ಅಪಘಾತದ ಬಳಿಕ ಸತತ ಅಭ್ಯಾಸದಲ್ಲಿ ನಿರತರಾದ ರಿಷಭ್ – ವೇಗದ ಬಾಲ್‌ಗೆ ಪಂತ್ ಬ್ಯಾಟಿಂಗ್

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಭ್ ಪಂತ್ ಈಗ ತಂಡಕ್ಕೆ ಮರಳು ಅಭ್ಯಾಸದಲ್ಲಿ ನಿರತರಾಗಿದ್ದಾರೆ. 2022ರ ಡಿಸೆಂಬರ್‌ನಲ್ಲಿ ರಿಷಭ್ ಪಂತ್, ಭೀಕರ ಕಾರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಿಷಭ್ ಪಂತ್ ಚೇತರಿಸಿಕೊಂಡಿದ್ದರು. ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸತತ ಅಭ್ಯಾಸದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಗಂಭೀರ ಅಪಘಾತದಿಂದ ಮರುಜನ್ಮ ಪಡೆದ ರಿಷಬ್ ಪಂತ್ – ಎರಡನೇ ಹುಟ್ಟುಹಬ್ಬವೆಂದು ಬರ್ತ್‌ಡೇಟ್ ಬದಲಿಸಿದ ಕ್ರಿಕೆಟಿಗ..!
ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾಗಿದ್ದ ಪಂತ್, ಆ ಬಳಿಕ ಮುಂಬೈನ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಬಳಿಕ ಹಂತ ಹಂತವಾಗಿ ಚೇತರಿಸಿಕೊಂಡ ಪಂತ್, ಟೀಂ ಇಂಡಿಯಾಕ್ಕೆ ಮರಳಲು ತಮ್ಮ ಅಭ್ಯಾಸವನ್ನು ಆರಂಭಿಸಿದ್ದಾರೆ. ಎರಡು ತಿಂಗಳ ಹಿಂದೆ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಪಂತ್, ಕೆಲವು ದಿನಗಳ ಹಿಂದೆ ವಿಕೆಟ್ ಕೀಪಿಂಗ್ ಆರಂಭಿಸಿದ್ದರು. ಇದೀಗ ಫೀಲ್ಡ್‌ಗೆ ಮರಳಲು ರೆಡಿಯಾಗಿರುವ ಪಂತ್, ನೆಟ್‌ನಲ್ಲಿ ವೇಗದ ಬಾಲ್‌ಗಳನ್ನು ಎದುರಿಸುತ್ತಿದ್ದಾರೆ. ರಿಷಭ್ ಪಂತ್ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವುದು ಸಧ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಪಂತ್ ಏನಿದ್ದರು ಮುಂದಿನ ವರ್ಷ ನಡೆಯುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಪಂತ್ ಶೀಘ್ರ ಚೇತರಿಕೆಯನ್ನು ಕಂಡರೆ, ಈ ವಿಕೆಟ್ ಕೀಪರ್ ಬ್ಯಾಟರ್ ಆದಷ್ಟು ಬೇಗ ತಂಡ ಸೇರಿಕೊಳ್ಳುವ ಸಾಧ್ಯತೆಗಳಿವೆ. ಕಳೆದ ಕೆಲವು ವಾರಗಳಿಂದ ಎನ್‌ಸಿಎನಲ್ಲಿ ವಿಕೆಟ್ ಕೀಪಿಂಗ್ ಅಭ್ಯಾಸ ಆರಂಭಿಸಿದ್ದ ಪಂತ್, ಚೆಂಡಿನ ವೇಗವನ್ನು ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಗಂಟೆಗೆ 140 ಕಿ.ಮೀ ವೇಗದ ಚೆಂಡುಗಳನ್ನು ಎದುರಿಸಲಾರಂಭಿಸಿದ್ದಾರೆ. ಅಲ್ಲದೆ ವೇಗದ ಚೆಂಡುಗಳನ್ನು ಯಾವುದೇ ತೊಂದರೆಯಿಲ್ಲದೆ ಪಂತ್ ಆರಾಮಾಗಿ ಆಡುತ್ತಿದ್ದಾರೆ ಎಂದು ವರದಿಯಾಗಿದೆ.