ನೀರು ಕುಡಿಯೋ ಬಾಟಲ್ ಎಷ್ಟು ಸೇಫ್? – ಎಚ್ಚರ.. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕ!

ನೀವು ಬಾಟಲ್ ನಲ್ಲಿ ನೀರು ಕುಡಿತೀರಾ? ನೀರು ಕುಡಿಯೋ ಬಾಟಲ್ ಎಷ್ಟು ಸೇಫ್ ಅಂತಾ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ನಾವು ನೀವು ಕುಡಿಯೋ ನೀರಿನ ಬಾಟಲ್ ನಲ್ಲಿ ಟಾಯ್ಲೆಟ್ ಸೀಟ್ ಗಿಂತಲೂ ಅಧಿಕ ಬ್ಯಾಕ್ಟೀರಿಯಾಗಳು ಇವೆ ಅಧ್ಯಯನದಿಂದ ಗೊತ್ತಾಗಿದೆ.
ಇದನ್ನೂ ಓದಿ: ನಾನ್ವೆಜ್ ಅಡುಗೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಗಂಡನನ್ನ ಕೊಂದ ಪತ್ನಿ!
ಆಫೀಸ್ ಇರ್ಲಿ.. ಸ್ಕೂಲ್ ಇರ್ಲಿ.. ಮನೆಯಿಂದ ಹೊರಗೆ ಹೋಗೋವಾಗ ಕೈಯಲ್ಲೊಂದು ನೀರಿನ ಬಾಟಲ್ ಇರ್ಲಿ ಅಂತಾ ನಾವು ಹಿಡಿದುಕೊಳ್ಳುತ್ತೇವೆ. ಇನ್ನು ಸಮಾರಂಭಗಳಿಗೆ ಹೋದಾಗಲೂ ಅಲ್ಲೂ ಕುಡಿಯೋದಿಕ್ಕೆ ನೀರಿನ ಬಾಟಲ್ ಕೊಡೊದು ಕಾಮನ್. ಈಗ ಬೇಸಿಗೆ ಕಾಲ ಬೇರೆ ಶುರು ಆಗಿದೆ. ಹಾಗಾಗಿ ನೀರು ಕುಡಿಯೋದು ಜಾಸ್ತಿ ಆಗಿದೆ. ಆದ್ರೆ ನೀವು ಕುಡಿಯೋ ನೀರಿನ ಬಾಟಲ್ ಎಷ್ಟು ಸೇಫ್ ಅನ್ನೋ ಪ್ರಶ್ನೆ ಕಾಡೋಕೆ ಶುರುವಾಗಿದೆ.
ಸಾಮಾನ್ಯವಾಗಿ ಮಿನರಲ್ ವಾಟರ್ ಅಥವಾ ಸಾಫ್ಟ್ ಡ್ರಿಂಕ್ನಂತಹ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿದ ನಂತ್ರ, ಅವುಗಳನ್ನು ಕಸದೊಂದಿಗೆ ಎಸೆಯೋದಿಲ್ಲ. ಅದನ್ನ ಮತ್ತೆ ನೀರು ಸಂಗ್ರಹಿಸಲು, ಸಾಗಿಸಲು ಬಳಸುತ್ತಾರೆ. ಸಾಮಾನ್ಯವಾಗಿ ಒಂದು ಬಾಟಲ್ ಅನ್ನು ನೀರು ಕುಡಿಯಲು ಬಳಸಿದ್ರೆ ಅದನ್ನ ವರ್ಷಾನುಗಟ್ಟಲೆ ಯೂಸ್ ಮಾಡ್ತೀವಿ. ನೀರು ತುಂಬಿಸೋ ಮೋದ್ಲು ಅದನ್ನ ನೀರು ಹಾಕಿ ಒಮ್ಮೆ ಅಲುಗಾಡಿಸಿ ಚೆಲ್ಲಿದ್ರೆ ಅದೇ ಕ್ಲೀನಿಂಗ್. ಅದರ ಸ್ವಚ್ಛತೆ ವಿಚಾರಕ್ಕೆ ಬಂದಾಗ ನೀರು ಕುಡಿಯೋ ಬಾಟಲ್ ತಾನೆ ಅದ್ರಲ್ಲೇನಿದೆ. ವಾರಕ್ಕೊಂದ್ಸಲಾ ತೊಳೆದ್ರೆ ಸಾಕು ಅಂತಾ ಕೆಲವರು ಅಸಡ್ಡೆ ಮಾಡೋದಿದೆ. ಇನ್ನೂ ಕೆಲವರು ಬಾಟಲ್ ಇನ್ನೂ ಚೆನ್ನಾಗೆ ಇದ್ಯಲ್ಲಾ ಮತ್ಯಾಕೆ ಹೊಸ ಬಾಟಲ್ ಅಂತಾ ಅದೇ ಬಾಟಲ್ ಅನ್ನ ನೀರು ಕುಡಿಯೋದಕ್ಕೆ ಬಳಸ್ತಾರೆ. ನೀವು ಕುಡಿಯೋ ವಾಟರ್ ಬಾಟಲ್ ಎಷ್ಟು ಸೇಫ್ ಅನ್ನೋ ಬಗ್ಗೆ ಹೊಸ ಸಂಶೋಧನೆಯೊಂದು ನಡೆದಿದ್ದು ಅದ್ರ ವರದಿಯಲ್ಲಿ ಶಾಕಿಂಗ್ ವಿಚಾರವೊಂದು ಬಯಲಾಗಿದೆ.
