿದ್ದ ಪಂತ್ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಸಲಾಂ ಅಂದಿತ್ತು. ಕ್ರಿಕೆಟ್ ಬಗ್ಗೆ ಇರೋ ಅವ್ರ ಡೆಡಿಕೇಷನ್ಗೆ ಶಹಬ್ಬಾಸ್ ಅಂದಿದ್ರು. ಆದ್ರೀಗ ಅದೇ ಪಂತ್ ಬ್ಯಾಟಿಂಗ್ನೇ ಮರೆತವರಂತೆ ವಿಕೆಟ್ ಒಪ್ಪಿಸ್ತಿದ್ದಾರೆ. ಎದುರಾಳಿಗಳ ಜೊತೆಯಲ್ಲಿ ತಮಾಷೆ ಮಾಡುತ್ತಾ ಕೀಪಿಂಗ್ ಮಾಡ್ತಿದ್ದವ್ರು ಈಗ ಸಪ್ಪೆ ಮೋರೆಯಲ್ಲೇ ಇರ್ತಾರೆ. ಪಂದ್ಯದಿಂದ ಪಂದ್ಯಕ್ಕೆ ನಿರಾಸೆ ಮೂಡಿಸ್ತಾನೇ ಇದ್ದಾರೆ. ಮುಂಬೈ ವಿರುದ್ಧದ ಪಂದ್ಯದ ಬಳಿಕ ಮತ್ತಷ್ಟು ಟ್ರೋಲ್ ಆಗ್ತಿದ್ದಾರೆ.
ಇದನ್ನೂ ಓದಿ : LSG ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು – 12 ರನ್‌ಗಳಿಂದ ಗೆದ್ದ ಲಕ್ನೋ
ಐಪಿಎಲ್ನ 16ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿದೆ. ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ತು. ಮೊದಲು ಬ್ಯಾಟ್ ಮಾಡಿದ ಲಕ್ನೋ ಮಿಚೆಲ್ ಮಾರ್ಷ್ (60), ಮಾಕ್ರಮ್ (53) ಅವರ ಬ್ಯಾಟಿಂಗ್ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಈ ಗುರಿಯನ್ನ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಕೊನೇ ಓವರ್ವರೆಗೂ ಹೋರಾಟ ನಡೆಸಿದ್ರೂ ಗೆಲ್ಲೋಕೆ ಆಗ್ಲಿಲ್ಲ. ಬಟ್ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆಗಳನ್ನ ಬರೆದ್ರು. ಐಪಿಎಲ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಹಾರ್ದಿಕ್ ಪಾಂಡ್ಯ ಪಾತ್ರರಾಗಿದ್ದಾರೆ. ಶುಕ್ರವಾರ ಲಖನೌ ವಿರುದ್ಧ ಪಂದ್ಯದಲ್ಲಿ ಮುಂಬೈನ ಹಾರ್ದಿಕ್ 4 ಓವರ್‌ಗಳಲ್ಲಿ 36 ರನ್ ನೀಡಿ 5 ವಿಕೆಟ್ ಪಡೆದರು. ಅವರು ಮಾರ್ಕ್‌ರಮ್, ನಿಕೋಲಸ್ ಪೂರನ್, ರಿಷಭ್ ಪಂತ್, ಡೇವಿಡ್ ಮಿಲ್ಲರ್, ಆಕಾಶ್‌ದೀಪ್‌ರನ್ನು ಔಟ್ ಮಾಡಿದರು. ಹೀಗೆ ಎಂಐ ನಾಯಕ ಸೋತ್ರೂ ಶೈನ್ ಆಗ್ತಿದ್ರೆ ಲಕ್ನೋ ಮಾಲೀಕ ಪಂತ್ ಗೆದ್ದರೂ ಫ್ಯಾನ್ಸ್ ಮತ್ತು ಫ್ರಾಂಚೈಸಿ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ 27 ಕೋಟಿ ರೂಪಾಯಿಗೆ ಸೇಲ್ ಆಗಿದ್ರಿಂದ ಅವ್ರ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿತ್ತು. ಆದ್ರೆ ಮೊದಲ ಮೂರು ಪಂದ್ಯಗಳಲ್ಲಿ ಫೇಲ್ ಆಗಿದ್ದ ಪಂತ್ ನಾಲ್ಕನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದ್ರು. ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಲಖನೌ ನಾಯಕ ರಿಷಭ್ ಕೇವಲ 2 ರನ್‌ಗೆ ಔಟಾದರು. 6 ಎಸೆತಗಳನ್ನು ಎದುರಿಸಿದ ಅವರು, ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಇದು ಟೂರ್ನಿಯ 4 ಪಂದ್ಯಗಳಲ್ಲಿ ಅವರ ಒಂದಂಕಿ ಮೊತ್ತ. ದೆಹಲಿ ವಿರುದ್ಧ ಮೊದಲ ಪಂದ್ಯ ಆಡಿದ್ದ ಲಕ್ನೋ ಕ್ಯಾಪ್ಟನ್ ಡಕ್ಔಟ್ ಆಗಿದ್ರು. ಆ ಬಳಿಕ ತಮ್ಮ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ 15 ರನ್ ಗಳಿಸಿದ್ದರು. ಬಳಿಕ ಪಂಜಾಬ್ ವಿರುದ್ಧವೂ ಕಮ್ ಬ್ಯಾಕ್ ಮಾಡದ ಪಂತ್ ಕೇವಲ 2 ರನ್ ಬಾರಿಸಿದ್ದರು. ಇದೀಗ ಮುಂಬೈ ವಿರುದ್ಧವೂ 2 ರನ್ ಅಷ್ಟೇ ಗಳಿಸಿದ್ದು. ಅಂದರೆ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನ ಆಡಿದ್ದು ಕಲೆಹಾಕಿದ್ದು 19 ರನ್ಗಳನ್ನ ಮಾತ್ರ. ಲಕ್ನೋ ತಂಡ ಏಪ್ರಿಲ್ 8ರಂದು ಕೋಲ್ಕತಾ ವಿರುದ್ಧ 5ನೇ ಪಂದ್ಯ ಆಡಲಿದ್ದು, ಆ ಪಂದ್ಯದಲ್ಲಾದರೂ ರಿಷಭ್ ದೊಡ್ಡ ಮೊತ್ತ ಕಲೆಹಾಕುವ ಮೂಲಕ ಕಮ್ಬ್ಯಾಕ್ ಮಾಡ್ಲೇಬೇಕಿದೆ.
2024ರ ಐಪಿಎಲ್ನಲ್ಲಿ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ರು. ಹೈದ್ರಾಬಾದ್ ವಿರುದ್ಧ ಅಂದಿನ ಕ್ಯಾಪ್ಟನ್ ಕೆಎಲ್ ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡ ಸೋತಿದ್ದಕ್ಕೆ ಗ್ರೌಂಡ್ನಲ್ಲೇ ತರಾಟೆಗೆ ತೆಗೆದುಕೊಂಡಿದ್ರು. ಆ ನಂತ್ರ ಊಟಕ್ಕೆ ಕರೆದು ತೇಪೆ ಹಚ್ಚೋ ಕೆಲಸವನ್ನೂ ಮಾಡಿದ್ರು. ಇದಾದ ಬಳಿಕ ಕೆಎಲ್ ರಾಹುಲ್ ಲಕ್ನೋ ತಂಡ ತೊರೆದಿದ್ರು. ಆದ್ರೆ ಗೋಯೆಂಕಾ ಈ ಸಲ ಪಂತ್ರನ್ನ ದಾಖಲೆ ಬೆಲೆಗೆ ಖರೀದಿ ಮಾಡಿ ಬಿಲ್ಡಪ್ ಕೊಟ್ಟಿದ್ರು. ಆದ್ರೆ ಪಂತ್ ಆಟಕ್ಕೆ ಗೋಯೆಂಕಾ ತಲೆಗೇ ಗಿರ್ ಅಂತಿದೆ. ಶುಕ್ರವಾರದ ಮ್ಯಾಚ್ನಲ್ಲಿ ಪಂತ್ ವಿಕೆಟ್ ಒಪ್ಪಿಸಿ ಹಿಂತಿರುಗುತ್ತಿದ್ದಂತೆ, ಕ್ಯಾಮೆರಾಗಳು LSG ಮಾಲೀಕ ಸಂಜೀವ್ ಗೋಯೆಂಕಾ ಕಡೆಗೆ ತಿರುಗಿತ್ತು. ಈ ವೇಳೆ VIP ಬಾಕ್ಸ್‌ನಲ್ಲಿ ಕುಳಿತು ಮ್ಯಾಚ್ ನೋಡ್ತಿದ್ದ ಗೋಯೆಂಕಾ ವ್ಯಂಗ್ಯವಾಗಿ ನಕ್ಕಿದ್ದು ಫೋಟೋಗಳು ವೈರಲ್ ಆಗಿವೆ.
ಸದ್ಯ ಪಂತ್ ಆಟದ ಬಗ್ಗೆ ಸಾಕಷ್ಟು ಮಾಜಿ ಕ್ರಿಕೆಟಿಗರು ಕೂಡ ಚರ್ಚೆ ಮಾಡ್ತಿದ್ದಾರೆ. ದುಬಾರಿ ಮೊತ್ತ ನೀಡಿದ್ದೇ ಅವ್ರ ಆಟದ ಮೇಲೆ ಪ್ರಭಾವ ಬೀರಿರಬಹುದು. ನಾನು ಚೆನ್ನಾಗಿ ಆಡ್ಬೇಕು ಅನ್ನೋ ಮನಸ್ಥಿತಿಯಲ್ಲಿ ಪಂತ್ ಇದ್ರೂ ಕೂಡ ಅದಕ್ಕೆ ತಕ್ಕಂತೆ ಬ್ಯಾಟ್ ಬೀಸೋಕೆ ಅವ್ರಿಂದ ಸಾಧ್ಯವಾಗ್ತಿಲ್ಲ. ಅಲ್ದೇ ಡಿಫೆನ್ಸಿವ್ ಗೇಮ್ ಮೇಲೆ ಹೆಚ್ಚು ಕಾನ್ಸಂಟ್ರೇಟ್ ಮಾಡ್ತಿದ್ದಾರೆ. ಹೊಡಿಬಡಿ ಆಟಕ್ಕೆ ಮುಂದಾಗದೆ ರಕ್ಷಣಾತ್ಮಕವಾಗಿ ಆಡ್ತಿರೋದೇ ವಿಕೆಟ್ ಬೀಳುವಂತೆ ಮಾಡ್ತಿದೆ. ಅಲ್ದೇ ಪಂತ್ ಸದ್ಯ ಉತ್ತಮ ಫಾರ್ಮ್‌ನಲ್ಲಿಲ್ಲ. ಅವರು ಭಾರತೀಯ ವೈಟ್-ಬಾಲ್ ಸರ್ಕ್ಯೂಟ್‌ನಿಂದ ಹೊರಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದಲ್ಲಿದ್ರೂ ಕೂಡ ಪ್ಲೇಯಿಂಗ್ 11ನಲ್ಲಿ ಆಡಿರಲಿಲ್ಲ. ರಿಷಭ್ ಪಂತ್ ಅವರ ಡಿಫೆನ್ಸೀವ್ ಬ್ಯಾಟಿಂಗ್ ವಿಧಾನದ ಬಗ್ಗೆ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ ಮಾತನಾಡಿದ್ದು, ಪಂತ್ ಬಾಲ್ ಅನ್ನು ನೇರವಾಗಿ ಡಿಫೆನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಶೈಲಿಯ ಆಟದ ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಸೂಕ್ತವಲ್ಲ. ಯಶಸ್ಸಿಗೆ ಸಾಮಾನ್ಯವಾಗಿ ಹೆಚ್ಚು ಆಕ್ರಮಣಕಾರಿ ಮನಸ್ಥಿತಿ ಅಗತ್ಯವಿರುತ್ತದೆ ಎಂದಿದ್ದಾರೆ.