ತೆಲಂಗಾಣದ 2 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇವಂತ್ ರೆಡ್ಡಿ
ಹೈದರಾಬಾದ್: ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ನವೆಂಬರ್ 30 ರಂದು ನಡೆದ ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯಗಳಿಸಿತ್ತು. 119 ಸ್ಥಾನಗಳ ಪೈಕಿ 69 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟಬಹುಮತ ಪಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿತ್ತು. ಇದೀಗ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರೇವಂತ್ ರೆಡ್ಡಿ ಸೇರಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: 4 ವರ್ಷಗಳಿಂದ ಮಹಿಳೆಯ ಅಲೆಮಾರಿ ಜೀವನ – ಸತ್ತ ಪ್ರಾಣಿಗಳೇ ಆಹಾರ, ಪ್ರಕೃತಿಯೇ ಬದುಕಿನ ಆಧಾರ..!
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಯಾರು ಈ ರೇವಂತ್ ರೆಡ್ಡಿ?
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ 56 ವರ್ಷದ ಅನುಮುಲಾ ರೇವಂತ್ ರೆಡ್ಡಿ ಮೊದಲು ಆರ್‌ಎಸ್‌ಎಸ್ ಮತ್ತು ಎಬಿವಿಪಿಯಿಂದ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಅವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪರ ಅವರು ಕ್ಯಾಂಪೇನ್ ನಡೆಸುತ್ತಿದ್ದಾಗ, ಅವರ ಹಿನ್ನೆಲೆ ಹೆಚ್ಚು ಚರ್ಚೆಯಾಗಿತ್ತು.
ರೇವಂತ್ ರೆಡ್ಡಿ ಆರ್‌ಎಸ್‌ಎಸ್ ಕೈಗೊಂಬೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅನೇಕ ಬಾರಿ ಟೀಕಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಒಂದಾಗಿ ಕೆಲಸ ಮಾಡುತ್ತಿವೆ ಎಂದೂ ಸಹ ಓವೈಸಿ ಹಿಂದಿನ ದಿನಗಳಲ್ಲಿ ಆರೋಪಿಸಿದ್ದರು.
ರೇವಂತ್ ರೆಡ್ಡಿ ಅವರು ಎಬಿವಿಪಿಯಿಂದ ರಾಜಕೀಯ ಜೀವನ ಆರಂಭಿಸಿದರು. ನಂತರ ಟಿಡಿಪಿಗೆ ಸೇರ್ಪಡೆಯಾದರು. 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಲಂಚ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರು ಟಿಡಿಪಿ ತೊರೆದರು. 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಸೇರಿದರು. 2018 ರ ಚುನಾವಣೆಯಲ್ಲಿ ಬಿಆರ್‌ಎಸ್ ವಿರುದ್ಧ ಸ್ಪರ್ಧಿಸಿ ಕೊಡಂಗಲ್‌ನಿಂದ ಸೋತರು. ಆದರೆ ಮತ್ತೆ ಪುಟಿದೆದ್ದು 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಜೂನ್ 2021 ರಲ್ಲಿ ಅವರನ್ನು TPCC ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.