ಅಮೆರಿಕ ಮೂಲದ ವಾಟರ್ ಫಿಲ್ಟರ್ ಗುರು ಡಾಟ್ ಕಾಂ ನ ಸಂಶೋಧಕರ ತಂಡ ನಾವು ಪ್ರತಿನಿತ್ಯ ಬಳಸೋ ನೀರಿನ ಬಾಟಲ್ ಬಗ್ಗೆ ಸಂಶೋಧನೆ ನಡೆಸಿದೆ. ಈ ಸಂಶೋಧನೆಯಲ್ಲಿ ನಾವು ಬಳಸೋ ಬಾಟಲ್ ಬ್ಯಾಕ್ಟೀರಿಯಾಗಳ ಗೂಡಾಗಿ ಮಾರ್ಪಟ್ಟಿದೆ ಆನ್ನೋ ಆಘಾತಕಾರಿ ಮಾಹಿತಿಯನ್ನ ಹೇಳಿದ್ದಾರೆ. ಮರುಬಳಕೆ ಮಾಡೋ ನೀರಿನ ಬಾಟಲಿಗಳು ಟಾಯ್ಲೆಟ್ ಸೀಟ್ ಗಿಂತ 40,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳನ್ನ ಹೊಂದಿರುತ್ತವೆ ಅಂತಾ ತಜ್ಞರು ತಿಳಿಸಿದ್ದಾರೆ.
ಈ ಬಗ್ಗೆ ಅಧ್ಯಯನ ನಡೆಸಲು ಸಂಶೋಧಕರ ತಂಡ ನಾಲ್ಕು ಜನಪ್ರಿಯ ನೀರಿನ ಬಾಟಲ್ ಗಳನ್ನ ಆಯ್ಕೆ ಮಾಡಿದ್ದಾರೆ. ಸ್ಪೌಟ್(spout), ಸ್ಕ್ರೂ-ಟಾಪ್(screw-top), ಸ್ಟ್ರೇ(stray), ಮತ್ತು ಸ್ಕ್ವೀಜ್-ಟಾಪ್ (squeeze-top) ನಂತಹ ವಿಭಿನ್ನ ಮುಚ್ಚಳ ಇರುವ ಬಾಟಲಿಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದಾರೆ. ಅಧ್ಯಯನಕಾರರು ಬಾಟಲಿಗಳ ವಿವಿಧ ಭಾಗಗಳನ್ನ ಸ್ವಾಬ್ ಮಾಡಿದ್ದಾರೆ. ಬಳಿಕ CFS ಗಳು ಹೇಗೆ ಇವುಗಳಲ್ಲಿ ಅಡಗಿರುತ್ತೆ ಅನ್ನೋದನ್ನ ಕಂಡುಕೊಳ್ಳುತ್ತಾರೆ. CFS ಎಂದರೇ ಯಾವುದೇ ಸ್ಯಾಂಪಲ್ ನಲ್ಲಿ ಬ್ಯಾಕ್ಟೀರಿಯಾದ ಸಾಂದ್ರತೆಯನ್ನ ನಿರ್ಧರಿಸಲು ಬಳಸುವ ಘಟಕವಾಗಿದೆ.
ನೀರಿನ ಬಾಟಲ್ ಗಳನ್ನು ಹಲವು ಬಗೆಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅಧ್ಯಯನದ ವೇಳೆ ಮರು ಬಳಕೆ ಮಾಡಬಹುದಾದ ಬಾಟಲಿಗಳಲ್ಲಿ ಗ್ರಾಂ ನೆಗೆಟಿವ್ ರಾಡ್ಸ್ ಮತ್ತು ಬ್ಯಾಸಿಲಸ್ ಎಂಬ ಎರಡು ಬ್ಯಾಕ್ಟೀರಿಯಾಗಳಿರೋದು ಪತ್ತೆಯಾಗಿದೆ ಅಂತಾ ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಇ. ಕೋಲಿ ಮತ್ತು ಮತ್ತು ಕ್ಲೆಬ್ಸಿಲ್ಲಾದಂತಹ ಗ್ರಾಂ- ನೆಗೆಟಿವ್ ಬ್ಯಾಕ್ಟೀರಿಯಾಗಳು ದಿನಕಳೆದಂತೆ ಅನೇಕ ಸೋಂಕುಗಳಿಗೆ ಕಾರಣವಾಗಬಲ್ಲದು. ಕೆಲವೊಮ್ಮೆ ನ್ಯೂಮೋನಿಯಾ, ವಾಂತಿ, ಬೇಧಿ ಜತೆಗೆ ಹೊಟ್ಟೆ ನೋವಿನ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.
ಸಾಮಾನ್ಯವಾಗಿ ಬ್ಯಾಕ್ಟೀರಿಯಾವನ್ನು ಜೈವಿಕ ಕುಡಿಯುವ ನೀರಿನ ಮಾಲಿನ್ಯಕಾರಕಗಳು ಎಂದು ಕರೆಯಲಾಗುತ್ತದೆ. ಅವು ಕೇವಲ ನಾಲ್ಕು ವಿಧದ ಮಾಲಿನ್ಯಕಾರಕಗಳಲ್ಲಿ ಒಂದಾಗಿದೆ. ಅದು ಟ್ಯಾಪ್ಗಳಿಂದ ಹೊರಬರುವ ನೀರಿನಲ್ಲಿ ಮತ್ತು ಮರುಬಳಕೆ ಮಾಡಬಹುದಾದ ಬಾಟಲಿಗಳಲ್ಲಿ ಕಂಡುಬರುತ್ತವೆ. ಸರಾಸರಿಯಾಗಿ, ಬಾಟಲಿಗಳು 20.8 ಮಿಲಿಯನ್ CFU ಗಳನ್ನ ಗ್ರಾಂ ನೆಗೆಟಿವ್ ಬ್ಯಾಕ್ಟೀರಿಯಾವನ್ನು ಹೊಂದಿದ್ದವು. ಸ್ಪೌಟ್ ಮತ್ತು ಸ್ಕ್ರೂ-ಟಾಪ್ ಮುಚ್ಚಳದ ಬಾಟಲಿಯು 30 ಮಿಲಿಯನ್ CFU ಗಳಿಂದ ಹೆಚ್ಚು ಸೋಂಕಿತವಾಗಿದೆ ಅಂತಾ ಅಧ್ಯಯನದಲ್ಲಿ ಗೊತ್ತಾಗಿದೆ.
