ಆಗ RCB.. ಈಗ ENGನಲ್ಲಿ ಪಲ್ಟಿ – ಪಂತ್ ಸೆಂಚುರಿ ಸೆಲೆಬ್ರೇಷನ್ ಸೂಪರ್
ಸೆಂಚುರಿ ಬಿರುಗಾಳಿಗೆ ಆಂಗ್ಲರ ಗರ್ವಭಂಗ  

ನಿಜಕ್ಕೂ ಕೂಡ ಇದು ಕ್ರಿಕೆಟ್ ತವರಿನಲ್ಲಿ ಆಂಗ್ಲರ ಗರ್ವಭಂಗವಾದ ಪಂದ್ಯ. ಇಡೀ ಜಗತ್ತಿಗೆ ಕ್ರಿಕೆಟ್​ನ ಪರಿಚಯಿಸಿದ್ದೇ ಬ್ರಿಟೀಷರು. ಸಾಲ್ದು ಅಂತಾ ಕಳೆದ 18 ವರ್ಷಗಳಿಂದ ಭಾರತವನ್ನ ತಮ್ಮ ನಾಡಲ್ಲಿ ಗೆಲ್ಲೋಕೂ ಬಿಟ್ಟಿರಲಿಲ್ಲ. ಇನ್ನು ಈ ಸಲ ಚಿಲ್ಟಾರಿಗಳ ಟೀಂ ಏನ್ ಮಹಾ ಆಡ್ತಾರೆ ಅನ್ಕೊಂಡಿದ್ರು. ಆದ್ರೆ ಇಷ್ಟು ವರ್ಷಗಳದ್ದೇ ಒಂದು ಲೆಕ್ಕ.. ಇನ್ಮುಂದಿನದ್ದೇ ಮತ್ತೊಂದು ಲೆಕ್ಕ. ಕೊಡ್ತಾ ಇರ್ತೀವಿ ತಗೊಳ್ತಿರ್ಬೇಕು ಅಷ್ಟೇ ಅನ್ನುವಂತೆ ಭಾರತೀಯ ಬ್ಯಾಟರ್ಸ್ ಬೆಂಡೆತ್ತುತ್ತಿದ್ದಾರೆ. ಫಸ್ಟ್ ಡೇ ಇಬ್ಬರ ಸೆಂಚುರಿ ನೋಡಿದ್ದ ಭಾರತೀಯರು ಎರಡನೇ ದಿನ ಮತ್ತೊಂದು ಸೆಂಚುರಿಗೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ : ಫಸ್ಟ್ ಡೇ.. 2 ಸೆಂಚುರಿ.. 300+ ರನ್ಸ್! – ENG ಬೌಲರ್ಸ್ ಬೆಂಡೆತ್ತಿದ ಇಂಡಿಯಾ

45 ದಿನಗಳ ಸುದೀರ್ಘ ಸರಣಿ.. ಐದು ಪಂದ್ಯಗಳ ಟೆಸ್ಟ್ ಹಣಾಹಣಿ. ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ್ಲೇ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ವು. ಎಲ್ರೂ ಟಿ-20 ಬ್ಯಾಟರ್ಸ್ ಇದ್ದಾರೆ, ಎಕ್ಸ್​ಪೀರಿಯನ್ಸ್​ಡ್ ಪ್ಲೇಯರ್ಸ್ ಇಲ್ಲ. ಕ್ಯಾಪ್ಟನ್ ಕೂಡ ಯಂಗ್​ಸ್ಟರ್. ಇವ್ರೆಲ್ಲಾ ಕ್ರಿಕೆಟ್​ನ ಹುಟ್ಟು ಹಾಕಿರೋ ಬ್ರಿಟಿಷರ ವಿರುದ್ಧ ಹೇಗೆ ಆಡ್ತಾರೋ ಏನೋ ಅಂತಾ. ಬಟ್ ಎಲ್ಲರ ಲೆಕ್ಕಾಚಾರಗಳನ್ನ ಬುಡಮೇಲು ಮಾಡಿರೋ ಯುವಪಡೆ ಭರ್ಜರಿಯಾಗೇ ಬ್ಯಾಟಿಂಗ್ ಮಾಡ್ತಿದೆ. ಸೆಂಚುರಿಗಳ ಮೇಲೆ ಸೆಂಚುರಿ ಬಾರಿಸಿ ಇಂಗ್ಲೆಂಡ್ ಬೌಲರ್​ಗಳ ಬೆಂಡೆತ್ತುತ್ತಿದ್ದಾರೆ. ಐಪಿಎಲ್​ನಲ್ಲಿ ಕಂಪ್ಲೀಟ್ ಅಟ್ಟರ್ ಫ್ಲ್ಯಾಪ್ ಆಗಿದ್ದ ರಿಷಭ್ ಪಂತ್ ಕೂಡ ಆಂಗ್ಲರಿಗೆ ನೀರು ಕುಡಿಸಿದ್ದಾರೆ. ನಾನೇನ್ ಕಮ್ಮಿ ಅಂತಾ ಶತಕ ಬಾರಿಸಿ ಬಿಸಿಸಿಐಗೆ ಬಿಗ್ ಮೆಸೇಜ್ ಕೊಟ್ಟಿದ್ದಾರೆ.

ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಇಳಿದ ಭಾರತ ಲೀಡ್ಸ್​​ನಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿತು. ಭಾರತದ ಪರ ಜೈಸ್ವಾಲ್ ಮತ್ತು ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ರು. ಇಬ್ಬರ ಜೊತೆಯಾಟದಲ್ಲಿ 91 ರನ್ಸ್ ಬಂದಿತ್ತು. ಬಟ್ ಅರ್ಧಶತಕದ ಹೊಸ್ತಿಲಲ್ಲಿ ರಾಹುಲ್ ಔಟ್ ಆಗಿದ್ರು. ಆ ಬಳಿಕ ಮೂರನೇ ಸ್ಲಾಟ್​ನಲ್ಲಿ ಟೆಸ್ಟ್ ಮ್ಯಾಚ್​ಗೆ ಡೆಬ್ಯೂ ಮಾಡಿದ್ದ ಸಾಯಿ ಸುದರ್ಶನ್ ಡಕ್ ಔಟ್ ಆಗಿದ್ರು. 91 ರನ್​ಗೆ ಮೊದಲ ವಿಕೆಟ್.. 92 ರನ್​ಗಳಿಗೆ ಎರಡನೇ ವಿಕೆಟ್ ಉರುಳಿತ್ತು. ಆ ಬಳಿಕ ಜೈಸ್ವಾಲ್ ಮತ್ತು ಗಿಲ್ ಪಾರ್ಟರ್​ಶಿಪ್​ನಲ್ಲಿ ಒಳ್ಳೆ ರನ್ಸ್ ಬಂತು. ಬಟ್ ಶತಕದ ಹೊಸ್ತಿಲಲ್ಲಿ ಇಂಜುರಿಗೊಂಡ ಜೈಸ್ವಾಲ್ 101 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ರು. ಈ ಟೈಮಲ್ಲಿ ಆಲ್ರೆಡಿ ಸೆಟಲ್ ಆಗಿದ್ದ ಗಿಲ್​ಗೆ ಜೊತೆಯಾಗಿದ್ದೇ ರಿಷಭ್ ಪಂತ್. ಆ ಬಳಿಕ ಈ ಇಬ್ಬರ ಜೋಡಿ ಚರಿತ್ರೆಯನ್ನೇ ಸೃಷ್ಟಿಸಿದೆ. ಕ್ಯಾಪ್ಟನ್ & ವೈಸ್ ಕ್ಯಾಪ್ಟನ್ ಜೋಡಿ ಆಂಗ್ಲರನ್ನ ಬೆಂಡೆತ್ತಿ ಬ್ರೇಕ್ ಹಾಕಿದೆ.

