ಸೈಡ್​ಲೈನ್ ಸೀನಿಯರ್ಸ್ ನಿವೃತ್ತಿ ರೇಸ್ -KO-RO, ಜಡ್ಡು ಬಳಿಕ ಯಾರು?
ಗಂಭೀರ್ ಎಂಟ್ರಿಗೂ ಮುನ್ನವೇ ವಿದಾಯ

ಸೈಡ್​ಲೈನ್ ಸೀನಿಯರ್ಸ್ ನಿವೃತ್ತಿ ರೇಸ್ -KO-RO, ಜಡ್ಡು ಬಳಿಕ ಯಾರು?ಗಂಭೀರ್ ಎಂಟ್ರಿಗೂ ಮುನ್ನವೇ ವಿದಾಯ

11 ವರ್ಷಗಳ ಮಹಾತಪಸ್ಸು ಕೊನೆಗೂ ಫಲಿಸಿದೆ. ಕೊಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲ ನೀಡಿದೆ. 2013ರ ಬಳಿಕ ಪದೇ ಪದೆ ಐಸಿಸಿ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ದ ಟೀಮ್​ ಇಂಡಿಯಾ ಕೊನೆಗೂ ಗೆದ್ದು ಬೀಗಿದೆ. ಭಾರತದ ಮುಡಿಗೆ ಟಿ20 ವಿಶ್ವಕಪ್​ ಕಿರೀಟ ಒಲಿದಿದೆ. ಈ ಅವಿಸ್ಮರಣೀಯ ಕ್ಷಣ ಘಟಿಸಿ ಮೂರು ದಿನಗಳಷ್ಟೇ ಕಳೆದಿವೆ. ಆದ್ರೆ ಇನ್ನೂ ಕೂಡ ಸಂಭ್ರಮಕ್ಕೆ ತೆರೆ ಬಿದ್ದಿಲ್ಲ. ಟೈಟಲ್ ಗೆದ್ದ ಭಾರತದ ಟೈಗರ್ಸ್ ಇನ್ನೂ ತವರಿಗೆ ಮರಳಿಲ್ಲ. ಸೋಷಿಯಲ್​ ಮೀಡಿಯಾಗಳಲ್ಲಂತೂ ಟೀಮ್​ ಇಂಡಿಯಾದ ವಿಜಯದ ಯಾತ್ರೆ ಇನ್ನೂ ಸಖತ್​ ಟ್ರೆಡಿಂಗ್​ನಲ್ಲಿದೆ. ಹೀಗಿರುವಾಗ್ಲೇ ಭಾರತದಲ್ಲಿ ನಿವೃತ್ತಿ ಪರ್ವ ಆರಂಭವಾಗಿದೆ. ಒಂದ್ಕಡೆ ದ್ರೋಣಾಚಾರ್ಯ ರಾಹುಲ್ ದ್ರಾವಿಡ್ ಶಸ್ತ್ರತ್ಯಾಗ ಮಾಡಿದ್ರೆ ಮತ್ತೊಂದ್ಕೆಡೆ ವಿರಾಟ್ ಕೊಹ್ಲಿ, ರೊಹಿತ್ ಶರ್ಮಾ ಹಾಗೇ ರವೀಂದ್ರ ಜಡೇಜಾ ಕೂಡ ಟಿ-20 ಫಾರ್ಮೇಟ್​ಗೆ ಗುಡ್ ಬೈ ಹೇಳಿದ್ದಾರೆ. ಈ ಮೂವರ ವಿದಾಯದ ಆಘಾತವೇ ಇನ್ನೂ ಅಭಿಮಾನಿಗಳನ್ನ ಕಾಡ್ತಿದೆ. ಹೀಗಿರುವಾಗ್ಲೇ ಭಾರತದ ಹಲವು ಸ್ಟಾರ್ ಪ್ಲೇಯರ್ಸ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅದೂ ಕೂಡ ಎಲ್ಲಾ ಫಾರ್ಮೇಟ್​ಗೆ ವಿದಾಯ ಘೋಷಿಸೋ ಲೆಕ್ಕಾಚಾರದಲ್ಲಿದ್ದಾರೆ. ಅಷ್ಟಕ್ಕೂ ನಿವೃತ್ತಿ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ? ಗೌತಮ್ ಗಂಭೀರ್ ಪಟ್ಟಾಭಿಷೇಕಕ್ಕೂ ಮುನ್ನವೇ ಗುಡ್ ಬೈ ಹೇಳ್ತಾರಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಟಿ-20 ಮಹಾಯುದ್ಧದಲ್ಲಿ ಭಾರತವನ್ನ ಚಾಂಪಿಯನ್ ಪಟ್ಟಕ್ಕೇರಿಸಿ ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಹುದ್ದೆಗೆ ಗುಡ್ ಬೈ ಹೇಳಿದ್ದಾರೆ. ಟ್ರೋಫಿ ಗೆದ್ದ ಐತಿಹಾಸಿಕ ಕ್ಷಣದಲ್ಲೇ ಕಿಂಗ್ ವಿರಾಟ್ ಕೊಹ್ಲಿ, ಹಿಟ್​ಮ್ಯಾನ್ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಕೂಡ ನಿವೃತ್ತಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಮ್ಯಾಚ್ ಬಳಿಕ ಮ್ಯಾನ್​ ಆಫ್​ ದ ಮ್ಯಾಚ್​ ಅವಾರ್ಡ್​ ಪಡೆಯಲು ಬಂದ ವಿರಾಟ್​, ಪೋಡಿಯಂ ಮೇಲೆಯೇ ವಿದಾಯ ಹೇಳಿ ಶಾಕ್​ ನೀಡಿದರು. ಇದ್ರ ಬೆನ್ನಲ್ಲೇ, ಪ್ರೆಸ್​ ಕಾನ್ಪರೆನ್ಸ್​ನಲ್ಲಿ ರೋಹಿತ್ ಶರ್ಮಾ ಗುಡ್​ ಬೈ ಹೇಳಿದ್ರು. ಒಂದು ದಿನ ಕಳೆದ ಬಳಿಕ ರವೀಂದ್ರ ಜಡೇಜಾ ನಿವೃತ್ತಿಯ ಶಾಕ್​ ಕೊಟ್ಟಿದ್ರು.. ಆರಂಭವಾಗಿರೋ ಈ ರಿಟೈರ್​ಮೆಂಟ್​ ಪರ್ವ ಸದ್ಯಕ್ಕೆ ನಿಲ್ಲೋ ತರ ಇಲ್ಲ. ಇದ್ರ ನಡುವೆ ಭಾರತ ತಂಡದ ಹೆಡ್​ ಕೋಚ್ ಗದ್ದುಗೆಗೆ ನೂತನ ಸಾರಥಿಯ ಪಟ್ಟಾಭಿಷೇಕಕ್ಕೆ ಕೌಂಟ್​ಡೌನ್ ಶುರುವಾಗಿದೆ. ಗೌತಮ್ ಗಂಭೀರ್ ಹೆಸರು ಈಗಾಗ್ಲೇ ಫೈನಲ್​ ಆಗಿದ್ದು ಅಧಿಕೃತವಾಗಿ ಹುದ್ದೆ ಅಲಂಕರಿಸೋದಷ್ಟೇ ಬಾಕಿ ಇದೆ. ಇದ್ರ ನಡುವೆ ಟೀಂ ಇಂಡಿಯಾದಲ್ಲಿ ರಿಟೈರ್​ಮೆಂಟ್ ಪರ್ವ ಶುರುವಾಗಿದೆ. ಕೇವಲ ಟಿ20 ಇಂಟರ್​ನ್ಯಾಷನಲ್​ ಮಾತ್ರವಲ್ಲ.. ಎಲ್ಲಾ ಫಾರ್ಮೆಟ್​ ವಿದಾಯ ಘೋಷಿಸೋ ಆಟಗಾರರೂ ಇದ್ದಾರೆ.  ಮುಂದಿನ ಕೋಚ್​ ಗೌತಮ್​ ಗಂಭೀರ್​, ಸೀನಿಯರ್ಸ್​ಗೆ ಷರತ್ತು ವಿಧಿಸಿರೋದ್ರಿಂದ ಇನ್ನಷ್ಟು ಪ್ಲೇಯರ್ಸ್​​ ಗುಡ್​ ಬೈ ಹೇಳೋ ಸಾಧ್ಯತೆ ಇದೆ.

ವಿದಾಯದ ಅಂಚಿನಲ್ಲಿದ್ದಾರೆ 37 ವರ್ಷದ ಆರ್.ಅಶ್ವಿನ್

ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೇರಲು ಈಗಾಗ್ಲೇ ಬಿಸಿಸಿಐ ಬಳಿ ಕೆಲ ಡಿಮ್ಯಾಂಡ್ಸ್ ಇಟ್ಟಿದಾರೆ. ಅದ್ರಲ್ಲಿ ಯಂಗ್ ಪ್ಲೇಯರ್ಸ್ ಟೀಂ ಕಟ್ಟೋದು ಕೂಡ ಒಂದು. ಅದ್ರಂತೆ ಹಿರಿಯರಿಗೆ ಕೊಕ್ ಸಿಗೋ ಎಲ್ಲಾ ಸಾಧ್ಯತೆ ಇದೆ. ಹೀಗಾಗಿ 35 ವರ್ಷದ ಗಡಿದಾಟಿದ ಟೀಮ್​ ಇಂಡಿಯನ್ಸ್​ ಒಬ್ಬೊಬ್ಬರಾಗಿ ಚುಟುಕು ಫಾರ್ಮೆಟ್​ಗೆ ಟಾಟಾ ಹೇಳ್ತಿದ್ದಾರೆ. 37 ವರ್ಷದ ಆಫ್​​ ಸ್ಪಿನ್ನರ್ ಆರ್. ಅಶ್ವಿನ್ ಕೂಡ ಶೀಘ್ರದಲ್ಲೇ ಗುಡ್​ ಬೈ ಹೇಳೋ ಸಾಧ್ಯತೆ ಇದೆ. ಟಿ20 ಮಾತ್ರವಲ್ಲ.. ಏಕದಿನ ತಂಡದಿಂದಲೂ ದೂರ ಉಳಿದಿರೋ ಅಶ್ವಿನ್​, ವೈಟ್​ಬಾಲ್​ ಫಾರ್ಮೆಟ್​ಗೆ ವಿದಾಯ ಹೇಳಿದ್ರೂ ಅಚ್ಚರಿಪಡಬೇಕಿಲ್ಲ.

ಗಾಯದ ಸಮಸ್ಯೆಯಿಂದ ಕ್ರಿಕೆಟ್ ಗೆ ಶಮಿ ಗುಡ್ ಬೈ?

ಬೆಂಕಿ ಬೌಲರ್ ಮೊಹಮ್ಮದ್ ಶಮಿ ಅವ್ರನ್ನ ಗಾಯದ ಸಮಸ್ಯೆ ಪದೇಪದೆ ಕಾಡ್ತಾನೇ ಇದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸುಲ್ತಾನನಾಗಿ ಮೆರೆದಿದ್ದ ಶಮಿ ಆ ಬಳಿಕ ಗ್ರೌಂಡ್​ಗೆ ಇಳಿದೇ ಇಲ್ಲ. ವಿಶ್ವಕಪ್‌ನಲ್ಲಿ ಆಡುವಾಗ ಶಮಿ ಪಾದಕ್ಕೆ ಗಾಯವಾಗಿ ಶಸ್ತ್ರಚಿಕಿತ್ಸೆಗೂ ಕೂಡ ಒಳಗಾಗಿದ್ರು. ತಿಂಗಳುಗಟ್ಟಲೆ ನಡೆಯೋಕೂ ಆಗದೆ ಒದ್ದಾಡಿದ್ರು. 2024ರ ಐಪಿಎಲ್​ನಲ್ಲೂ ಹೊರಗುಳಿದಿದ್ರು. ಈಗ ಮತ್ತೆ ಪ್ರಾಕ್ಟೀಸ್ ಆರಂಭಿಸಿದ್ರೂ ಕೂಡ ಈವರೆಗೂ ಕಂಪ್ಲೀಟ್ ಫಿಟ್ ಆಗಿಲ್ಲ. ಹೀಗಾಗಿ 33 ವರ್ಷದ ವೇಗಿ ಮೊಹಮ್ಮದ್​ ಶಮಿ ಕೂಡ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳುವ ಸಾಧ್ಯತೆ ಹೆಚ್ಚಿದೆ. ವರ್ಕ್​ಲೋಡ್​ ಮ್ಯಾನೇಜ್​​ಮೆಂಟ್​ ದೃಷ್ಟಿಯಿಂದ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಹೇಳೋ ಸಾಧ್ಯತೆಯಿದೆ.

ಎಲ್ಲಾ ಮಾದರಿಯಿಂದ್ಲೂ ಗಬ್ಬರ್ ಸಿಂಗ್ ಧವನ್ ನಿವೃತ್ತಿ?

ಒನ್ಸ್ ಅಪಾನ್ ಎ ಟೈಂ ಶಿಖರ್ ಧವನ್ ಎಂಥಾ ಪ್ಲೇಯರ್ ಅನ್ನೋದು ಇಡೀ ಜಗತ್ತಿಗೇ ಗೊತ್ತಿತ್ತು. ಆದ್ರೆ  ಕಳೆದ 2 ವರ್ಷಕ್ಕೂ ಹೆಚ್ಚು ಕಾಲ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಶಿಖರ್ ಧವನ್ ಕೊನೆಯ ಬಾರಿಗೆ ಡಿಸೆಂಬರ್ 10, 2022ರಲ್ಲಿ ಭಾರತ ತಂಡದಲ್ಲಿ ಆಡಿದ್ದರು. ಅಂದಿನಿಂದ, ಮೆನ್ ಇನ್ ಬ್ಲೂ ಜರ್ಸಿಯನ್ನು ಧರಿಸಲಾಗಿಲ್ಲ. ಕೆಲವೊಮ್ಮೆ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ತಂಡ ನಿರೀಕ್ಷೆಯಲ್ಲಿದ್ದರೂ ಅವಕಾಶ ಸಿಗಲಿಲ್ಲ. ರಾಷ್ಟ್ರೀಯ ತಂಡದಲ್ಲಿ ಆಡದಿದ್ದರೂ, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ನಾಯಕತ್ವದ ಜವಾಬ್ದಾರಿಯನ್ನು ಗಬ್ಬರ್ ಸಿಂಗ್‌ ನಿಭಾಯಿಸಿದ್ದಾರೆ. ಆದ್ರೆ ಗಾಯಗಳಿಂದಾಗಿ 2024ರ ಐಪಿಎಲ್​ನಲ್ಲೂ ಎಲ್ಲಾ ಪಂದ್ಯಗಳನ್ನ ಆಡಲು ಸಾಧ್ಯವಾಗಿಲಿಲ್ಲ. ಆ ಭರವಸೆ ಈಡೇರಲಿಲ್ಲ. 38 ವರ್ಷದ ಧವನ್​ಗೆ ಮತ್ತೆ ಅವಕಾಶ ಸಿಗೋದು ಅನುಮಾನವೇ. ಹೀಗಾಗಿ​ ಟಿ20 ಮಾತ್ರವಲ್ಲ. ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೇ ಧವನ್​ ವಿದಾಯ ಘೋಷಿಸೋ ನಿರೀಕ್ಷೆಯಿದೆ. ಇನ್ನು, ಶಿಖರ್ ಧವನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 5 ಅರ್ಧಶತಕಗಳಿವೆ. ಅವರು 167 ಏಕದಿನ ಪಂದ್ಯಗಳಲ್ಲಿ 6793 ರನ್ ಗಳಿಸಿದ್ದಾರೆ. ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ 17 ಶತಕ ಮತ್ತು 39 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 68 ಪಂದ್ಯಗಳಲ್ಲಿ 11 ಅರ್ಧ ಶತಕಗಳೊಂದಿಗೆ 1759 ರನ್ ಗಳಿಸಿದ್ದಾರೆ.  ಇದೇ ಕಾರಣದಿಂದಾಗಿ ಟೀಂ ಇಂಡಿಯಾದ ಗಬ್ಬರ್‌ ಸಿಂಗ್‌ ಎಂದೇ ಖ್ಯಾತರಾಗಿದ್ದ ಶಿಖರ್‌ ಧವನ್‌ ಭಾರತ ತಂಡಕ್ಕೆ ಏಕಾಂಗಿಯಾಗಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಆದರೆ ಯಂಗ್ ಪ್ಲೇಯರ್ಸ್ ಅಬ್ಬರ ಹಾಗೂ ಧವನ್‌ ಅವರ ಕಳಪೆ ಫಾರ್ಮ್‌ ಮತ್ತು ಗಾಯದ ಸಮಸ್ಯೆಯಿಂದಾಗಿ ಶಿಖರ್‌ ಧವನ್‌ ನಿವೃತ್ತಿಯ ದಡದಲ್ಲಿದ್ದಾರೆ.

