ಆಸಿಸ್ ಸರಣಿಯಲ್ಲೇ ನಿವೃತ್ತಿ ಆಘಾತ – ರೆಡ್ ಬಾಲ್ಗೆ 6 ಆಟಗಾರರ ಗುಡ್ ಬೈ
ವಿದಾಯದ ಲಿಸ್ಟ್ ನಲ್ಲಿ ಸ್ಟಾರ್ ಪ್ಲೇಯರ್ಸ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆ ಇಡಲು ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆಡ್ತಿದೆ. ಒಂದೊಂದು ಪಂದ್ಯದ ಫಲಿತಾಂಶವೂ ಫೈನಲ್ ರೇಸ್ನ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡ್ತಿದೆ. ಭಾರತದ ಪಾಲಿಗೆ ಈ ಸರಣಿ ಎಷ್ಟು ಇಂಪಾರ್ಟೆಂಟ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಬಟ್ ಶಾಕಿಂಗ್ ವಿಚಾರ ಅಂದ್ರೆ ಇದೇ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಬಳಿಕ ಟೀಂ ಇಂಡಿಯಾದ 6 ಆಟಗಾರರು ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ಈ ಸಲವೂ ಇಂಥದ್ದೇ ಆಘಾತ ಅಭಿಮಾನಿಗಳಿಗೆ ಕಾದಿದ್ಯಾ ಅನ್ನೋ ಆತಂಕ ಎದುರಾಗಿದೆ. ಹಾಗಾದ್ರೆ ಆಸಿಸ್ ವಿರುದ್ಧದ ಸರಣಿಯಲ್ಲೇ ತಮ್ಮ ಟೆಸ್ಟ್ ವೃತ್ತಿ ಜೀವನ ಅತ್ಯಗೊಳಿಸಿದ ಆಟಗಾರರು ಯಾರ್ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಇದು ಕಾರಲ್ಲ ಟ್ರ್ಯಾಕ್ಟರ್!! – ಹಳೇ ವ್ಯಾಗನ್‌ಆರ್ ಕಾರಿಗೆ ಹೊಸ ಟಚ್
ಭಾರತ ವರ್ಸಸ್ ಆಸ್ಟ್ರೇಲಿಯಾ ಪಂದ್ಯಗಳು ಅಂದ್ರೇನೇ ಹಾಗೇ. ವಿಶ್ವ ಕ್ರಿಕೆಟ್ನ ಹೈವೋಲ್ಟೇಜ್ ಮ್ಯಾಚ್ಗಳು. ಅದ್ರಲ್ಲೂ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಅಂದ್ರೆ ಅದ್ರ ಕ್ರೇಜ್ ಇನ್ನೂ ಒಂದು ಲೆವೆಲ್ ಜಾಸ್ತಿನೇ ಇರುತ್ತೆ. 1996 ರಿಂದ ಶುರುವಾದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ದೇಶ ಮತ್ತು ವಿದೇಶದಲ್ಲಿ ಟೆಸ್ಟ್ ಸರಣಿಯಲ್ಲಿ ಆಡುತ್ತಿವೆ. ಈ ಫೈಟ್ನಲ್ಲಿ ಭಾರತ ಇದುವರೆಗೆ ಅತಿ ಹೆಚ್ಚು ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಬಟ್ ಇದೇ ಸರಣಿಯಲ್ಲೇ ಭಾರತದ ಸ್ಟಾರ್ ಆಟಗಾರರು ತಮ್ಮ ರೆಡ್ ಬಾಲ್ ಕರಿಯರ್ಗೆ ವಿದಾಯ ಹೇಳಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ನಡೆಯುವಾಗ್ಲೇ ಅಥವಾ ನಂತರ 6 ಭಾರತೀಯ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಈ ಸಲವೂ ಸರಣಿ ಮುಗಿಯೋದ್ರೊಳಗೆ ಕೆಲ ಆಟಗಾರರು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಹೆಸರು ಚರ್ಚೆಯಾಗ್ತಿದೆ. ಮೊದ್ಲಿಗೆ ಯಾರೆಲ್ಲಾ ಆಸಿಸ್ ಸರಣಿ ಟೈಮಲ್ಲಿ ವಿದಾಯ ಹೇಳಿದ್ರು ಅನ್ನೋದನ್ನ ನೋಡೋಣ.
2008ರ ಸರಣಿಯ 3ನೇ ಪಂದ್ಯದಲ್ಲೇ ನಿವೃತ್ತಿ ಘೋಷಿಸಿದ್ದ ಕುಂಬ್ಳೆ!
ಭಾರತೀಯ ಕ್ರಿಕೆಟ್ ನ ಜಂಬೂ ಎಂದೇ ಖ್ಯಾತಿಯಾಗಿರುವ ಟೆಸ್ಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ. 1989 ರಲ್ಲಿ ಏಕದಿನ ಹಾಗೂ 1990ರಲ್ಲಿ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ಕುಂಬ್ಳೆ ಸತತ 18 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ನ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ ಗಳನ್ನು ಉರುಳಿಸಿ ದಾಖಲೆಯ ಜಯಗಳಿಸಿರುವುದು ಇವರ ಕ್ರಿಕೆಟ್ ಜೀವನದ ಶ್ರೇಷ್ಠ ಸಾಧನೆ. ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾಗಿರುವ ಅನಿಲ್ ಕುಂಬ್ಳೆ ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಅಂದ್ರೆ 619 ವಿಕೆಟ್ಗಳನ್ನ ಪಡೆದಿದ್ದಾರೆ. ಇಂಥಾ ಕುಂಬ್ಳೆ 2008 ರ ಸರಣಿಯ ಮೂರನೇ ಪಂದ್ಯದಲ್ಲಿ ನಿವೃತ್ತಿ ಘೋಷಿಸಿದ್ದರು. ಆ ನಂತರವೇ ಧೋನಿಗೆ ನಾಯಕತ್ವ ಸಿಕ್ಕಿತು.
ಆಸಿಸ್ ಸರಣಿಯೊಂದಿಗೆ ಟೆಸ್ಟ್ ವೃತ್ತಿಜೀವನ ಮುಗಿಸಿದ್ದ ಗಂಗೂಲಿ!
ಭಾರತೀಯ ಕ್ರಿಕೆಟ್ ತಂಡವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಸಾರ್ವಕಾಲಿಕ ಶ್ರೇಷ್ಠ ನಾಯಕ, ಬಂಗಾಳದ ಹುಲಿ ಸೌರವ್ ಗಂಗೂಲಿ ಕೂಡ ಆಸಿಸ್ ಸರಣಿ ವೇಳೆಯೇ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ರು. ಗಂಗೂಲಿ ಕೂಡ 2008 ರಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯೊಂದಿಗೆ ನಿವೃತ್ತಿ ಘೋಷಿಸಿದರು. ಆ ಕೊನೆಯ ಪಂದ್ಯದಲ್ಲಿ ಸೌರವ್ ಗಂಗೂಲಿ ಮೊದಲ ಇನಿಂಗ್ಸ್‌ನಲ್ಲಿ 85 ರನ್ ಗಳಿಸಿ ಎರಡನೇ ಇನ್ನಿಂಗ್ಸ್‌ನಲ್ಲಿ ಡಕ್ ಔಟ್ ಆಗಿದ್ದರು. ಪಂದ್ಯವನ್ನು ಭಾರತ ಗೆದ್ದುಕೊಂಡಿತು. 1996ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಗಂಗೂಲಿ, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ವಿಶ್ವ ಗಮನ ಸೆಳೆದಿದ್ದರು. ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದ ಗಂಗೂಲಿ 301 ಎಸೆತಗಳಲ್ಲಿ 131 ರನ್ ಗಳಿಸಿದ್ದರು. ಗಂಗೂಲಿ ಒಟ್ಟು 113 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 16 ಶತಕಗಳೊಂದಿಗೆ 7,212 ರನ್ ಗಳಿಸಿದ್ದರು.
ಟೀಂ ಇಂಡಿಯಾ ವಾಲ್ ಕೂಡ ದೃಢ ನಿರ್ಧಾರ!
ಟೀಂ ಇಂಡಿಯಾದ ವಾಲ್ ಅಂತಾನೇ ಕರೆಸಿಕೊಳ್ಳೋ ಆಪತ್ಬಾಂಧವ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. ದ್ರಾವಿಡ್ ಕೂಡ ಆಸ್ಟ್ರೇಲಿಯಾದಲ್ಲಿ 2011-12ರ ಸರಣಿಯೊಂದಿಗೆ ನಿವೃತ್ತಿ ಘೋಷಿಸಿದ್ದರು. ಭಾರತ 0-4 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ರಾಹುಲ್ ದ್ರಾವಿಡ್ ಒಟ್ಟು 164 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ.
2012ರಲ್ಲಿ ಆಸಿಸ್ ಸರಣಿಯೊಂದಿಗೆ ವಿವಿಎಸ್ ಲಕ್ಷ್ಮಣ್ ವಿದಾಯ!
1996 ರಲ್ಲಿ ತಮ್ಮ ಚೊಚ್ಚಲ ಟಿ-20 ಪಂದ್ಯ ಆಡಿದ್ದ ವಿವಿಎಸ್ ಲಕ್ಷ್ಮಣ್ ಕೂಡ 2012ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯೊಂದಿಗೆ ತಮ್ಮ ರೆಡ್ ಬಾಲ್ ಕರಿಯರ್ ಮುಗಿಸಿದ್ರು. ಭಾರತದ ಪರ 134 ಟೆಸ್ಟ್ ಪಂದ್ಯಗಳನ್ನ ಆಡಿದ್ದ ಲಕ್ಷ್ಮಣ್ 17 ಶತಕಗಳು ಮತ್ತು 56 ಅರ್ಧಶತಕಗಳೊಂದಿಗೆ 45.97 ರ ಸರಾಸರಿಯಲ್ಲಿ 8,781 ರನ್ ಗಳಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯೊಂದಿಗೆ ಸೆಹ್ವಾಗ್ ನಿವೃತ್ತಿ!
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ 2013 ರಲ್ಲಿ ಹೈದರಾಬಾದ್‌ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯೊಂದಿಗೆ ಟೆಸ್ಟ್ ನಿವೃತ್ತಿ ಘೋಷಿಸಿದರು. 1999 ರಲ್ಲಿ ಮೊಹಾಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ODI ನಲ್ಲಿ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ಸೆಹ್ವಾಗ್, 104 ಟೆಸ್ಟ್, 251 ODI ಮತ್ತು 19 T20I ಪಂದ್ಯಗಳನ್ನ ಆಡಿದ್ದಾರೆ.
ಸರಣಿ ಮಧ್ಯದಲ್ಲೇ ನಿವೃತ್ತಿ ಘೋಷಣೆ ಮಾಡಿದ್ದ ಎಂ ಎಸ್ ಧೋನಿ!
ರಾಂಚಿಯ ರಾಜಕುಮಾರ, ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಕ್ಯಾಪ್ಟನ್ ಆಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗಲೇ 2014 ರಲ್ಲಿ ಸರಣಿಯ ಮಧ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ನಂತರ ವಿರಾಟ್ ಕೊಹ್ಲಿ ನಾಯಕತ್ವವನ್ನು ವಹಿಸಿಕೊಂಡರು. ಎಂಎಸ್ ಧೋನಿ ಭಾರತವನ್ನು ಮೊದಲ ಬಾರಿಗೆ ಟೆಸ್ಟ್ ಱಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೆ ಮುನ್ನಡೆಸಿದ ಕೀರ್ತಿ ಹೊಂದಿದ್ದಾರೆ. 90 ಟೆಸ್ಟ್ ಪಂದ್ಯಗಳನ್ನ ಆಡಿರುವ ಮಾಹಿ 4,876 ರನ್ ಗಳಿಸಿದ್ದಾರೆ.
ಹೀಗೆ 1996-97ರಲ್ಲಿ ಆರಂಭವಾದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ಮೂಲಕ ಹಲವು ಸ್ಟಾರ್ ಆಟಗಾರರು ತಮ್ಮ ರೆಡ್ ಬಾಲ್ ಕ್ರಿಕೆಟ್ ಜರ್ನಿ ಮುಗಿಸಿದ್ದಾರೆ. ಹೀಗಾಗಿ ಈ ಬಾರಿಯೂ ದಿಗ್ಗಜ ಆಟಗಾರರು ಇಂಥಾ ದೃಢ ನಿರ್ಧಾರ ಕೈಗೊಳ್ತಾರಾ ಅನ್ನೋ ಪ್ರಶ್ನೆಗಳು ಮೂಡಿವೆ.