8 ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ – ನಿಶ್ಚಿತಾರ್ಥ ಮಾಡಿಕೊಂಡ ವರುಣ್ ತೇಜ್ – ಲಾವಣ್ಯ ತ್ರಿಪಾಠಿ
ತೆಲುಗು ಚಿತ್ರರಂಗದ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಕಳೆದ ವರ್ಷವಷ್ಟೆ ಚಿರಂಜೀವಿ ಸಹೋದರ ನಾಗಬಾಬು ಅವರ ಮಗಳ ಮದುವೆ ನಡೆದಿತ್ತು. ಇದೀಗ ನಾಗಬಾಬು ಅವರ ಪುತ್ರ ವರುಣ್ ತೇಜ್ ನಿಶ್ಚಿತಾರ್ಥ ನಡೆಯುತ್ತಿದೆ. ಮೆಗಾಸ್ಟಾರ್ ಚಿರಂಜೀವಿಯ (Megastar Chiranjeevi) ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ (Varun Tej) ಸಹ ಸಿನಿಮಾ ನಟರಾಗಿದ್ದು ತೆಲುಗು ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಅಂಬಿ ಮಗನ ಅರಿಶಿನ ಶಾಸ್ತ್ರ – ಅಭಿಷೇಕ್ ಮದುವೆ ಸಮಾರಂಭಕ್ಕೆ ಸಕಲ ಸಿದ್ಧತೆ
ಹಲವು ವರ್ಷಗಳಿಂದ ಲವ್ ನಲ್ಲಿ ಬಿದ್ದಿದ್ದ ಟಾಲಿವುಡ್‌ನ ಯಂಗ್ ಕಪಲ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ (Lavanya Tripathi) ಈಗ ಉಂಗುರದ ಮುದ್ರೆ ಒತ್ತುವ ಮೂಲಕ ತಮ್ಮ ಸಂಬಂಧವನ್ನ ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೂ ಈ ಜೋಡಿ ಬ್ರೇಕ್ ಹಾಕಿದೆ. ಸದ್ಯ ಯಂಗ್ ಜೋಡಿಯ ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ವರುಣ್-ಲಾವಣ್ಯ 2016ರಲ್ಲಿ ಮೊದಲು ಭೇಟಿಯಾಗಿದ್ದು, ಬಳಿಕ 2017ರಲ್ಲಿ ಇಬ್ಬರು ‘ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ನಂತರದ ದಿನಗಳಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದರು. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಯಾರಿಗೂ ಗೊತ್ತೇ ಇರಲಿಲ್ಲ. ಆದರೆ, ‘ಅಂತರಿಕ್ಷಂ’ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ರೂಮರ್ ಕಪಲ್ ಆಗಿದ್ದರು.
ಆಗಾಗ ವರುಣ್, ಲಾವಣ್ಯ ಇಬ್ಬರೂ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಇದೀಗ ಯಂಗ್ ಜೋಡಿ ವರುಣ್- ಲಾವಣ್ಯ ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎರಡು ಕುಟುಂಬದವರ ಆಪ್ತರಷ್ಟೇ ಭಾಗಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ. ಎಂಗೇಜ್‌ಮೆಂಟ್‌ನಲ್ಲಿ (Engagement) ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸುತ್ತಿದ್ದರು. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ.