ನನ್ನ ಕಷ್ಟ ನನಗೆ ಮಾತ್ರ ಇರಲಿ, ಬೇರೆ ಬಡಪ್ರತಿಭೆಗಳೂ ಬೆಳೆಯಲಿ – ರಿಂಕು ಸಿಂಗ್ ರಿಯಲಿ ಗ್ರೇಟ್..!

ನನ್ನ ಕಷ್ಟ ನನಗೆ ಮಾತ್ರ ಇರಲಿ, ಬೇರೆ ಬಡಪ್ರತಿಭೆಗಳೂ ಬೆಳೆಯಲಿ – ರಿಂಕು ಸಿಂಗ್ ರಿಯಲಿ ಗ್ರೇಟ್..!

ರಿಂಕು ಸಿಂಗ್.. ಐಪಿಎಲ್‌ನ ಒಂದು ಪಂದ್ಯದಲ್ಲಿ ಮಿಂಚಿ ಎಲ್ಲರ ಮನಗೆದ್ದ ಹೀರೋ.. ಕಷ್ಟಪಟ್ಟು ಬೆಳೆದು ಇದೀಗ ಸಾಧನೆಯ ಸರದಾರ ಅನಿಸಿಕೊಂಡ ರಿಂಕು ಸಿಂಗ್ ತಾನು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಏಪ್ರಿಲ್ 9ರಂದು ಹೊಡೆದ ಐದು ಸಿಕ್ಸ್ ನಿಂದಾಗಿ ಕ್ರಿಕೆಟ್ ಕೆರಿಯರ್ ಅಷ್ಟೇ ಅಲ್ಲ, ರಿಂಕು ಜೀವನವೇ ಬದಲಾಗುತ್ತಿದೆ. ಜೀವನದಲ್ಲಿ ಸಾಲದ ಹೊರೆಯೂ ಕಡಿಮೆಯಾಗುತ್ತಿದೆ. ಹೀಗಿದ್ರೂ ಕೂಡಾ ರಿಂಕು ಸಿಂಗ್ ತಾನು ಬೆಳೆದುಬಂದ ಕಷ್ಟದ ಹಾದಿಯನ್ನು ಮರೆತಿಲ್ಲ. ಬಡತನದ ಹಾದಿಯನ್ನು ಚೆನ್ನಾಗಿಯೇ ಅರಿತಿದ್ದ ರಿಂಕು ಸಿಂಗ್ ಈಗ ತನ್ನಂತೆ ಕಷ್ಟದ ಹಾದಿ ಸವೆಸುತ್ತಿರುವ ಕ್ರೀಡಾಪಟುಗಳಿಗಾಗಿ ಒಂದೊಳ್ಳೇ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ‘ಸಿಕ್ಸರ್ ರಿಂಕು ಸಿಂಗ್ ಸೂಪರ್ ಮ್ಯಾನ್’ -ಬಾಲಿವುಡ್ ಸೆಲೆಬ್ರಿಟಿಗಳ ಕಣ್ಣಲ್ಲಿ ರಿಯಲ್ ಹೀರೋ ಆದ ಕ್ರಿಕೆಟಿಗ

ಉತ್ತರ ಪ್ರದೇಶ ಮೂಲದ ರಿಂಕು ಸಿಂಗ್ ಬಡ ಕುಟುಂಬದಿಂದ ಅರಳಿದ ಪ್ರತಿಭೆ. ಎಲ್‌ಪಿಜಿ ಗ್ಯಾಸ್ ವಿತಕರಾಗಿರುವ ತಂದೆಗೆ ಮಗನ ಕ್ರಿಕೆಟ್ ಅಭ್ಯಾಸಕ್ಕಾಗಿ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ಇನ್ನು ಅಣ್ಣ ಆಟೋರಿಕ್ಷಾ ಚಾಲಕ. ಮತ್ತೋರ್ವ ಅಣ್ಣ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ  ರಿಂಕು ಸಿಂಗ್‌ಗೆ ಬೆಂಬಲವಾಗಿ ನಿಂತರೂ ಕೂಡಾ ರಿಂಕು ಸಿಂಗ್ ಆರ್ಥಿಕ ಸಂಕಷ್ಟದಿಂದ ಒದ್ದಾಡಿದ್ದರು. ತನ್ನಂತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಬಡ ಉದಯೋನ್ಮುಖ ಕ್ರಿಕೆಟಿಗರಿಗೆ ನೆರವಾಗಲು ಈಗ ರಿಂಕು ಸಿಂಗ್ ಮುಂದಾಗಿದ್ದಾರೆ. ತಮ್ಮ ಬಾಲ್ಯದ ಕೋಚ್ ಅವರೊಂದಿಗೆ ಕೈ ಜೋಡಿಸಿ ಬಡ ಕ್ರಿಕೆಟಿಗರಿಗಾಗಿ ಹಾಸ್ಟೆಲ್ ನಿರ್ಮಿಸುತ್ತಿದ್ದಾರೆ. ಈ ಹಾಸ್ಟೆಲ್ ಕೆಲಸಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ. ತಮ್ಮ ಬಾಲ್ಯದಲ್ಲಿ ನೆರವಾಗಿದ್ದ ಕೋಚ್ ಮಸೂದುಝ್-ಜಾಫರ್ ಅಮಿನಿ ನಡೆಸುತ್ತಿರುವ ಅಲಿಗಢ್ ಕ್ರಿಕೆಟ್ ಸ್ಕೂಲ್ ಮತ್ತು ಅಕಾಡೆಮಿಯಲ್ಲಿ ರಿಂಕು ಸಿಂಗ್ ಹಾಸ್ಟೆಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಶುರುವಾದ ಈ ನಿರ್ಮಾಣ ಕಾರ್ಯವು ಇದೀಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಹಾಸ್ಟೆಲ್‌ನಲ್ಲಿ 14 ಕೊಠಡಿಗಳಿದ್ದು, ಪ್ರತಿ ರೂಮ್‌ನಲ್ಲೂ ನಾಲ್ಕು ಮಂದಿ ತಂಗಬಹುದು. ಅಲ್ಲದೆ ಒಂದು ಶೆಡ್ ಮತ್ತು ಪೆವಿಲಿಯನ್ ಹಾಗೂ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಹಾಸ್ಟೆಲ್‌ನಲ್ಲೇ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸುಮಾರು 50 ಲಕ್ಷ ವೆಚ್ಚವಾಗುತ್ತಿದ್ದು, ಇದರ ಸಂಪೂರ್ಣ ವೆಚ್ಚವನ್ನು ರಿಂಕು ಸಿಂಗ್ ಭರಿಸುತ್ತಿದ್ದಾರೆ ಎಂದು ಕೋಚ್ ಮಸೂದುಝ್-ಜಾಫರ್ ಅಮಿನಿ ತಿಳಿಸಿದ್ದಾರೆ. ಈ ಬಾರಿಯ ಐಪಿಎಲ್ ಮೂಲಕ ಒಟ್ಟು 55 ಲಕ್ಷ ರೂ. ಸಂಭಾವನೆ ಪಡೆಯುತ್ತಿರುವ ರಿಂಕು ಸಿಂಗ್, ತನ್ನೂರಿನ ಬಡ ಉದಯೋನ್ಮುಖ ಕ್ರಿಕೆಟಿಗರಿಗಾಗಿ 50 ಲಕ್ಷ ರೂ. ಭರಿಸುತ್ತಿರುವುದು ಮೆಚ್ಚುವಂತದ್ದೇ.

suddiyaana