ಟಿಕೆಟ್ ಘೋಷಣೆ ಬೆನ್ನಲ್ಲೇ ‘ಕೇಸರಿ’ ಕೋಟೆಯಲ್ಲಿ ಕೋಲಾಹಲ – ರಾಜೀನಾಮೆ.. ಕಣ್ಣೀರು.. ಬಂಡಾಯ!
ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲ್!

ಟಿಕೆಟ್ ಘೋಷಣೆ ಬೆನ್ನಲ್ಲೇ ‘ಕೇಸರಿ’ ಕೋಟೆಯಲ್ಲಿ ಕೋಲಾಹಲ – ರಾಜೀನಾಮೆ.. ಕಣ್ಣೀರು.. ಬಂಡಾಯ!ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲ್!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತದ ಸುನಾಮಿ ಎದ್ದಿದೆ. ಟಿಕೆಟ್ ಸಿಗುತ್ತೆ ಅಂತಾ ಕಾಯ್ತಿದ್ದ ಆಕಾಂಕ್ಷಿಗಳು ಟಿಕೆಟ್ ಮಿಸ್ ಆಗ್ತಿದ್ದಂತೆ ಕೊತಕೊತ ಕುದಿಯುತ್ತಿದ್ದಾರೆ. ಕೆಲವರು ರಾಜೀನಾಮೆ ಮೂಲಕ ಬಂಡಾಯ ಎದ್ದಿದ್ರೆ ಇನ್ನೂ ಕೆಲವರು ಬೆಂಬಲಿಗರನ್ನ ಸೇರಿಸಿ  ಕಣ್ಣೀರು ಹಾಕುತ್ತಿದ್ದಾರೆ. ಮೊನ್ನೆಯಷ್ಟೇ 189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಈ ಕಿಡಿ ಆರುವ ಮುನ್ನವೇ 23 ಕ್ಷೇತ್ರಗಳಿಗೆ ಬಿಜೆಪಿ ಬುಧವಾರ ತಡರಾತ್ರಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.. ಎರಡನೇ ಲಿಸ್ಟ್ ರಿಲೀಸ್ ಆಗ್ತಿದ್ದಂತೆ ಮತ್ತೆ ಬಂಡಾಯ ಭುಗಿಲೆದ್ದಿದೆ. ಟಿಕೆಟ್ ಮಿಸ್ ಆದವರು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂಗೂ ಇಲ್ಲ, ಮಾಜಿ ಡಿಸಿಎಂಗೂ ಸಿಗ್ಲಿಲ್ಲ – ಟಿಕೆಟ್ ಮಿಸ್.. ಶೆಟ್ಟರ್, ಸವದಿ ರೆಬೆಲ್!

ಬಾರೀ ಕುತೂಹಲಕ್ಕೆ ಕಾರಣವಾಗಿದ್ದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಹಾಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಕೆರಳಿದ್ದಾರೆ. ಶಾಸಕ ಸ್ಥಾನದ ಜೊತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ ಇಲ್ಲದೆ ಬಿಜೆಪಿ 50 ಸ್ಥಾನವೂ ಗೆಲ್ಲುವುದಿಲ್ಲ. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇನೆ. ನಾನೇನು ಸನ್ಯಾಸಿ ಅಲ್ಲ, ರಾಜಕೀಯ ಮಾಡಿ ತೋರಿಸುತ್ತೇನೆ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದಕ್ಕೆ ಶಾಸಕ ನೆಹರು ಓಲೇಕಾರ್ ಕೂಡ ಸಿಡಿದೆದ್ದಿದ್ದಾರೆ. ಹಾವೇರಿ ಮೀಸಲು ಕ್ಷೇತ್ರದ ಶಾಸಕ ನೆಹರೂ ಓಲೇಕಾರ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.. ನನಗೆ ಟಿಕೆಟ್ ನೀಡದೆ ಇರಲು ಬೊಮ್ಮಾಯಿ ಕಾರಣ.. ಅವ್ರಿಗೆ ಬೇಕಾದವ್ರಿಗೆ ಟಿಕೆಟ್ ಕೊಡಿಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ..

ಇನ್ನು ಬೆಂಗಳೂರಿನಲ್ಲೂ ಕೂಡ ಬೇಗುದಿಗೆ ಬಿರುಗಾಳಿ ಎದ್ದಿದೆ. 28 ವಿಧಾನಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಆಗಿದ್ದು ಜಯನಗರ, ರಾಜಾಜಿನಗರ, ಬಸವನಗುಡಿ, ಗೋವಿಂದರಾಜನಗರ, ಬ್ಯಾಟರಾಯನಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಬಸವನಗುಡಿ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಮಣೆ ಹಾಕಿರುವುದರಿಂದ ತೀವ್ರ ಬೇಸರಗೊಂಡಿರುವ ಮಾಜಿ ಮೇಯರ್‌ ಬಿ.ಎಸ್‌.ಸತ್ಯನಾರಾಯಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಹಾಗೇ ಜಯನಗರ ಕ್ಷೇತ್ರದ ಟಿಕೆಟ್‌ ಬಯಸಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌ರಮೇಶ್‌ ಗೆ ಟಿಕೆಟ್ ಕೈತಪ್ಪಿದೆ. ಮಾಜಿ ಕಾರ್ಪೊರೇಟರ್‌ ಕೆ.ಸಿ.ರಾಮಮೂರ್ತಿ ಅವರಿಗೆ ಮಣೆ ಹಾಕಿರೋದಕ್ಕೆ ಬೇಸರಗೊಂಡಿದ್ದು, ಎನ್‌.ಆರ್‌.ರಮೇಶ್‌ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.. ಅಲ್ಲದೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಚನ್ನಗಿರಿ ಕ್ಷೇತ್ರದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಮಿಸ್ ಆಗಿರೋದಕ್ಕೆ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ.

suddiyaana