ವಿದಾಯದ ಅಂಚಿನಲ್ಲಿ ಸ್ವಿಂಗ್ ಕಿಂಗ್ ಭುವಿ!

ಸ್ವಿಂಗ್​ ಕಿಂಗ್​ ಭುವನೇಶ್ವರ್​ ಕುಮಾರ್​ ಟೀಮ್​ ಇಂಡಿಯಾದಿಂದ ಹೊರಬಿದ್ದು ಒಂದು ವರ್ಷಕ್ಕೂ ಹೆಚ್ಚು ಕಾಲವಾಯ್ತು. 34 ವರ್ಷದ ಭುವನೇಶ್ವರ್​ಗೆ ಮತ್ತೆ ಟೀಮ್​ ಇಂಡಿಯಾ ಬಾಗಿಲು ತೆಗೆಯೋದು ಅನುಮಾನವೇ. ಎನ್ನಲಾಗ್ತಿದೆ. ಭಾರತ ಕ್ರಿಕೆಟ್‌ ತಂಡದ ಪರ ಎಲ್ಲಾ ಮೂರು ಮಾದರಿಯಲ್ಲೂ ಆಡುವ ಹಾಗೂ ಎಲ್ಲಾ ಮೂರು ಮಾದರಿಗಳಲ್ಲಿ 5 ವಿಕೆಟ್‌ ಕಬಳಿಸಿ ದಾಖಲೆ ಬರೆದಿರುವ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಈಗ ಭಾರತದ ಪರ ಆಡುತ್ತಿರುವುದು ಅಪರೂಪ ಆಗಿದೆ. ಬಿಸಿಸಿಐನಿಂದ ನಿರಂತರ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಭುವನೇಶ್ವರ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಿಂದ ಕ್ರಿಕೆಟರ್ ಎಂಬ ಪದವನ್ನೂ ತೆಗೆದು ಅಸಮಾಧಾನ ಹೊರ ಹಾಕಿದ್ದರು. ಭುವನೇಶ್ವರ್‌ ಕುಮಾರ್‌ ಭಾರತ ತಂಡಕ್ಕಾಗಿ ಒಟ್ಟು 21 ಟೆಸ್ಟ್ ಪಂದ್ಯಗಳು, 121 ಏಕದಿನ ಮತ್ತು 87 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದೀಗ ತಂಡದಲ್ಲಿ ಚಾನ್ಸ್ ಸಿಗದೆ ಭುವಿ ಅಂತರಾಷ್ಟ್ರೀಯ ಕ್ರೀಡಾ ಜೀವನ ಕೊನೆಯ ಹಂತದಲ್ಲಿದೆಯಾ ಎಂಬ ಚರ್ಚೆ ನಡೀತಿದೆ.

ಐಪಿಎಲ್​ನಲ್ಲಿ ಕೆಕೆಆರ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿ ಇದೀಗ ಭಾರತ ಮುಖ್ಯ ಕೋಚ್ ಹುದ್ದೆಗೇರಲು ಸಜ್ಜಾಗಿರೋ ಗೌತಮ್ ಗಂಭೀರ್ ಯಂಗ್ ಟೀಂ ಕಟ್ಟೋ ಯೋಜನೆಯಲ್ಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೀನಿಯರ್ಸ್​ಗೆ ಚಾನ್ಸ್ ಸಿಗುತ್ತೋ ಇಲ್ವೋ ಹೇಳೋಕಾಗಲ್ಲ. ಹೀಗಾಗಿ ಹಲವು ಆಟಗಾರರು ಗುಡ್​ ಬೈ ಹೇಳೋ ಚಿಂತನೆ ನಡೆಸಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಶುರುವಾಗಿರೋ ರಿಟೈರ್​ಮೆಂಟ್​ ಸಿರೀಸ್ ಇನ್ನೂ ಕೆಲ ಕಾಲ ಮುಂದುವರೆದ್ರೂ ಅಚ್ಚರಿ ಇಲ್ಲ.

Shwetha M