ಸಾಮಾನ್ಯವಾಗಿ ಟಾಯ್ಲೆಟ್ ಸೀಟ್ 515 CFU ಗಳನ್ನು ಹೊಂದಿದೆ. ನಾವು ದಿನನಿತ್ಯ ಪಾತ್ರೆತೊಳೆಯಲು ಬಳಸೋ ಅಡುಗೆಮನೆಯ ಸಿಂಕ್ಗಿಂತ ಅಧಿಕ ಸೂಕ್ಷ್ಮಾಣು ಜೀವಿಗಳು ಕುಡಿಯೋ ನೀರಿನ ಬಾಟಲ್ ಗಳಲ್ಲಿ ಇವೆ ಅಂತಾ ಅಧ್ಯಯನ ವರದಿ ಹೇಳಿದೆ. ಬಾಟಲಿಗಳನ್ನು ಶುಚಿಗೊಳಿಸದೇ ನೀರು ಕುಡಿಯುವುದಕ್ಕಿಂತಲೂ, ನಲ್ಲಿ ನೀರೇ ವಾಸಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಾನವನ ಬಾಯಿ ಮತ್ತು ನಾಲಿಗೆ ದೊಡ್ಡ ಸಂಖ್ಯೆಯಲ್ಲಿ ಸೂಕ್ಷ್ಮಾಣುಜೀವಿಗಳಿಗೆ ನೆಲೆಯಾಗಿದೆ. ಪ್ಲಾಸ್ಟಿಕ್ ಬಾಟಲಿಗಳಿಗಿಂತ ಸ್ಟೀಲಿನ ಬಾಟಲಿಗಳು ಆರೋಗ್ಯಕ್ಕೆ ಅನುಕೂಲಕರ ಅಂತಾ ಲಂಡನ್ನ ಇಂಪಿರೀಯಲ್ ಕಾಲೇಜಿನ ಸೂಕ್ಷ್ಮಾಣುಜೀವಿ ತಜ್ಞ ಡಾ. ಆಂಡ್ರ್ಯೂ ಎಡ್ವರ್ಡ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ವ್ಯಾಯಾಮ ಮಾಡೋರು, ಜಿಮ್ ಮಾಡೋರು ಕೈಯಲ್ಲಿ ವಾಟರ್ ಬಾಟಲ್ ಹಿಡಿದುಕೊಳ್ಳೋದು ಸಾಮಾನ್ಯ. ವ್ಯಾಯಾಮ ಮಾಡೋವಾಗ ಪದೇ ಪದೇ ನೀರು ಕುಡಿತಾ ಇರ್ತಾರೆ. ನೀರು ಕುಡಿತಾ ಇದ್ರೆ ದೇಹದಲ್ಲಿ ಜಲಸಂಚಯನವಾಗುತ್ತೆ, ದೇಹಕ್ಕೆ ಉಲ್ಲಾಸ ನೀಡುತ್ತೆ. ಹೀಗಾಗಿ ಪದೇ ಪದೇ ನೀರು ಕುಡಿತಾ ಇರ್ತಾರೆ. ಜಿಮ್ ಗೆ ಹೋಗೋರಿಗೆ, ವ್ಯಾಯಾಮ ಮಾಡೋರಿಗೂ ಶಾಕಿಂಗ್ ನ್ಯೂಸ್ ಇದೆ. ನೀವು ವ್ಯಾಯಾಮ ಮಾಡಿ ಆರೋಗ್ಯ ವೃದ್ದಿಸೋ ಬದಲು, ಆರೋಗ್ಯವನ್ನ ಕಳೆದುಕೊಳ್ಳುತ್ತಿದ್ದೀರ. ಅದು ನೀವು ಕುಡಿಯೋ ನೀರಿನ ಬಾಟಲ್ ನಿಂದ. ಜರ್ನಲ್ ಆಫ್ ಎಕ್ಸರ್ಸೈಸ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ 83 % ಜಿಮ್ಗೆ ಹೋಗುವವರು ಬಳಸಿದ ನೀರಿನ ಬಾಟಲಿಗಳಲ್ಲಿ ಸ್ಟ್ಯಾಫ್ ಮತ್ತು ಇ.ಕೋಲಿಯಂತಹ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತದೆ ಎಂದು ಕಂಡುಹಿಡಿದಿದೆ. ಹೀಗಾಗಿ ಜಿಮ್ ಗೆ ಹೋಗೋರು, ವ್ಯಾಯಾಮ ಮಾಡುವಾಗ ನೀರು ಕುಡಿಯೋರು ನೀವು ಕುಡಿಯೋ ವಾಟರ್ ಬಾಟಲ್ ನೈರ್ಮಲ್ಯ ಬಗ್ಗೆನೂ ಸ್ವಲ್ಪ ಯೋಚನೆ ಮಾಡ್ಬೇಕಾಗುತ್ತೆ. ಇಲ್ಲದಿದ್ರೆ ನೀವು ಅನಾರೋಗ್ಯಕ್ಕೆ ತುತ್ತಾಗೋದು ಪಕ್ಕಾ.
