ಕರ್ನಾಟಕಕ್ಕೆ ಕೈ ಕೊಟ್ಟ ಕೆ.ಎಲ್ ರಾಹುಲ್- ರಣಜಿಯಲ್ಲಿ ಸೆಂಚುರಿ ಸಿಡಿಸಿದ ಜಡೇಜಾ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ರಣಜಿ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಛತ್ತೀಸ್‌ಗಢ್ ವಿರುದ್ಧದ ಪ್ರಸಕ್ತ ಸಾಲಿನ ರಣಜಿ ಪಂದ್ಯದಲ್ಲಿ ಜಡೇಜಾ ಪ್ರಥಮ ದರ್ಜೆ ಕ್ರಿಕೆಟ್ ಜೀವನದ 16ನೇ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಛತ್ತೀಸ್‌ಗಢ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸೌರಾಷ್ಟ್ರ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ, 102 ರನ್ ಬಾರಿಸಿದ್ರು.
ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಆಂಧ್ರ ತಂಡ ಮುನ್ನಡೆ ಸಾಧಿಸಿದೆ. ಸೀರಾಂ ವೆಂಕಟ ರಾಹುಲ್ ಅವರ ಅಜೇಯ ಶತಕ ಮತ್ತು ರೇವಂತ್ ರೆಡ್ಡಿ ಅವರ ಅದ್ಭುತ ಆಟದಿಂದ ಆಂಧ್ರ ತಂಡವು ಎರಡನೇ ದಿನದಂತ್ಯಕ್ಕೆ 331 ರನ್ ಕಲೆಹಾಕಿದೆ. ಆಂಧ್ರ ತಂಡ 418 ರನ್ ಗಳಿಸಿ ಆಲೌಟ್ ಆಗಿದ್ದು, ಕರ್ನಾಟಕ ತಂಡ ಬ್ಯಾಟಿಂಗ್ ಮುಂದುವರೆಸಿದೆ.
ಕರ್ನಾಟಕ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಶುರುಮಾಡಿದ್ದು, ಆರಂಭಿಕ ಆಘಾತ ಎದುರಿಸಿದೆ. ಕರ್ನಾಟಕದ ಸ್ಟಾರ್ ಬ್ಯಾಟರ್ಸ್ ಮಯಾಂಕ್ ಅಗರ್ವಾಲ್, ಕೆ,ಎಲ್ ರಾಹುಲ್ ಮೊದಲನೇ ಇನ್ನಿಂಗ್ಸ್ ನಲ್ಲೂ ಕೈಕೊಟ್ಟಿದ್ದರು. ಇದೀಗ ಎರಡನೇ ಇನ್ನಿಂಗ್ಸ್ ನಲ್ಲೂ ಅದೇ ಪ್ಲಾಫ್ ಶೋ ಮುಂದುವರೆದಿದೆ. ಮಯಾಂಕ್ 18 ರನ್ ಗಳಿಸಿ ಔಟಾದರೆ, ಕೆ.ಎಲ್ ರಾಹುಲ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಶೆ ಮೂಡಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 3ನೇ T20 ಪಂದ್ಯದಲ್ಲಿ, ತನ್ನ ತಪ್ಪಿನಿಂದಾಗಿ ಅಕ್ಷರ್ ಪಟೇಲ್ ರನ್-ಔಟ್ ಆಗಿದ್ದಕ್ಕೆ ಅರ್ಶದೀಪ್ ಸಿಂಗ್ ಕ್ಷಮೆ ಕೇಳಿದ್ದಾರೆ. BCCI ಸಂದರ್ಶನದಲ್ಲಿ ಮಾತನಾಡಿದ ಅರ್ಷದೀಪ್, ನಾನು ಅಕ್ಷರ್ ಭಾಯ್ ಅವರಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ. ಕ್ಷಮಿಸಿ ಅಕ್ಷರ್ ಭಾಯ್, ನಿಮ್ಮ ರನ್-ಔಟ್‌ಗೆ ನಾನೇ ಕಾರಣನಾದೆ ಎಂದಿದ್ದಾರೆ.
ಭಾರತ ಮತ್ತು ವಿಂಡೀಸ್ ನಡುವಿನ 2ನೇ T20 ಪಂದ್ಯದಲ್ಲಿ ಮೈದಾನದಲ್ಲಿ ಅಶಿಸ್ತು ಪ್ರದರ್ಶಿಸಿದ ವಿಂಡೀಸ್ ಆಟಗಾರರಿಗೆ ICC ಬಿಸಿ ಮುಟ್ಟಿಸಿದೆ. ಮಯಾಂಕ್ ಯಾದವ್ ಬೌಲಿಂಗ್‌ನಲ್ಲಿ ಔಟ್ ಆದ ನಂತರ, ಪೊವೆಲ್ ತಮ್ಮ ಬ್ಯಾಟ್‌ನಿಂದ ಚೆಂಡನ್ನು ಜೋರಾಗಿ ಹೊಡೆದು ಅಶಿಸ್ತು ತೋರಿದ್ದರು. ಇನ್ನೊಂದ್ಕಡೆ ಶೆರ್ಫೇನ್ ರದರ್‌ಫೋರ್ಡ್ ತಾವು ವೈಡ್ ಎಂದು ಭಾವಿಸಿದ್ದ ಎಸೆತವನ್ನು ಅಂಪೈರ್ ಮಾನ್ಯ ಮಾಡಿದಾಗ, ಅಂಪೈರ್ ವಿರುದ್ಧ ಕೂಗಾಡಿದ್ದರು. ಇದೀಗ ಪೊವೆಲ್ ಮತ್ತು ರದರ್‌ಫೋರ್ಡ್ ಗೆ ICC ಎಚ್ಚರಿಕೆ ನೀಡಿದ್ದು, ತಲಾ 1 ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
IPL ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ CSK ಫ್ರಾಂಚೈಸಿ ಕ್ರಿಕೆಟ್ ಮೈದಾನದ ಆಚೆಗೂ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದೆ. CSK ತಮ್ಮ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಚೆನ್ನೈ ನಗರ ಸಂಚಾರ ಪೊಲೀಸರಿಗೆ ಮಹತ್ವದ ಕೊಡುಗೆ ನೀಡಿದೆ. ನಗರದ ದೈನಂದಿನ ಗಸ್ತು, ಸಂಚಾರ ನಿರ್ವಹಣೆ ಹಾಗೂ ತುರ್ತು ಸೇವೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ 63 ದ್ವಿಚಕ್ರ ವಾಹನಗಳನ್ನು CSK ಫ್ರಾಂಚೈಸಿ ಹಸ್ತಾಂತರಿಸಿದೆ. 63 ಬೈಕ್‌ಗಳಲ್ಲಿ 38 ಹೋಂಡಾ ಶೈನ್ ಮತ್ತು 25 ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳು ಸೇರಿವೆ.
ಆರೋಪ ಪ್ರಕರಣದಲ್ಲಿ ಜಾಮೀನು ಪಡೆದ ಕೆಲವೇ ದಿನಗಳಲ್ಲಿ ಬಂಗಾಳದ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್ ರಣಜಿ ಟ್ರೋಫಿ ಪಂದ್ಯದಲ್ಲಿ ದಿಲ್ಲಿ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಶತಕ ಪೂರೈಸಿದ ಬೆನ್ನಲ್ಲೇ ಅಭಿಷೇಕ್ ಭಾವುಕರಾಗಿದ್ದಾರೆ. ಮೈದಾನದಲ್ಲೇ ಮಂಡಿಯೂರಿ ಕುಳಿತು ಕಣ್ಣೀರಿಟ್ಟ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿನೂ ಮಂಕಡ್ ಟ್ರೋಫಿ U-19 ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಅಬ್ಬರಿಸಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನ್ವಯ್ ದ್ರಾವಿಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಕೇವಲ 41 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 7 ಫೋರ್ಗಳೊಂದಿಗೆ ಅನ್ವಯ್ ಅಜೇಯ 85 ರನ್ ಸಿಡಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಕರ್ನಾಟಕ ತಂಡ 198 ರನ್ಗಳಿಂದ ಗೆದ್ದಿದೆ.
ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನವೇ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯದ ಸಮಸ್ಯೆಯಿಂದ ಭಾರತ ಎ ತಂಡದಿಂದ ಹೊರಬಿದ್ದಿದ್ದಾರೆ. ಇರಾನ್ ಕಪ್‌ನಲ್ಲಿ ಗಾಯಗೊಂಡಿರುವ ಪಂತ್ ಬದಲಿಗೆ ಜಾರ್ಖಂಡ್‌ನ ಕುಮಾರ್ ಕುಶಾಗ್ರ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಭಾರತ ಕ್ರಿಕೆಟ್ ತಂಡವು ಇದೇ ತಿಂಗಳು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.
ಭಾರತದ ಕ್ರಿಕೆಟರ್ ಪೃಥ್ವಿ ಶಾ ಮತ್ತು ನಟಿ ಆಕೃತಿ ಅಗರ್ವಾಲ್ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ನಡುವಿನ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ಇದೀಗ ಈ ಜೋಡಿ ಮತ್ತೆ ಒಂದಾಗಿದ್ದು, ಇಬ್ಬರೂ ತಮ್ಮ ಪ್ರೀತಿಯ ಜೀವನಕ್ಕೆ ಹೊಸ ಆರಂಭ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಜಂಟಿ ಹೇಳಿಕೆ ಹಂಚಿಕೊಳ್ಳುವ ಮೂಲಕ ತಾವು ಮತ್ತೆ ಒಂದಾಗಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ನಾವಿಬ್ಬರೂ ನಮ್ಮ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ನಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ನೋಡಿರಿ

