ನಾಯಿ, ಬೆಕ್ಕಿಗೆ ₹23 ಕೋಟಿ ಮೌಲ್ಯದ ಆಸ್ತಿ ಬರೆದ ಮಹಿಳೆ! – ತಾಯಿಯಿಂದ ಮಕ್ಕಳಿಗೆ ತಕ್ಕ ಪಾಠ!

ನಾಯಿ, ಬೆಕ್ಕಿಗೆ ₹23 ಕೋಟಿ ಮೌಲ್ಯದ ಆಸ್ತಿ ಬರೆದ ಮಹಿಳೆ! – ತಾಯಿಯಿಂದ ಮಕ್ಕಳಿಗೆ ತಕ್ಕ ಪಾಠ!

ಮಕ್ಕಳನ್ನ ಪೋಷಕರು ಅಂಗೈಯಲ್ಲಿ ಇಟ್ಟುಕೊಂಡು ಜೋಪಾನ ಮಾಡ್ತಾರೆ. ಆದ್ರೆ ಅದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಮ್ಮ ತಂದೆ ತಾಯಿಯನ್ನ ನೋಡಿಕೊಳ್ಳೋಕೆ ಹಿಂದೇಟು ಹಾಕ್ತಾರೆ. ಯಾವುದಾದ್ರೂ ಅನಾಥಾಶ್ರಮಕ್ಕೆ ಸೇರಿಸಿ ಕೈತೊಳೆದು ಕೊಳ್ತಾರೆ. ಇಲ್ಲೊಬ್ರು ಮಹಿಳೆ ಕೂಡ ತಮ್ಮ ಮಕ್ಕಳ ವರ್ತನೆಯಿಂದ ಬೇಸತ್ತಿದ್ರು. ಬಳಿಕ ತಮ್ಮ 23 ಕೋಟಿ ಆಸ್ತಿಯನ್ನ ಏನು ಮಾಡಿದ್ದಾರೆ ಎಂದು ಕೇಳಿದ್ರೆ ನೀವು ಅಚ್ಚರಿ ಪಡುತ್ತೀರಿ.

ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ.. ಚಕ್ಕುಲಿಯಿಂದ ಹೊರಟೇ ಹೋಯ್ತು ಈ ವ್ಯಕ್ತಿಯ ಪ್ರಾಣ!

ಮಕ್ಕಳು ತನ್ನನ್ನ ಸರಿಯಾಗಿ ನೋಡಿಕೊಳ್ತಿಲ್ಲ ಅನ್ನೋ ಬೇಸರದಲ್ಲಿ ಮಹಿಳೆಯೊಬ್ಬರು ಮಕ್ಕಳಿಗೆ ಸರಿಯಾಗೇ ಪಾಠ ಕಲಿಸಿದ್ದಾರೆ. ಲಿಯು ಎಂಬ ವೃದ್ಧೆ ತನ್ನ 23 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ತನ್ನ ಸಾಕುನಾಯಿ ಹಾಗೂ ಬೆಕ್ಕಿನ ಹೆಸರಿಗೆ ವರ್ಗಾಯಿಸಿದ್ದಾರೆ. ಇಂಥಾದ್ದೊಂದು ಅಚ್ಚರಿಗೆ ಘಟನೆ ನಡೆದಿರೋದು ಚೀನಾದ ಶಾಂಘೈನಲ್ಲಿ. ಕೆಲ ದಿನಗಳಿಂದ ವೃದ್ಧೆ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ ಆಕೆಯ ಮಕ್ಕಳು ಭೇಟಿಯಾಗಲು ಬಂದಿರಲಿಲ್ಲ. ಅಷ್ಟೇ ಯಾಕೆ ಫೋನ್‌ನಲ್ಲಿಯೂ ಮಾತನಾಡಿಸಿ ಆರೋಗ್ಯ ವಿಚಾರಿಸಿರಲಿಲ್ಲ. ಇದ್ರಿಂದ ತೀವ್ರವಾಗಿ ನೊಂದಿದ್ದ ವೃದ್ಧೆ ತನ್ನ ಒಟ್ಟು 23 ಕೋಟಿ ರೂಪಾಯಿ ಆಸ್ತಿಯನ್ನು ತಾನು ಮುದ್ದಿನಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪ್ರಾಣಿಗಳ ಹೆಸರಿನಲ್ಲಿ ಉಯಿಲು ಬರೆಯಲು ಚೀನಾದಲ್ಲಿ ಯಾವುದೇ ಕಾನೂನು ಇಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ, ಅಧಿಕಾರಿಗಳ ಸಲಹೆಯ ಮೇರೆಗೆ, ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಆಸ್ತಿ ವರ್ಗಾವಣೆ ಮಾಡಲಾಗುತ್ತದೆ. ಈ ಮೂಲಕ ವೃದ್ಧೆಯ ಮರಣದ ನಂತರ ಆಕೆಯ ಸಾಕುಪ್ರಾಣಿಗಳನ್ನು ಪಶುವೈದ್ಯಕೀಯ ಚಿಕಿತ್ಸಾಲಯ ನೋಡಿಕೊಳ್ಳುವ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಇನ್ನು ಮಹಿಳೆ ‘ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಮಕ್ಕಳು ನನ್ನ ಯೋಗಕ್ಷೇಮವನ್ನೂ ಕೇಳಲಿಲ್ಲ. ಭೇಟಿಯಾಗಲು ಬರದಿದ್ದರೆ, ಕನಿಷ್ಠ ಫೋನ್‌ನಲ್ಲಿ ಮಾತನಾಡಬಹುದಿತ್ತು. ಆದರೆ ಅದನ್ನೂ ಮಾಡಲಿಲ್ಲ. ಪ್ರತೀ ಕ್ಷಣ ನನಗೆ ಸಂತೋಷ ಕೊಡುವುದು ನಾನು ಸಾಕಿದ ನನ್ನ ನಾಯಿ ಮತ್ತು ಬೆಕ್ಕು. ಈ ಮೂಕ ಜೀವಿಗಳು ಸದಾ ನನ್ನೊಂದಿಗೆ ಇರುತ್ತವೆ. ಆದ್ದರಿಂದ ಸಂಪೂರ್ಣ ಆಸ್ತಿಯನ್ನು ಈ ಮೂಕ ಜೀವಿಗಳ ಹೆಸರಿಗೆ ವರ್ಗಾವಣೆ ಮಾಡುತ್ತಿದ್ದೇನೆ. ತನ್ನ ನಾಯಿ ಮತ್ತು ಬೆಕ್ಕನ್ನು ಸಾಕುವವರಿಗೆ ಈ ಆಸ್ತಿ ಸೇರುತ್ತದೆ ಎಂದು ವಿಲ್​​ನಲ್ಲಿ ಬರೆದಿದ್ದಾರೆ.

Shwetha M