ಟೆಸ್ಟ್ ಸೋಲು, ವೈಯಕ್ತಿಕ ಕಳಪೆ ಪ್ರದರ್ಶನ -ಬಹಿರಂಗವಾಗಿ ಕ್ಷಮೆಯಾಚಿಸಿದ ರಿಷಭ್ ಪಂತ್

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಹೀನಾಯ ಸೋಲು ಕೇವಲ ಅಭಿಮಾನಿಗಳಿಗೆ ಮಾತ್ರ ಬೇಸರ ತರಿಸಿಲ್ಲ. ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡಾ ಬೇಸರ ಹೊರಹಾಕಿದ್ದಾರೆ. ಜೊತೆಗೆ ವೈಯಕ್ತಿಕ ಹಾಗೂ ತಂಡದ ಸೋಲಿಗೆ ರಿಷಭ್ ಪಂತ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ:TEST ಸೋಲಿಗೆ ODIನಲ್ಲಿ ಸೇಡು – ಟೆಂಬಾಗೆ ಪಾಠ ಕಲಿಸ್ತಾರಾ RO-KO?
ಸೌತ್ ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಟೀಮ್ ಇಂಡಿಯಾ ವಿಕೆಟ್ ಕೀಪರ್, ಮತ್ತು ಗುವಾಹಟಿ ಟೆಸ್ಟ್‌ನಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ರಿಷಭ್ ಪಂತ್ ಕ್ಷಮೆಯಾಚಿಸಿದ್ದಾರೆ. ತಂಡವಾಗಿ ನಿರೀಕ್ಷೆಗಳನ್ನು ಪೂರೈಸಲು ವಿಫಲರಾಗಿದ್ದೇವೆ ಎಂದು ಒಪ್ಪಿಕೊಂಡಿರುವ ಪಂತ್, ಮುಂದಿನ ದಿನಗಳಲ್ಲಿ ಕಠಿಣ ಪರಿಶ್ರಮದಿಂದ ಬಲವಾಗಿ ಮರಳುವ ಭರವಸೆ ನೀಡಿದ್ದಾರೆ. ಸರಣಿಯಲ್ಲಿ ಕೇವಲ 49 ರನ್ ಗಳಿಸಿ ವಿಫಲರಾಗಿದ್ದ ಪಂತ್, ತಮ್ಮ ಆಟ ಸುಧಾರಿಸಲು ಶ್ರಮಿಸುವುದಾಗಿ ಹೇಳಿದ್ದಾರೆ. ಗುವಾಹಟಿ ಟೆಸ್ಟ್‌ನಲ್ಲಿ ರಿಷಭ್ ಪಂತ್ ಔಟಾದ ರೀತಿಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಪ್ರೇಕ್ಷಕರಿಗಿಂತ ಹೆಚ್ಚಾಗಿ ತಂಡಕ್ಕಾಗಿ ಆಡಬೇಕೆಂದು ಹೇಳಿದ್ದರು. ಇದೀಗ ಟೆಸ್ಟ್ ಸರಣಿ ಮುಗಿಸಿದ ಬಳಿಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಪಂತ್, ‘ಕಳೆದ ಎರಡು ವಾರಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿಲ್ಲ ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ. ತಂಡವಾಗಿ ಮತ್ತು ವ್ಯಕ್ತಿಗಳಾಗಿ, ನಾವು ಯಾವಾಗಲೂ ಅತ್ಯುನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಮತ್ತು ಲಕ್ಷಾಂತರ ಭಾರತೀಯರ ಮುಖದಲ್ಲಿ ನಗು ತರಿಸಲು ಬಯಸುತ್ತೇವೆ. ಕ್ಷಮಿಸಿ , ಈ ಬಾರಿ ನಾವು ನಿರೀಕ್ಷೆಗಳಿಗೆ ತಕ್ಕಂತೆ ಆಡಲಿಲ್ಲ. ಆದರೆ ಕ್ರೀಡೆಗಳು ತಂಡವಾಗಿ ಅಥವಾ ಆಟಗಾರರಾಗಿ ಕಲಿಯಲು ಮತ್ತು ಬೆಳೆಯಲು ನಿಮಗೆ ಕಲಿಸುತ್ತವೆ. ಭಾರತವನ್ನು ಪ್ರತಿನಿಧಿಸುವುದು ನಮ್ಮ ಜೀವನದ ದೊಡ್ಡ ಗೌರವ. ಈ ತಂಡದ ಸಾಮರ್ಥ್ಯ ಏನೆಂದು ನಮಗೆ ತಿಳಿದಿದೆ ಮತ್ತು ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಒಟ್ಟಿಗೆ ಬರುತ್ತೇವೆ ಮತ್ತು ಬಲವಾಗಿ ಮರಳುತ್ತೇವೆ. ನಿಮ್ಮ ಅಚಲ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು. ಜೈ ಹಿಂದ್ ಎಂದಿದ್ದಾರೆ. ಸರಣಿಯಲ್ಲಿ ಟೀಂ ಇಂಡಿಯಾದ ಯಾವುದೇ ಬ್ಯಾಟ್ಸ್‌ಮನ್ ಪ್ರಭಾವ ಬೀರಲು ಸಾಧ್ಯವಾಗದಿದ್ದರೂ, ಪಂತ್ ಅವರ ಪ್ರದರ್ಶನ ವಿಶೇಷವಾಗಿ ಕಳಪೆಯಾಗಿತ್ತು. ಪಂತ್ ಆಡಿದ ಎರಡು ಟೆಸ್ಟ್‌ಗಳಲ್ಲಿ ಕೇವಲ 49 ರನ್ ಗಳಿಸಿದ್ದರು. ಗುವಾಹಟಿ ಟೆಸ್ಟ್‌ನಲ್ಲಿ ಅವರು ತಮ್ಮ ವಿಕೆಟ್ ಕೈಚೆಲ್ಲಿದ ರೀತಿ ನಿಜಕ್ಕೂ ಆಘಾತಕಾರಿಯಾಗಿತ್ತು. ಈ ಸರಣಿಯಲ್ಲಿ ಪಂತ್ ಪ್ರದರ್ಶನ ಅತ್ಯಂತ ಹೀನಾಯವಾಗಿತ್ತು. ಇದಕ್ಕಾಗಿ ಪಂತ್ ಬಹಿರಂಗವಾಗಿಯೇ ಕ್ಷಮೆ ಕೇಳಿದ್ದಾರೆ.

ನೋಡಿರಿ