ಮೊದಲ ಸೆಷನ್​ನ ಮೊದಲನೇ ದಿನದಾಟದಲ್ಲಿ ಭಾರತದ ಪರ ಯಶಸ್ವಿ ಜೈಸ್ವಾಲ್ ಸೆಂಚುರಿ ಸಿಡಿಸಿದ್ರು. ಅದೂ ಕೂಡ ಇಂಗ್ಲೆಂಡ್​ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ. ಆ ಬಳಿಕ ಶುಭ್​ಮನ್ ಗಿಲ್ ಕೂಡ ಶತಕ. ಇಂಟ್ರೆಸ್ಟಿಂಗ್ ಅಂದ್ರೆ ಕ್ಯಾಪ್ಟನ್ ಆಗಿ ಮೊದಲ ಪಂದ್ಯದಲ್ಲೇ ಶತಕ. ಆಲ್ರೆಡಿ ಇಬ್ಬರು ಶತಕದಾಟವನ್ನ ನೋಡಿದ ಫ್ಯಾನ್ಸ್​ಗೆ ಎರಡನೇ ದಿನವೂ ಸೆಂಚುರಿ ಸೆಲೆಬ್ರೇಷನ್​ನ ಖುಷಿ ಸಿಕ್ಕಿದೆ. ರಿಷಭ್ ಪಂತ್ ಕೂಡ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಮೊದಲನೇ ದಿನದಾಟದಲ್ಲಿ 65 ರನ್ ಗಳಿಸಿ ಬ್ಯಾಟಿಂಗ್ ಉಳಿಸಿಕೊಂಡಿದ್ರು. ಇದೀಗ ಎರಡನೇ ದಿನದಾಟದಲ್ಲಿ ಅದೇ ಫಾರ್ಮ್​ನಲ್ಲೇ ಆಂಗ್ಲರನ್ನ ಕಾಡಿದ್ರು. ಅದ್ರಲ್ಲೂ ಅವ್ರ ಸಿಕ್ಸ್, ಫೋರ್​ಗಳ ಸ್ಟೈಲ್​ ಬರೀ ಭಾರತ ಅಷ್ಟೇ ಅಲ್ಲ ಇಂಗ್ಲೆಂಡ್ ಫ್ಯಾನ್ಸ್​ಗೂ ಸಖತ್ ಥ್ರಿಲ್ ಕೊಟ್ಟಿತ್ತು. ಅಂತಿಮವಾಗಿ 146 ಎಸೆತಗಳಲ್ಲಿ 4 ಸಿಕ್ಸ್ ಹಾಗೇ 10 ಫೋರ್​ಗಳೊಂದಿಗೆ 105 ರನ್ ಕಲೆ ಹಾಕಿದ್ರು. ಆ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಬಾರಿಸಿದ್ರು. ಹಾಗೇ ಇಂಗ್ಲೆಂಡ್​ನಲ್ಲಿ ಪಂತ್ ಅವ್ರ ಮೂರನೇ ಶತಕ ಇದಾಗಿತ್ತು.

ಌಕ್ಚುಲಿ ಇಂಗ್ಲೆಂಡ್ ಸರಣಿಗೆ ಪಂತ್ ಆಯ್ಕೆಯಾದಾಗ ಸಾಕಷ್ಟು ಡೌಟ್ಸ್ ಇತ್ತು. ಫಾರ್ಮ್​ನಲ್ಲಿ ಇಲ್ಲದ ಪಂತ್ ರನ್ನ ಹೇಗೆ ಸೆಲೆಕ್ಟ್ ಮಾಡಿದ್ರು ಅಂತಾ. ಬಟ್ ಆ ಎಲ್ಲಾ ಗೊಂದಲಗಳಿಗೆ ಸೆಂಚುರಿ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅಸಲಿಗೆ ಲಕ್ನೋ ಪರ ಐಪಿಎಲ್ ಆಡಿದ್ದ ಪಂತ್ ಇಡೀ ಸೀಸನ್​ನಲ್ಲಿ ಸಾಕಷ್ಟು ಸ್ಟ್ರಗಲ್ಸ್ ಕಂಡಿದ್ರು. ಬಟ್ ಅವ್ರು ಫಾರ್ಮ್​ಗೆ ಬಂದಿದ್ದೇ ಆರ್​ಸಿಬಿ ವಿರುದ್ಧದ ಲೀಗ್ ಹಂತದ ಕೊನೇ ಪಂದ್ಯದಲ್ಲಿ. ಮೇ 27 ರಂದು ನಡೆದ ಆರ್‌ಸಿಬಿ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್​ಜೈಂಟ್ಸ್ ನಾಯಕ ರಿಷಭ್ ಪಂತ್ ಅದ್ಭುತ ಪ್ರದರ್ಶನ ನೀಡಿದರು. ಐಪಿಎಲ್‌ನಲ್ಲಿ 2018 ರಲ್ಲಿ ಕೊನೆಯದಾಗಿ ಶತಕ ಬಾರಿಸಿದ್ದ ಪಂತ್ 7 ವರ್ಷಗಳ ನಂತರ ಐಪಿಎಲ್‌ನಲ್ಲಿ ಶತಕ ಬಾರಿಸಿದ್ರು. ಇದಕ್ಕೂ ಮೊದಲು ಆಡಿದ 12 ಇನ್ನಿಂಗ್ಸ್‌ಗಳಲ್ಲಿ ಕೇವಲ 151 ರನ್ ಗಳಿಸಿದ್ದ ಪಂತ್, 13.73 ರ ಸರಾಸರಿ ಮತ್ತು 107.09 ರ ಸ್ಟ್ರೈಕ್ ರೇಟ್ ಹೊಂದಿದ್ದರು. ಬಟ್ ಆರ್ ಸಿಬಿ ವಿರುದ್ಧ 61 ಎಸೆತಗಳನ್ನು ಎದುರಿಸಿದ ಪಂತ್ 118 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳು ಸೇರಿದ್ದವು. ಕೊನೆಯವರೆಗೂ ಅಜೇಯರಾಗಿ ಉಳಿದ ಪಂತ್ 193.44 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದರು. ಪಂತ್ ಅವರ ಈ ಅಬ್ಬರದ ಬ್ಯಾಟಿಂಗ್​ನಿಂದ ಲಕ್ನೋ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿತು. ಇನ್ನು ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ಕೂಡಲೇ ಮೈದಾನದಲ್ಲಿ ಪಲ್ಟಿ ಹೊಡೆದು ಡಿಫ್ರೆಂಟ್ ಸ್ಟೈಲಲ್ಲಿ ಸಂಭ್ರಮಿಸಿದ್ರು. ಅವ್ರ ವಿಭಿನ್ನ ಶೈಲಿಯ ಸೆಲೆಬ್ರೇಷನ್ ಸಾಕಷ್ಟು ವೈರಲ್ ಆಗಿತ್ತು.

ಟೆಸ್ಟ್ ಕ್ರಿಕೆಟ್​ನಲ್ಲಿ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಸೆಂಚುರಿಯೂ ಸೇರಿದಂತೆ ಈವರೆಗೆ 7 ಶತಕಗಳನ್ನು ಬಾರಿಸಿದ್ದಾರೆ. ಆದರೆ ಪಂತ್ ಗೆ ಸಿಕ್ಕಾಪಟ್ಟೆ ನರ್ವಸ್ 90 ಕಾಡಿದೆ. ಶತಕದಂಚಿನಲ್ಲಿ ಬರೋಬ್ಬರಿ 7 ಬಾರಿ ಎಡವಿದ್ದಾರೆ. ಅಂದರೆ ಟೆಸ್ಟ್ ಇನಿಂಗ್ಸ್​ವೊಂದರಲ್ಲಿ 90 ಕ್ಕಿಂತ ಹೆಚ್ಚು ರನ್ ಕಲೆಹಾಕಿ ಒಟ್ಟು ಏಳು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಬಟ್ 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 90ರ ಅಸುಪಾಸಿನಲ್ಲಿ ಔಟ್ ಆಗಿರುವುದು ಕೇವಲ 10 ಬಾರಿ ಮಾತ್ರ. ಆದರೆ 62 ಟೆಸ್ಟ್ ಇನಿಂಗ್ಸ್​ಗಳಲ್ಲಿ ರಿಷಭ್ ಪಂತ್ 7 ಬಾರಿ ಒಂದಂಕಿ ರನ್​ಗಳಿಂದ ಶತಕ ವಂಚಿತರಾಗಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 99 ರನ್​ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 1 ರನ್​ನಿಂದ ಶತಕ ವಂಚಿತರಾಗಿದ್ರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ನೈಂಟಿ+ ರನ್​ಗಳಿಸಿ ಶತಕ ವಂಚಿತನಾದ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ.

Shantha Kumari