ಇನ್ನೂ ನಾವು ಈ ಬ್ಯಾಕ್ಟೀರಿಯಾದಿಂದ ಬಚಾವ್ ಆಗಲು ಕೆಲವೊಂದು ಮುಂಜಾಗ್ರತೆ ವಹಿಸಿಕೊಳ್ಳೋದು ಉತ್ತಮ ಅಂತಾ ತಜ್ಞರು ಹೇಳಿದ್ದಾರೆ. ನಾವು ನೀರು ಕುಡಿಯಲು ಬಳಸೋ ವಾಟರ್ ಬಾಟಲ್ ಗಳನ್ನು ದಿನಕ್ಕೆ ಒಮ್ಮೆಯಾದರೂ ಸಾಬೂನು ನೀರಿನಿಂದ ತೊಳೆಯಬೇಕು. ಅಥವಾ ಬಿಸಿ ನೀರು, ನಿಂಬೆ ರಸ, ಉಪ್ಪಿನಿಂದ ಚೆನ್ನಾಗಿ ತೊಳೆಯಿರಿ. ಇಲ್ಲಾ ಅಂದ್ರೆ ಬಾಟಲಿಗೆ ವಿನೆಗರ್ ಹಾಗೂ ತಣ್ಣೀರು ಮಿಶ್ರಣ ಮಾಡಿ, ಬಾಟಲಿ ಮುಚ್ಚುಳ ಹಾಕಿ ಕುಲುಕಿ ಹಾಗೆಯೇ ಬಿಡಿ, ಮರುದಿನ ಡಿಶ್ವಾಶರ್ ಲಿಕ್ವಿಡ್ ಅಥವಾ ಪೌಡರ್ ಬಳಸಿ ಸ್ವಚ್ಛಗೊಳಿಸಿ. ಬಳಿಕ ಒಂದಷ್ಟು ಹೊತ್ತು ಬಿಸಿಲಿನಲ್ಲಿ ಇರಿಸಿ ಅಂತಾ ತಜ್ಞರು ಸಲಹೆ ನೀಡಿದ್ದಾರೆ.
ಇನ್ನು ಯಾವ ವಾಟರ್ ಬಾಟಲ್ ಗಳನ್ನು ಬಳಸಿದ್ರೆ ಉತ್ತಮ ಅನ್ನೋದ್ರ ಬಗ್ಗೆಯೂ ಹೇಳ್ತೆನೆ. ಪ್ಲಾಸ್ಟಿಕ್ ವಾಟರ್ ಬಾಟಲ್ ಗಳನ್ನು ಬಳಸೋದನ್ನು ಆದಷ್ಟು ಕಡಿಮೆ ಮಾಡಿ. ಯಾಕಂದ್ರೆ ಪ್ಲಾಸ್ಟಿಕ್ ಬಾಟಲ್ ಗಳನ್ನು ಪದೇ ಪದೆ ಶುಚಿಗೊಳಿಸಿದಾಗ, ಪದೇ ಪದೆ ಅದನ್ನು ಬಿಸಿ ನೀರಿಗೆ ಹಾಕೋದ್ರಿಂದ ಅದ್ರಲ್ಲಿರೊ ವಿಷಕಾರಿ ಕೆಮಿಕಲ್ ಗಳು ನಮ್ಮ ದೇಹ ಸೇರಿಕೊಳ್ಳುತ್ತೆ. ಇದ್ರಿಂದಾಗಿ ನಾವು ಅನಾರೋಗ್ಯಕ್ಕೆ ತುತ್ತಾಗೋ ಸಾಧ್ಯತೆ ಹೆಚ್ಚಾಗಿರುತ್ತೆ. ಆದಷ್ಟು ಸ್ಟೀಲ್, ತಾಮ್ರದ ಬಾಟಲ್ ಬಳಸೋದು ಉತ್ತಮ. ಸ್ಟೀಲ್ ಅಥವಾ ತಾಮ್ರದ ಬಾಟಲ್ ನೀರು ಕುಡಿಯೋದ್ರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿರೋದಿಲ್ಲ. ಅಧ್ಯಯನ ವರದಿಯ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ 16 ಗಂಟೆಗಳ ಕಾಲ ಶೇಖರಿಸಿಟ್ಟ ನೀರಿನಲ್ಲಿ ಸಾಲ್ಮೋನೆಲ್ಲಾ ಮತ್ತು ಇ ಕೋಲಿಗಳಂತರ ಮಾರಕ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತವೆ. ಅಷ್ಟೇ ಅಲ್ಲದೇ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಹೃದಯಕ್ಕೆ, ವಿಶೇಷವಾಗಿ ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯದು, ಅತಿಸೂಕ್ಷ್ಮಜೀವಿಗಳಿಂದ ಎದುರಾಗುವ ಸೋಂಕುಗಳ ವಿರುದ್ಧ ಹೋರಾಡುತ್ತೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೋಡಿರಿ

